ಸಾರಾಂಶ
ಕನ್ನಡಪ್ರಭ ವಾರ್ತೆ ಶಿಕಾರಿಪುರ
ರಾಜಕೀಯ ಹಿತಾಸಕ್ತಿಗಾಗಿ ಸಹಕಾರಿ ಸಂಘಗಳನ್ನು ಹುಟ್ಟು ಹಾಕಬಾರದು ಸಂಘದ ಧ್ಯೇಯೋದ್ದೇಶಗಳನ್ನು ಅರ್ಥೈಸಿಕೊಂಡು ಪ್ರತಿಯೊಬ್ಬ ಸದಸ್ಯರೂ ಜವಾಬ್ದಾರಿಯಿಂದ ವರ್ತಿಸಿದಲ್ಲಿ ಸಂಘ ನಿಶ್ಚಿತ ಗುರಿ ತಲುಪಲು ಸಾದ್ಯ ಎಂದು ಡಿಸಿಸಿ ಬ್ಯಾಂಕ್ ನಿರ್ದೇಶಕ ಹಾಗೂ ಶಿಮುಲ್ ಮಾಜಿ ಅಧ್ಯಕ್ಷ ಹಾಲಿ ನಿರ್ದೇಶಕ ಟಿ.ಶಿವಶಂಕರಪ್ಪ ಹಿರೇಜಂಬೂರು ತಿಳಿಸಿದರು.ಪಟ್ಟಣದ ಗುರುಭವನದಲ್ಲಿ ಭಾನುವಾರ ನಡೆದ ತಾಲೂಕು ಪದವೀಧರರ ಸಹಕಾರ ಸಂಘದ 17ನೇ ಸರ್ವ ಸದಸ್ಯರ ವಾರ್ಷಿಕ ಮಹಾಸಭೆಯನ್ನು ಉದ್ಘಾಟಿಸಿ ಮಾತನಾಡಿದರು.
ಸಹಕಾರಿ ಸಂಘಗಳು ರಾಜಕೀಯ ಪಕ್ಷಗಳ ಕೈಗೊಂಬೆಗಳಾಗದೆ ಸಂಘದ ಪ್ರಗತಿಯನ್ನು ಮಾತ್ರ ಕೇಂದ್ರೀಕರಿಸಿ ಕೊಂಡಲ್ಲಿ ಸಂಘದ ಜತೆಗೆ ಸದಸ್ಯರ ಹಿತಾಸಕ್ತಿಯನ್ನು ಕಾಪಾಡಲು ಸಾದ್ಯ ಎಂದ ಅವರು ಸಂಘದ ಧ್ಯೇಯೋದ್ದೇಶವನ್ನು ಅರ್ಥಮಾಡಿಕೊಂಡಲ್ಲಿ ಅಭಿವೃದ್ಧಿ ಹೊಂದಲು ಸಾದ್ಯ.ಚುನಾವಣೆಗಾಗಿ,ಮತಕ್ಕಾಗಿ ಸಂಘಗಳನ್ನು ಹುಟ್ಟು ಹಾಕಬಾರದು. ಸಂಘದಲ್ಲಿರುವವರೆಲ್ಲರೂ ಜವಾಬ್ದಾರಿಯಿಂದ ನಡೆದುಕೊಂಡಲ್ಲಿ ನಿಶ್ಚಿತವಾಗಿ ಗುರಿ ತಲುಪಲು ಸಾದ್ಯ ಎಂದು ತಿಳಿಸಿದರು.ಪದವೀಧರರ ಸಹಕಾರಿ ಸಂಘ ಇತರೆ ಸಂಘಗಳಿಗಿಂತ ಭಿನ್ನವಾಗಿದ್ದು,ಸಂಘದ ಸದೃಡತೆಗೆ ಆಡಳಿತ ಮಂಡಳಿ ಸದಸ್ಯರ ಜತೆ ಪ್ರತಿಯೊಬ್ಬರೂ ಶಿಸ್ತು ಮತ್ತು ಸಂಯಮ ಕಾಪಾಡಿಕೊಳ್ಳಬೇಕು.ಸಹಕಾರ ಸಂಘಗಳಲ್ಲಿ ತಪ್ಪುಗಳಾಗದಂತೆ ಜಾಗೃತಿ ವಹಿಸಬೇಕೆಂದು ಸಲಹೆ ನೀಡಿದರು.
ಡಿಸಿಸಿ ಬ್ಯಾಂಕ್ ನಿರ್ದೇಶಕ ಎಸ್.ಪಿ.ಚಂದ್ರಶೇಖರ ಗೌಡ ಮಾತನಾಡಿ, ಸಂಘದ ದೈನಿಂದಿನ ಆಗುಹೋಗುಗಳಲ್ಲಿ ಸದಸ್ಯರು ಸಕ್ರಿಯವಾಗಿ ಪಾಲ್ಗೊಳ್ಳಬೇಕು ಎಲ್ಲ ವಹಿವಾಟು ಆಡಳಿತ ಮಂಡಳಿ ಸದಸ್ಯರ ಗಮನಕ್ಕೆ ತರುವ ಮೂಲಕ ಪಾರದರ್ಶಕ ವಹಿವಾಟು ಬಹುಮುಖ್ಯ. ವಾರ್ಷಿಕ ಮಹಾಸಭೆಯಲ್ಲಿ ಭಾಗವಹಿಸುವ ಷೇರುದಾರರ ಸಂಖ್ಯೆ ಹೆಚ್ಚಳವಾಗಿ ಪ್ರತಿಯೊಬ್ಬರ ಸಲಹೆ ಮಾರ್ಗದರ್ಶನದಿಂದ ಸಂಘ ಹೆಚ್ಚು ಸದೃಡವಾಗಲಿದೆ ಎಂದು ಅಭಿಪ್ರಾಯಪಟ್ಟರು.ಡಿಸಿಸಿ ಬ್ಯಾಂಕ್ ನಿರ್ದೇಶಕ ಡಿ.ಎಲ್ ಬಸವರಾಜ್ ಮಾತನಾಡಿ, ಅಲ್ಪಾವಧಿಯಲ್ಲಿಯೇ ಪದವೀಧರರ ಸಹಕಾರ ಸಂಘ ಸ್ವಂತ ಕಟ್ಟಡವನ್ನು ಹೊಂದಿ ಸ್ವಾವಲಂಬಿಯಾಗಿರುವುದು ಹೆಮ್ಮೆಯ ಸಂಗತಿಯಾಗಿದ್ದು ಸದಸ್ಯರ ಪೂರಕ ಸಹಕಾರ ಸಂಘದ ಶೀಘ್ರ ಬೆಳವಣಿಗೆಗೆ ಸಾಕ್ಷಿಯಾಗಿದೆ ಎಂದು ತಿಳಿಸಿದರು.
ಸಂಘದ ಅಧ್ಯಕ್ಷ ಕೆ. ಆರ್.ಬಸವರಾಜಪ್ಪ ಮಾತನಾಡಿ, ತಾಲೂಕು ವ್ಯಾಪ್ತಿಗೆ ಸಂಘದ ಕಾರ್ಯಚಟುವಟಿಕೆ ಸೀಮಿತವಾಗಿದ್ದು,ಪ್ರಸಕ್ತ ಸಾಲಿನ ಆಡಿಟ್ ವರದಿಯಲ್ಲಿ ಎ ಶ್ರೇಣಿ ವರ್ಗೀಕರಣವಾಗಿ ನಿವ್ವಳ ಲಾಭ 3.12 ಲಕ್ಷ ರು. ಗಳಿಸಿದೆ ಎಂದು ತಿಳಿಸಿದರು.ಈಗಾಗಲೇ ಸಂಗ್ರಹಿಸಲಾದ 14.18 ಲಕ್ಷ ರು. ಕಟ್ಟಡ ನಿಧಿಯನ್ನು ಪ್ರತ್ಯೇಕವಾಗಿ ಡಿಸಿಸಿ ಬ್ಯಾಂಕ್ ಠೇವಣಿಯಾಗಿರಿಸಿದ್ದು ಸಂಘದ ಪ್ರತಿಯೊಂದು ವ್ಯವಹಾರವನ್ನು ಗಣಕೀಕರಣಗೊಳಿಸಲಾಗಿದೆ ಐಡಿಬಿಐ ಸಹಕಾರದೊಂದಿಗೆ ಕ್ಯೂಆರ್ ಕೋಡ್ ಅಳವಡಿಸಿಕೊಂಡಿದ್ದು ಗ್ರಾಹಕರು ಸಾಲದ ಕಂತು, ಬಡ್ಡಿ, ಆರ್‌ಡಿ ಕಂತುಗಳನ್ನು ಕ್ಯೂಆರ್ ಕೋಡ್ ಮೂಲಕ ಸುಲಭದಲ್ಲಿ ಪಾವತಿಸಲು ಅನುಕೂಲ ಕಲ್ಪಿಸಲಾಗಿದೆ ಎಂದರು.
ಎಸ್‌ಎಸ್‌ಎಲ್‌ಸಿ ಮತ್ತು ಪಿಯುಸಿಯಲ್ಲಿ ಅತಿ ಹೆಚ್ಚು ಅಂಕ ಗಳಿಸಿದ ಸಂಘದ ಸದಸ್ಯರ ಪ್ರತಿಭಾನ್ವಿತ ಮಕ್ಕಳಿಗೆ ಪ್ರತಿಭಾ ಪುರಸ್ಕಾರ ನೀಡಿ ಗೌರವಿಸಲಾಯಿತು.ಅನುಶ್ರೀ ಸಂಗಡಿಗರು ಪ್ರಾರ್ಥಿಸಿ, ನಿರ್ದೇಶಕ ಜಿ.ಬಿ.ವೀರಣ್ಣಗೌಡ ಸ್ವಾಗತಿಸಿ, ಗಿರೀಶ್ ಕುಮಾರ್ ಧಾರವಾಡ ವಾರ್ಷಿಕ ವರದಿಯನ್ನು ವಾಚಿಸಿದರು. ನಿರ್ದೇಶಕ ಮಹೇಶ್ ಆರ್.ಎಸ್ 2024-25 ನೇ ಸಾಲಿನ ಜಮಾ-ಖರ್ಚು ಮಂಡಿಸಿದರು.ಶ್ರೀಧರ ನಿರೂಪಿಸಿದರು.ಉಪಾಧ್ಯಕ್ಷ ಚಂದ್ರಶೇಖರಪ್ಪ ವಂದಿಸಿದರು.