ರಾಮನಗರ: ನಗರದಲ್ಲಿ ಜ.15ರಿಂದ 18ರವರೆಗೆ ನಡೆಯಲಿರುವ ಶ್ರೀ ರಾಮೋತ್ಸವದ ಸಿದ್ಥತೆ ಸಂಬಂಧ ಶಾಸಕ ಇಕ್ಬಾಲ್‌ಹುಸೇನ್ ಅವರು ಎಸ್ಪಿ ಶ್ರೀನಿವಾಸ್‌ಗೌಡ ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿಗಳು ಹಾಗೂ ಕಾರ್ಯಕ್ರಮ ಸಂಚಾಲಕರೊಂದಿಗೆ ಸೋಮವಾರ ಚರ್ಚೆ ನಡೆಸಿದರು.

ರಾಮನಗರ: ನಗರದಲ್ಲಿ ಜ.15ರಿಂದ 18ರವರೆಗೆ ನಡೆಯಲಿರುವ ಶ್ರೀ ರಾಮೋತ್ಸವದ ಸಿದ್ಥತೆ ಸಂಬಂಧ ಶಾಸಕ ಇಕ್ಬಾಲ್‌ಹುಸೇನ್ ಅವರು ಎಸ್ಪಿ ಶ್ರೀನಿವಾಸ್‌ಗೌಡ ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿಗಳು ಹಾಗೂ ಕಾರ್ಯಕ್ರಮ ಸಂಚಾಲಕರೊಂದಿಗೆ ಸೋಮವಾರ ಚರ್ಚೆ ನಡೆಸಿದರು.

ಸಮನ್ವಯ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿ, ರಾಮನಗರದಲ್ಲಿ ನಾಲ್ಕು ದಿನ ರಾಮೋತ್ಸವ ನಡೆಯಲಿದ್ದು ಎಲ್ಲ ಕಾರ್ಯಕ್ರಮಗಳಿಗೆ ಸಾರ್ವಜನಿಕರ ಜೊತೆಗೆ ವಿವಿಧ ಇಲಾಖೆಗಳ ಸಹಕಾರ ಅಗತ್ಯ. ಪ್ರತಿಭಾ ಪುರಸ್ಕಾರ, ಸಾಧಕರಿಗೆ ಸನ್ಮಾನ, ಮ್ಯಾರಥಾನ್, ಗ್ರಾಮ ದೇವತೆಗಳ ಉತ್ಸವ, ಶ್ರೀನಿವಾಸ ಕಲ್ಯಾಣೋತ್ಸವ ಸೇರಿದಂತೆ ಎಲ್ಲ ಕಾರ್ಯಕ್ರಮಗಳು ಯಶಸ್ವಿಯಾಗಿ ನೆರವೇರಲು ಪೊಲೀಸ್ ಬಂದೂಬಸ್ತ್ ಅಗತ್ಯವಿದೆ. ಜೊತೆಗೆ ನಗರ ಸ್ವಚ್ಛತೆ, ಕುಡಿಯುವ ನೀರು, ಊಟದ ವ್ಯವಸ್ಥೆ ಸಹ ಅಚ್ಚುಕಟ್ಟಾಗಿ ಆಗಬೇಕಿದೆ. ಇದಕ್ಕೆ ಎಲ್ಲ ಇಲಾಖೆಗಳ ಅಧಿಕಾರಿಗಳು ಸಹಕರಿಸಬೇಕು ಎಂದು ಮನವಿ ಮಾಡಿದರು.

ಎಸ್ಪಿ ಶ್ರೀನಿವಾಸಗೌಡ ಮಾತನಾಡಿ, ಗ್ರಾಮ ದೇವತೆಗಳ ಉತ್ಸವ, ಮ್ಯಾರಥಾನ್ ಸೇರಿದಂತೆ ರಾಮೋತ್ಸವದ ವೈವಿಧ್ಯಮಯ ಕಾರ್ಯಕ್ರಮ, ಮ್ಯಾರಥಾನ್ ರೂಟ್ ಮ್ಯಾಪ್, ಮಡಿಕೇರಿ ಸ್ಥಬ್ದ ಚಿತ್ರಗಳು ಮತ್ತು ಪಟ್ಟಣದಲ್ಲಿ ಉತ್ಸವ ಸಾಗುವ ರಸ್ತೆಯಲ್ಲಿ ಪೊಲೀಸ್ ಅಧಿಕಾರಿಗಳು ಟ್ರಯಲ್ ನೋಡಲಿದ್ದಾರೆ. ದೇವಾಲಯ ಸಮಿತಿಯವರು ಸೇರಿದಂತೆ ಎಲ್ಲ ಆಯೋಜಕರು ಪೋಲೀಸ್ ಇಲಾಖೆಯ ಕಾನೂನು ಮತ್ತು ಸೂಚನೆಗಳನ್ನು ಕಡ್ಡಾಯವಾಗಿ ಪಾಲಿಸಬೇಕು. ಪೊಲೀಸ್ ಇಲಾಖೆ ವತಿಯಿಂದ ಸಿಸಿಟಿವಿ ಅಳವಡಿಕೆ, ಸೂಕ್ತ ಬಂದೋ ಬಸ್ತ್ ಮಾಡಲಾಗುವುದು ಎಂದರು.

ಪೋಲೀಸ್ ಇಲಾಖೆ, ಬೆಸ್ಕಾಂ, ನಗರಸಭೆ, ಕ್ರೀಡಾ ಇಲಾಖೆ, ಆರೋಗ್ಯ ಇಲಾಖೆ, ಶಿಕ್ಷಣ ಇಲಾಖೆ ಸೇರಿದಂತೆ ವಿವಿಧ ಇಲಾಖೆಗಳು ರಾಮೋತ್ಸವಕ್ಕೆ ವಹಿಸಬೇಕಾದ ಜವಾಬ್ದಾರಿಗಳ ಬಗ್ಗೆ ಶಾಸಕ ಇಕ್ಬಾಲ್ ಹುಸೇನ್ ಸಭೆಯಲ್ಲಿ ಸುದೀರ್ಘವಾಗಿ ಚರ್ಚೆ ನಡೆಸಿದರು.

ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ಜಿಲ್ಲಾಧ್ಯಕ್ಷ ಕೆ.ರಾಜು, ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಎ.ಬಿ.ಚೇತನ್ ಕುಮಾರ್, ಮಾಜಿ ಅಧ್ಯಕ್ಷ ಸಿಎನ್‌ಆರ್ ವೆಂಕಟೇಶ್, ಹೆಚ್ಚುವರಿ ಪೋಲೀಸ್ ವರಿಷ್ಠಾಧಿಕಾರಿ ಗಳಾದ ರಾಮಚಂದ್ರಪ್ಪ, ರಾಜೇಂದ್ರ, ಡಿವೈಎಸ್‌ಪಿ ಶ್ರೀನಿವಾಸ್, ವೃತ್ತ ಆರಕ್ಷಕ ನಿರೀಕ್ಷಕರಾದ ಕೃಷ್ಣ, ಮುರುಳಿ, ಇನ್ಸ್ ಪೆಕ್ಟರ್ ಗಳಾದ ವಸಂತ, ಶೋಭಾ, ತನ್ವೀರ್, ಜಾರ್ಜ್ ಪ್ರಕಾಶ್, ಸ್ವಾಮಿ, ಪುರಂದರ್, ನಗರಸಭೆ ಪೌರಾಯುಕ್ತ ಡಾ.ಜಯಣ್ಣ, ಬೆಸ್ಕಾಂ ಇಇ ಜಿತೇಂದ್ರ, ಕ್ರೀಡಾ ಇಲಾಖೆ ಸಹಾಯಕ ನಿರ್ದೇಶಕಿ ಅನಿತಾ, ರಾಮಗಿರಿ ಸೇವಾ ಟ್ರಸ್ಟ್ ಅಧ್ಯಕ್ಷ ನರಸಿಂಹ, ರೋಟರಿ ಅಧ್ಯಕ್ಷ ಪ್ರಕಾಶ್ , ಕಾರ್ಯದರ್ಶಿ ಪರಮೇಶ , ವಾಸವಿ ಟ್ರಸ್ಟ್ ನ ಉಮೇಶ್ ಉಪಸ್ಥಿತರಿದ್ದರು.

12ಕೆಆರ್ ಎಂಎನ್ 9.ಜೆಪಿಜಿ

ರಾಮನಗರ ಪೊಲೀಸ್ ಭವನದ ಸಭಾಂಗಣದಲ್ಲಿ ಶಾಸಕ ಇಕ್ಬಾಲ್ ಹುಸೇನ್ ವಿವಿಧ ಇಲಾಖೆ ಅಧಿಕಾರಿಗಳು ಮತ್ತು ಸಮನ್ವಯ ಸಮಿತಿ ಸಂಚಾಲಕರೊಂದಿಗೆ ಚರ್ಚಿಸಿದರು.