ಸಾರಾಂಶ
ಬರಗಾಲವನ್ನು ಸಮರ್ಥವಾಗಿ ಎದುರಿಸಲು ಅಧಿಕಾರಿಗಳು ಹಾಗೂ ಸಿಬ್ಬಂದಿ ಜವಾಬ್ದಾರಿಯಿಂದ ಕೆಲಸ ಮಾಡಬೇಕು ಎಂದು ಶಾಸಕ ಭೀಮಣ್ಣ ನಾಯ್ಕ ತಾಕೀತು ಮಾಡಿದರು
ಸಿದ್ದಾಪುರ: ಬರಗಾಲವನ್ನು ಸಮರ್ಥವಾಗಿ ಎದುರಿಸಲು ಅಧಿಕಾರಿಗಳು ಹಾಗೂ ಸಿಬ್ಬಂದಿ ಜವಾಬ್ದಾರಿಯಿಂದ ಕೆಲಸ ಮಾಡಬೇಕು ಎಂದು ಶಾಸಕ ಭೀಮಣ್ಣ ನಾಯ್ಕ ತಾಕೀತು ಮಾಡಿದರು.
ತಾಲೂಕಿನ ಸೋವಿನಕೊಪ್ಪ ಗ್ರಾಮ ಪಂಚಾಯಿತಿಯಲ್ಲಿ ಕುಡಿಯುವ ನೀರು ಹಾಗೂ ಮೇವಿನ ಪರಿಸ್ಥಿತಿ ಕುರಿತು ತಾಲೂಕು ಮಟ್ಟದ ಅಧಿಕಾರಿಗಳ ಸಭೆ ನಡೆಸಿ ಮಾತನಾಡಿದರು.
ಕುಡಿಯುವ ನೀರಿನ ವಿಷಯದಲ್ಲಿ ಉದಾಸೀನತೆ ತೋರಿದರೆ ಸಹಿಸುವುದಿಲ್ಲ. ಒಂದೇ ನೀರಿನ ಮೂಲ ನಂಬಿಕೊಂಡರೆ ದಿನ ಕಳೆದಂತೆ ಸಮಸ್ಯೆಯಾಗಲಿದೆ. ಬದಲಿ ವ್ಯವಸ್ಥೆ ಮಾಡಿಟ್ಟುಕೊಳ್ಳಿ. ಪ್ರತಿ ಪಂಚಾಯ್ತಿ ವ್ಯಾಪ್ತಿಯ ಜನರ ಸಹಕಾರ ಪಡೆದು ನೀರಿನ ಸಮಸ್ಯೆ ನೀಗಿಸಬೇಕಿದೆ.
ನೀರಿನ ಮೂಲವನ್ನು ತಕ್ಷಣ ಕಂಡುಕೊಂಡು ಕುಡಿಯುವ ನೀರನ್ನು ಸಮರ್ಪಕವಾಗಿ ಪೂರೈಸಬೇಕು. ಕುಡಿಯುವ ನೀರಿನ ವಿಚಾರದಲ್ಲಿ ಹಣದ ಕೊರತೆಯಾಗದಂತೆ ತಾಲೂಕಾಡಳಿತ ನೋಡಿಕೊಳ್ಳಲಿದೆ ಎಂದರು.
ತಾಪಂ ಇಒ ದೇವರಾಜ ಹಿತ್ತಲಕೊಪ್ಪ ಮಾಹಿತಿ ನೀಡಿ, ತಾಲೂಕಿನ ೯೭ ಮಜರೆಗಳಲ್ಲಿ ಕುಡಿಯುವ ನೀರಿನ ಕೊರತೆಯಾಗುವುದನ್ನು ಪಟ್ಟಿ ಮಾಡಿಕೊಳ್ಳಲಾಗದೆ. ಪಂಚಾಯ್ತಿಯಲ್ಲಿ ೧೫ನೇ ಹಣಕಾಸು ಯೋಜನೆಯಡಿ ₹ ೨ ಲಕ್ಷ ಹಣ ಕಾಯ್ದಿರಿಸಲಾಗಿದೆ ಎಂದು ಮಾಹಿತಿ ನೀಡಿದರು.
ತಾಲೂಕು ದಂಡಾಧಿಕಾರಿ ಎಂ.ಆರ್. ಕುಲಕರ್ಣಿ, ಅರೆಂದೂರು ಹೊಳೆಯ ನೀರು ಕೃಷಿಗೆ ಬಳಸುವ ರೈತರೊಂದಿಗೆ ಕಾವಂಚೂರು ಗ್ರಾಮ ಪಂಚಾಯ್ತಿಯಲ್ಲಿ ಸಭೆ ನಡೆಸಿ ಮನವೊಲಿಸಲಾಗಿದೆ ಎಂದರು. ಈ ವೇಳೆ ಸೋವಿನಕೊಪ್ಪ ಪಂಚಾಯ್ತಿ ಅಧ್ಯಕ್ಷೆ ಸುಮಾ ಗೌಡ ಹಾಗೂ ತಾಲೂಕುಮಟ್ಟದ ಅಧಿಕಾರಿಗಳು ಹಾಜರಿದ್ದರು.