ಸುಪ್ರೀಂಕೋರ್ಟ್‌ನ ಆದೇಶವನ್ನು ನಕಲು ಮಾಡಿ ಪರಪ್ಪನ ಅಗ್ರಹಾರ ಜೈಲಿನಿಂದ ಕೈದಿ ಬಿಡುಗಡೆಯಾಗಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಜೈಲಿನ ಸಿಬ್ಬಂದಿಯನ್ನು ಪರಪ್ಪನ ಅಗ್ರಹಾರ ಪೊಲೀಸರು ಬಂಧಿಸಿದ್ದಾರೆ.

ಕನ್ನಡಪ್ರಭ ವಾರ್ತೆ ಬೆಂಗಳೂರು

ಸುಪ್ರೀಂಕೋರ್ಟ್‌ನ ಆದೇಶವನ್ನು ನಕಲು ಮಾಡಿ ಪರಪ್ಪನ ಅಗ್ರಹಾರ ಜೈಲಿನಿಂದ ಕೈದಿ ಬಿಡುಗಡೆಯಾಗಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಜೈಲಿನ ಸಿಬ್ಬಂದಿಯನ್ನು ಪರಪ್ಪನ ಅಗ್ರಹಾರ ಪೊಲೀಸರು ಬಂಧಿಸಿದ್ದಾರೆ. ಜೈಲಿನಲ್ಲಿ ಎಫ್‌ಡಿಎ ಆಗಿದ್ದ ಶ್ರೀಕಾಂತ್ ಬಂಧಿತ ಆರೋಪಿ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಈ ಹಿಂದೆ ಎ.ಶಂಕರ್ ಎಂಬಾತನನ್ನು ಬಂಧಿಸಲಾಗಿತ್ತು. ಶಂಕರ್‌ ನೀಡಿದ ಹೇಳಿಕೆಯನ್ನು ಆಧರಿಸಿ ಶ್ರೀಕಾಂತ್‌ನನ್ನು ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.

ಏನಿದು ಪ್ರಕರಣ? : ಸುಪ್ರೀಂಕೋರ್ಟ್‌ನ ಆದೇಶವನ್ನು ನಕಲು ಮಾಡಿ ಶಿಕ್ಷಾ ಬಂಧಿ ಶಂಕರ್ ಪರಪ್ಪನ ಅಗ್ರಹಾರ ಜೈಲಿನಿಂದ 2018ರಲ್ಲಿ ಬಿಡುಗಡೆಯಾಗಿದ್ದ. ಶಂಕರ್‌ ಬಿಡುಗಡೆಯ ಬಗ್ಗೆ ಅನುಮಾನ ವ್ಯಕ್ತಪಡಿಸಿ ಕಾರಾಗೃಹ ಡಿಜಿಪಿಗೆ ದೂರು ಬಂದಿತ್ತು. ಈ ಬಗ್ಗೆ ತನಿಖೆ ನಡೆಸುವಂತೆ ಅಧಿಕಾರಿಗಳಿಗೆ ಸೂಚಿಸಿದ್ದರು. ತನಿಖೆ ನಡೆಸಿದ್ದಾಗ ಜೈಲಿನಲ್ಲಿ ಎಫ್‌ಡಿಎ ಆಗಿದ್ದ ಶ್ರೀಕಾಂತ್ ಸುಪ್ರೀಂ ಕೋರ್ಟ್‌ನ ಆದೇಶವನ್ನು ನಕಲು ಮಾಡಿ ಶಂಕರ್‌ನನ್ನು ಜೈಲಿನಿಂದ ಬಿಡುಗಡೆ ಮಾಡಿಸಿರುವುದು ಬೆಳಕಿಗೆ ಬಂದಿತ್ತು. ಚಿಕ್ಕಪೇಟೆ ಪೊಲೀಸ್‌ ಠಾಣೆಯಲ್ಲಿ ದಾಖಲಾಗಿದ್ದ ಪ್ರಕರಣವೊಂದರ ಸಂಬಂಧ ಅಪರಾಧಿ ಶಂಕರ್‌ಗೆ 2004ರಲ್ಲಿ ಜೀವಾವಧಿ ಶಿಕ್ಷೆ ಮತ್ತು 10 ಸಾವಿರ ರು. ದಂಡವನ್ನು ನ್ಯಾಯಾಲಯ ವಿಧಿಸಿತ್ತು. ಶಿಕ್ಷೆಯನ್ನು ರದ್ದು ಪಡಿಸುವಂತೆ ಹೈಕೋರ್ಟ್‌ ಹಾಗೂ ಸುಪ್ರೀಂ ಕೋರ್ಟ್‌ಗೆ ಮೇಲ್ಮನವಿ ಸಲ್ಲಿಸಿದ್ದ. ಕೇಂದ್ರ ಕಾರಾಗೃಹದ ಶಿಕ್ಷಾ ಬಂಧಿ ವಿಭಾಗದಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ಶ್ರೀಕಾಂತ್ 2018ರಲ್ಲಿ ಸುಪ್ರೀಂಕೋರ್ಟ್‌ನಿಂದ ಬಿಡುಗಡೆ ಆದೇಶವಾಗಿರುವ ಹಾಗೇ ಪ್ರತಿಯನ್ನು ನಕಲು ಮಾಡಿ, ಶಿಕ್ಷಾ ಬಂಧಿ ಶಂಕರ್ ಕೇಂದ್ರ ಕಾರಾಗೃಹದಿಂದ ಬಿಡುಗಡೆ ಮಾಡಿಸಿದ್ದ.