ಅಕಾಲಿಕ ಮಳೆಗೆ ಹಾಳಾದ ಗೋವಿನ ಜೋಳದ ಬೆಳೆ

| Published : Nov 30 2023, 01:15 AM IST

ಸಾರಾಂಶ

ಲಕ್ಷ್ಮೇಶ್ವರ ತಾಲೂಕಿನಲ್ಲಿ ಮಂಗಳವಾರ ರಾತ್ರಿ ಸುರಿದ ಮಳೆ-ಗಾಳಿಗೆ ಸಮೀಪದ ಬಾಲೆಹೊಸೂರ ಗ್ರಾಮದ ಸಣ್ಣಬಸಪ್ಪ ಅಣ್ಣಿಗೇರಿ ಎಂಬುವವರ ಹೊಲದಲ್ಲಿನ ಗೋವಿನ ಜೋಳದ ಬೆಳೆ ನೆಲಕ್ಕೆ ಬಿದ್ದು ನಾಶವಾಗಿದೆ.ತಾಲೂಕಿನ ರೈತರಿಗೆ ಶಾಪವಾಗಿ ಕಾಡುತ್ತಿದ್ದ ಮಳೆ 3-4 ತಿಂಗಳಿಂದ ಮಾಯವಾಗಿತ್ತು. ಆದರೆ ಮಂಗಳವಾರ ಸಂಜೆ 6 ಗಂಟೆಗೆ ಆರಂಭವಾದ ಮಳೆ-ಗಾಳಿಯು ರಾತ್ರಿ 8 ಗಂಟೆಯವರೆಗೆ ಸುರಿಯುವ ಮೂಲಕ ರೈತರಿಗೆ ಸಂಕಷ್ಟ ಉಂಟು ಮಾಡಿದೆ.

ಲಕ್ಷ್ಮೇಶ್ವರ: ತಾಲೂಕಿನಲ್ಲಿ ಮಂಗಳವಾರ ರಾತ್ರಿ ಸುರಿದ ಮಳೆ-ಗಾಳಿಗೆ ಸಮೀಪದ ಬಾಲೆಹೊಸೂರ ಗ್ರಾಮದ ಸಣ್ಣಬಸಪ್ಪ ಅಣ್ಣಿಗೇರಿ ಎಂಬುವವರ ಹೊಲದಲ್ಲಿನ ಗೋವಿನ ಜೋಳದ ಬೆಳೆ ನೆಲಕ್ಕೆ ಬಿದ್ದು ನಾಶವಾಗಿದೆ. ತಾಲೂಕಿನ ರೈತರಿಗೆ ಶಾಪವಾಗಿ ಕಾಡುತ್ತಿದ್ದ ಮಳೆ 3-4 ತಿಂಗಳಿಂದ ಮಾಯವಾಗಿತ್ತು. ಆದರೆ ಮಂಗಳವಾರ ಸಂಜೆ 6 ಗಂಟೆಗೆ ಆರಂಭವಾದ ಮಳೆ-ಗಾಳಿಯು ರಾತ್ರಿ 8 ಗಂಟೆಯವರೆಗೆ ಸುರಿಯುವ ಮೂಲಕ ರೈತರಿಗೆ ಸಂಕಷ್ಟ ಉಂಟು ಮಾಡಿದೆ. ತಾಲೂಕಿನ ಬಾಲೆಹೊಸೂರ ಗ್ರಾಮದಲ್ಲಿ ಸ್ವಲ್ಪ ಹೆಚ್ಚಿನ ಪ್ರಮಾಣದಲ್ಲಿ ಸುರಿದಿದ್ದರಿಂದ ಸಣ್ಣಬಸಪ್ಪ ಅಣ್ಣಿಗೇರಿ ಅವರು ತಮ್ಮ 2 ಎಕರೆ ನೀರಾವರಿ ಜಮೀನಿನಲ್ಲಿ ಗೋವಿನ ಜೋಳ ಬಿತ್ತನೆ ಮಾಡಿದ್ದರು. ಗೋವಿನ ಜೋಳವು ಹೂವಾಡಿಸುವ ವೇಳೆಯಲ್ಲಿ ಬುಧವಾರ ರಾತ್ರಿ ಸುರಿದ ಮಳೆ ಗಾಳಿಗೆ ಗೋವಿನ ಜೋಳವು ಸಂಪೂರ್ಣವಾಗಿ ನೆಲ ಕಚ್ಚಿದೆ. ಸುಮಾರು 20 ಸಾವಿರ ರು.ಗಳನ್ನು ಖರ್ಚು ಮಾಡಿ ಬಿತ್ತನೆ ಮಾಡಿದ್ದ ಬೆಳೆಯು ವರುಣನ ಅವಕೃಪೆಗೆ ತುತ್ತಾಗಿ ನೆಲ ಕಚ್ಚಿದೆ. ಹಿಂಗಾರು ಹಂಗಾಮಿನಲ್ಲಿ ಈಗ ಸುರಿಯುತ್ತಿರುವ ಮಳೆಯು ಕಳೆದ 2 ತಿಂಗಳ ಹಿಂದೆ ಸ್ವಲ್ಪ ಪ್ರಮಾಣದಲ್ಲಿ ಆಗಿದ್ದರೂ ರೈತರು ನೆಮ್ಮದಿಯ ನಿಟ್ಟುಸಿರು ಬಿಡುತ್ತಿದ್ದರು. ಈಗ ಆಗುತ್ತಿರುವ ಮಳೆಯಿಂದ ಪ್ರಯೋಜನ ಕಡಿಮೆಯಾದರೂ ರೈತರ ಮೊಗದಲ್ಲಿ ನಗುವಿನ ಜೊತೆಯಲ್ಲಿ ಬೇಸರವು ಮನೆ ಮಾಡಿದೆ ಎಂದರೆ ತಪ್ಪಾಗಲಾರದು. ಲಕ್ಷ್ಮೇಶ್ವರ ತಾಲೂಕಿನಲ್ಲಿ ಶಿಗ್ಲಿ, ಗೊಜನೂರ, ರಾಮಗೇರಿ, ಸೂರಣಗಿ, ಬಾಲೆಹೊಸೂರ, ಅಕ್ಕಿಗುಂದ, ಪು.ಬಡ್ನಿ ಯಳವತ್ತಿ ಸೇರಿದಂತೆ ಬಹುತೇಕ ಗ್ರಾಮಗಳಲ್ಲಿ ಮಳೆಯಾಗಿದ್ದು, ಹಿಂಗಾರು ಹಂಗಾಮಿನ ಕಡಲೆ, ಗೋದಿ, ಬಿಳಿ ಜೋಳ ಹಾಗೂ ಕುಸುಬಿ ಬೆಳೆಗೆ ಹೆಚ್ಚಿನ ಅನುಕೂಲವಾಗುತ್ತದೆ ಎಂಬುದು ರೈತರ ಅಭಿಪ್ರಾಯವಾಗಿದೆ.