ಸಾರಾಂಶ
ಸರ್ಜರಿಗೆ ಬಂದ ಸಮಯದಲ್ಲಿ ಜಿಲ್ಲೆಯ ಮದ್ದೂರು ತಾಲೂಕಿನ ವ್ಯಕ್ತಿಯೊಬ್ಬರಲ್ಲಿ ಕೊರೋನಾ ಸೋಂಕು ಪತ್ತೆ, ಊರಿನಲ್ಲೇ ಇದ್ದ ವ್ಯಕ್ತಿಗೆ ಪಾಸಿಟೀವ್, ಈತನ ಸಂಪರ್ಕಿತ ನಾಲ್ವರಿಗೆ ನೆಗೆಟಿವ್
ಕನ್ನಡಪ್ರಭ ವಾರ್ತೆ ಮಂಡ್ಯಕೇರಳದಲ್ಲಿ ಕೊರೋನಾ ರೂಪಾಂತರಿ ತಳಿ ಪ್ರಕರಣಗಳು ಹೆಚ್ಚುತ್ತಿರುವ ನಡುವೆಯೇ ಜಿಲ್ಲೆಯ ಮದ್ದೂರು ತಾಲೂಕಿನ ವ್ಯಕ್ತಿಯೊಬ್ಬರಲ್ಲಿ ಕೊರೋನಾ ಸೋಂಕು ಪತ್ತೆಯಾಗಿರುವುದು ಆತಂಕ ಮೂಡಿಸಿದೆ.
ಸೋಂಕು ಪತ್ತೆಯಾದ ವ್ಯಕ್ತಿ ಎಲ್ಲಿಗೂ ಪ್ರವಾಸ ನಡೆಸಿರಲಿಲ್ಲ. ಊರಿನಲ್ಲೇ ನೆಲೆಸಿದ್ದ ವ್ಯಕ್ತಿ ಸರ್ಜರಿಗೆಂದು ಆಸ್ಪತ್ರೆಗೆ ಬಂದ ಸಮಯದಲ್ಲಿ ಪರೀಕ್ಷೆ ನಡೆಸಲಾಗಿದೆ. ಆಗ ಜೆಎನ್-1 ಸೋಂಕು ಪತ್ತೆಯಾಗಿದೆ. ಆದರೆ, ಈ ವ್ಯಕ್ತಿಯಲ್ಲಿ ಸೋಂಕಿನ ಯಾವ ಲಕ್ಷಣಗಳೂ ಇಲ್ಲ. ಸೋಂಕು ಪತ್ತೆಯಾದ ಹಿನ್ನೆಲೆಯಲ್ಲಿ ಈತನೊಂದಿಗೆ ನಾಲ್ವರು ಸಂಪರ್ಕದಲ್ಲಿದ್ದು ಅವರನ್ನೂ ಆರ್‌ಟಿಪಿಸಿಆರ್ ಪರೀಕ್ಷೆಗೆ ಒಳಪಡಿಸಲಾಗಿದೆ. ಯಾರಲ್ಲೂ ಸೋಂಕು ಕಂಡುಬಂದಿಲ್ಲವೆಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಕೆ.ಮೋಹನ್ ‘ಕನ್ನಡಪ್ರಭ’ಕ್ಕೆ ತಿಳಿಸಿದರು.ನೆರೆ ರಾಜ್ಯದಲ್ಲಿ ಕೊರೋನಾ ರೂಪಾಂತರಿ ತಳಿಯ ಪ್ರಕರಣಗಳು ಹೆಚ್ಚುತ್ತಿರುವುದರಿಂದ ಜಿಲ್ಲೆಯೊಳಗೂ ಅಗತ್ಯ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ. ಜಿಲ್ಲೆಯ ಆರು ಸಾರ್ವಜನಿಕ ಆಸ್ಪತ್ರೆಗಳಲ್ಲಿ ಐಸಿಯು ಬೆಡ್‌ಗಳನ್ನು ಸಿದ್ಧಪಡಿಸಿಕೊಳ್ಳಲಾಗಿದೆ. ವೆಂಟಿಲೇಟರ್‌ಗಳನ್ನು ಸಜ್ಜುಗೊಳಿಸಲಾಗಿದೆ. ಜಂಬೋಸಿಲಿಂಡರ್‌ಗಳನ್ನು ಪೂರ್ಣಪ್ರಮಾಣದಲ್ಲಿ ತುಂಬಿಸಿಟ್ಟುಕೊಂಡಿದ್ದು, ಆಸ್ಪತ್ರೆಗಳಲ್ಲಿ ಆಕ್ಸಿಜನ್ ಬೆಡ್‌ಗಳನ್ನು ಸಿದ್ಧಪಡಿಸಿಟ್ಟುಕೊಳ್ಳುವಂತೆ ಸೂಚಿಸಲಾಗಿದೆ ಎಂದು ವಿವರಿಸಿದರು.
ಜಿಲ್ಲೆಯ ಆರು ತಾಲೂಕುಗಳಲ್ಲಿ ಆಕ್ಸಿಜನ್ ಪ್ಲಾಂಟ್‌ಗಳು ಕಾರ್ಯಾಚರಣೆಗೆ ಸಿದ್ಧಗೊಂಡಿವೆ. ಶ್ರೀರಂಗಪಟ್ಟಣದ ಪ್ಲಾಂಟ್‌ನ ಸೆನ್ಸಾರ್ ಕೆಟ್ಟಿರುವುದರಿಂದ ಅದನ್ನು ಸರಿಪಡಿಸುವುದಕ್ಕೆ ಕ್ರಮ ವಹಿಸಲಾಗಿದೆ. ಕೊರೋನಾ ರೂಪಾಂತರಿ ತಳಿಯನ್ನು ಎದುರಿಸಲು ಎಲ್ಲ ರೀತಿಯ ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಂಡಿರುವುದಾಗಿ ಹೇಳಿದರು.