ಭಗೀರಥ ಗುರುಪೀಠದ ಪುರುಷೋತ್ತಮಾನಂದ ಪುರಿ ಸ್ವಾಮೀಜಿ.

ಕನ್ನಡಪ್ರಭ ವಾರ್ತೆ ಹೊಸದುರ್ಗ

ತಾಲೂಕಿನ ಭಗೀರಥ ಗುರುಪೀಠದಲ್ಲಿ ಫೆ.9 ಹಾಗೂ 10 ರಂದು 27ನೇ ವರ್ಷದ ಪಟ್ಟಾಭಿಷೇಕ ಮಹೋತ್ಸವದ ಅಂಗವಾಗಿ ರಾಜ್ಯ ಮಟ್ಟದ ಭಜನಾ ಕಾರ್ಯಕ್ರಮ, ಭಗೀರಥ ಜಯಂತೋತ್ಸವ ಅಂಗವಾಗಿ ವೇದಿಕೆ ಕಾರ್ಯಕ್ರಮ ಸೇರಿದಂತೆ ಎರಡು ದಿನಗಳ ಕಾಲ ಹಲವು ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ ಎಂದು ಭಗೀರಥ ಗುರುಪೀಠದ ಪುರುಷೋತ್ತಮಾನಂದ ಪುರಿ ಸ್ವಾಮೀಜಿ ತಿಳಿಸಿದರು.

ತಾಲೂಕಿನ ಭಗೀರಥ ಪೀಠದಲ್ಲಿ ಶನಿವಾರ ಸುದ್ದಿಗಾರರದೊಂದಿಗೆ ಮಾತನಾಡಿ, ಫೆ. 9 ರಂದು ಬೆಳಗ್ಗೆ 9 ಗಂಟೆಯಿಂದ ಭಜನಾ ಕಾರ್ಯಕ್ರಮ ಆರಂಭಿಸಲಾಗುವುದು. ಉಪ್ಪಾರಹಟ್ಟಿ ದೊಡ್ಡೇರಿ ಆಶ್ರಮದ ಮಲ್ಲಪ್ಪಾಜಿ ಸ್ವಾಮೀಜಿ ಸಾನ್ನಿಧ್ಯ ವಹಿಸುವರು. ಹೈಕೋರ್ಟ್ ನಿವೃತ್ತ ನ್ಯಾಯಮೂರ್ತಿ ಎಚ್.ಬಿಲ್ಲಪ್ಪ ಉದ್ಘಾಟಿಸುವರು. ವಕೀಲ ಶಾಮಾನಂದ ಪೂಜಾರ್ ಭಜನಾ ತಂಡದ ನಿರ್ವಹಣೆ ಮಾಡುವರು. ಬೆಳಗ್ಗೆ 9 ಗಂಟೆಯಿಂದ ಆರಂಭವಾದ ಭಜನಾ ಕಾರ್ಯಕ್ರಮ ರಾತ್ರಿಯವರೆಗೂ ನಡೆಯಲಿದೆ. ಭಜನೆಯಲ್ಲಿ ಭಕ್ತಿಗೀತೆಗಳು, ದಾಸರ ಪದಗಳು, ಭಕ್ತಿಯ ಸೋಬಾನೆ ಪದಗಳಿಗೆ ಅವಕಾಶ ಕಲ್ಪಿಸಲಾಗಿದೆ. ಭಾಗವಹಿಸಿದ ಎಲ್ಲಾ ತಂಡದವರಿಗೂ ಪ್ರಶಸ್ತಿ ನೀಡಲಾಗುವುದು.

ಪ್ರಥಮ ಬಹುಮಾನ 1 ಲಕ್ಷ ರು. ದ್ವಿತೀಯ 80 ಸಾವಿರ ರು, ತೃತೀಯ 70 ಸಾವಿರ ರು. ಹಾಗೂ ಸಮಾಧಾನಕರ ಬಹುಮಾನ 9 ಸಾವಿರ ರು. ನೀಡಲಾಗುವುದು. ಉತ್ತಮ ಹಾಡುಗಾರಿರಿಗೆ, ಹಾರ್ಮೋನಿಯಂ ವಾದಕರಿಗೆ, ತಬಲ ವಾದಕರಿಗೆ, ಉತ್ತಮ ತಾಳ ವಾದಕರಿಗೆ, ಧಮಡಿ ವಾದಕರಿಗೆ, ಉತ್ತಮ ಡಗ್ಗಾ ವಾದಕರಿಗೆ ತಲಾ 3 ಸಾವಿರದಂತೆ ಇಬ್ಬರಿಗೆ ನೀಡಲಾಗುವುದು. ಸಮಾಜ ಸೇವಕರಿಗೆ, ಅಧಿಕಾರಿಗಳು ಸೇರಿದಂತೆ ಹಲವರಿಗೆ ಅಭಿನಂದನೆ ಸಲ್ಲಿಸಲಾಗುವುದು. ಶ್ರೀಮಠಕ್ಕೆ ಬರುವ ಭಜನಾ ತಂಡದವರಿಗೆ ಊಟ ಹಾಗೂ ವಸತಿ ಸೌಲಭ್ಯ ಕಲ್ಪಿಸಲಾಗುವುದು ಎಂದು ಹೇಳಿದರು.

ಫೆ.10 ರಂದು ಬೆಳಗ್ಗೆ 5 ಗಂಟೆಗೆ ಮಹಾ ಗಣಪತಿ, ಶಿವಲಿಂಗ, ಭಗೀರಥ ಮಹರ್ಷಿ, ಸೀತಾ ರಾಮಾಂಜನೇಸ್ವಾಮಿ, ಚೆನ್ನಕೇಶವ ಸ್ವಾಮಿ ಹಾಗೂ ತಿರುಪತಿ ವೆಂಕಟೇಶ್ವರ ಸ್ವಾಮಿಗೆ ಪಂಚಾಮೃತ, ರುದ್ರಾಭಿಷೇಕ, ಅಷ್ಟೋತ್ತರ, ಬಿಲ್ವಾರ್ಚನೆ, ಪುಷ್ಪಾರ್ಚನೆ ಹೋಮ ಹವನಗಳು ನಡೆಯಲಿವೆ. ಪೀಠಾರೋಹಣ, ಕಿರೀಟಧಾರಣೆ ಕಾರ್ಯಕ್ರಮ ನಡೆಯಲಿದೆ.

ಬೆಳಗ್ಗೆ 10 ಗಂಟೆಗೆ ಮಧುರೆಯಿಂದ ಭಗೀರಥ ಗುರುಪೀಠದವರೆಗೂ 6.40 ಕೋಟಿ ರು. ವೆಚ್ಚದಲ್ಲಿ ನಿರ್ಮಿಸಲಾಗುವ ಸೇತುವೆ ಹಾಗೂ ರಸ್ತೆ ಭೂಮಿ ಪೂಜೆಯನ್ನು ಲೋಕೋಪಯೋಗಿ ಇಲಾಖೆ ಸಚಿವ ಸತೀಶ ಜಾರಕಿಹೊಳಿ ಭೂಮಿ ಪೂಜೆ ನೆರವೇರಿಸುವರು. ಬೆಳಗ್ಗೆ 11ಕ್ಕೆ ವೇದಿಕೆ ಕಾರ್ಯಕ್ರಮ ನಡೆಯಲಿದೆ. ಶಾಸಕ ಸಿ.ಪುಟ್ಟರಂಗಶೆಟ್ಟಿ ಅಧ್ಯಕ್ಷತೆ ವಹಿಸುವರು. ಜಿಲ್ಲಾ ಉಸ್ತುವಾರಿ ಸಚಿವ ಡಿ.ಸುಧಾಕರ್ ಭಗೀರಥ ಮಹರ್ಷಿ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸುವರು. ಸಚಿವ ಮಧು ಬಂಗಾರಪ್ಪ ಸಾಧಕರಿಗೆ ಗೌರವ ಸಮರ್ಪಣೆ ಮಾಡುವರು, ಭಜನಾ ಸ್ಪರ್ಧೆ ವಿಜೇತರಿಗೆ ಶಾಸಕ ಬಿ‌.ಜಿ.ಗೋವಿಂದಪ್ಪ ಬಹುಮಾನ ವಿತರಿಸುವರು.

30 ಜನರ ತಂಡದಿಂದ ಅತ್ಯಾಕರ್ಷಕ ಮಲ್ಲಕಂಬ ಪ್ರದರ್ಶನವಿರಲಿದ್ದು, ಸಾಂಸ್ಕೃತಿಕ ಕಾರ್ಯಕ್ರಮ, ವಿವಿಧ ಮಠಾಧೀಶರ, ಜನಪ್ರತಿನಿಧಿಗಳು, ಉಪ್ಪಾರ ಸಮಾಜದ ಎಲ್ಲಾ ಜಿಲ್ಲಾ ಹಾಗೂ ತಾಲೂಕು ಅಧ್ಯಕ್ಷರು, ಪದಾಧಿಕಾರಿಗಳು, ಮುಖಂಡರು ಸೇರಿದಂತೆ ಅಪಾರ ಸಂಖ್ಯೆಯ ಭಕ್ತರು ಭಾಗವಹಿಸುವರು ಎಂದು ಸ್ವಾಮೀಜಿ ಹೇಳಿದರು.