ಸಾರಾಂಶ
ಬೆಳೆ ವಿಮೆ ವಿತರಣೆಯಲ್ಲಿ ರೈತರಿಗೆ ಅನ್ಯಾಯವಾಗಿದೆ. ಕೆಲ ರೈತರ ಖಾತೆಗಳಿಗೆ ಮಾತ್ರ ಸರ್ಕಾರದಿಂದ ಹಣ ಜಮೆ ಮಾಡಲಾಗಿದೆ. ಉಳಿದ ರೈತರಿಗೂ ಬೆಳೆ ವಿಮೆ ಹಾಗೂ ಬೆಳೆ ಪರಿಹಾರದಲ್ಲಾದ ತಾರತಮ್ಯ ಸರಿಪಡಿಸಬೇಕೆಂದು ರೈತ ಹೋರಾಟಗಾರ ಲೋಕನಾಥ ಹೆಬಸೂರ ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಿದ್ದಾರೆ.
ನವಲಗುಂದ:
2022-23ನೇ ಸಾಲಿನ ಬೆಳೆ ವಿಮೆ ಹಾಗೂ ಬೆಳೆ ಪರಿಹಾರ ತಾರತಮ್ಯ ಸರಿಪಡಿಸಬೇಕು ಹಾಗೂ ಕಳಸಾ ಬಂಡೂರಿ ಯೋಜನೆ ಕಾಮಗಾರಿ ಶೀಘ್ರ ಆರಂಭಿಸಬೇಕೆಂದು ರೈತ ಹೋರಾಟಗಾರ ಲೋಕನಾಥ ಹೆಬಸೂರ ಒತ್ತಾಯಿಸಿದರು.ಪಟ್ಟಣದಲ್ಲಿ ತಹಸೀಲ್ದಾರ್ ಮೂಲಕ ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಿ ಮಾತನಾಡಿದ ಅವರು, ಜಿಲ್ಲೆಯಲ್ಲಿ ಹೆಸರು ಕಾಳು ಖರೀದಿ ಕೇಂದ್ರ ಆರಂಭಿಸಿರುವುದು ಖುಷಿ ತಂದಿದೆ. ಆದರೆ, ಪ್ರತಿ ಎಕರೆಗೆ 2ರ ಬದಲು 4 ಕ್ವಿಂಟಲ್ ಖರೀದಿಸಬೇಕು. ರೈತರಿಂದ ಗರಿಷ್ಠ 20 ಕ್ವಿಂಟಲ್ ವರೆಗೂ ಖರೀದಿಸಬೇಕು. ಅತಿಯಾದ ಮಳೆಯಿಂದ ತೇವಾಂಶ ಹೆಚ್ಚಳವಾಗಿದ್ದು ಶೇ. 12ರ ಬದಲು ಶೇ. 18ಕ್ಕೆ ಹೆಚ್ಚಿಸಬೇಕು ಎಂದು ಮನವಿಯಲ್ಲಿ ತಿಳಿಸಿದರು.
ಕಳಸಾ-ಬಂಡೂರಿ ಹಾಗೂ ಮಹದಾಯಿ ಯೋಜನೆ ಕಾಮಗಾರಿ ಆರಂಭಿಸಲು ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಅವರು ಸಂಬಂಧಿಸಿದ ಇಲಾಖೆಯಿಂದ ಅನುಮತಿ ಕೊಡಿಸಬೇಕು. ಪ್ರಧಾನ ಮಂತ್ರಿ ಫಸಲ್ ಬಿಮಾ ಯೋಜನೆ ಹಾಗೂ ಪ್ರಕೃತಿ ವಿಕೋಪದಿಂದ ಬೆಳ ಹಾನಿ ಪರಿಹಾರದ ಮಾರ್ಗಸೂಚಿ ಪ್ರಕಾರ 2022 ಮತ್ತು 2023ನೇ ಸಾಲಿನ ಪರಿಹಾರ ಕೆಲವು ರೈತರಿಗೆ ಮಾತ್ರ ಬಂದಿದ್ದು ಉಳಿದವರಿಗೆ ಅನ್ಯಾಯವಾಗಿದೆ. ಎಲ್ಲ ರೈತರಿಗೂ ಪರಿಹಾರ ಬರುವಂತೆ ಕ್ರಮಕೈಗೊಳ್ಳುವ ಜತೆಗೆ ಕೆಲವು ಜಿಲ್ಲೆಗಳಲ್ಲಿ ವಿಮೆ ಮತ್ತು ಪರಿಹಾರದಲ್ಲಿ ತಾರತಮ್ಯ ನಡೆಯುತ್ತಿದ್ದು ಕೂಡಲೇ ಸರಿಪಡಿಸಬೇಕೆಂದು ಒತ್ತಾಯಿಸಿದರು.ಈ ವೇಳೆ ಅಸಂಘಟಿತ ಕಾರ್ಮಿಕರ ಮಹಿಳೆಯರ ರೈತ ಹೋರಾಟ ಒಕ್ಕೂಟ ಸಮಿತಿ ಅಧ್ಯಕ್ಷ ರಘುನಾಥ ನಡುವಿನಮನಿ, ಮಲ್ಲಪ್ಪ ಹಂಚಿನಾಳ, ಫಕೀರಗೌಡ ದೊಡಮನಿ, ಚಂಬಣ್ಣ ಕೆಸರಪ್ಪನವರ, ರುದ್ರಪ್ಪ ಸುಂಕದ, ಯಲ್ಲಪ್ಪ ಡಾಲಿನ, ಹನುಮಂತಪ್ಪ ಶಲವಡಿ, ಈರಣ್ಣ ಕೆಸರಪ್ಪನವರ ಸೇರಿದಂತೆ ಅನೇಕ ರೈತರು ಭಾಗಿಯಾಗಿದ್ದರು.