ಗ್ರಾಮೀಣ ಎಲ್‌ಪಿಜಿ ಸಿಲಿಂಡರ್ ವಿತರಕರಿಗಾಗುತ್ತಿರುವ ಅನ್ಯಾಯ ಸರಿಪಡಿಸುವಂತೆ ಒತ್ತಾಯಿಸಿ ಕರ್ನಾಟಕ ಎಲ್‌ಪಿಜಿ ಗ್ರಾಮೀಣ ವಿತರಕರ ಒಕ್ಕೂಟದವರು ಹಾವೇರಿಯಲ್ಲಿ ಆಹಾರ ಇಲಾಖೆ ಉಪನಿರ್ದೇಶಕರಿಗೆ ಮನವಿ ಸಲ್ಲಿಸಿದರು.
ಹಾವೇರಿ: ಆಯಿಲ್ ಕಂಪನಿಯವರು ಹಾಗೂ ನಗರ ಪ್ರದೇಶಗಳಲ್ಲಿರುವ ಎಲ್‌ಪಿಜಿ ಸಿಲಿಂಡರ್ ವಿತರಕರು ಒಗ್ಗಟ್ಟಾಗಿ ಗ್ರಾಮೀಣ ಪ್ರದೇಶದ ಎಲ್‌ಪಿಜಿ ಗ್ರಾಹಕರಿಗೆ ಸಿಲಿಂಡರ್ ಪೂರೈಸುತ್ತಿದ್ದು, ಇದರಿಂದ ಗ್ರಾಮೀಣ ಭಾಗದಲ್ಲಿ ಎಲ್‌ಪಿಜಿ ಸಿಲಿಂಡರ್ ಪೂರೈಸುವ ವಿತರಕರಿಗೆ ಅನ್ಯಾಯವಾಗುತ್ತಿದೆ. ಈ ಅನ್ಯಾಯ ಸರಿಪಡಿಸುವಂತೆ ಆಗ್ರಹಿಸಿ ಕರ್ನಾಟಕ ಎಲ್‌ಪಿಜಿ ಸಿಲಿಂಡರ್ ಗ್ರಾಮೀಣ ವಿತರಕರ ಒಕ್ಕೂಟದ ಪದಾಧಿಕಾರಿಗಳು ಗುರುವಾರ ಆಹಾರ ಇಲಾಖೆ ಉಪನಿರ್ದೇಶಕರಿಗೆ ಮನವಿ ಸಲ್ಲಿಸಿದರು.
ಈ ವೇಳೆ ಕರ್ನಾಟಕ ಎಲ್‌ಪಿಜಿ ಗ್ರಾಮೀಣ ವಿತರಕರ ಒಕ್ಕೂಟದ ರಾಜ್ಯಾಧ್ಯಕ್ಷ ತಿಪ್ಪಣ್ಣ ವೈ.ಎನ್. ಮಾತನಾಡಿ, ಗ್ರಾಮೀಣ ಭಾಗದ ಅಡುಗೆ ಅನಿಲ ಗ್ರಾಹಕರಿಗೆ ಅನುಕೂಲವಾಗುವ ನಿಟ್ಟಿನಲ್ಲಿ ಕೇಂದ್ರ ಸರ್ಕಾರ ಎಲ್‌ಪಿಜಿ ಗ್ರಾಮೀಣ ವಿತರಕರನ್ನು ನೇಮಿಸಿಕೊಂಡಿತ್ತು. ಆದರೆ ಅಧಿಕಾರಿಗಳು ಹಾಗೂ ವ್ಯವಸ್ಥೆಯ ನಿರ್ಲಕ್ಷ್ಯದಿಂದಾಗಿ ಗ್ರಾಮೀಣ ಗ್ಯಾಸ್ ವಿತರಕರು ಬೀದಿಗೆ ಬೀಳುವ ಸ್ಥಿತಿ ನಿರ್ಮಾಣವಾಗಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.ನಿಯಮಗಳ ಪ್ರಕಾರ ಯಾವುದೇ ಅನಿಲ ವಿತರಕರು ತಮ್ಮ ಕೇಂದ್ರ ಸ್ಥಾನದಿಂದ 15 ಕಿಮೀ ವ್ಯಾಪ್ತಿಯಲ್ಲಿ ಮಾತ್ರ ಸಿಲಿಂಡರ್ ಪೂರೈಸಬೇಕು. ಆದರೆ ಗ್ರಾಮೀಣ ವಿತರಕರ ನೇಮಕಕ್ಕಿಂತ ಮುಂಚೆ ಕೆಲ ನಗರ ವಿತರಕರು 90-95 ಕಿಮೀ ದೂರದವರೆಗೆ ಸಿಲಿಂಡರ್ ಪೂರೈಸುತ್ತಿದ್ದರಿಂದ, ಸಕಾಲಕ್ಕೆ ಸಿಲಿಂಡರ್ ಪೂರೈಕೆ, ಕೆವೈಸಿ ಪ್ರಕ್ರಿಯೆ, ಸಬ್ಸಿಡಿ ಜಮೆ, ದಾಖಲೆ ಸರಿಪಡಿಸುವುದು ಹೀಗೆ ಅನೇಕ ಸಮಸ್ಯೆಗಳು ಎದುರಾಗುವುದರಿಂದ ಗ್ರಾಹಕರಿಗೆ ಉತ್ತಮ ಸೇವೆ ಒದಗಿಸಲು ತೊಂದರೆಯಾಗುತ್ತಿತ್ತು. ಇದನ್ನರಿತ ಕೇಂದ್ರ ಸರ್ಕಾರ ಗ್ರಾಮೀಣ ಗ್ರಾಹಕರಿಗೆ ಉತ್ತಮ ಸೇವೆ ನೀಡಲು ಗ್ರಾಮೀಣ ಎಲ್‌ಪಿಜಿ ವಿತರಕರನ್ನು ನೇಮಕ ಮಾಡಿಕೊಂಡಿತ್ತು.
ಆರಂಭದಲ್ಲಿ ರು. 50 ಲಕ್ಷದಿಂದ 2 ಕೋಟಿವರೆಗೆ ಹೂಡಿಕೆ ಹಣವನ್ನು ತೆಗೆದುಕೊಂಡು ಡೀಲರ್‌ಶಿಪ್ ನೀಡಿದ್ದು, ಈಗ ಸಿಬ್ಬಂದಿ ವೇತನ, ಗಾಡಿಗಳ ಡೀಸೆಲ್, ಕರೆಂಟ್ ಬಿಲ್ ತುಂಬಲಿಕ್ಕೂ ಆಗುತ್ತಿಲ್ಲ. ಇದೀಗ ಮತ್ತೆ ನಗರದ ಪ್ರಭಾವಿ ಗ್ಯಾಸ್ ವಿತರಕರು ಆಯಿಲ್ ಕಂಪನಿಗಳ ಜತೆಗೆ ಶಾಮೀಲಾಗಿ ಗ್ರಾಮೀಣ ಪ್ರದೇಶದಲ್ಲಿಯೂ ಅತಿಕ್ರಮಿಸಿ ಗ್ಯಾಸ್ ಸಿಲಿಂಡರ್‌ಗಳನ್ನು ಪೂರೈಸುತ್ತಿದ್ದಾರೆ. ಜತೆಗೆ ಪ್ರಭಾವಿಗಳೇ ಅನಧಿಕೃತ ಏಜೆಂಟರ್‌ಗಳನ್ನು ನೇಮಿಸಿಕೊಂಡು ಕಾಳಸಂತೆಯಲ್ಲಿ ದಾಸ್ತಾನು ಮಾಡಿ, ಗ್ರಾಮೀಣ ಕಾರ್ಯಕ್ಷೇತ್ರದಲ್ಲಿ ಮಾರಾಟ ಮಾಡುತ್ತಿರುವುದರಿಂದ ಜಿಲ್ಲೆಯಲ್ಲಿರುವ ಗ್ರಾಮೀಣ ಭಾಗದ ಎಲ್‌ಪಿಜಿ ಡೀರ‍್ಸ್ಗಳಿಗೆ ಅನ್ಯಾಯವಾಗುತ್ತಿದೆ ಎಂದರು.ಕೂಡಲೇ ನಗರದಲ್ಲಿರುವ ಆಯಿಲ್ ಕಂಪನಿ, ಪ್ರಭಾವಿ ಎಲ್‌ಪಿಜಿ ವಿತರಕರು 15 ಕಿಮೀ ವ್ಯಾಪ್ತಿಗೆ ಸೀಮಿತಗೊಂಡು ಪೂರೈಸುವಂತೆ ಸೂಚಿಸಬೇಕು. ಇಲ್ಲದಿದ್ದರೆ ಬರುವ ದಿನಗಳಲ್ಲಿ ಜಿಲ್ಲೆಯ ಗ್ರಾಮೀಣ ಭಾಗಗಳಿಗೆ ಅತಿಕ್ರಮಣ ಪ್ರವೇಶ ಮಾಡುವ ನಗರ ವಿತರಕರ ವಾಹನಗಳನ್ನು ತಡೆದು, ಸಂಘದಿಂದ ಪ್ರತಿಭಟನೆ ನಡೆಸಬೇಕಾಗುತ್ತದೆ ಎಂದು ಎಚ್ಚರಿಸಿದರು.
ಈ ಸಂದರ್ಭದಲ್ಲಿ ಅಕ್ಕಿಆಲೂರಿನ ಡೀಲರ್ ಸದಾಶಿವ ಬೆಲ್ಲದ, ಮೇಡ್ಲೇರಿಯ ದರ್ಶನ ಕಣವಿ, ಹಾಲಗಿಯ ಪ್ರದೀಪಗೌಡ ಪಾಟೀಲ, ತಿಳವಳ್ಳಿಯ ಶಿವಪುತ್ರಪ್ಪ ಗೌಳೇರ, ಹಂಸಭಾವಿಯ ವೀರೇಂದ್ರ ಶೆಟ್ಟರ, ಕಾಗಿನೆಲೆಯ ಭರತೇಶ ಚೂರಿ, ಸೌಭಾಗ್ಯ ಎಸ್.ಜಿ.ಸೇರಿದಂತೆ ಹಲವರು ಇದ್ದರು.