ಸಾರಾಂಶ
ನವದೆಹಲಿ: ರಾಜ್ಯದ ಅಭಿವೃದ್ಧಿಗೆ ಪೂರಕವಾಗಿ ಹೆಚ್ಚಿನ ತೆರಿಗೆ ಪಾಲು ನೀಡುವಂತೆ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಮನವಿ ಮಾಡಿದ್ದಾರೆ. ಅಲ್ಲದೆ 15ನೇ ಹಣಕಾಸು ಆಯೋಗದ ತೆರಿಗೆ ಹಂಚಿಕೆ ನೀತಿ ಅನ್ವಯ ರಾಜ್ಯಕ್ಕೆ ಭಾರೀ ಅನ್ಯಾಯವಾಗಿದೆ ಎಂದು ದೂರಿದ್ದಾರೆ.
ಸದ್ಯ ದೆಹಲಿ ಪ್ರವಾಸದಲ್ಲಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ, ಮಂಗಳವಾರ ಸಚಿವೆ ನಿರ್ಮಲಾ ಸೀತಾರಾಮನ್ ಅವರನ್ನು ಭೇಟಿ ಮಾಡಿದ್ದರು. ಸಭೆಯ ಬಳಿಕ ಸುದ್ದಿಗಾರರ ಜತೆ ಮಾತನಾಡಿದ ಸಿಎಂ ಸಿದ್ದರಾಮಯ್ಯ, ‘ಕೇಂದ್ರ ಹಣಕಾಸು ಸಚಿವರನ್ನು ಭೇಟಿಯಾಗಿ, 15ನೇ ಹಣಕಾಸು ಆಯೋಗವು ತೆರಿಗೆ ಹಂಚಿಕೆಯಲ್ಲಿ ರಾಜ್ಯದ ಪಾಲನ್ನು ಕಡಿತಗೊಳಿಸಿದ್ದರಿಂದ ಕರ್ನಾಟಕವು ಒಟ್ಟು 80,000 ಕೋಟಿ ರು.ಗಳಿಗೂ ಹೆಚ್ಚು ನಷ್ಟವನ್ನು ಎದುರಿಸಿದೆ ಎಂದು ತಿಳಿಸಿದೆ’ ಎಂದು ಹೇಳಿದ್ದಾರೆ.15ನೇ ಹಣಕಾಸು ಆಯೋಗದ ಅಡಿಯಲ್ಲಿ, ತೆರಿಗೆ ಹಂಚಿಕೆಯಲ್ಲಿ ರಾಜ್ಯದ ಪಾಲು ಶೇ.4.713ರಿಂದ ಶೇ.3.647ಕ್ಕೆ ಇಳಿದಿದೆ. ಕರ್ನಾಟಕಕ್ಕೆ ವಿಶೇಷ ಅನುದಾನಗಳಲ್ಲಿ 11,495 ಕೋಟಿ ರು.ಗಳನ್ನು ನಿರಾಕರಿಸಲಾಗಿದೆ, ಇದರ ಪರಿಣಾಮವಾಗಿ ರಾಜ್ಯಕ್ಕೆ ಒಟ್ಟು 80,000 ಕೋಟಿ ರು. ನಷ್ಟವಾಗಿದೆ ಎಂದು ಕೇಂದ್ರ ಸಚಿವರ ಗಮನಕ್ಕೆ ತಂದಿದ್ದಾಗಿ ಸಿದ್ದರಾಮಯ್ಯ ತಿಳಿಸಿದರು.ಜೊತೆಗೆ, ಕಡಿಮೆ ತಲಾದಾಯ ಹೊಂದಿರುವ ರಾಜ್ಯಗಳಿಗೆ ಹೆಚ್ಚಿನ ಪಾಲು ನೀಡುವ ಕುರಿತು ಹಣಕಾಸು ಆಯೋಗ ಪಾಲಿಸುತ್ತಿರುವ ನೀತಿಯಿಂದಾಗಿ ಕರ್ನಾಟಕಕ್ಕೆ ಅನ್ಯಾಯ ಆಗುತ್ತಿದೆ. ಈ ನೀತಿಯಡಿ ಹಾಲಿ ಪಾಲಿಸುತ್ತಿರುವ ಶೇ.45ರಷ್ಟು ವೆಯ್ಟೇಜ್ ನೀತಿಯನ್ನು ಶೇ.20ರಷ್ಟು ಕಡಿತ ಮಾಡಿ, ಅದನ್ನು ರಾಷ್ಟ್ರೀಯ ಜಿಡಿಪಿಯಲ್ಲಿ ರಾಜ್ಯದ ಪಾಲು ಆಗಿರುವ ಹಣಕಾಸಿನ ಕೊಡುಗೆಗೆ ಮರುಹಂಚಿಕೆ ಮಾಡಬೇಕು ಎಂದು ಸಿಎಂ ಮನವಿ ಮಾಡಿದ್ದಾರೆ.
ಅಲ್ಲದೆ, ಬೆಂಗಳೂರು, ಕಲ್ಯಾಣ ಕರ್ನಾಟಕ ಮತ್ತು ಮಲೆನಾಡು ಪ್ರದೇಶದ ಅಭಿವೃದ್ಧಿ ಸವಾಲುಗಳನ್ನು ಪ್ರಸ್ತಾಪಿಸಿದ ಸಿದ್ದರಾಮಯ್ಯ, ರಾಜ್ಯಗಳ ಬೆಳವಣಿಗೆಯನ್ನು ಉತ್ತೇಜಿಸಲು ನ್ಯಾಯಯುತ ಮತ್ತು ಬೆಳವಣಿಗೆಗೆ ಪೂರಕವಾಗುವ ತೆರಿಗೆ ಹಂಚಿಕೆ ಮಾಡುವಂತೆ ವಿತ್ತ ಸಚಿವರಿಗೆ ಬೇಡಿಕೆ ಇಟ್ಟಿದ್ದಾರೆ.ಎಂಎಲ್ಸಿ ಪಟ್ಟಿ ಶೀಘ್ರ ಅಂತಿಮಗೊಳಿಸಿ: ವಿಧಾನಪರಿಷತ್ ನಾಮಕರಣಕ್ಕೆ ಈಗಾಗಲೇ ಶಿಫಾರಸು ಮಾಡಲಾಗಿರುವ ಹೆಸರಗಳನ್ನೇ ಅಂತಿಮಗೊಳಿಸುವಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಕೋರಿಕೆಗೆ ವಿದೇಶ ಪ್ರವಾಸದಲ್ಲಿರುವ ರಾಹುಲ್ ಗಾಂಧಿ ಹಿಂತಿರುಗಿದ ನಂತರ ಈ ಬಗ್ಗೆ ಅಂತಿಮ ತೀರ್ಮಾನ ಕೈಗೊಳ್ಳಲಾಗುವುದು ಎಂದು ರಾಜ್ಯ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೇವಾಲ ತಿಳಿಸಿದ್ದಾರೆ ಎಂದು ತಿಳಿದುಬಂದಿದೆ.ದೆಹಲಿ ಪ್ರವಾಸದಲ್ಲಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಮಂಗಳವಾರ ರಾಜ್ಯ ಕಾಂಗ್ರೆಸ್ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೇವಾಲ ಅವರನ್ನು ಸಚಿವರಾದ ಕೆ.ಜೆ.ಜಾರ್ಜ್, ಸತೀಶ್ ಜಾರಕಿಹೊಳಿ, ಎಚ್.ಸಿ.ಮಹದೇವಪ್ಪ ಅವರೊಂದಿಗೆ ಭೇಟಿ ಮಾಡಿ ಸುಮಾರು 20 ನಿಮಿಷಗಳಿಗೂ ಹೆಚ್ಚು ಕಾಲ ಚರ್ಚೆ ನಡೆಸಿದರು.ಈ ವೇಳೆ, ಪ್ರಮುಖವಾಗಿ ಕರ್ನಾಟಕ ವಿಧಾನ ಪರಿಷತ್‌ನಲ್ಲಿ ಖಾಲಿ ಇರುವ ನಾಲ್ಕು ಸ್ಥಾನಗಳಿಗೆ ನಾಮಕರಣ ಮಾಡಲು ಹೆಸರುಗಳನ್ನು ಆದಷ್ಟು ಬೇಗ ಅಂತಿಮಗೊಳಿಸುವಂತೆ ಮುಖ್ಯಮಂತ್ರಿ ಅವರು ಸುರ್ಜೇವಾಲ ಅವರಿಗೆ ಮನವಿ ಮಾಡಿದರು. ವಿದೇಶ ಪ್ರವಾಸದಲ್ಲಿರುವ ರಾಹುಲ್ ಗಾಂಧಿ ಬಂದ ಕೂಡಲೇ ಹೆಸರುಗಳನ್ನು ಅಂತಿಮಗೊಳಿಸಿ ಕಳುಹಿಸುವುದಾಗಿ ಸುರ್ಜೇವಾಲ ಭರವಸೆ ನೀಡಿದರು ಎಂದು ತಿಳಿದು ಬಂದಿದೆ.ಮುಖ್ಯಮಂತ್ರಿಗಳ ಮಾಜಿ ಮಾಧ್ಯಮ ಸಲಹೆಗಾರ ಹಾಗೂ ಪತ್ರಕರ್ತ ದಿನೇಶ್ ಅಮೀನ್‌ಮಟ್ಟು, ಕೆಪಿಸಿಸಿ ಮಾಧ್ಯಮ ವಿಭಾಗದ ಮುಖ್ಯಸ್ಥ ರಮೇಶ್ ಬಾಬು, ದಲಿತ ಮುಖಂಡ ಡಿ.ಜಿ.ಸಾಗರ್ ಮತ್ತು ರಾಜ್ಯ ಸರ್ಕಾರದ ಅನಿವಾಸಿ ಭಾರತೀಯ ಕೋಶದ ಉಪಾಧ್ಯಕ್ಷೆ ಆರತಿ ಕೃಷ್ಣ ಅವರನ್ನು ವಿಧಾನ ಪರಿಷತ್ ಸದಸ್ಯರಾಗಿ ನಾಮಕರಣ ಮಾಡಲು ಪಕ್ಷದ ರಾಜ್ಯ ನಾಯಕತ್ವ ಹೈಕಮಾಂಡ್‌ಗೆ ಶಿಫಾರಸು ಮಾಡಿತ್ತು. ಆದರೆ, ಪಕ್ಷದ ಕಾರ್ಯಕರ್ತರಿಂದ ಈ ಪಟ್ಟಿಗೆ ಅಸಮಮಾಧಾನ, ಆಕ್ಷೇಪಗಳು ಬಂದ ಹಿನ್ನೆಲೆಯಲ್ಲಿ ನಾಲ್ಕೂ ಹೆಸರುಗಳಿಗೆ ಹೈಕಮಾಂಡ್ ತಾತ್ಕಾಲಿಕ ತಡೆ ನೀಡಿತ್ತು.