ಸಾರಾಂಶ
ಕನ್ನಡಪ್ರಭ ವಾರ್ತೆ ಕೋಲಾರ
ಅವಿಭಜಿತ ಕೋಲಾರ ಜಿಲ್ಲೆಯಲ್ಲಿ ಖಾಸಗಿ ಮೆಡಿಕಲ್ ಕಾಲೇಜ್ ಮಾಫಿಯಾದಿಂದ ಸರ್ಕಾರಗಳ ಬಜೆಟ್‌ನಿಂದ ಜಿಲ್ಲೆಗೆ ಸರ್ಕಾರಿ ಮೆಡಿಕಲ್ ಕಾಲೇಜ್ ಸ್ಥಾಪನೆ ಸಾಧ್ಯವಾಗಿಲ್ಲ ಎಂದು ಕೆಆರ್‌ಎಸ್ ಪಕ್ಷದ ರಾಜ್ಯಾಧ್ಯಕ್ಷ ರವಿಕೃಷ್ಣಾರೆಡ್ಡಿ ದೂರಿದರು.ನಗರದ ಶಾಶ್ವತ ನೀರಾವರಿ ಹೋರಾಟದ ವೇದಿಕೆಯಲ್ಲಿ ಜನಜಾಗೃತಿ ಬೈಕ್ ರ್‍ಯಾಲಿ ಮತ್ತು ವೇದಿಕೆ ಕಾರ್ಯಕ್ರಮದಲ್ಲಿ ಮಾತನಾಡಿ, ಜಿಲ್ಲೆಯ ಜನರು ಅಗತ್ಯ ಚಿಕಿತ್ಸೆಗಳಿಗೆ ಸರ್ಕಾರಿ ಮೆಡಿಕಲ್ ಕಾಲೇಜು ಹಾಗೂ ಸುಸಜ್ಜಿತ ಆಸ್ಪತ್ರೆ ಇಲ್ಲದೆ, ಬೆಂಗಳೂರು ಸೇರಿದಂತೆ ಇತರೇ ಭಾಗಗಳಿಗೆ ಹೋಗುವ ದುಸ್ಥಿತಿಯಲ್ಲಿ ಜಿಲ್ಲೆ ಇದೆ ಎಂದರು.
ಕಳೆದ ಬಿಜೆಪಿ ಸರ್ಕಾರದ ಅಧಿಕಾರದಲ್ಲಿ, ಶೇ.೪೦ ಲಂಚ ಎಂದು ಆರೋಪ ಮಾಡುತ್ತಿದ್ದ, ಕಾಂಗ್ರೆಸ್ ಸರ್ಕಾರ ಈಗ ಬಿಜೆಪಿ ಪಕ್ಷದ ಪರ್ಸೆಂಟೇಜನ್ನು ಮೀರಿಸಿದೆ ಎಂದರು.ಮುಂದಿನ ದಿನಗಳಲ್ಲಿ ಕೆಆರ್‌ಎಸ್ ಪಕ್ಷವನ್ನು ಬೆಂಬಲಿಸಿದರೆ ರಾಜ್ಯದ ಜನತೆ ಭ್ರಷ್ಟಾಚಾರದಿಂದ ಹೊರಬಂದು ಸುಭಿಕ್ಷೆಯಿಂದ ಇರುತ್ತಾರೆ ಎಂದು ತಿಳಿಸಿದರು. ಭ್ರಷ್ಟಾಚಾರ ನಡೆಸುವ ಅಧಿಕಾರಿಗಳು ಕೆಲವು ರಾಜಕಾರಣಿಗಳ ಬೂಟು ನೆಕ್ಕುತ್ತಿದ್ದಾರೆ, ರಾಜ್ಯದಲ್ಲಿರುವ ಜೆಡಿಎಸ್ ಕಾಂಗ್ರೆಸ್ ಬಿಜೆಪಿ ಪಕ್ಷಗಳು ಭ್ರಷ್ಟಾಚಾರದಿಂದ ಕೂಡಿವೆ, ರಾಜ್ಯದಲ್ಲಿರುವ ಅಧಿಕಾರಿಗಳು ಭ್ರಷ್ಟಾಚಾರಿಗಳಾಗದೆ ಜನರನ್ನು ಹಿಂಸಿಸದೆ ಜನರ ಕೆಲಸವನ್ನು ಗೌರವವಾಗಿ ಮಾಡಿಕೊಡಬೇಕು ಎಂದರು. ಕೋಲಾರ ಶಾಸಕ ಕೊತ್ತೂರು ಮಂಜುನಾಥ್ ಈ ಹಿಂದೆ ಸುಳ್ಳು ಜಾತಿ ನಕಲಿ ಪ್ರಮಾಣ ಪತ್ರ ಕೊಟ್ಟು ಶಾಸಕರಾಗಿ, ಅಧಿಕಾರ ಅನುಭವಿಸಿ ಮತ್ತೊಮ್ಮೆ ಕೋಲಾರದಲ್ಲಿ ಶಾಸಕರಾಗಿದ್ದಾರೆ, ಇವರ ಬಗ್ಗೆ ಹೈಕೋರ್ಟ್ ತಪ್ಪಿತಸ್ಥ ಎಂದು ತೀರ್ಪು ನೀಡಿದ್ದರೂ ಸಹ ಇವರನ್ನು ಸರ್ಕಾರ ಜೈಲಿಗೆ ಹಾಕದೆ ಉಳಿಸುವ ಪ್ರಯತ್ನ ಮಾಡುತ್ತಿದೆ.ಇಂತಹ ಶಾಸಕರ ಮೇಲೆ ಕೆಲವರು ಎಸಿಬಿಯಲ್ಲಿ ದೂರುಕೊಟ್ಟರು ಸಹ ಎಸಿಬಿ ಅಧಿಕಾರಿಗಳು ಇವರನ್ನು ಕಚೇರಿಗೆ ಕರೆದು, ಯಾವುದೇ ಕ್ರಮ ಕೈಗೊಳ್ಳದೆ ಕಾಫಿ ಟೀ ಕೊಟ್ಟು ವಾಪಸ್ಸು ಕಳುಹಿಸಿದ್ದಾರೆ ಎಂದು ದೂರಿದರು. ಇಂದಿನ ಸರ್ಕಾರಗಳು ಕೋಲಾರಕ್ಕೆ ಕೊಳಚೆ ನೀರನ್ನು ಕೊಟ್ಟು ಅದರಲ್ಲಿ ನಮ್ಮ ರೈತರು ವಿಷದ ಬೆಳೆ ಬೆಳೆಯುತ್ತಿದ್ದಾರೆ. ಯಾವುದೇ ರೀತಿಯ ಯೋಗ್ಯತೆ ಇಲ್ಲದವರು ಇಂದಿನ ಸಮಾಜದಲ್ಲಿ ಸಂಸದರು ಮತ್ತು ಶಾಸಕರಾಗಿದ್ದಾರೆ. ಪಕ್ಷದ ರಾಜ್ಯ ಉಪಾಧ್ಯಕ್ಷ ಲಿಂಗೇಗೌಡ, ರಾಜ್ಯ ಕಾರ್ಯದರ್ಶಿ ರವಿಜಾಣಗೆರೆ, ಕೋಲಾರ ಜಿಲ್ಲಾಧ್ಯಕ್ಷ ಮಹೇಶ್ ಹಾಜರಿದ್ದರು.
ಬೈಕ್ ರ್‍ಯಾಲಿ: ಬೈಕ್ ರ್‍ಯಾಲಿಯು ಚಿಂತಾಮಣಿ ಮೂಲಕ ಕೋಲಾರ ನಗರದ ಶಾಶ್ವತ ನೀರಾವರಿ ಹೋರಾಟ ಸಮಿತಿ ವೇದಿಕೆಯಿಂದ ನಂತರ ಬೈಕ್ ರ್‍ಯಾಲಿಯನ್ನು ಮುಂದುವರಿಸಿ ನಗರದ ಬಂಗಾರಪೇಟೆ ವೃತ್ತ, ಡೂಂ ಲೈಟ್ ವೃತ್ತ, ಕ್ಲಾಕ್ ಟವರ್ ವೃತ್ತ, ಎಂಪಿಎಂಸಿ ಮಾರುಕಟ್ಟೆ ವೃತದಿಂದ ಮಾಲೂರು ಕಡೆ ಸಾಗಿದರು.