ಬಿಜೆಪಿ ಪ್ರತಿ ಮೂರು ವರ್ಷಕ್ಕೊಮ್ಮೆ ಪ್ರಶಿಕ್ಷಣ ವರ್ಗ ಅಭಿಯಾನ ಏರ್ಪಡಿಸುತ್ತಾ ಬಂದಿದೆ. ಪ್ರತಿ ವಿಧಾನಸಭಾ ಕ್ಷೇತ್ರದಲ್ಲಿ ಮೂರು ಭಾಗಗಳಲ್ಲಿ ಪ್ರಶಿಕ್ಷಣ ವರ್ಗವನ್ನು ನಡೆಸಲಾಗುತ್ತಿದೆ.
ಮುಂಡರಗಿ: ಈ ಹಿಂದೆ ದೇಶವನ್ನು ಇತರ ಪಕ್ಷ ಆಳುತ್ತಿದ್ದಾಗ ಇಡೀ ಜಗತ್ತು ಹೇಳಿದಂತೆ ಭಾರತ ಕೇಳಿ ಅಧಿಕಾರ ನಡೆಸಬೇಕಾಗಿತ್ತು. ಆದರೆ ಇಂದು ಭಾರತ ಹೇಳಿದಂತೆ ಇಡೀ ಜಗತ್ತೇ ಕಿವಿಕೊಟ್ಟು ಕೇಳುವಂತಾಗಿದೆ. ಇದಕ್ಕೆ ಪ್ರಮುಖ ಕಾರಣ ದೇಶದಲ್ಲಿ ನರೇಂದ್ರ ಮೋದಿಯವರು ನಡೆಸುತ್ತಿರುವ ಸ್ವಚ್ಛ ಹಾಗೂ ಭ್ರಷ್ಟಾಚಾರರಹಿತ ಆಡಳಿತವಾಗಿದೆ ಎಂದು ಮಾಜಿ ಶಾಸಕ ಶಿವರಾಜ ಸಜ್ಜನರ ತಿಳಿಸಿದರು.
ಗುರುವಾರ ಸಂಜೆ ಪಟ್ಟಣದ ವೀರಭದ್ರೇಶ್ವರ ಕಲ್ಯಾಣ ಮಂಟಪದಲ್ಲಿ ಪಂಡಿತ್ ದೀನದಯಾಳ ಉಪಾಧ್ಯಾಯ ಪ್ರಶಿಕ್ಷಣ ಮಹಾಅಭಿಯಾನ- 2026 ಉದ್ಘಾಟಿಸಿ ಮಾತನಾಡಿ, ಬಿಜೆಪಿ ಪ್ರತಿ ಮೂರು ವರ್ಷಕ್ಕೊಮ್ಮೆ ಪ್ರಶಿಕ್ಷಣ ವರ್ಗ ಅಭಿಯಾನ ಏರ್ಪಡಿಸುತ್ತಾ ಬಂದಿದೆ. ಪ್ರತಿ ವಿಧಾನಸಭಾ ಕ್ಷೇತ್ರದಲ್ಲಿ ಮೂರು ಭಾಗಗಳಲ್ಲಿ ಪ್ರಶಿಕ್ಷಣ ವರ್ಗವನ್ನು ನಡೆಸಲಾಗುತ್ತಿದೆ. ಬೇರೆ ಪಕ್ಷಗಳಲ್ಲಿ ಕಾರ್ಯಕರ್ತರಿಗೆ ಇಂತಹ ಪ್ರಶಿಕ್ಷಣ ವರ್ಗಗಳು ಹಾಗೂ ತರಬೇತಿಗಳು ನಡೆಯುವುದಿಲ್ಲ. ಇಡೀ ರಾಷ್ಟ್ರದಲ್ಲಿ ಅತಿ ಹೆಚ್ಚು ಅಂದರೆ 14 ಕೋಟಿಗೂ ಅಧಿಕ ಸದಸ್ಯ ಬಲವನ್ನು ಹೊಂದಿರುವ ಬಿಜೆಪಿಯಯಲ್ಲಿ ಮಾತ್ರ ಕಾರ್ಯಕರ್ತರ ಬಲವರ್ಧನೆಗೆ, ಸಂಘಟನೆಗೆ ಇದನ್ನು ನಡೆಸುತ್ತಾ ಬಂದಿದೆ ಎಂದರು.ನರೇಂದ್ರ ಮೋದಿ ಅಧಿಕಾರಿಕೆ ಬಂದ 12 ವರ್ಷಗಳಲ್ಲಿ ಇಡೀ ಜಗತ್ತೇ ಮೆಚ್ಚುವಂತೆ ಅಧಿಕಾರ ನಡೆಸಿ ದೇಶವನ್ನು ಅಭಿವೃದ್ಧಿ ಪಥದತ್ತ ತೆಗೆದುಕೊಂಡು ಹೋಗುತ್ತಿದ್ದಾರೆ. ಜನಧನ ಯೋಜನೆಯಲ್ಲಿ ಸುಮಾರು 50 ಕೋಟಿ ಮಹಿಳೆಯರ ಖಾತೆಗಳಿವೆ. ₹67 ಸಾವಿರ ಕೋಟಿ ಹಣ ಠೇವಣಿ ಮಾಡಲಾಗಿದೆ. ಈ ಯೋಜನೆ ಪ್ರಾರಂಭವಾದಾಗಿನಿಂದ ಇಲ್ಲಿಯವರೆಗೆ ಕೇಂದ್ರ ಸರ್ಕಾರದ ವಿವಿಧ ಯೋಜನೆಗಳ ಸುಮಾರು ₹44 ಲಕ್ಷ ಕೋಟಿ ಹಣ ನೇರವಾಗಿ ಫಲಾನುಭವಿಗಳಿಗೆ ತಲುಪುತ್ತಿದೆ ಎಂದರು.
ಜಿಪಂ ಮಾಜಿ ಸದಸ್ಯ ಹೇಮಗಿರೀಶ ಹಾವಿನಾಳ ಪ್ರಾಸ್ತಾವಿಕವಾಗಿ ಮಾತನಾಡಿ, ಬೇರೆ ಪಕ್ಷಗಳಿಗಿಂತ ಬಿಜೆಪಿ ತತ್ವ ಸಿದ್ಧಾಂತಗಳು ಬೇರೆ ಇವೆ. ಮುಂಬರುವ ಎಲ್ಲ ಚುನಾವಣೆಗೆ ಪಕ್ಷದ ನಾಯಕರು, ಕಾರ್ಯಕರ್ತರು ಪಕ್ಷದ ತತ್ವ, ಸಿದ್ಧಾಂತ, ಗುರಿ ಮತ್ತು ಉದ್ದೇಶಗಳನ್ನು ತಿಳಿಸುವುದು ಈ ಪ್ರಶಿಕ್ಷಣ ವರ್ಗದ ಉದ್ದೇಶದವಾಗಿದೆ ಎಂದರು.ಬಿಜೆಪಿ ಮುಂಡರಗಿ ಮಂಡಲದ ಅಧ್ಯಕ್ಷ ಕುಮಾರಸ್ವಾಮಿ ಹಿರೇಮಠ ಅಧ್ಯಕ್ಷತೆ ವಹಿಸಿದ್ದರು. ಧಾರವಾಡ ವಿಭಾಗದ ಸಹ ಪ್ರಭಾರಿ ಭೋಜರಾಜ ಕರೋಡಿ, ಕರಬಸಪ್ಪ ಹಂಚಿನಾಳ, ಎಸ್.ವಿ. ಪಾಟೀಲ, ಜಿಲ್ಲಾ ಉಪಾಧ್ಯಕ್ಷ ಮಲ್ಲಿಕಾರ್ಜುನ ಹಣಜಿ, ಮಹಿಳಾ ಬಿಜೆಪಿ ಅಧ್ಯಕ್ಷ ಪವಿತ್ರಾ ಕಲ್ಲುಕುಟಗರ್, ಶಿವನಗೌಡ ಗೌಡರ್ ಕಾರ್ಯದರ್ಶಿಗಳಾದ ಪ್ರಶಾಂತ ಗುಡದಪ್ಪನವರ, ಬಸವರಾಜ ಬಿಳಿಮಗ್ಗದ ಉಪಸ್ಥಿತರಿದ್ದರು. ಕೃಷ್ಣಾ ಗಡಾದ ನಿರೂಪಿಸಿ, ವಂದಿಸಿದರು.