ಕಾಂಗ್ರೆಸ್ ಸರ್ಕಾರದಲ್ಲಿ ಭ್ರಷ್ಟಾಚಾರ ಹೆಚ್ಚಳ, ಅಭಿವೃದ್ಧಿ ಕುಂಠಿತ: ಛಲವಾದಿ ನಾರಾಯಣಸ್ವಾಮಿ

| Published : Aug 08 2025, 01:01 AM IST

ಕಾಂಗ್ರೆಸ್ ಸರ್ಕಾರದಲ್ಲಿ ಭ್ರಷ್ಟಾಚಾರ ಹೆಚ್ಚಳ, ಅಭಿವೃದ್ಧಿ ಕುಂಠಿತ: ಛಲವಾದಿ ನಾರಾಯಣಸ್ವಾಮಿ
Share this Article
  • FB
  • TW
  • Linkdin
  • Email

ಸಾರಾಂಶ

ಕಾಂಗ್ರೆಸ್ ಶಾಸಕ ಬಸವರಾಜು ರಾಯರೆಡ್ಡಿ ಹಾಗೂ ರಾಜು ಕಾಗೆ ಅವರು ಭ್ರಷ್ಟಾಚಾರದಲ್ಲಿ ದೇಶದಲ್ಲೇ ಕರ್ನಾಟಕ ನಂಬರ್ ಒನ್ ಸ್ಥಾನದಲ್ಲಿದೆ ಎಂದು ಆರೋಪಿಸುತ್ತಾರೆ. ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರು ತಮ್ಮ ಆಡಳಿತದ ವೈಫಲ್ಯ ಮುಚ್ಚಿಕೊಳ್ಳಲು ಜಾತಿ ಸಮೀಕ್ಷೆ, ಒಳ ಮೀಸಲಾತಿ ವಿಚಾರವನ್ನು ಮುನ್ನೆಲೆಗೆ ತಂದು ಜನರ ಗಮನ ಬೇರೆಡೆಗೆ ಸೆಳೆಯುವ ತಂತ್ರ ಮಾಡುತ್ತಿದ್ದಾರೆ.

ಕನ್ನಡಪ್ರಭ ವಾರ್ತೆ ಮಳವಳ್ಳಿ

ರಾಜ್ಯ ಕಾಂಗ್ರೆಸ್ ಸರ್ಕಾರದಲ್ಲಿ ಭ್ರಷ್ಟಾಚಾರ ಹೆಚ್ಚಾಗಿದ್ದು, ಆಡಳಿತದಲ್ಲಿ ಅಭಿವೃದ್ಧಿ ಕುಂಠಿತವಾಗಿದೆ ಎಂದು ವಿಧಾನ ಪರಿಷತ್ ವಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ ಆರೋಪಿಸಿದರು.

ಪಟ್ಟಣದ ಭಗವಾನ್ ಬುದ್ಧ ಶಿಕ್ಷಣ ಸಂಸ್ಥೆಯ ಆವರಣದಲ್ಲಿ ನೂತನ ನಿರ್ಮಿಸಿರುವ ಬುದ್ಧ, ಬಸವಣ್ಣ, ಡಾ.ಬಿ.ಆರ್.ಅಂಬೇಡ್ಕರ್ ಪ್ರತಿಮೆಗೆ ಮಾಲಾರ್ಪಣೆ ಮಾಡಿದ ನಂತರ ಮಾತನಾಡಿ, ಸರ್ಕಾರದ ಆಡಳಿತದಲ್ಲಿ ಅಭಿವೃದ್ಧಿ ಶೂನ್ಯವಾಗಿದೆ. ಮತ್ತೊಂದೆಡೆ ಭ್ರಷ್ಟಾಚಾರ ತಾಂಡವವಾಡುತ್ತಿದೆ ಎಂದರು.

ಬೆಂಗಳೂರು ಸುತ್ತಮುತ್ತ ಆಸ್ತಿ ಮೌಲ್ಯದ ಆಧಾರದ ಮೇಲೆ ಲಂಚ ವಸೂಲಿ ನಡೆಯುತ್ತಿದೆ. ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳು ಪೈಪೋಟಿಯಂತೆ ಜನರಿಂದ ಸುಲಿಗೆ ಮಾಡುತ್ತಿದ್ದಾರೆ. ಮತ್ತೊಂದೆಡೆ ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಸಂಪೂರ್ಣ ಕುಸಿದಿದೆ ಎಂದು ಆರೋಪಿಸಿದರು.

ಕಾಂಗ್ರೆಸ್ ಶಾಸಕ ಬಸವರಾಜು ರಾಯರೆಡ್ಡಿ ಹಾಗೂ ರಾಜು ಕಾಗೆ ಅವರು ಭ್ರಷ್ಟಾಚಾರದಲ್ಲಿ ದೇಶದಲ್ಲೇ ಕರ್ನಾಟಕ ನಂಬರ್ ಒನ್ ಸ್ಥಾನದಲ್ಲಿದೆ ಎಂದು ಆರೋಪಿಸುತ್ತಾರೆ. ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರು ತಮ್ಮ ಆಡಳಿತದ ವೈಫಲ್ಯ ಮುಚ್ಚಿಕೊಳ್ಳಲು ಜಾತಿ ಸಮೀಕ್ಷೆ, ಒಳ ಮೀಸಲಾತಿ ವಿಚಾರವನ್ನು ಮುನ್ನೆಲೆಗೆ ತಂದು ಜನರ ಗಮನ ಬೇರೆಡೆಗೆ ಸೆಳೆಯುವ ತಂತ್ರ ಮಾಡುತ್ತಿದ್ದಾರೆ ಎಂದು ಕಿಡಿಕಾರಿದರು.

ಪರಿಶಿಷ್ಟ ಜಾತಿ, ವರ್ಗದವರ ಅಭಿವೃದ್ಧಿಗೆ 42 ಸಾವಿರ ಕೋಟಿ ರು.ನೀಡಿದ್ದೇವೆ ಎನ್ನುವ ಸಿಎಂ ಮೂರು ಕಾಸು ಸಹ ನೀಡಿಲ್ಲ. ವಾಲ್ಮೀಕಿ ಅಭಿವೃದ್ಧಿ ನಿಗಮದ 147 ಕೋಟಿ ರು. ಲೂಟಿ ಮಾಡಿದ ಈ ಸರ್ಕಾರದ ನಡೆ ನಾಚಿಕೆಗೇಡಿನ ಸಂಗತಿ ಎಂದರು.

ಕಾಂಗ್ರೆಸ್ ಹೈಕಮಾಂಡ್‌ಗೆ ರಾಜ್ಯ ಸರ್ಕಾರ ಒಂದೇ ಸಂಪನ್ಮೂಲದ ಖಜಾನೆಯಾಗಿದೆ. ಕಪ್ಪ ಕಾಣಿಕೆ ಅರ್ಪಿಸಿ ಹೈಕಮಾಂಡ್ ನ ಒಲವು ಗಿಟ್ಟಿಸಿಕೊಳ್ಳಲು ಸಿಎಂ, ಡಿಸಿಎಂ ಪೈಪೋಟಿಗೆ ಬಿದ್ದಂತೆ ರಾಜ್ಯವನ್ನು ಲೂಟಿ ಮಾಡುತ್ತಿದ್ದಾರೆ ಎಂದು ಆರೋಪಿಸಿದರು.

ತಾವೇ ಮತಗಳ್ಳತನ ನಡೆಸುತ್ತಿದ್ದ ಆರೋಪಕ್ಕೆ ಗುರಿಯಾಗಿ ಕೋರ್ಡ್‌ನ ಕಾನೂನು ಕ್ರಮದಿಂದ ಪಾರಾಗಲು ದೇಶವನ್ನು ತುರ್ತು ಪರಿಸ್ಥಿತಿಗೆ ತಳ್ಳಿದ ರಾಹುಲ್ ಗಾಂಧಿ ಅವರ ನೇತೃತ್ವದ ಕಾಂಗ್ರೆಸ್ ನಾಯಕರೇ ಈಗ ನಮ್ಮ ಮೇಲೆ ಮತಗಳ್ಳತನ ಆರೋಪ ಮಾಡುತ್ತಿರುವುದು ಹಾಸ್ಯಾಸ್ಪದ ಎಂದು ವ್ಯಂಗ್ಯವಾಡಿದರು.

ಈ ವೇಳೆ ಬಿಜೆಪಿ ರಾಜ್ಯ ಸಮಿತಿ ಸದಸ್ಯ ರುದ್ರಯ್ಯ, ಬಿಜೆಪಿ ಜಿಲ್ಲಾ ಘಟಕದ ಉಪಾಧ್ಯಕ್ಷ ಯಮದೂರು ಸಿದ್ದರಾಜು, ಮುಖಂಡರಾದ ಅಪ್ಪಾಜಿಗೌಡ, ಎಚ್.ಬಸವರಾಜು, ಚಿಕ್ಕಣ್ಣ, ದೇವರಾಜು ಇದ್ದರು.