ಸಾರಾಂಶ
ಯಲ್ಲಾಪುರ: ರಾಜ್ಯದ ಕಾಂಗ್ರೆಸ್ ಸರ್ಕಾರ ಲೂಟಿಕೋರರ, ಸುಳ್ಳುಗಾರರ, ಬಡವರ ಹಣ ತಿಂದು ತೇಗುವ ಸಂದರ್ಭ ಒದಗಿದ್ದರೂ, ಸರ್ಕಾರದ ಪರವಾಗಿ ಯಲ್ಲಾಪುರ ಕಾಂಗ್ರೆಸ್ ಮಹಿಳಾ ಘಟಕ ಇತ್ತೀಚೆಗೆ ನೀಡಿದ ಪತ್ರಿಕಾ ಹೇಳಿಕೆ ಅಪಹಾಸ್ಯಕ್ಕೀಡಾಗಿದೆ ಎಂದು ಬಿಜೆಪಿ ಮಹಿಳಾ ಮೋರ್ಚಾ ತಾಲೂಕಾಧ್ಯಕ್ಷೆ ಶ್ರುತಿ ಹೆಗಡೆ ಹೇಳಿದರು.
ಪಟ್ಟಣದ ಬಿಜೆಪಿ ಕಾರ್ಯಾಲಯದಲ್ಲಿ ಶನಿವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದರು.ಸರ್ಕಾರ ಅಸ್ತಿತ್ವಕ್ಕೆ ಬರುವ ಮುನ್ನ ೫ ಗ್ಯಾರಂಟಿಗಳನ್ನು ಘೋಷಿಸಿತ್ತು. ನಂತರ ಜನರಿಗೆ ಒಂದು ಭಾಗ್ಯವೂ ಸಿಗದ ಗತಿ ನಿರ್ಮಾಣ ಮಾಡಿದ ಈಗಿನ ಕಾಂಗ್ರೆಸ್ ಸರ್ಕಾರವೇ ಹೀನಾಯ ಸ್ಥಿತಿಯಲ್ಲಿರುವಾಗ ಅದರ ಪರವಾಗಿ ನೀಡಿರುವ ಹೇಳಿಕೆ ಖಂಡಿತ ನಾಚಿಕೆಗೇಡಿನದಾಗಿದ್ದು, ಅವರ ಹೇಳಿಕೆಯನ್ನು ನಮ್ಮ ಪಕ್ಷ ತೀವ್ರವಾಗಿ ಖಂಡಿಸುತ್ತದೆ ಎಂದಿದ್ದಾರೆ.
ಮೂಡಾ, ವಾಲ್ಮೀಕಿ ಹಗರಣ ಸೇರಿದಂತೆ, ಹಲವಾರು ಭ್ರಷ್ಟಾಚಾರಗಳಲ್ಲಿ ಭಾಗಿಯಾದ ತಮ್ಮ ಸರ್ಕಾರದ ಪರವಾಗಿ ಕಾಂಗ್ರೆಸ್ಸಿಗರು ಯಾವ ನೈತಿಕತೆಯ ಆಧಾರದಲ್ಲಿ ಮಾತನಾಡುತ್ತಾರೆ ಎಂದು ಪ್ರಶ್ನಿಸಿದರು.ರಾಜ್ಯ ಕಾರ್ಯಕಾರಿಣಿ ಸದಸ್ಯೆ ರೇಖಾ ಹೆಗಡೆ ಮಾತನಾಡಿ, ಲೋಕಸಭಾ ಚುನಾವಣೆಯ ನಂತರ ಯಾವುದೇ ಖಾತೆಗೆ ಗೃಹಲಕ್ಷ್ಮಿ ಹಣ ಜಮಾ ಆಗಿಲ್ಲ. ಎಸ್.ಸಿ., ಎಸ್.ಟಿ. ಹಣ ಸಂಪೂರ್ಣ ತಿಂದು ತೇಗಲಾಗಿದೆ. ಮಾತೆತ್ತಿದರೆ ಅಂಬೇಡ್ಕರ್ ಮತ್ತು ಸಂವಿಧಾನದ ಕುರಿತು ಮಾತನಾಡುತ್ತಾರೆ. ವಾಲ್ಮೀಕಿ ನಿಗಮದಲ್ಲಿ ಮಾಡಿದ ಭ್ರಷ್ಟಾಚಾರ ಸಂವಿಧಾನಕ್ಕೆ ಮತ್ತು ದಲಿತರಿಗೆ, ಬಡವರಿಗೆ ಮಾಡಿದ ಅಪಮಾನವಲ್ಲವೇ? ಎಂದು ಪ್ರಶ್ನಿಸಿ, ಸರ್ಕಾರದ ಮೋಸ, ವಂಚನೆಯ ಕುರಿತಾಗಿ ಜನಸಾಮಾನ್ಯರಿಗೆ ಅರಿವು ಮೂಡಿಸುವ ಉದ್ದೇಶದಿಂದ ಬಿಜೆಪಿ ಪಾದಯಾತ್ರೆ ಹಮ್ಮಿಕೊಂಡಿದೆ. ಈ ಪಾದಯಾತ್ರೆಗೆ ನಮ್ಮ ಜಿಲ್ಲೆಯಿಂದ ನಾವೆಲ್ಲರೂ ಹೋಗಿದ್ದೆವು. ಇಂತಹ ತೀವ್ರ ಭ್ರಷ್ಟಾಚಾರ, ಬಡವರ ಶೋಷಣೆ ಮಾಡುತ್ತಿರುವ ಮುಖ್ಯಮಂತ್ರಿಗಳು ತಕ್ಷಣ ರಾಜೀನಾಮೆ ನೀಡಬೇಕೆಂದು ಆಗ್ರಹಿಸಿದರು.
ಬಿಜೆಪಿ ಜಿಲ್ಲಾ ಕಾರ್ಯದರ್ಶಿ ಚಂದ್ರಕಲಾ ಭಟ್ಟ ಮಾತನಾಡಿ, ಕಾಂಗ್ರೆಸ್ ಸರ್ಕಾರ ಹಗರಣಗಳ ಸರಮಾಲೆಯಾಗಿದೆ. ಆದ್ದರಿಂದ ಮುಖ್ಯಮಂತ್ರಿಗಳು ತಕ್ಷಣ ರಾಜೀನಾಮೆ ನೀಡಬೇಕು. ಅಲಿಬಾಬಾ ಮತ್ತು ೪೦ ಕಳ್ಳರ ಕಥೆಯಂತೆ ಈ ಸರ್ಕಾರ ವರ್ತಿಸುತ್ತಿದೆ. ಜನರಿಗೆ ಬಿಟ್ಟಿ ಭಾಗ್ಯದಿಂದ ಭ್ರಮನಿರಸನವಾಗಿದೆ. ಅವರು ತಮ್ಮ ಹೆಂಡತಿಯ ಹೆಸರಿನಲ್ಲಿರುವ ಆಸ್ತಿಯ ಘೋಷಣೆ ಮಾಡಿಯೇ ಇಲ್ಲ. ಈ ಕುರಿತು ಸರಿಯಾದ ತನಿಖೆ ನಡೆಯಬೇಕು ಎಂದು ಒತ್ತಾಯಿಸಿದರು.ಬಿಜೆಪಿ ಹಿರಿಯ ನಾಯಕಿ ಶ್ಯಾಮಿಲಿ ಪಾಟಣಕರ, ಜಿಲ್ಲಾ ಉಪಾಧ್ಯಕ್ಷೆ ಹೇಮಲತಾ ಹೆಗಡೆ, ಪ್ರಧಾನ ಕಾರ್ಯದರ್ಶಿಗಳಾದ ಸುನಂದಾ ಮರಾಠೆ, ನಿರ್ಮಲಾ ನಾಯ್ಕ ಸಾಂದರ್ಭಿಕ ಮಾತನಾಡಿದರು.