ರಾಜ್ಯ ಕಾಂಗ್ರೆಸ್‌ ಸರ್ಕಾರ ಎರಡೂವರೆ ವರ್ಷ ಅವಧಿಯಲ್ಲಿ ಎಲ್ಲ ರಂಗದಲ್ಲಿಯೂ ವೈಫಲ್ಯದ ತುತ್ತತುದಿಯಲ್ಲಿದ್ದು, ಅಧಿಕಾರದ ದಾಹದಿಂದ ರಾಜ್ಯದ ಜನ ತಲೆ ತಗ್ಗಿಸುವಂತಾಗಿದೆ.

ಸುದ್ದಿಗೋಷ್ಠಿಯಲ್ಲಿ ಕಾಂಗ್ರೆಸ್‌ ವಿರುದ್ಧ ಸಂಸದ ವಾಗ್ದಾಳಿಕನ್ನಡಪ್ರಭ ವಾರ್ತೆ ಶಿರಸಿ

ರಾಜ್ಯ ಕಾಂಗ್ರೆಸ್‌ ಸರ್ಕಾರ ಎರಡೂವರೆ ವರ್ಷ ಅವಧಿಯಲ್ಲಿ ಎಲ್ಲ ರಂಗದಲ್ಲಿಯೂ ವೈಫಲ್ಯದ ತುತ್ತತುದಿಯಲ್ಲಿದ್ದು, ಅಧಿಕಾರದ ದಾಹದಿಂದ ರಾಜ್ಯದ ಜನ ತಲೆ ತಗ್ಗಿಸುವಂತಾಗಿದೆ. ಭ್ರಷ್ಟಾಚಾರವೇ ಅವರ ಮೊದಲ ಅಜೆಂಡಾ ಆಗಿದೆ ಎಂದು ಸಂಸದ ವಿಶ್ವೇಶ್ವರ ಹೆಗಡೆ ಕಾಗೇರಿ ವಾಗ್ದಾಳಿ ನಡೆಸಿದರು.ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮೆಕ್ಕೆಜೋಳಕ್ಕೆ ಕೇಂದ್ರ ಸರ್ಕಾರ ಎಂಎಸ್ಪಿ ದರ ನಿಗದಿ ಮಾಡಿ, ₹2,400 ಬೆಂಬಲ ಬೆಲೆ ನೀಡಿದರೂ ರಾಜ್ಯ ಸರ್ಕಾರ ಖರೀದಿ ಕೇಂದ್ರ ತೆರೆಯದೇ ಮೆಕ್ಕೆಜೋಳ ಬೀದಿಪಾಲಾಗುತ್ತಿದೆ. ರೈತರ ಪರಿಸ್ಥಿತಿ ಕಣ್ಣೀರಿನಲ್ಲಿ ಕೈತೊಳೆಯುವಂತಾಗಿದೆ ಎಂದರು. ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ ಕಿಸಾನ್‌ ಸಮ್ಮಾನ ಯೋಜನೆಯಲ್ಲಿ ಪ್ರತಿ ರೈತರಿಗೆ 6 ಸಾವಿರ ರೂ. ನೀಡುತ್ತಿದೆ. ಯಡಿಯೂರಪ್ಪ ಹಾಗೂ ಬಸವರಾಜ ಬೊಮ್ಮಾಯಿ ಮುಖ್ಯಮಂತ್ರಿಯಾಗಿದ್ದ ವೇಳೆ ರಾಜ್ಯದಿಂದ ₹4 ಸಾವಿರ ನೀಡುತ್ತಿದ್ದರು. ಕಾಂಗ್ರೆಸ್‌ ಸರ್ಕಾರ ಅಧಿಕಾರಕ್ಕೆ ಬಂದ ತಕ್ಷಣ ರೈತಪರ ಯೋಜನೆ ರದ್ದು ಮಾಡಿದ್ದಾರೆ. ಅಡಿಕೆ ಹಾಗೂ ತೆಂಗು ಬೆಳೆಗಾರರಿಗೆ ಹಳದಿ ಹಾಗೂ ಎಲೆಚುಕ್ಕೆ ರೋಗದಿಂದ ಭಯ ಉಂಟಾಗಿದೆ. ಕೇಂದ್ರ ಕೃಷಿ ಸಚಿವ ಶಿವರಾಜ ಸಿಂಗ್ ಚೌಹ್ಹಾಣ ನೇತೃತ್ವದಲ್ಲಿ ಕೇಂದ್ರ ಸಚಿವರಾದ ಪ್ರಹ್ಲಾದ ಜೋಶಿ, ಎಚ್‌.ಡಿ. ಕುಮಾರಸ್ವಾಮಿ, ಶೋಭಾ ಕರಂದ್ಲಾಜೆ, ವಿ.ಸೋಮಣ್ಣ, ಅಡಿಕೆ ಹಾಗೂ ತೆಂಗು ಬೆಳೆಯುವ ಪ್ರದೇಶದ ಸಂಸದರ ನೇತೃತ್ವದಲ್ಲಿ ಸಭೆ ನಡೆಸಿ, ಪರಿಹಾರದ ಕ್ರಮದ ಕುರಿತು ರಾಜ್ಯಕ್ಕೆ ಪತ್ರ ಬರೆಯಲಾಗಿತ್ತು. ಆದರೆ ರಾಜ್ಯ ಸರ್ಕಾರ ಸೂಕ್ತ ಮಾಹಿತಿಯನ್ನೇ ಒದಗಿಸಿಲ್ಲ ಎಂದು ದೂರಿದರು.ಪ್ರತಿ ವಿಧಾನಸಭಾ ಕ್ಷೇತ್ರದಲ್ಲಿ ರೈತರ ಪರವಾಗಿ ಹೋರಾಟ ನಡೆಸಲಾಗುತ್ತದೆ. ವಿರೋಧ ಪಕ್ಷದ ನಾಯಕ ಆರ್‌.ಅಶೋಕ ನೇತೃತ್ವದಲ್ಲಿ ಬಿಜೆಪಿ ಶಾಸಕರು ಸದನದಲ್ಲಿ ಸರ್ಕಾರಕ್ಕೆ ಬಿಸಿಮುಟ್ಟಿಸುವ ಕೆಲಸ ಮಾಡುತ್ತಾರೆ. ರೈತರ ಪರ ಹೋರಾಟಕ್ಕೆ ರೈತರ ಸಹಕಾರ ಅಗತ್ಯವಿದ್ದು, ಇದು ಬಿಜೆಪಿ ಕಾರ್ಯಕರ್ತರ ಹೋರಾಟವಲ್ಲ. ಇದು ರೈತರ ಹೋರಾಟವಾಗಿದ್ದು, ಎಲ್ಲರೂ ಬೆಂಬಲ ನೀಡಬೇಕು ಎಂದು ವಿನಂತಿಸಿದರು.ಬಿಜೆಪಿ ರಾಜ್ಯ ಉಪಾಧ್ಯಕ್ಷೆ ಹಾಗೂ ಮಾಜಿ ಶಾಸಕಿ ರೂಪಾಲಿ ನಾಯ್ಕ ಮಾತನಾಡಿ, ಯಡಿಯೂರಪ್ಪ ಹಾಗೂ ಬೊಮ್ಮಾಯಿ ಸರ್ಕಾರ ರೈತರಿಗೆ ನೀಡಿದ ಅನುದಾನವನ್ನು ಕಾಂಗ್ರೆಸ್ ಸರ್ಕಾರ ಕಡಿತ ಮಾಡಿದೆ. ಮೀನುಗಾರರ ಸಮಸ್ಯೆ ಬಗ್ಗೆ ಧ್ವನಿ ಎತ್ತುತ್ತಿಲ್ಲ.‌ ಕೇಣಿ ವಾಣಿಜ್ಯ ಬಂದರು ಯೋಜನೆ ಜಾರಿಗೊಳಿಸಿದ್ದಾರೆ. ರೈತರ ರಾಜ್ಯ ಮಟ್ಟದ ಹೋರಾಟ ಬೆಳಗಾವಿಯಲ್ಲಿ ನಡೆಯಲಿದೆ ಎಂದರು.ರಾಜ್ಯ ವಕ್ತಾರ ಹರಿಪ್ರಕಾಶ ಕೊಣೇಮನೆ ಮಾತನಾಡಿದರು. ಸುದ್ದಿಗೋಷ್ಠಿಯಲ್ಲಿ ಮಾಜಿ ಶಾಸಕ ಸುನೀಲ ಹೆಗಡೆ, ಮಾಜಿ ಜಿಲ್ಲಾಧ್ಯಕ್ಷ ಕೆ.ಜಿ. ನಾಯ್ಕ, ಜಿಲ್ಲಾ ವಕ್ತಾರ ಸದಾನಂದ ಭಟ್ಟ, ಜಿಲ್ಲಾ ಪ್ರಧಾನ ಕಾರ್ಯದರ್ಶಿಗಳಾದ ಗುರುಪ್ರಸಾದ ಹೆಗಡೆ ಹರ್ತೆಬೈಲ್‌, ಪ್ರಶಾಂತ ನಾಯ್ಕ ಕುಮಟಾ, ಬನವಾಸಿ ಮಂಡಳ ಅಧ್ಯಕ್ಷ ರಮೇಶ ನಾಯ್ಕ ಕುಪ್ಪಳ್ಳಿ, ಪ್ರಮುಖರಾದ ಡಾನಿ ಡಿಸೋಜಾ, ಆರ್.ವಿ. ಹೆಗಡೆ ಚಿಪಗಿ, ರಾಘವೇಂದ್ರ ನಾಯ್ಕ, ರವಿಚಂದ್ರ ಶೆಟ್ಟಿ, ಶ್ರೀರಾಮ ನಾಯ್ಕ ಮತ್ತಿತರರು ಇದ್ದರು.ಜನಪರ ನೋಟ ರೈತಪರ ಹೋರಾಟ:

ರೈತ ವಿರೋಧಿ ಕಾಂಗ್ರೆಸ್ ಸರ್ಕಾರದ ವಿರುದ್ಧ ಹೋರಾಟಕ್ಕೆ ಶಕ್ತಿ ಹೆಚ್ಚಿಸುವ ಉದ್ದೇಶದಿಂದ ಡಿ.6ರಂದು ಶಿರಸಿಯಲ್ಲಿ ಜನಪರ ನೋಟ ರೈತಪರ ಹೋರಾಟ ಹಮ್ಮಿಕೊಳ್ಳಲಾಗಿದೆ. ಡಿ.2ರಂದು ಭಟ್ಕಳ, ಹಳಿಯಾಳ ಡಿ.3 ರಂದು ಕುಮಟಾ, ಕಾರವಾರ, ಮುಂಡಗೋಡ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ರೈತರ ವಿವಿಧ ಬೇಡಿಕೆ ಈಡೇರಿಕೆ ಹೋರಾಟಕ್ಕೆ ಎಲ್ಲರೂ ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳಬೇಕೆಂದು ಸಂಸದ ವಿಶ್ವೇಶ್ವರ ಹೆಗಡೆ ಕಾಗೇರಿ ವಿನಂತಿಸಿದರು.