ಸಾರಾಂಶ
ಕೊಪ್ಪಳ: ದೇಶದಲ್ಲಿ ಭ್ರಷ್ಟಾಚಾರ ಕ್ಯಾನ್ಸರ್ ಗಿಂತಲೂ ಅಪಾಯಕಾರಿಯಾಗಿದ್ದು, ಅದನ್ನು ಮಟ್ಟ ಹಾಕಬೇಕು ಎಂದು ಉಪಲೋಕಾಯುಕ್ತ ಬಿ. ವೀರಪ್ಪ ಕಳವಳ ವ್ಯಕ್ತಪಡಿಸಿದರು.
ಕೊಪ್ಪಳ ನಗರದ ಜಿಲ್ಲಾಡಳಿತ ಭವನದಲ್ಲಿ ಗುರುವಾರ ಹಮ್ಮಿಕೊಂಡಿದ್ದ ಸಾರ್ವಜನಿಕರ ಅಹವಾಲು ಮತ್ತು ಕುಂದುಕೊರತೆ ವಿಚಾರಣೆ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು.ಸಂವಿಧಾನದಡಿಯಲ್ಲಿ ಎಲ್ಲರೂ ಕಾರ್ಯ ನಿರ್ವಹಿಸಬೇಕು. ಸಂವಿಧಾನ ಎಲ್ಲರಿಗೂ ತಾಯಿ ಇದ್ದಂತೆ. ಸ್ವಾತಂತ್ರ್ಯಕ್ಕಾಗಿ ಕೋಟ್ಯಂತರ ಭಾರತೀಯರು ಹೋರಾಟ ಮಾಡಿದ್ದಾರೆ. ಈಗಲೂ ದೇಶದ ಗಡಿಯನ್ನು ಸೈನಿಕರು ಪ್ರಾಣದ ಹಂಗು ತೊರೆದು ಹೋರಾಟ ಮಾಡುತ್ತಾರೆ. ದೇಶದಲ್ಲಿ ಭ್ರಷ್ಟಾಚಾರ, ಸ್ವಜನ ಪಕ್ಷಪಾತ ಹೆಚ್ಚಾಗುತ್ತಿದೆ. ಅಧಿಕಾರ ಸಿಕ್ಕ ತಕ್ಷಣ ಎಲ್ಲ ಅಧಿಕಾರ ದುರುಪಯೋಗ ಮಾಡುತ್ತಾರೆ. ವಿದ್ಯೆ ಇಲ್ಲದವನು ತಪ್ಪು ಮಾಡುವುದು ಬೇರೆ, ವಿದ್ಯಾವಂತರು ಕಾನೂನು ಅರಿವು ಇದ್ದರೂ ಮೋಸ ವಂಚನೆ ಮಾಡುತ್ತಾರೆ ಎಂದರು.
ಲೋಕಾಯುಕ್ತ ಸ್ವಾಯತ್ತ ಸಂಸ್ಥೆ, ಇದಕ್ಕೆ ಯಾರ ಹಂಗೂ ಇಲ್ಲ. ಸಿಎಂ ಅವರನ್ನೇ ಜೈಲಿಗೆ ಕಳುಹಿಸುವಷ್ಟು ಕ್ರಮ ವಹಿಸುತ್ತೇವೆ. ಅಷ್ಟೊಂದು ಬಲಿಷ್ಠ ಸಂಸ್ಥೆ ನಮ್ಮದು. ದೇಶದಲ್ಲಿಯೇ ರಾಜ್ಯ ಲೋಕಾಯುಕ್ತ ಸಂಸ್ಥೆಗೆ ಒಳ್ಳೆಯ ಹೆಸರಿದೆ ಎಂದರು.ಕೊಪ್ಪಳದಲ್ಲಿ ಬಂದಾಗಿದ್ದ ಅಂಗನವಾಡಿ ಕೇಂದ್ರವನ್ನು 24 ಗಂಟೆಯಲ್ಲಿ ಓಪನ್ ಮಾಡಿದ್ದೇನೆ. ಲೋಕಾಯುಕ್ತ ಸಂಸ್ಥೆ ಮೊದಲಿನಿಂದಲೂ ಇದೆ. ಜೈಲಿಗೆ ಕಳುಹಿಸುವ ಅಧಿಕಾರವಿದೆ. ಸುಳ್ಳು ಕೇಸ್ ಜಾಸ್ತಿಯಾಗಿವೆ. ಸುಳ್ಳು ಕೇಸ್ ಹಾಕುವುದನ್ನು ಬಿಡಬೇಕು. ಈಚೆಗಿನ ದಿನಗಳಲ್ಲಿ ಇದು ಅತಿಯಾಗಿರುವುದು ನೋವಿನ ಸಂಗತಿ. ಸಮಾಜ ಬದಲಾಗಬೇಕು. ದುಡ್ಡು ತೆಗೆದುಕೊಂಡು ವೋಟು ಹಾಕುವುದನ್ನು ಬಿಡಬೇಕು. ಸಹಕಾರಿ ಕ್ಷೇತ್ರ ಸೇರಿದಂತೆ ಎಲ್ಲ ಕಡೆಯೂ ಚುನಾವಣೆಯಲ್ಲಿ ಹಣ ಪಡೆಯಲಾಗುತ್ತದೆ. ಇದು ನಿಲ್ಲಬೇಕು ಎಂದರು.
ಜಿಲ್ಲಾ ಮತ್ತು ಸತ್ರ ನ್ಯಾಯಾಲಯದ ಪ್ರಧಾನ ನ್ಯಾಯಾಧೀಶ ಸಿ.ಚಂದ್ರಶೇಖರ, ಲೋಕಾಯುಕ್ತ ವಿಚಾರಣಾ ಹೆಚ್ಚುವರಿ ನಿಬಂಧಕ ಕೆ.ನಾಯ್ಕ, ರಮಾಕಾಂತ ಚವ್ವಾಣ, ಅರವಿಂದ.ಎನ್.ವಿ, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಮಹಾಂತೇಶ ದರಗದ, ಜಿಲ್ಲಾಧಿಕಾರಿ ಡಾ. ಸುರೇಶ ಇಟ್ನಾಳ, ಎಸ್ಪಿ ಡಾ. ರಾಮ್.ಎಲ್.ಅರಸಿದ್ದಿ, ಜಿಪಂ ಸಿಇಒ ವರ್ಣಿತ ನೇಗಿ, ಎಡಿಸಿ ಸಿದ್ದರಾಮೇಶ್ವರ, ಎಸಿ ಕ್ಯಾ.ಮಹೇಶ ಮಾಲಗಿತ್ತಿ, ಲೋಕಾಯುಕ್ತ ಎಸ್ಪಿ ಸತೀಶ ಚಿಟಗುಬ್ಬಿ ಅನೇಕರು ಇದ್ದರು.ತಿಂಗಳೊಳಗಾಗಿ ಇತ್ಯರ್ಥ ಮಾಡಿ:ಉಪಲೋಕಾಯುಕ್ತ ಬಿ. ವೀರಪ್ಪ
ಕೊಪ್ಪಳ: ಹೊಲದ ಸರ್ವೆಗೆ ಸುತ್ತಾಡಿ ಸುತ್ತಾಡಿ ಸುಸ್ತಾಗಿದೆ. ಆದರೂ ಅಧಿಕಾರಿಗಳು ಕಣ್ಣು ತೆರೆದು ನೋಡುತ್ತಿಲ್ಲ. ಊರಿನ ಚರಂಡಿ ನೀರು ನಮ್ಮ ಹೊಲಕ್ಕೆ ಬರುತ್ತಿದೆ. ಧರಣಿ ಮಾಡಿದರೂ ಸಮಸ್ಯೆ ಇತ್ಯರ್ಥ ಮಾಡುತ್ತಿಲ್ಲ. ಬಿಲ್ ಪಾವತಿಯಾಗಿಲ್ಲ ಎಂದು ಸಾರ್ವಜನಿಕರು ಸಮಸ್ಯೆ ತೋಡಿಕೊಂಡರು.ಉಪಲೋಕಾಯುಕ್ತ ಬಿ. ವೀರಪ್ಪ ಅವರು ಸಾರ್ವಜನಿಕ ಅಹವಾಲು ಸ್ವೀಕಾರ ಮತ್ತು ಕುಂದುಕೊರತೆಗಳ ವಿಚಾರಣೆಯಲ್ಲಿ ಎದುರಾದ ಸಮಸ್ಯೆಗಳು, ಇವುಗಳಲ್ಲಿ ಬಹುತೇಕ ತಿಂಗಳೊಳಗಾಗಿ ಸಮಸ್ಯೆ ಇತ್ಯರ್ಥ ಮಾಡಿ ಲೋಕಾಯುಕ್ತ ಕಚೇರಿಗೆ ವರದಿ ಮಾಡುವಂತೆ ಖಡಕ್ ಸೂಚನೆ ನೀಡಿದರು.
ಕುಷ್ಟಗಿ ತಾಲೂಕಿನ ಹಿರಿಯಜ್ಜನೋರ್ವ ತಮ್ಮ ಹೊಲದ ಸಮಸ್ಯೆ ಕಳೆದ ಮೂವತ್ತು ವರ್ಷಗಳಿಂದ ಇತ್ಯರ್ಥವಾಗುತ್ತಿಲ್ಲ. ಹಂಚಿಕೆ ಮಾಡುತ್ತಿಲ್ಲ ಎಂದು ಅಳಲು ತೋಡಿಕೊಂಡರು. ಆದರೆ, ಪ್ರಕರಣ ನ್ಯಾಯಾಲಯದಲ್ಲಿ ಇರುವುದರಿಂದ ಅಲ್ಲಿಯೇ ಇತ್ಯರ್ಥ ಮಾಡಿಕೊಳ್ಳುವಂತೆ ಸೂಚಿಸಿದರು.ಕುಣಿಕೇರಿ ಗ್ರಾಮದಲ್ಲಿ ರಮೇಶ ಡಂಬ್ರಳ್ಳಿ ಎನ್ನುವವರು ತಮ್ಮ ಹೊಲಕ್ಕೆ ಊರಿನ ಚರಂಡಿ ನೀರು ಬೀಡಲಾಗುತ್ತದೆ. ಇದರಿಂದ ನಾವು ಕೃಷಿ ಬೆಳೆ ಬೆಳೆಯುವುದಕ್ಕೆ ಆಗುತ್ತಿಲ್ಲ ಎಂದು ಪ್ರಶ್ನೆ ಮಾಡಿದರು. ಕುಣಿಕೇರಿ ಗ್ರಾಮದ ಪಿಡಿಓ ಅವರನ್ನು ತರಾಟೆಗೆ ತೆಗೆದುಕೊಂಡು ಕೂಡಲೇ ಆ ನೀರನ್ನು ಬೇರೆಡೆ ಕಳುಹಿಸಿ ಇಲ್ಲವೇ ಇಂಗುಗುಂಡಿ ಮಾಡಿಸಿ ಎಂದು ಉಪಲೋಕಾಯುಕ್ತರು ತಾಕೀತು ಮಾಡಿದರು. ಅದಕ್ಕೆ ಜಾಗವೇ ಇಲ್ಲ. ಹೀಗಾಗಿ ಊರಿನವರೆಲ್ಲ ತೀರ್ಮಾನ ಮಾಡಿ ಅಲ್ಲಿಯೇ ಕಳುಹಿಸುತ್ತಿದ್ದಾರೆ ಎಂದಾಗ ಉಪಲೋಕಾಯುಕ್ತರು ಊರಿನವರು ಹೇಳುತ್ತಾರೆ ಎಂದರೆ ಏನು ಬೇಕಾದರೂ ಮಾಡುತ್ತಿಯಾ ಎಂದು ಪ್ರಶ್ನೆ ಮಾಡಿದರು.
ಅದು ಏನೇ ಇರಲಿ, ತಿಂಗಳೊಳಗಾಗಿ ಊರಿನ ಚರಂಡಿ ನೀರು ಅವರ ಹೊಲಕ್ಕೆ ಹೋಗಬಾರದು. ಇಲ್ಲದಿದ್ದರೆ ನಾನು ಕೇಸ್ ದಾಖಲಿಸಿಕೊಂಡು ವಿಚಾರಣೆ ಮಾಡುತ್ತೇನೆ ಎಂದು ಎಚ್ಚರಿಸಿದರು.ಸುಳ್ಳು ದೂರು ಕೊಟ್ಟರೆ ಜೈಲಿಗೆ: ದೂರು ಕೊಡುವವರು ಸಾರ್ವಜನಿಕ ಹಿತಾಸಕ್ತಿಯಿಂದ ನೀಡಬೇಕು. ವೈಯಕ್ತಿಕ ಕಾರಣಕ್ಕಾಗಿ ಹೊಟ್ಟೆ ಉರಿಯಿಂದ ಸುಳ್ಳು ದೂರು ನೀಡಿದರೆ ಜೈಲಿಗೆ ಕಳುಹಿಸಲಾಗುತ್ತದೆ ಎಂದು ಉಪಲೋಕಾಯುಕ್ತ ಬಿ. ವೀರಪ್ಪ ಖಡಕ್ ಎಚ್ಚರಿಕೆ ನೀಡಿದ್ದಾರೆ.
ಮಂಜುನಾಥ ಎನ್ನುವವರು, ಪಂಚಾಯತ್ ರಾಜ್ ಇಲಾಖೆಯಲ್ಲಿ ಇಂಜನಿಯರ್ ಒಬ್ಬರು ಅಂಗವಿಕಲ ಪ್ರಮಾಣಪತ್ರ ನೀಡಿ ನೌಕರಿ ಸೇರಿದ್ದಾನೆ. ಆದರೆ, ನಿಯಮಾನುಸಾರ ಇರಬೇಕಾದಷ್ಟು ಅಂಗವಿಕಲತೆ ಇಲ್ಲ ಎಂದು ದೂರು ನೀಡಿದ್ದರು. ಆತನಿಗೂ ನಿನಗೂ ಏನು ಸಂಬಂಧ. ನೌಕರಿ ವಂಚಿತರಾದವರು ದೂರು ನೀಡುತ್ತಾರೆ. ನೀನು ದೂರು ಹೊಟ್ಟೆ ಉರಿಯಿಂದ ನೀಡಿದರೆ ಸಹಿಸುವುದಿಲ್ಲ. ನಿನ್ನ ಮೇಲೆಯೇ ಕೇಸ್ ದಾಖಲಿಸಿ ಜೈಲಿಗೆ ಕಳುಹಿಸುತ್ತೇನೆ. ತಪ್ಪೊಪ್ಪಿಗೆ ಪತ್ರ ಬರೆದುಕೊಟ್ಟು ಹೋಗು ಎಂದು ತಪ್ಪೊಪ್ಪಿಗೆ ಪತ್ರ ಬರೆಯಿಸಿಕೊಂಡು ಕಳುಹಿಸಿದರು.;Resize=(128,128))
;Resize=(128,128))
;Resize=(128,128))
;Resize=(128,128))
;Resize=(128,128))