ಹತ್ತಿ ಬೆಳೆ ಬಂಪರ್‌, ರೈತರು ಖುಷ್‌

| Published : Nov 26 2024, 12:49 AM IST

ಸಾರಾಂಶ

ಧಾರವಾಡ, ಗದಗ ಜಿಲ್ಲೆಯಲ್ಲಿ ಈ ಬಾರಿ ಹೆಸರು ಕಾಳು ಹೆಚ್ಚಿನ ಪ್ರದೇಶದಲ್ಲಿ ಬೆಳೆದಿದ್ದು, ಬಿಟಿ ಹತ್ತಿ ಬಿತ್ತನೆ ಪ್ರದೇಶ ತೀವ್ರ ಕುಸಿತವಾಗಿದೆ. ಆದರೂ ಎಕರೆಗೆ 8ರಿಂದ 10 ಕ್ವಿಂಟಲ್‌ ವರೆಗೂ ಬೆಳೆ ಬಂದಿದೆ. ಕೇಂದ್ರ ಸರ್ಕಾರದ ಆಧೀನ ಸಂಸ್ಥೆ ಭಾರತೀಯ ಹತ್ತಿ ನಿಗಮದವರು ಕಾಟನ್‌ ಇಂಡಸ್ಟ್ರೀಸ್‌ಗಳ ಮೂಲಕ ಹತ್ತಿ ಖರೀದಿಸುತ್ತಿದೆ.

ಶಿವಾನಂದ ಅಂಗಡಿ

ಹುಬ್ಬಳ್ಳಿ:

ಹತ್ತಿ ಬೆಳೆಗೆ ಹತ್ತು ಕುತ್ತು ಎನ್ನುತ್ತಾರೆ. ಆದರೆ, ಇಂಥ ಹತ್ತಾರು ಕುತ್ತುಗಳನ್ನು ದಾಟಿ ಈ ಬಾರಿ ಬಂಪರ್‌ ಬೆಳೆ ಬಂದಿದ್ದು, ಕೇಂದ್ರ ಸರ್ಕಾರದಿಂದ ಉತ್ತಮ ಬೆಂಬಲ ಬೆಲೆಯೂ ಸಿಗುತ್ತಿರುವುದರಿಂದ ಬೆಳೆಗಾರರು ಖುಷಿ ಖುಷಿಯಾಗಿದ್ದಾರೆ.

ಧಾರವಾಡ, ಗದಗ ಜಿಲ್ಲೆಯಲ್ಲಿ ಈ ಬಾರಿ ಹೆಸರು ಕಾಳು ಹೆಚ್ಚಿನ ಪ್ರದೇಶದಲ್ಲಿ ಬೆಳೆದಿದ್ದು, ಬಿಟಿ ಹತ್ತಿ ಬಿತ್ತನೆ ಪ್ರದೇಶ ತೀವ್ರ ಕುಸಿತವಾಗಿದೆ. ಆದರೂ ಎಕರೆಗೆ 8ರಿಂದ 10 ಕ್ವಿಂಟಲ್‌ ವರೆಗೂ ಬೆಳೆ ಬಂದಿದೆ. ಕೇಂದ್ರ ಸರ್ಕಾರದ ಆಧೀನ ಸಂಸ್ಥೆ ಭಾರತೀಯ ಹತ್ತಿ ನಿಗಮದವರು ಕಾಟನ್‌ ಇಂಡಸ್ಟ್ರೀಸ್‌ಗಳ ಮೂಲಕ ಹತ್ತಿ ಖರೀದಿಸುತ್ತಿದ್ದು, ₹ 7 ಸಾವಿರದಿಂದ 7500 ವರೆಗೂ ಬೆಂಬಲ ಬೆಲೆ ಸಿಗುತ್ತಿದೆ. ಹೀಗಾಗಿ ಎಕರೆಗೆ ₹ 60ರಿಂದ 70 ಸಾವಿರ ವರೆಗೂ ಬೆಳೆ ಬಂದಿದೆ.

ನವೆಂಬರ್‌ ಮೊದಲ ವಾರದಿಂದ ಹತ್ತಿ ಬೆಳೆಯುವ ಜಿಲ್ಲೆಗಳಲ್ಲಿ ಬೆಂಬಲ ಬೆಲೆಯಲ್ಲಿ ಹತ್ತಿ ಖರೀದಿಸಲಾಗುತ್ತಿದ್ದು, ರಾಜ್ಯದ ಕಲಬುರಗಿ, ಯಾದಗಿರ, ರಾಯಚೂರ, ಹಾವೇರಿ, ಗದಗ, ಧಾರವಾಡ, ಬಿಜಾಪುರ, ಬೀದರ್‌, ಬಳ್ಳಾರಿ, ಬೆಳಗಾವಿ ಜಿಲ್ಲೆಗಳಲ್ಲಿ ಬಿಟಿ ಹತ್ತಿ ಬೆಳೆಯಲಾಗುತ್ತಿದ್ದು, 74 ಕಾಟನ್‌ ಇಂಡಸ್ಟ್ರಿಸ್‌ಗಳಿಗೆ ಹತ್ತಿ ಖರೀದಿಗೆ ಅನುಮೋದನೆ ದೊರೆತಿದೆ. ಸದ್ಯ 50ಕ್ಕೂ ಹೆಚ್ಚು ಕಡೆ ಖರೀದಿ ಪ್ರಕ್ರಿಯೆ ನಡೆಯುತ್ತಿದೆ. ಕಳೆದ ಶುಕ್ರವಾರದ ವರೆಗೆ ಬೆಂಬಲ ಬೆಲೆಯಲ್ಲಿ 2,12,936 ಕ್ವಿಂಟಲ್‌ ಹತ್ತಿ ಖರೀದಿಯಾಗಿದೆ. 3755 ರೈತರು ಬೆಂಬಲ ಬೆಲೆಯ ಲಾಭ ಪಡೆದಿದ್ದಾರೆ. ಯಾದಗಿರಿಯಲ್ಲೇ ಅತಿ ಹೆಚ್ಚು 70520 ಕ್ವಿಂಟಲ್‌, ಬೆಳಗಾವಿ ಜಿಲ್ಲೆಯಲ್ಲಿ ಅತಿ ಕಡಿಮೆ 227 ಕ್ವಿಂಟಲ್‌ ಹತ್ತಿ ಖರೀದಿಯಾಗಿದೆ.

ಬೆಂಬಲ ಬೆಲೆ ನಿಗದಿ

ಬಿಟಿ ತಳಿಯ ಬನ್ನಿ ಬ್ರಹ್ಮ ಮಾಡರ್ನ್‌-₹ 7521, ಬನ್ನಿ ಬ್ರಹ್ಮ ಸ್ಪೇಶಲ್‌ - ₹ 7471, ಎಂಇಸಿಎಚ್‌-₹ 7421, ಎಲ್‌ಆರ್‌ಎ-₹ 7221, ಡಿಸಿಎಚ್‌-32- ₹ 7921, ಜಯಧರ-₹ 6871ಗೆ ಕ್ವಿಂಟಲ್‌ನಂತೆ ದರ ನಿಗದಿಯಾಗಿದ್ದು,

ಈ ಪೈಕಿ ಡಿಸಿಎಚ್‌, ಜಯಧರ ತಳಿ ಹತ್ತಿ ಬೆಳೆಯುವುದನ್ನು ರೈತರು ಕೈಬಿಟ್ಟಿದ್ದು, ಬಿಟಿ ತಳಿಗಳನ್ನು ಮಾತ್ರ ಬೆಳೆಯುತ್ತಿದ್ದಾರೆ. ಹತ್ತಿಯಲ್ಲಿ ಶೇ. 8ಕ್ಕಿಂತ ಹೆಚ್ಚಿಗೆ ತೇವಾಂಶ ಇದ್ದಲ್ಲಿ ಪ್ರತಿ ಕ್ವಿಂಟಲ್‌ಗೆ ನಿಗದಿತ ಬೆಂಬಲ ಬೆಲೆಯಲ್ಲಿ ಕಡಿತಗೊಳಿಸಲಾಗುತ್ತಿದೆ. ಉದ್ದಳತೆ ಆಧಾರದ ಮೇಲೆ ಬೆಲೆ ನಿಗದಿಯಾಗುತ್ತಿದೆ.

ಹತ್ತಿ ಹಾಕಿದ 8-10 ದಿನಗಳಲ್ಲಿ ಆಧಾರ್‌ ಕಾರ್ಡ್‌ನಲ್ಲಿರುವ ಅವರ ಬ್ಯಾಂಕ್‌ ಖಾತೆಗೆ ಹಣ ಜಮಾ ಆಗುತ್ತದೆ.

ನೋಂದಣಿ ಕಡ್ಡಾಯ

ಬೆಂಬಲ ಬೆಲೆಯಲ್ಲಿ ಹತ್ತಿ ಮಾರಾಟ ಮಾಡಲು ಇಚ್ಛಿಸುವ ರೈತರು ಆನ್‌ಲೈನ್‌ನಲ್ಲಿ ಹತ್ತಿ ಬೆಳೆದ ಹೊಲದ ಉತಾರ ಹಾಗೂ ಆಧಾರ ಕಾರ್ಡ್‌ ನಂಬರ್‌ ನೀಡಿ ನೋಂದಣಿ ಮಾಡಿಸಿಕೊಳ್ಳುವುದು ಕಡ್ಡಾಯವಾಗಿದೆ.

ಧಾರವಾಡ ಜಿಲ್ಲೆಯ ಅಣ್ಣಿಗೇರಿಯಲ್ಲೊಂದರಲ್ಲಿ ಮೂರು ಕಾಟನ್‌ ಇಂಡಸ್ಟ್ರಿಸ್‌ಗಳಲ್ಲಿ ಬೆಂಬಲ ಬೆಲೆಯಲ್ಲಿ ಹತ್ತಿ ಖರೀದಿಸಲಾಗುತ್ತಿದ್ದು, ಒಂದೊಂದು ಕೇಂದ್ರದಲ್ಲಿ ದಿನವೊಂದಕ್ಕೆ 1500ರಿಂದ 2 ಸಾವಿರ ಕ್ವಿಂಟಲ್‌ ಹತ್ತಿ ಖರೀದಿಯಾಗುತ್ತಿದ್ದು, ಭಾರತೀಯ ಹತ್ತಿ ನಿಗಮದ ಸೂಪರ್‌ ವೈಸರ್‌ ಸೇರಿ ಇತರ ಸಿಬ್ಬಂದಿ ಉಸ್ತುವಾರಿಯಲ್ಲಿ ಪ್ರಕ್ರಿಯೆ ನಡೆಯುತ್ತದೆ. 150ಕ್ಕೂ ಹೆಚ್ಚು ಗುತ್ತಿಗೆ ಆಧಾರದ ಸಿಬ್ಬಂದಿಯನ್ನು ಹತ್ತಿ ನಿಗಮ ನೇಮಿಸಿದ್ದು, ಖರೀದಿ ಪ್ರಕ್ರಿಯೆ ಮುಗಿಯುವವರೆಗೂ ಇವರು ಆಯಾ ಕಾಟನ್‌ ಇಂಡಸ್ಟ್ರೀಸ್‌ಗಳಲ್ಲಿ ಕಾರ್ಯನಿರ್ವಹಿಸಲಿದ್ದಾರೆ.

ಅಣ್ಣಿಗೇರಿಯ ಸರ್ವೀಸ್‌ ರಸ್ತೆಯಲ್ಲಿ ಕಿಲೋ ಮೀಟರ್‌ ಗಟ್ಟಲೇ ಹತ್ತಿ ತುಂಬಿದ ಟ್ರ್ಟಾಕ್ಟರ್‌ಗಳು ಸಾಲು ಗಟ್ಟಿ ನಿಂತಿರುವುದು ಕಂಡು ಬರುತ್ತಿದೆ. ನರಗುಂದ ತಾಲೂಕಿನಲ್ಲಿ ಕಾಟನ್‌ ಇಂಡಸ್ಟ್ರಿಸ್‌ಗಳೇ ಇಲ್ಲದಿರುವುದರಿಂದ ಅಲ್ಲಿ ಖರೀದಿ ಕೇಂದ್ರ ತೆರೆದಿಲ್ಲ. ಹೀಗಾಗಿ ಬೆಳೆಗಾರರು ಅಣ್ಣಿಗೇರಿಗೆ ಹತ್ತಿ ತರುವುದು ಅನಿವಾರ್ಯವಾಗಿದೆ.

ರೈತರು ಹೆಚ್ಚಿನ ಪ್ರಮಾಣದಲ್ಲಿ ಹತ್ತಿ ತರುತ್ತಿರುವುದರಿಂದ ಇಂಡಸ್ಟ್ರಿಸ್‌ಗಳಲ್ಲಿ ಹಾಕಲು ಜಾಗ ಇಲ್ಲ. ಹಗಲು ರಾತ್ರಿ, ಹತ್ತಿಯಿಂದ ಹತ್ತಿಕಾಳು ಹಾಗೂ ಅರಳೆ ಬೇರ್ಪಡಿಸುವ ಕಾರ್ಯ ನಡೆಯುತ್ತಿದೆ. ನೋಂದಣಿ ಮಾಡಿಸಿದವರು ಸ್ವಲ್ಪ ನಿಧಾನವಾಗಿ ಬಂದರೇ ಅನುಕೂಲ ಆಗತೈತಿ ಎಂದು ಅಣ್ಣಿಗೇರಿಯ ವೀರಭದ್ರೇಶ್ವರ ಇಂಡಸ್ಟ್ರೀಸ್‌ ಮಾಲೀಕ ರಮೇಶ ಅಂಗಡಿ ಮನವಿ ಮಾಡಿಕೊಳ್ಳುತ್ತಾರೆ.

ನರಗುಂದ ತಾಲೂಕಿನಲ್ಲಿ ಈ ಬಾರಿ ಎಕರೆಗೆ ಒಣಬೇಸಾಯದಲ್ಲೇ 7ರಿಂದ 9 ಕ್ವಿಂಟಲ್‌ ವರೆಗೂ ಇಳುವರಿ ಬಂದಿದೆ. ಖಾಸಗಿ ಖರೀದಿಗಾರರಿಗಿಂತ ಕೇಂದ್ರ ಸರ್ಕಾರದಿಂದ ಉತ್ತಮ ಬೆಂಬಲ ಬೆಲೆಯೂ ಸಿಗುತ್ತಿರುವುದು ಹತ್ತಿ ಬಿತ್ತನೆಯಿಂದ ಲಾಭವಾಗಿದೆ ಎಂದು ನರಗುಂದ ತಾಲೂಕು ಬನಹಟ್ಟಿಯ ಭೀಮನಗೌಡ ಯಲ್ಲಪ್ಪಗೌಡ ಪಾಟೀಲ ಹೇಳಿದರು.

ಖಾಸಗಿಯವರು 6ರಿಂದ 6500 ಸಾವಿರ ರು.ವರೆಗೆ ಮಾತ್ರ ಹತ್ತಿ ಖರೀದಿಸುತ್ತಿದ್ದಾರೆ. ಆದರೆ ಭಾರತೀಯ ಹತ್ತಿ ನಿಗಮದಲ್ಲಿ ₹ 7ರಿಂದ 7500 ಸಾವಿರ ವರೆಗೆ ದರ ಸಿಗುತ್ತಿರುವುದರಿಂದ ಸಾವಿರಾರು ರೈತರು ಬೆಂಬಲ ಬೆಲೆಯ ಲಾಭ ಪಡೆಯುತ್ತಿದ್ದಾರೆ ಭಾರತೀಯ ಹತ್ತಿ ನಿಗಮದ ಹುಬ್ಬಳ್ಳಿ ಕಚೇರಿಯ ಉಪ ಮಹಾಪ್ರಬಂಧಕ ಶಿಖಾ ಜಾಂಬ ತಿಳಿಸಿದ್ದಾರೆ.