ಸಾರಾಂಶ
ಕನ್ನಡಪ್ರಭ ವಾರ್ತೆ ಚಾಮರಾಜನಗರ
ಹತ್ತಿ ಕೇವಲ ಕಪ್ಪು ಮಣ್ಣಿಗೆ ಸೀಮಿತವಲ್ಲದೆ ಹತ್ತಿಯನ್ನು ಎಲ್ಲ ಮಣ್ಣಿನಲ್ಲಿ ಬೆಳೆಯಬಹುದು ಎಂದು ಅಖಿಲ ಭಾರತ ಸುಸಂಘಟಿತ ಹತ್ತಿ ಬೆಳೆ ಪ್ರಾಯೋಜನ ವಿಭಾಗದ ಮುಖ್ಯಸ್ಧ ಸಿ. ಶಶಿಕುಮಾರ್ ತಿಳಿಸಿದರು.ಕಬ್ಬಳ್ಳಿ ಗ್ರಾಮದಲ್ಲಿ ಬೆಂಗಳೂರು ಕೃಷಿ ವಿಶ್ವವಿದ್ಯಾನಿಲಯ ಮತ್ತು ಚಾಮರಾಜನಗರ ಕೃಷಿ ಮಹಾವಿದ್ಯಾಲಯದ ಸಹಯೋಗದಲ್ಲಿ ಅಂತಿಮ ವರ್ಷದ ಬಿಎಸ್ಸಿ ಅಗ್ರಿ ವಿದ್ಯಾರ್ಥಿಗಳು ಹಮ್ಮಿಕೊಂಡಿದ್ದ ಗ್ರಾಮೀಣ ಕೃಷಿ ಕಾರ್ಯಾನುಭವ ಶಿಬಿರದಲ್ಲಿ ಅವರು ಮಾತನಾಡಿದರು.ಹತ್ತಿ ಬೆಳೆಯು ಆದಾಯ ಹಾಗೂ ಎಲ್ಲಾ ಮಣ್ಣಿಗೂ ಸೂಕ್ತ ಬೆಳೆಯಾಗಿದ್ದು ಹತ್ತಿಯಲ್ಲಿ ಅಂತರ ಬೆಳೆ ಪದ್ಧತಿಯನ್ನು ಕೈಗೊಳ್ಳುವುದರಿಂದ ಮಣ್ಣಿನ ಫಲವತ್ತತೆ ಹಾಗೂ ಆದಾಯವನ್ನು ಹೆಚ್ಚಿಸಿಕೊಳ್ಳಬಹುದು. ರೈತರು ತಿಳಿದುಕೊಂಡಿದ್ದ ವಿಚಾರದ ಪ್ರಕಾರ ಹತ್ತಿಯು ಕೇವಲ ಕಪ್ಪು ಮಣ್ಣಿಗೆ ಸೀಮಿತವಲ್ಲ. ನಾವು ಸಮಗ್ರ ಬೆಳೆ ನಿರ್ವಹಣೆಯಿಂದ ಎಲ್ಲಾ ತರಹದ ಮಣ್ಣಿನಲ್ಲಿ ಹತ್ತಿಯನ್ನು ಲಾಭದಾಯಕವಾಗಿ ಬೆಳೆಯಬಹುದಾಗಿದೆ.ಹತ್ತಿ ಬೆಳೆಗೆ ಶಿಫಾರಸ್ಸಿನಂತೆ ರಾಸಾಯನಿಕ ಗೊಬ್ಬರ ಹಾಗೂ ತಿಪ್ಪೆ ಗೊಬ್ಬರ ನೀಡುವುದರಿಂದ ಹಾಗೂ ಕೀಟ ಮತ್ತು ರೋಗನಾಶಕಗಳನ್ನು ಶಿಫಾರಸ್ಸಿನ ರೀತಿಯಲ್ಲಿ ಬಳಸುವುದರಿಂದ ಹತ್ತಿಯಲ್ಲಿ ಅಧಿಕ ಇಳುವರಿ ಪಡೆಯಬಹುದಾಗಿದೆ. ಅಂತರ ಬೆಳೆಯಾಗಿ ಹಲವು ಬೆಳೆಗಳನ್ನು ಬೆಳೆಯುವುದರಿಂದ ನೈಸರ್ಗಿಕವಾಗಿ ಕಳೆ ನಿರ್ವಹಣೆ ಮಾಡಿ ಅಧಿಕ ಇಳುವರಿ ಪಡೆದು ಕಳೆನಾಶಕಗಳ ಮೊತ್ತವನ್ನು ಸಾಮಾನ್ಯವಾಗಿ ಕಡಿತಗೊಳಿಸಬಹುದೆಂದು ಈ ಮೂಲಕ ತಿಳಿಸಿದರು. ಈ ಕಾರ್ಯಕ್ರಮವನ್ನು ಅಂತಿಮ ವರ್ಷದ ವಿದ್ಯಾರ್ಥಿ ನಿತೀಶ್ ಕುಮಾರ್ ನಡೆಸಿಕೊಟ್ಟರು. ಈ ಕಾರ್ಯಕ್ರಮದಲ್ಲಿ ಕಬ್ಬಹಳ್ಳಿಯ ಗ್ರಾಮಸ್ಥರು ಹಾಗೂ ಕೃಷಿ ಮಹಾವಿದ್ಯಾಲಯದ ಪ್ರಾಧ್ಯಾಪಕರು, ವಿದ್ಯಾರ್ಥಿಗಳು ಉಪಸ್ಥಿತರಿದ್ದರು.