ಖಾಸಗಿ ನೌಕರ ಶರತ್‌ ಕೊಲೆ ಕೇಸ್: ಇಬ್ಬರ ಬಂಧನ

| Published : Aug 24 2024, 01:27 AM IST

ಸಾರಾಂಶ

ಅಂಜನಾಪ್ಪ ಗಾರ್ಡನ್‌ನಲ್ಲಿ ಗುರುವಾರ ನಡೆದಿದ್ದ ಖಾಸಗಿ ಕಂಪನಿ ನೌಕರ ಶರತ್ ಕುಮಾರ್‌ ಕೊಲೆ ಪ್ರಕರಣ ಸಂಬಂಧ ಮೃತನ ನಾಲ್ವರು ಸ್ನೇಹಿತರನ್ನು ಕಾಟನ್‌ಪೇಟೆ ಠಾಣೆ ಪೊಲೀಸರು ಬಂಧಿಸಿದ್ದಾರೆ.

ಕನ್ನಡಪ್ರಭ ವಾರ್ತೆ ಬೆಂಗಳೂರು

ಅಂಜನಾಪ್ಪ ಗಾರ್ಡನ್‌ನಲ್ಲಿ ಗುರುವಾರ ನಡೆದಿದ್ದ ಖಾಸಗಿ ಕಂಪನಿ ನೌಕರ ಶರತ್ ಕುಮಾರ್‌ ಕೊಲೆ ಪ್ರಕರಣ ಸಂಬಂಧ ಮೃತನ ನಾಲ್ವರು ಸ್ನೇಹಿತರನ್ನು ಕಾಟನ್‌ಪೇಟೆ ಠಾಣೆ ಪೊಲೀಸರು ಬಂಧಿಸಿದ್ದಾರೆ. ರಾಮಕೃಷ್ಣ ನಗರದ ಎಸ್‌.ಶರತ್ ಅಲಿಯಾಸ್ ಮಂಡೆ, ದೊರೆಸ್ವಾಮಿ ನಗರದ ನಿರಂಜನ್ ಅಲಿಯಾಸ್ ಡ್ರ್ಯಾಗನ್ , ಅಂಜನಾಪ್ಪ ಗಾರ್ಡನ್‌ನ ದೀಪಕ್ ಅಲಿಯಾಸ್ ದೋರಿ ದೀಪು, ಮನೋಜ್‌ ಕುಮಾರ್ ಅಲಿಯಾಸ್ ಅಪ್ಪು ಬಂಧಿತರಾಗಿದ್ದು, ವೈಯಕ್ತಿಕ ಕಾರಣಕ್ಕೆ ಪರಿಚಿತ ಅಂತಿಮ ದರ್ಶನಕ್ಕೆ ಬಂದಿದ್ದಾಗ ಮಾರ್ಕೆಂಡೇಶ್ವರ ನಗರದ ಶರತ್ ಮೇಲೆ ಗುರುವಾರ ಮಾರಕಾಸ್ತ್ರಗಳಿಂದ ಹಲ್ಲೆ ನಡೆಸಿ ಕೊಂದು ಆರೋಪಿಗಳು ಪರಾರಿಯಾಗಿದ್ದರು ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ. ಹಲವು ವರ್ಷಗಳಿಂದ ಆರೋಪಿ ಶರತ್ ಹಾಗೂ ಮೃತ ಶರತ್‌ ಸ್ನೇಹಿತರು. ಅನಾರೋಗ್ಯದಿಂದ ಅಂಜನಾಪ್ಪ ಗಾರ್ಡನ್‌ನ ತಮ್ಮ ಸ್ನೇಹಿತ ಸೌಂಡ್ ಪ್ರಭಾಕರ್ ನಿಧನ ಸಂಗತಿ ತಿಳಿದು ಬುಧವಾರ ರಾತ್ರಿ ಶರತ್ ಬಂದಿದ್ದ. ಆಗ ಕ್ಷುಲ್ಲಕ ಕಾರಣಕ್ಕೆ ಆರೋಪಿ ಶರತ್‌ ಪತ್ನಿಗೆ ಮೃತ ಶರತ್ ಬೈದು ಹೊಡೆದಿದ್ದ. ಇದರಿಂದ ಕೆರಳಿದ ಶರತ್‌, ಮರುದಿನ ಬೆಳಗ್ಗೆ ತನ್ನ ಸಹಚರರ ಜತೆ ಗೆಳೆಯನನ್ನು ಹತ್ಯೆ ಮಾಡಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.