ವಿಧಾನಪರಿಷತ್‌ನ ನಾಲ್ಕು ಕ್ಷೇತ್ರಗಳ ಚುನಾವಣಾ ಫಲಿತಾಂಶ ಕಾಂಗ್ರೆಸ್ ಸರ್ಕಾರಕ್ಕೆ ಮತದಾರರು ನೀಡಿದ ಎಚ್ಚರಿಕೆ ಗಂಟೆಯಾಗಿದ್ದು, 2028ರ ವಿಧಾನಸಭಾ ಚುನಾವಣೆಗೆ ದಿಕ್ಸೂಚಿಯಾಗಿದೆ.

ಹುಬ್ಬಳ್ಳಿ:

ವಿಧಾನಪರಿಷತ್‌ನ ನಾಲ್ಕು ಕ್ಷೇತ್ರಗಳ ಚುನಾವಣಾ ಫಲಿತಾಂಶ ಕಾಂಗ್ರೆಸ್ ಸರ್ಕಾರಕ್ಕೆ ಮತದಾರರು ನೀಡಿದ ಎಚ್ಚರಿಕೆ ಗಂಟೆಯಾಗಿದ್ದು, 2028ರ ವಿಧಾನಸಭಾ ಚುನಾವಣೆಗೆ ದಿಕ್ಸೂಚಿಯಾಗಿದೆ ಎಂದು ವಿಧಾನಸಭೆ ಪ್ರತಿಪಕ್ಷದ ನಾಯಕ ಅರವಿಂದ ಬೆಲ್ಲದ ಹಾಗೂ ಶಾಸಕ ಮಹೇಶ ಟೆಂಗಿನಕಾಯಿ ಹೇಳಿದರು.

ಬುಧವಾರ ನಗರದಲ್ಲಿ ಜಂಟಿ ಸುದ್ದಿಗೋಷ್ಠಿ ನಡೆಸಿದ ಅವರು, ನಾಲ್ಕು ಕ್ಷೇತ್ರಗಳ ಪೈಕಿ ಮೂರರಲ್ಲಿ ಬಿಜೆಪಿ, ಒಂದರಲ್ಲಿ ಮೈತ್ರಿಪಕ್ಷ ಜೆಡಿಎಸ್ ಗೆಲುವು ಸಾಧಿಸಿದೆ. ಗ್ಯಾರಂಟಿ ಯೋಜನೆಗಳನ್ನೇ ನೆಚ್ಚಿಕೊಂಡರೆ ಚುನಾವಣೆ ಗೆಲ್ಲಬಹುದು ಎಂಬ ಕಾಂಗ್ರೆಸ್‌ನ ಲೆಕ್ಕಾಚಾರವನ್ನು ಮತದಾರರು ತಿರಸ್ಕರಿಸಿದ್ದಾರೆ. ಭ್ರಷ್ಟಾಚಾರ ಮತ್ತು ನಕಾರಾತ್ಮಕ ರಾಜಕಾರಣಕ್ಕೆ ತಕ್ಕ ಉತ್ತರ ನೀಡಿದ್ದು, ಅಭಿವೃದ್ಧಿಪರ ಆಡಳಿತದ ನಿರೀಕ್ಷೆ ವ್ಯಕ್ತಪಡಿಸಿದ್ದಾರೆ ಎಂದರು.

ಸಂಘಟಿತ ಹೋರಾಟದ ಗೆಲುವು:

ಪಶ್ಚಿಮ ಪದವೀಧರ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿ ಎಸ್.ವಿ. ಸಂಕನೂರ ಅವರು 9,323 ಮತಗಳ ಅಂತರದಿಂದ ಪ್ರಥಮ ಪ್ರಾಶಸ್ತ್ಯದ ಮತಗಳಲ್ಲೇ ಗೆಲುವು ಸಾಧಿಸಿದ್ದಾರೆ. ಅಭ್ಯರ್ಥಿ ಘೋಷಣೆಯ ಬಳಿಕ ಪ್ರಚಾರಕ್ಕೆ ಕಡಿಮೆ ಸಮಯವಿದ್ದರೂ, 4 ಸಾವಿರಕ್ಕೂ ಹೆಚ್ಚು ಕಾರ್ಯಕರ್ತರು ಸಂಘಟಿತವಾಗಿ ಶ್ರಮಿಸಿದ್ದಾರೆ. ಕ್ಷೇತ್ರದ 23 ವಿಧಾನಸಭಾ ಕ್ಷೇತ್ರಗಳ ಪೈಕಿ ಬಿಜೆಪಿ ಕೇವಲ ಆರು ಶಾಸಕರನ್ನು ಹೊಂದಿದ್ದರೂ ಗೆಲುವು ಸಾಧಿಸಿರುವುದು ಪಕ್ಷದ ಸಂಘಟನಾ ಶಕ್ತಿಗೆ ಸಾಕ್ಷಿ ಎಂದು ಟೆಂಗಿನಕಾಯಿ ಹೇಳಿದರು.

ಕೇಂದ್ರ ಸಚಿವ ಪ್ರಹ್ಲಾದ ಜೋಶಿ, ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ವಿಪ ಮಾಜಿ ಸಭಾಪತಿ ಬಸವರಾಜ ಹೊರಟ್ಟಿ ಸೇರಿದಂತೆ ಹಲವು ನಾಯಕರು ಚುನಾವಣಾ ಕಾರ್ಯಕ್ಕೆ ಮಾರ್ಗದರ್ಶನ ನೀಡಿದ್ದರು ಎಂದಿರುವ ಅವರು, ಗೆಲುವಿನ ಶ್ರೇಯಸ್ಸು ಕಾರ್ಯಕರ್ತರು ಮತ್ತು ಮತದಾರರಿಗೆ ಸಲ್ಲುತ್ತದೆ ಎಂದರು.

ಸರ್ಕಾರದ ವಿರುದ್ಧ ಟೀಕೆ:

ಇವಿಎಂ ಬಗ್ಗೆ ಆಕ್ಷೇಪಿಸುತ್ತಿದ್ದ ಕಾಂಗ್ರೆಸ್, ಬ್ಯಾಲೆಟ್ ಪೇಪರ್ ಮೂಲಕ ನಡೆದ ಚುನಾವಣೆಯಲ್ಲೂ ಸೋಲು ಕಂಡಿದೆ. ಚುನಾವಣಾ ವ್ಯವಸ್ಥೆಯ ಬಗ್ಗೆ ಗೊಂದಲ ಸೃಷ್ಟಿಸುವ ಬದಲು ಅಭಿವೃದ್ಧಿಗೆ ಆದ್ಯತೆ ನೀಡಲಿ ಎಂದು ಬೆಲ್ಲದ ಆಗ್ರಹಿಸಿದರು. ಗ್ಯಾರಂಟಿ ಯೋಜನೆಗಳ ಅನುಷ್ಠಾನ, ರಾಜ್ಯದ ಅಭಿವೃದ್ಧಿ ಹಾಗೂ ಪರಿಶಿಷ್ಟ ಜಾತಿ-ಪಂಗಡಗಳ ಕಲ್ಯಾಣಕ್ಕೆ ಮೀಸಲಿಟ್ಟ ಹಣದ ಬಳಕೆ ಕುರಿತು ಸರ್ಕಾರ ಆತ್ಮಾವಲೋಕನ ಮಾಡಿಕೊಳ್ಳಬೇಕು. ಈ ಫಲಿತಾಂಶ ಪಕ್ಷದ ಕಾರ್ಯಕರ್ತರಲ್ಲಿ ಹೊಸ ಉತ್ಸಾಹ ತುಂಬಿದ್ದು, ಮುಂಬರುವ ಸ್ಥಳೀಯ ಸಂಸ್ಥೆಗಳ ಚುನಾವಣೆಗಳಲ್ಲೂ ಯಶಸ್ಸು ಸಾಧಿಸಿ, 2028ರಲ್ಲಿ ರಾಜ್ಯದಲ್ಲಿ ಬಿಜೆಪಿ-ಎನ್‌ಡಿಎ ಸರ್ಕಾರ ರಚಿಸುವ ವಿಶ್ವಾಸವಿದೆ ಎಂದರು.

ಸುದ್ದಿಗೋಷ್ಠಿಯಲ್ಲಿ ವಿಪ ಸದಸ್ಯರಾದ ಪ್ರದೀಪ ಶೆಟ್ಟರ್, ಲಿಂಗರಾಜ ಪಾಟೀಲ, ಮೇಯರ್ ದುರ್ಗಮ್ಮ ಬಿಜವಾಡ, ಬಿಜೆಪಿ ಮಹಾನಗರ ಜಿಲ್ಲಾಧ್ಯಕ್ಷ ತಿಪ್ಪಣ್ಣ ಮಜ್ಜಗಿ, ವಿಭಾಗ ಪ್ರಮುಖ ಜಯತೀರ್ಥ ಕಟ್ಟಿ, ಮಹೇಂದ್ರ ಕೌತಾಳ, ರಾಜು ಕೋರ್ಯಾಣಮಠ ಇದ್ದರು.