ರಸ್ತೆ ಅಗಲೀಕರಣಕ್ಕೆ ಕೌನ್ಸಿಲ್ ಆಕ್ಷೇಪಣೆ ಸಾಧ್ಯತೆ

| Published : Feb 18 2025, 12:35 AM IST

ಸಾರಾಂಶ

ಚಿತ್ರದುರ್ಗ ನಗರದಲ್ಲಿರುವ ಅವೈಜ್ಞಾನಿಕ ಡಿವೈಡರ್‌ನಲ್ಲಿ ಗಿಡಗಳ ನೆಟ್ಟಿರುವುದು.

ಇಂದು ಚಿತ್ರದುರ್ಗ ನಗರಸಭೆ ಸಾಮಾನ್ಯ ಸಭೆ. ಶಾಸಕ ಪಪ್ಪಿ ಭಾಗವಹಿಸುವುದು ಡೌಟುಕನ್ನಡಪ್ರಭ ವಾರ್ತೆ ಚಿತ್ರದುರ್ಗ

ನಗರದ ರಸ್ತೆ ಅಗಲೀಕರಣಕ್ಕೆ ನಗರಸಭೆ ಕೌನ್ಸಿಲ್ ಸಭೆ ಅಸ್ತು ಅನ್ನುತ್ತದೆಯೇ ಅಥವಾ ಆಕ್ಷೇಪಣೆ ವ್ಯಕ್ತಪಡಿಸುತ್ತದೆಯೇ. ಮಂಗಳವಾರ ನಡೆಯಲಿರುವ ಸಾಮಾನ್ಯ ಸಭೆ ಇಂತಹದ್ದೊಂದು ಅನುಮಾನಗಳ ಮೂಡಿಸಿದೆ. ಜಿಲ್ಲಾ ಉಸ್ತುವಾರಿ ಸಚಿವರು ಹಾಗೂ ಶಾಸಕರ ಸಮ್ಮುಖದಲ್ಲಿ ಅಗಲೀಕರಣದ ವಿಷಯ ಚರ್ಚೆಯಾಗಿದೆಯೇ ವಿನಹ ನಗರಸಭೆ ಮುಂದೆ ಇದುವರೆಗೂ ಈ ವಿಷಯ ಪ್ರಸ್ತಾಪವಾಗಿಲ್ಲ. ನಗರದ ವ್ಯಾಪ್ತಿಯಲ್ಲಿರುವ ರಸ್ತೆಗಳು ನಗರಸಭೆಗೆ ಬರಲಿದ್ದು ಕೌನ್ಸಿಲ್ ಅನುಮತಿ ಇಲ್ಲದೇ ಅಗಲೀಕರಣ ಸಾಧ್ಯವಾ ಎಂಬ ಪ್ರಶ್ನೆಗಳ ಹುಟ್ಟುಹಾಕಿದೆ.

ನಗರಸಭೆ ಅನುಮತಿ ನೀಡದೇ ಅಗಲೀಕರಣ ಪ್ರಸ್ತಾಪಕ್ಕೆ ಬಹುತೇಕ ಸದಸ್ಯರ ವಿರೋಧವಿದೆ. ನಾವ್ಯಾರೂ ಅಗಲೀಕರಣದ ವಿರುದ್ಧ ಇಲ್ಲ. ನಮ್ಮ ಗಮನಕ್ಕೆ ಬಾರದೆ ಸಚಿವರು, ಶಾಸಕರು ತೀರ್ಮಾನ ಕೈಗೊಂಡರೆ ಸ್ತಳೀಯ ಸಂಸ್ಥೆಗಳ ಆಡಳಿತಕ್ಕೆ ಅರ್ಥ ಇಲ್ಲವೇ ಎನ್ನುತ್ತಾರೆ.

ಚಿತ್ರದುರ್ಗ ನಗರ ಸಭೆಯಲ್ಲಿ ಒಕ್ಕೂಟ ಮಾದರಿ ಆಡಳಿತವಿದೆ.ಕಾಂಗ್ರೆಸ್, ಬಿಜೆಪಿ, ಜೆಡಿಎಸ್ ಸದಸ್ಯರು ಸೇರಿದೆ ಆಡಳಿತ ನಡೆಸುತ್ತಿದ್ದಾರೆ. ಮೇಲ್‌ನೋಟಕ್ಕೆ ಶಾಸಕ ವೀರೇಂದ್ರ ಪಪ್ಪಿ ಕೌನ್ಸಿಲ್ ಮೇಲೆ ಹಿಡಿತ ಸಾಧಿಸಿದ್ದಾರೆ ಎಂದು ಹೇಳಲಾಗುತ್ತಿದ್ದರೂ ವಾಸ್ತವದಲ್ಲಿ ಬೇರೆಯದೇ ಸಂಗತಿ ಅಡಗಿದೆ ಎನ್ನಲಾಗಿದೆ. ಕಳೆದ 15 ದಿನಗಳಿಂದ ಶಾಸಕರಿಗೆ ನಗರಸಭೆ ಆಡಳಿತದಲ್ಲಿ ಮೂಗು ತೂರಿಸಲು ಅವಕಾಶ ನೀಡಿಲ್ಲವೆಂಬ ಸಂಗತಿಯ ಹೆಸರು ಹೇಳಲು ಇಚ್ಚಿಸದ ಸದಸ್ಯರು ಪ್ರತಿಕ್ರಿಯಿಸುತ್ತಿದ್ದಾರೆ. ಹಾಗಾಗಿ ಶಾಸಕ ಪಪ್ಪಿ ಮಂಗಳವಾರದ ಸಭೆಯಲ್ಲಿ ಭಾಗವಹಿಸುವದು ಅನುಮಾನ.

ರಸ್ತೆ ಅಗಲೀಕರಣ ವಿಷಯ ಕೌನ್ಸಿಲ್ ನಲ್ಲಿ ಚರ್ಚೆಯಾಗದೆ, ಭೂ ಸ್ವಾಧೀನ ಅಧಿಕಾರಿಯ ನೇಮಕ ಮಾಡಿ ಅವರು ಕಾರ್ಯನಿರ್ವಹಿಸಲು ನಗರಸಭೆಯಲ್ಲಿ ಸ್ಥಳಾವಕಾಶ ಕಲ್ಪಿಸುವ ಸೂಚನೆ ನೀಡಲಾಗಿದೆ. ಕೌನ್ಸಿಲ್ ಅನುಮತಿ ಇಲ್ಲದೆ ಇವೆಲ್ಲ ಹೇಗೆ ಸಾಧ್ಯ, ಅಲ್ಲದೇ ಕಟ್ಟಡಗಳ ಮೇಲೆ ಮಾರ್ಕ್ ಮಾಡಲು ಇವರಿಗೆ ಅನುಮತಿ ಕೊಟ್ಟವರು ಯಾರು ಎಂದು ಕೆಲವು ಸದಸ್ಯರು ಪ್ರಶ್ನಿಸುತ್ತಿದ್ದಾರೆ.

ಏತನ್ಮಧ್ಯೆ ಲೋಕೋಪಯೋಗಿ ಇಲಾಖೆ ಎಂಜಿನಿಯರ್ ಓರ್ವರು ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿಗೆ ಬರೆದ ಪತ್ರದಲ್ಲಿ ಚಿತ್ರದುರ್ಗ ನಗರದಲ್ಲಿ ರಸ್ತೆ ಅಗಲ ಕಡಿಮೆ ಇದ್ದು, ಸ್ದಾಧೀನ ಪಡಿಸಿಕೊಂಡೇ ಅಗಲೀಕರಣ ಮಾಡಬೇಕೆಂಬ ಅಂಶ ದಾಖಲಿರಿಸಿರುವುದೂ ಕೂಡಾ ಮಂಗಳವಾರ ನಡೆಯುವ ಸಾಮಾನ್ಯ ಸಭೆಯಲ್ಲಿ ಚರ್ಚೆಗೆ ಬರುವ ಸಾಧ್ಯತೆಗಳಿವೆ. ನಗರದ ರಸ್ತೆ ಅಗಲೀಕರಣದ ವೇಳೆ ಮರಗಳನ್ನು ಕಡಿಯಲಾಗಿದ್ದು, ನಗರಸಭೆಯವರು ಡಿವೈಡರ್ ಒಳಭಾಗದಲ್ಲಿ ಉತ್ತಮವಾದ ಗಿಡಗಳನ್ನು ಹಾಕಿದ್ದಾರೆ ಎಂಬ ಅಂಶವನ್ನು ಮುಖ್ಯ ಕಾರ್ಯದರ್ಶಿಗಳಿಗೆ ಬರೆದ ಪತ್ರದಲ್ಲಿ ಉಲ್ಲೇಖಿಸಿರುವುದು ಹಲವು ಸದಸ್ಯರ ಆಕ್ರೋಶಕ್ಕೆ ಕಾರಣವಾಗಿದೆ.