ಆನೆಗೊಂದಿ ಉತ್ಸವಕ್ಕೆ ದಿನಗಣನೆ: ವೇದಿಕೆ ನಿರ್ಮಾಣ ಆರಂಭ

| Published : Mar 06 2024, 02:20 AM IST

ಸಾರಾಂಶ

ಆನೆಗೊಂದಿಯ ತಳವಾರ ಘಟ್ಟದ ಮಾರ್ಗದಲ್ಲಿ ಉತ್ಸವಕ್ಕೆ ಈಗಾಗಲೇ ಸ್ಥಳ ಪರಿಶೀಲನೆ ನಡೆಸಿದ್ದು, ಇನ್ನು 6 ದಿನಗಳಲ್ಲಿ ವೇದಿಕೆ ಸಿದ್ಧಗೊಳ್ಳಬೇಕಿದೆ

ರಾಮಮೂರ್ತಿ ನವಲಿ ಗಂಗಾವತಿ

ವಿಜಯನಗರ ಸಾಮ್ರಾಜ್ಯದ ಆಡಳಿತ ಕೇಂದ್ರ, ವಿಜಯನಗರದ ರಾಜಧಾನಿಯಾಗಿದ್ದ ಆನೆಗೊಂದಿ ಉತ್ಸವಕ್ಕೆ ದಿನಗಣನೆ ಪ್ರಾರಂಭವಾಗಿದ್ದು, ತ್ವರಿತಗತಿಯಲ್ಲಿ ವೇದಿಕೆ ಸಿದ್ಧತೆ ನಡೆದಿದೆ. ಈಗಾಗಲೇ ಎರಡು ದಿನಗಳ ಕಾಲ ಸಂಭ್ರಮದಿಂದ ಆಚರಿಸಿದ್ದ ಕನಕಗಿರಿ ಉತ್ಸವ ಬೆನ್ನ ಹಿಂದೆಯೇ ಮಾ. 11,12ರಂದು ಆನೆಗೊಂದಿ ಉತ್ಸವಕ್ಕೆ ಸಿದ್ಧತೆ ಆರಂಭವಾಗಿದೆ.

ವಿಜಯನಗರ ಅರಸರ ಮೊದಲ ರಾಜಧಾನಿ ಆನೆಗೊಂದಿಯನ್ನು ಸರ್ಕಾರ ಕಡೆಗಣಿಸಿದೆ ಎಂಬ ಆರೋಪದ ಹಿನ್ನೆಲೆ ಕನ್ನಡ ಮತ್ತು ಸಂಸ್ಕ್ರತಿ ಇಲಾಖೆ ಸಚಿವ ಶಿವರಾಜ ತಂಗಡಗಿ ಮತ್ತು ಗಂಗಾವತಿ ಶಾಸಕ ಗಾಲಿ ಜನಾರ್ದನ ರೆಡ್ಡಿ ಆನೆಗೊಂದಿ ಉತ್ಸವವನ್ನು ಅದ್ಧೂರಿಯಾಗಿ ಆಚರಿಸುವುದಲ್ಲದೇ ಸರ್ಕಾರದಿಂದ ₹1 ಕೋಟಿ ಅನುದಾನ ಬಿಡುಗಡೆ ಮಾಡಿಸಿದ್ದಾರೆ. ಅಲ್ಲದೆ ಹೆಚ್ಚುವರಿ ಅನುದಾನ ನೀಡುವ ಭರವಸೆ ನೀಡಿದ್ದಾರೆ.

1997 ರಲ್ಲಿ ಉಪಮುಖ್ಯಮಂತ್ರಿಯಾಗಿದ್ದ ದಿ. ಎಂ.ಪಿ.ಪ್ರಕಾಶ ಹಂಪಿ ಉತ್ಸವದ ಜತೆಗೆ ಆನೆಗೊಂದಿ ಉತ್ಸವಕ್ಕೆ ಚಾಲನೆ ನೀಡಿದ್ದರು. ಈ ವೇಳೆ ಕೊಪ್ಪಳ ಸಂಸದರಾಗಿದ್ದ ಎಚ್.ಜಿ. ರಾಮುಲು, ಶಾಸಕ ಶ್ರೀರಂಗದೇವರಾಯಲು ಮುತುವರ್ಜಿ ವಹಿಸಿದ್ದರು. ನಂತರ ಸಚಿವರಾಗಿದ್ದ ಇಕ್ಬಾಲ್ ಅನ್ಸಾರಿ, ಶಾಸಕರಾಗಿದ್ದ ಪರಣ್ಣ ಮುನವಳ್ಳಿ,ವಿಪ ಮಾಜಿ ಸದಸ್ಯ ಎಚ್.ಆರ್. ಶ್ರೀನಾಥ ಆನೆಗೊಂದಿ ಉತ್ಸವಕ್ಕೆ ಮುಂದಾಗಿದ್ದರು.

ತ್ವರಿತಗತಿಯಲ್ಲಿ ವೇದಿಕೆ ಸಿದ್ಧತೆ: ಆನೆಗೊಂದಿಯ ತಳವಾರ ಘಟ್ಟದ ಮಾರ್ಗದಲ್ಲಿ ಉತ್ಸವಕ್ಕೆ ಈಗಾಗಲೇ ಸ್ಥಳ ಪರಿಶೀಲನೆ ನಡೆಸಿದ್ದು, ಇನ್ನು 6 ದಿನಗಳಲ್ಲಿ ವೇದಿಕೆ ಸಿದ್ಧಗೊಳ್ಳಬೇಕಿದೆ. ಕಳೆದ ಎರಡು ದಿನಗಳ ಹಿಂದೆ ಕನಕಗಿರಿ ಉತ್ಸವ ಮುಕ್ತಾಯಗೊಂಡಿದ್ದು, ಅಲ್ಲಿ ಇರುವ ವೇದಿಕೆ ಮತ್ತು ಧ್ವನಿವರ್ಧಕ ಸೇರಿದಂತೆ ಇತರ ಸಾಮಗ್ರಿಗಳನ್ನು ಆನೆಗೊಂದಿಗೆ ಸ್ಥಳಾಂತರಿಸುವ ಆಲೋಚನೆಯಲ್ಲಿದೆ. ಎರಡು ವೇದಿಕೆ ನಿರ್ಮಾಣ ಮಾಡುತ್ತಿದ್ದು, ಹೆಸರಾಂತ ಗಾಯಕರು, ಕಲಾವಿದರು ಸೇರಿದಂತೆ ಸ್ಥಳೀಯ ಕಲಾವಿದರಿಗೂ ಅವಕಾಶ ನೀಡಲು ಜಿಲ್ಲಾಡಳಿತ ನಿರ್ಧಸಿದೆ.

ಕನಕಗಿರಿ ಉತ್ಸವದಲ್ಲಿ ಅವಕಾಶ ವಂಚಿತಗೊಂಡ ಕಲಾವಿದರಿಗೆ ಆನೆಗೊಂದಿ ಉತ್ಸವದಲ್ಲಿ ಅವಕಾಶ ನೀಡಲು ಕನ್ನಡ ಮತ್ತು ಸಂಸ್ಕ್ರತಿ ಇಲಾಖೆ ನಿರ್ಧರಿಸಿದ್ದು, ಉತ್ಸವ ಅಚ್ಚುಕಟ್ಟಾಗಿ ಆಚರಿಸಲು ಸರ್ಕಾರ ಮುಂದಾಗಿದೆ.

ಚುನಾವಣೆ ಭಯ: ಲೋಕಸಭಾ ಚುನಾವಣೆ ಸಮೀಪಿಸುತ್ತಿದ್ದಂತೆ ಆನೆಗೊಂದಿ ಉತ್ಸವಕ್ಕೆ ಭಯ ಉಂಟಾಗಿದೆ. ಒಂದಡೆ ಚುನಾವಣೆ, ಇನ್ನೊಂದಡೆ ಸಮಯದ ಕೊರತೆಯ ಮಧ್ಯ ಉತ್ಸವ ಆಚರಿಸಬೇಕಾಗಿದೆ. ಈಗಾಗಲೇ ಸ್ಥಳೀಯ ಶಾಸಕ ಗಾಲಿ ಜನಾರ್ದನ ರೆಡ್ಡಿ ಉತ್ಸವದ ಸ್ಥಳ ಪರಿಶೀಲನೆ ಮಾಡಿದ್ದಲ್ಲದೇ ತ್ವರಿತಗತಿಯಲ್ಲಿ ಸಿದ್ಧತೆ ಕೈಗೊಳ್ಳಬೇಕು ಎಂದು ವಿವಿಧ ಇಲಾಖೆಯ ಅಧಿಕಾರಿಗಳಿಗೆ ಸೂಚಿಸಿದ್ದಾರೆ.

ಆನೆಗೊಂದಿ ಉತ್ಸವಕ್ಕೆ ದಿನಗಣನೆ ಪ್ರಾರಂಭವಾಗಿದ್ದು, ಲೋಕಸಭಾ ಚುನಾವಣೆ ಘೋಷಣೆಯ ಮುನ್ನ ಆನೆಗೊಂದಿ ಉತ್ಸವ ಪೂರ್ಣಗೊಂಡರೆ ವಿಜಯನಗರ ಗತವೈಭವಕ್ಕೆ ಮೆರಗು ನೀಡಿದಂತಾಗುತ್ತದೆ.

ಆನೆಗೊಂದಿ ಉತ್ಸವ ಆಚರಣೆಗೆ ಭರದ ಸಿದ್ಧತೆ ನಡೆದಿದೆ. ಈಗಾಗಲೇ ಅಧಿಕಾರಿಗಳ ಸಭೆ ಕರೆದು ವಿವಿಧ ಸಮಿತಿ ರಚಿಸುವಂತೆ ಸೂಚಿಸಲಾಗಿದೆ.ಅದ್ಧೂರಿಯಾಗಿ ಉತ್ಸವ ಆಚರಣೆ ಮಾಡಬೇಕೆಂಬ ಉದ್ದೇಶದಿಂದ ಈ ಭಾಗದ ಐತಿಹಾಸಿಕ ಪ್ರದೇಶಗಳ ಇತಿಹಾಸ ತಿಳಿ ಹೇಳುವ ರೂಪಕಗಳನ್ನು ಆಯೋಜಿಸುವಂತೆ ನಿರ್ಧರಿಸಲಾಗಿದೆ ಎಂದು ಗಂಗಾವತಿ ಶಾಸಕ ಗಾಲಿ ಜನಾರ್ದನ ರೆಡ್ಡಿ ಹೇಳಿದರು.