ಸಾರಾಂಶ
ಮರಿಯಮ್ಮನಹಳ್ಳಿ ಹೋಬಳಿ ವ್ಯಾಪ್ತಿಯಲ್ಲಿ ₹27.50 ಕೋಟಿ ವೆಚ್ಚದ ಚೆಕ್ ಡ್ಯಾಂ ಮತ್ತು ಕೆರೆ ನಿರ್ಮಿಸಲು ಟೆಂಡರ್ ಕರೆಯಲಾಗಿದೆ. ಕೆಲವೇ ದಿನಗಳಲ್ಲಿ ಕಾಮಗಾರಿ ಚಾಲನೆ ನೀಡಲಾಗುವುದು.
ಮರಿಯಮ್ಮನಹಳ್ಳಿ: ಅನೇಕ ವರ್ಷಗಳ ಬೇಡಿಕೆಯಾದ ಮರಿಯಮ್ಮನಹಳ್ಳಿಗೆ ತುಂಗಭದ್ರಾ ಜಲಾಶಯದಿಂದ ಶಾಶ್ವತ ಕುಡಿಯುವ ನೀರು ಪೂರೈಸುವ ಕುಡಿಯುವ ನೀರಿನ ಕಾಮಗಾರಿ ಅಮೃತ್- 2 ಟೆಂಡರ್ ಪ್ರಕ್ರಿಯೆ ಮುಗಿದಿದ್ದು, ಶೀಘ್ರದಲ್ಲೇ ಯೋಜನೆಗೆ ಭೂಮಿಪೂಜೆ ನೆರವೇರಿಸಲಾಗುವುದು ಎಂದು ಶಾಸಕ ಕೆ. ನೇಮರಾಜ್ ನಾಯ್ಕ್ ತಿಳಿಸಿದರು.
ಇಲ್ಲಿನ ಮುಖ್ಯರಸ್ತೆಯಲ್ಲಿ 2021- 22ನೇ ಸಾಲಿನ ಜಿಲ್ಲಾ ಖನಿಜ ಪ್ರತಿಷ್ಠಾನ ಯೋಜನೆ ಅನುದಾನದಲ್ಲಿ ನಿರ್ಮಾಣವಾದ ಸಾರ್ವಜನಿಕ ನೂತನ ಗ್ರಂಥಾಲಯ ಕಟ್ಟಡ ಉದ್ಘಾಟಿಸಿ ನಂತರ ಸುದ್ದಿಗಾರರೊಂದಿಗೆ ಮಾತನಾಡಿ, ಪಟ್ಟಣದಲ್ಲಿ ಕುಡಿಯುವ ನೀರಿನ ಸಮಸ್ಯೆ ಇದೆ. ಒಂದು ಬಾರಿ ಪಟ್ಟಣ ಪಂಚಾಯಿತಿ ಅಧಿಕಾರಿಗಳ ಮತ್ತು ನೀರು ಬಿಡುವ ನೀರುಗಂಟಿಗಳ ಸಭೆಯನ್ನು ಕರೆದು ಸಮಸ್ಯೆ ಪರಿಹರಿಸಲು ಸೂಚಿಸಲಾಗಿದೆ ಎಂದರು.ಪಟ್ಟಣ ಹಾಗೂ ಪ್ರತಿಯೊಂದು ಗ್ರಾಮಗಳಲ್ಲಿ ಕುಡಿಯುವ ನೀರಿನ ಬೋರ್‌ವೆಲ್‌ಗಳನ್ನು ಕೊರೆಸಿ ಜನರಿಗೆ ನೀರಿನ ಸಮಸ್ಯೆ ಉಂಟಾಗದಂತೆ ನೋಡಿಕೊಳ್ಳಲಾಗುವುದು ಎಂದರು.
ಮರಿಯಮ್ಮನಹಳ್ಳಿ ಹೋಬಳಿ ವ್ಯಾಪ್ತಿಯಲ್ಲಿ ₹27.50 ಕೋಟಿ ವೆಚ್ಚದ ಚೆಕ್ ಡ್ಯಾಂ ಮತ್ತು ಕೆರೆ ನಿರ್ಮಿಸಲು ಟೆಂಡರ್ ಕರೆಯಲಾಗಿದೆ. ಕೆಲವೇ ದಿನಗಳಲ್ಲಿ ಕಾಮಗಾರಿ ಚಾಲನೆ ನೀಡಲಾಗುವುದು ಎಂದರು.ಸ್ಥಳೀಯ ಮುಖಂಡರಾದ ಗರಗ ಪ್ರಕಾಶ್ ಪೂಜಾರ್, ಗುಂಡಾಸ್ವಾಮಿ, ಕಲ್ಲಾಳ್ ಪರಶುರಾಮಪ್ಪ, ಯು. ವೆಂಕಟೇಶ್, ಎಲೆಗಾರ್ ಮಂಜುನಾಥ, ನಂದೀಶ್, ಎರ್ರಿಸ್ವಾಮಿ, ರುಘುವೀರ್, ಪಿ. ಸೂರ್ಯಬಾಬು, ಪಿ. ಓಬಪ್ಪ, ರಹೀಮ್, ರಾಜಾಭಕ್ಷಿ, ಇಮಾಂ, ಲೋಕೋಪಯೋಗಿ ಇಲಾಖೆಯ ಸಹಾಯಕ ಎಂಜಿನಿಯರ್ ಎಚ್.ಬಿ. ತಿಪ್ಪೇಸ್ವಾಮಿ, ಗುತ್ತಿಗೆದಾರ್ ಅಬ್ದುಲ್ ನಭಿ, ಗ್ರಂಥಪಾಲಕ ಎಚ್. ಸುರೇಶ್ ಸೇರಿದಂತೆ ಇತರರು ಉಪಸ್ಥಿತರಿದ್ದರು.