ಮೋದಿ ಮತ್ತೊಮ್ಮೆ ಪ್ರಧಾನಿ ಆಗಲಿ: ರಾಜಲಕ್ಷ್ಮಿ

| Published : Mar 06 2024, 02:20 AM IST

ಸಾರಾಂಶ

ಪ್ರಧಾನಿ ಮೋದಿಯವರ ನೇತೃತ್ವದಲ್ಲಿ ದೇಶದ ಅಭಿವೃದ್ಧಿಯತ್ತ ಸಾಗುತ್ತಿದ್ದು, ಕಳೆದ ಹತ್ತು ವರ್ಷದಲ್ಲಿ ದೇಶ ಅಮೂಲಾಗ್ರ ಬದಲಾವಣೆ ಕಂಡಿದೆ.

ಹೊಸಪೇಟೆ: ಮತ್ತೊಮ್ಮೆ ನರೇಂದ್ರ ಮೋದಿಯವರು ದೇಶದ ಪ್ರಧಾನಿಯಾಗಲಿ ಎಂಬ ಸಂಕಲ್ಪದೊಂದಿಗೆ ತಮಿಳುನಾಡಿನ ಮಧುರೈಯಿಂದ ದೆಹಲಿಯವರೆಗೆ ಬೈಕ್ ರ‍್ಯಾಲಿ ಮೂಲಕ ಜನಜಾಗೃತಿ ಅಭಿಯಾನ ನಡೆಸುತ್ತಿರುವೆ ಎಂದು ಮೋದಿ ಅಭಿಮಾನಿ ರಾಜಲಕ್ಷ್ಮೀ ಮಂದಾ ತಿಳಿಸಿದರು.

ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ತಮಿಳುನಾಡಿನ ಮಧುರೈಯಿಂದ ಆರಂಭವಾದ ಬೈಕ್ ರ‍್ಯಾಲಿ, ಆಂಧ್ರ, ತೆಲಂಗಾಣದ ಮೂಲಕ ಚಿಕ್ಕಬಳ್ಳಾಪುರದಿಂದ ರಾಜ್ಯ ಪ್ರವಾಸ ಮಾಡಿದೆ. 65 ದಿನಗಳಲ್ಲಿ 26 ಸಾವಿರ ಕಿಮೀನಷ್ಟು ಬೈಕ್ ರ‍್ಯಾಲಿ ನಡೆಸಿ, ಒಟ್ಟು 15 ರಾಜ್ಯಗಳಲ್ಲಿ ಸಂಚಾರ ಮಾಡುವ ಮೂಲಕ ಏ. 18ಕ್ಕೆ ದೆಹಲಿಯಲ್ಲಿ ರ‍್ಯಾಲಿ ಕೊನೆಗೊಳ್ಳಲಿದೆ. ಈವರೆಗೆ 4500 ಕಿಮೀ ಬೈಕ್ ಸಂಚಾರ ಮಾಡಿದೆ. ದಾರಿಯುದಕ್ಕೂ ಹೋದ ಕಡೆ ಮೋದಿಯವರ ಬಗ್ಗೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. 2024ಕ್ಕೆ ಮತ್ತೊಮ್ಮೆ ಮೋದಿಯವರು ಈ ದೇಶದ ಪ್ರಧಾನಿಯಾಗಲಿದ್ದಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಮೋದಿಯವರ ಪರವಾಗಿ ಈಗಾಗಲೇ 1 ಲಕ್ಷ ಕಿಮೀ ಬೈಕ್ ರ‍್ಯಾಲಿ ಮೂಲಕ ಜನಜಾಗೃತಿ ಅಭಿಯಾನ ಮಾಡಿರುವೆ. ಪ್ರಧಾನಿ ಮೋದಿಯವರ ನೇತೃತ್ವದಲ್ಲಿ ದೇಶದ ಅಭಿವೃದ್ಧಿಯತ್ತ ಸಾಗುತ್ತಿದ್ದು, ಕಳೆದ ಹತ್ತು ವರ್ಷದಲ್ಲಿ ದೇಶ ಅಮೂಲಾಗ್ರ ಬದಲಾವಣೆ ಕಂಡಿದೆ. ಇಡೀ ವಿಶ್ವವೇ ಭಾರತದತ್ತ ತಿರುಗಿ ನೋಡುತ್ತಿದೆ. ಮೋದಿಯವರ ಅಭಿಮಾನಿ ಆಗಿರುವ ನಾನು 2024ರಲ್ಲಿ ಅವರು ಪ್ರಧಾನಿಯಾಗಲಿ ಎಂಬುದು ನನ್ನ ಮಹದಾಸೆ. ಹೀಗಾಗಿ ಬೈಕ್ ರ‍್ಯಾಲಿ ಅಭಿಯಾನ ಆರಂಭಿಸಿರುವೆ ಎಂದರು.

ಯುವ ಮೋರ್ಚಾ ಜಿಲ್ಲಾಧ್ಯಕ್ಷ ಕಿಚಿಡಿ ಕೊಟ್ರೋಶ್, ಬಿಜೆಪಿ ಮಂಡಳ ಅಧ್ಯಕ್ಷ ಶಂಕರ್ ಮೇಟಿ, ರೇಖಾರಾಣಿ, ಬಿ.ಜೆ. ಕವಿತಾ, ನೀತಾ ಪಟೇಲ್‌, ಆರ್. ನಾಗರಾಜ ಮತ್ತಿತರರಿದ್ದರು.