ಸಾರಾಂಶ
ಜಿಲ್ಲಾಡಳಿತ ಗಣೇಶನ ಪ್ರತಿಷ್ಠಾಪನೆ ಹಾಗೂ ವಿಸರ್ಜನೆ ಮೆರವಣಿಗೆಯಲ್ಲಿ ಡಿಜೆ ಬಳಸದಂತೆ ನಿಷೇಧ ಹೇರಿದೆ. ಇದನ್ನು ಲೆಕ್ಕಿಸದೆ ಸಾರ್ವಜನಿಕ ಗಣೇಶ ಪ್ರತಿಷ್ಠಾಪಿಸುವ ಮಂಡಳಗಳು ಡಿಜೆ ಬುಕ್ ಮಾಡಿವೆ. ಇದಕ್ಕೆ ಸುಮಾರು ₹ 2 ಲಕ್ಷವನ್ನು ವ್ಯಯಿಸುತ್ತಿವೆ.
ಕೊಪ್ಪಳ:
ನಗರ ಸೇರಿದಂತೆ ಜಿಲ್ಲಾದ್ಯಂತ ವಿಘ್ನ ನಿವಾರಕನ ಆಗಮನಕ್ಕೆ ಕ್ಷಣಗಣನೆ ಶುರುವಾಗಿದ್ದು, ಶುಕ್ರವಾರ ಮಾರುಕಟ್ಟೆಯಲ್ಲಿ ಹಬ್ಬಕ್ಕೆ ಬೇಕಾದ ವಸ್ತುಗಳನ್ನು ಖರೀದಿಸಲು ಜನರು ಮುಗಿಬಿದ್ದರು. ಇದರಿಂದ ಭರ್ಜರಿ ವ್ಯಾಪಾರ ನಡೆದಿದ್ದು ವ್ಯಾಪಾಸ್ಥರು ಖುಷ್ ಆದರು.ಬೇಡಿಕೆಗೆ ತಕ್ಕಂತೆ ಹಣ್ಣು, ಹೂವು, ಬಾಳೆಗಿಡ ಸೇರಿದಂತೆ ವಿವಿಧ ಅಲಂಕಾರಿಕ ವಸ್ತುಗಳ ಬೆಲೆಯೂ ಏರಿತ್ತು. ಆದರೂ, ಜನರು ಖರೀದಿಯಲ್ಲಿ ಸಂತಸದಿಂದ ತೊಡಗಿದ್ದು ಮಾರುಕಟ್ಟೆಗೆ ಕಳೆ ಬಂದಿತ್ತು.ಗಣೇಶ ಮೂರ್ತಿಗೆ ಬೇಡಿಕೆ:
ಹಿಡಿ ಗಾತ್ರದಿಂದ ಹಿಡಿದು 10, 20 ಅಡಿ ಗಣೇಶ ಮೂರ್ತಿಗಳಿಗೆ ನಗರದಲ್ಲಿ ಡಿಮ್ಯಾಂಡ್ ಬಂದಿದೆ. ಹೀಗಾಗಿ ಶುಕ್ರವಾರವೇ ಕೆಲವರು ತಮಗೆ ಬೇಕಾದ ವಿವಿಧ ಶೈಲಿಯ ಗಣೇಶ ಮೂರ್ತಿಗಳನ್ನು ತೆಗೆದುಕೊಂಡು ಹೋಗುತ್ತಿರುವ ದೃಶ್ಯಗಳು ಕಂಡು ಬಂದವು. ನಗರಕ್ಕೆ ಗ್ರಾಮೀಣ ಪ್ರದೇಶದ ಜನರು ಆಗಮಿಸಿ ವಕ್ರತುಂಡನನ್ನು ತೆಗೆದುಕೊಂಡು ಹೋದರು. ವರ್ಷದಿಂದ ವರ್ಷಕ್ಕೆ ಸಾರ್ವಜನಿಕ ಗಣೇಶ ಮೂರ್ತಿಗಳ ಸಂಖ್ಯೆಯೂ ಹೆಚ್ಚಾಗಿದ್ದು ಈ ಬಾರಿ ಮೂರ್ತಿ ಕಲಾವಿದರಿಗೆ ಭರ್ಜರಿ ಆದಾಯ ಬಂದಿದೆ.ಸಿದ್ಧತೆ:
ಸಾರ್ವಜನಿಕರ ಗಣೇಶ ಪ್ರತಿಷ್ಠಾಪಿಸುವ ಮಂಡಳಿಗಳು ಈಗಾಗಲೇ ವಿವಿಧ ಕಲಾಕೃತಿಯಲ್ಲಿ ಮಂಟಪಗಳನ್ನು ಸಿದ್ಧಪಡಿಸಿದ್ದು, ಒಂದಕ್ಕಿಂತ ಒಂದು ವಿಭಿನ್ನವಾಗಿದೆ. ಮಂಟಪಗಳಿಗೆ ವಿವಿಧ ಬಣ್ಣದ ವಿದ್ಯುತ್ ದೀಪಾಲಂಕಾರ ಮಾಡಿದ್ದು ನೋಡುಗರನ್ನು ಸೆಳೆಯುತ್ತಿವೆ. 1ನೇ ದಿನದಿಂದ 21 ದಿನಗಳ ವರೆಗೂ ಗಣೇಶ ಪ್ರತಿಷ್ಠಾಪಿಸಲಾಗುತ್ತಿದೆ.ಡಿಜೆ ನಿಷೇಧವಿದ್ದರೂ ಬುಕ್ಕಿಂಗ್:
ಜಿಲ್ಲಾಡಳಿತ ಗಣೇಶನ ಪ್ರತಿಷ್ಠಾಪನೆ ಹಾಗೂ ವಿಸರ್ಜನೆ ಮೆರವಣಿಗೆಯಲ್ಲಿ ಡಿಜೆ ಬಳಸದಂತೆ ನಿಷೇಧ ಹೇರಿದೆ. ಇದನ್ನು ಲೆಕ್ಕಿಸದೆ ಸಾರ್ವಜನಿಕ ಗಣೇಶ ಪ್ರತಿಷ್ಠಾಪಿಸುವ ಮಂಡಳಗಳು ಡಿಜೆ ಬುಕ್ ಮಾಡಿವೆ. ಇದಕ್ಕೆ ಸುಮಾರು ₹ 2 ಲಕ್ಷವನ್ನು ವ್ಯಯಿಸುತ್ತಿವೆ. ಕೊಪ್ಪಳ ಜಿಲ್ಲೆಯೊಂದರಲ್ಲಿಯೇ ನೂರಾರು ಡಿಜೆಗಳನ್ನು ಬುಕ್ ಮಾಡಲಾಗಿದೆ. ಜಿಲ್ಲಾಡಳಿತ ಮತ್ತು ಪೊಲೀಸ್ ಇಲಾಖೆ ಪ್ರತಿ ವರ್ಷವೂ ಡಿಜೆ ನಿಷೇಧಿಸಿ ಆದೇಶಿಸಿದರೂ ಡಿಜೆ ಅಬ್ಬರ ಇದ್ದೇ ಇರುತ್ತದೆ.ಹೀಗಾಗಿ ಈ ಬಾರಿಯೂ ಡಿಜೆ ದೊಡ್ಡ ಸಂಖ್ಯೆಯಲ್ಲಿ ಡಿಜೆ ಬುಕ್ ಆಗಿರುವುದು ಗುಟ್ಟಾಗಿ ಉಳಿದಿಲ್ಲ.