ನಾಳೆಯಿಂದ ಆರಂಭ । ಆಧುನಿಕ ಯುಗದಲ್ಲೂ ವಿಶಿಷ್ಟ ಬುಡಕಟ್ಟು ಸಂಸ್ಕೃತಿ ಜೀವಂತ
ಜಡೇಕುಂಟೆ ಮಂಜುನಾಥ್
ಕನ್ನಡಪ್ರಭ ವಾರ್ತೆ ಚಳ್ಳಕೆರೆಆಧುನಿಕತೆಯ ಆಕರ್ಷಣೆ ಎಷ್ಟೇ ಇದ್ದರೂ, ಗ್ರಾಮೀಣ ಭಾರತದ ಬುಡಕಟ್ಟು ಸಂಸ್ಕೃತಿ ಮತ್ತು ಆಚರಣೆಗಳು ಇಂದಿಗೂ ತನ್ನದೇ ಆದ ವಿಶಿಷ್ಟತೆಯಿಂದ ಜೀವಂತವಾಗಿವೆ. ಇದಕ್ಕೆ ಸಾಕ್ಷಿ ಎಂಬಂತೆ ಚಿತ್ರದುರ್ಗ ಜಿಲ್ಲೆಯ ಚಳ್ಳಕೆರೆ ತಾಲೂಕಿನ ಗೌರಸಮುದ್ರ ಗ್ರಾಮದಲ್ಲಿ ಬುಡಕಟ್ಟು ಜನರ ಆರಾಧ್ಯ ದೇವತೆ ಶ್ರೀ ಮಾರಮ್ಮ ದೇವಿಯ ಬೃಹತ್ ಜಾತ್ರೆಗೆ ದಿನಗಣನೆ ಆರಂಭವಾಗಿದೆ. ಸೆ.15ರಂದು ನಡೆಯಲಿರುವ ಈ ಐತಿಹಾಸಿಕ ಜಾತ್ರೆಗೂ ಮುನ್ನ ಗ್ರಾಮದಲ್ಲಿ ನಡೆಯುವ ಕಟ್ಟುನಿಟ್ಟಿನ ಆಚರಣೆಗಳು ಇಂದಿನ ಜನರನ್ನು ಹುಬ್ಬೇರಿಸುವಂತೆ ಮಾಡುತ್ತವೆ.
ಎಂಟು ದಿನಗಳ ಕಾಲ ಸ್ನಾನ-ಕಟಿಂಗ್ ಇಲ್ಲ:ಜಾತ್ರೆ ಆರಂಭಕ್ಕೂ ಮುನ್ನ ಗ್ರಾಮದ ಜನರು ಪಾಲಿಸುವ ನಿಯಮಗಳು ಅತ್ಯಂತ ವಿಶಿಷ್ಟವಾದವು. ಜಾತ್ರೆಯ ಮುನ್ನಾದಿನಗಳಲ್ಲಿ ಸತತ 8 ದಿನಗಳ ಕಾಲ ಗ್ರಾಮಸ್ಥರು ಸ್ನಾನ ಮಾಡುವುದಿಲ್ಲ ಮತ್ತು ಬಟ್ಟೆಯನ್ನೂ ಬದಲಿಸುವುದಿಲ್ಲ. ಪುರುಷರು ಕಟಿಂಗ್ ಅಥವಾ ಶೇವಿಂಗ್ ಮಾಡಿಸುವಂತಿಲ್ಲ. ಇಷ್ಟೇ ಅಲ್ಲದೆ, ಮನೆಗಳಲ್ಲಿ ಕಾವಲಿ ಇಟ್ಟು ರೊಟ್ಟಿ, ಚಪಾತಿ ಅಥವಾ ದೋಸೆ ಸುಡುವಂತಿಲ್ಲ ಹಾಗೂ ಮಾಂಸಾಹಾರ ಸೇವನೆಯನ್ನು ಸಂಪೂರ್ಣವಾಗಿ ನಿಷೇಧಿಸಲಾಗಿರುತ್ತದೆ.
ದೇಗುಲದಲ್ಲಿ ಗಂಟೆ ಬಾರಿಸುವಂತಿಲ್ಲ,ಮಂಗಳಾರತಿಯೂ ಇಲ್ಲ:ಸಾಮಾನ್ಯವಾಗಿ ಹಬ್ಬ ಹರಿದಿನಗಳಲ್ಲಿ ದೇವಸ್ಥಾನಗಳಲ್ಲಿ ಭಜನೆ, ಗಂಟೆ ನಾದ ಮೊಳಗುತ್ತದೆ. ಆದರೆ ಗೌರಸಮುದ್ರದಲ್ಲಿ ಜಾತ್ರೆಗೆ ಮುನ್ನ ಉಲ್ಟಾ ಆಚರಣೆ ಇರುತ್ತದೆ. ಇಲ್ಲಿನ ಶ್ರೀ ಮಾರಮ್ಮ ದೇವಿಯ ದೇವಸ್ಥಾನದಲ್ಲಿ ಗಂಟೆ ಬಾರಿಸುವಂತಿಲ್ಲ ಮತ್ತು ಮಂಗಳಾರತಿ ಮಾಡುವಂತಿಲ್ಲ ಎಂಬ ಕಟ್ಟುನಿಟ್ಟಿನ ನಿಯಮವಿದೆ. ಗ್ರಾಮದ ಸಾರು ಕಟ್ಟೆ ಸಮೀಪ ಹಿರಿಯರೆಲ್ಲಾ ಸೇರಿ ಜಾತ್ರೆ ಸಾರು ಅಂದರೆ ದಿನಾಂಕ ಘೋಷಣೆ ಮಾಡುವುದು. ಇಂತಹ ದಿನದಿಂದಲೇ ಈ ಎಲ್ಲಾ ಕಟ್ಟುಪಾಡುಗಳು ಜಾರಿಗೆ ಬರುತ್ತವೆ. ಗ್ರಾಮದ ಪ್ರಮುಖ ಬೀದಿಗಳಲ್ಲಿ ತಮಟೆ ಬಾರಿಸುವ ಮೂಲಕ ಜಾತ್ರೆಯ ಸಂದೇಶವನ್ನು ಸಾರಲಾಗುತ್ತದೆ.
ಸಾರು ಆಚರಣೆಯ ಐತಿಹ್ಯವೇನು?:ಈ ವಿಶಿಷ್ಟ ಸಂಪ್ರದಾಯದ ಹಿಂದೆ ಒಂದು ಬಲವಾದ ನಂಬಿಕೆಯಿದೆ. ಪ್ರತಿವರ್ಷ ಜಾತ್ರೆ ಮುಗಿದ ಬಳಿಕ ಶ್ರೀ ಮಾರಿ ಮಹೇಶ್ವರಿ ದೇವಿಯು ವಿಶ್ವ ಪರ್ಯಟನೆಗೆ ಹೊರಡುತ್ತಾಳೆ. ನಂತರ ಸಾರು ಹಾಕುವ ದಿನವೇ ಆಕೆ ಮರಳಿ ಗ್ರಾಮಕ್ಕೆ ಬಂದು ನೆಲೆಸುತ್ತಾಳೆ ಎಂಬುದು ಇಲ್ಲಿನ ಭಕ್ತರ ನಂಬಿಕೆ. ಹೀಗೆ ಗ್ರಾಮಕ್ಕೆ ಬರುವ ದೇವಿಯನ್ನು ಬರಮಾಡಿಕೊಳ್ಳಲು ಭಕ್ತರು ಈ ಕಠಿಣ ವ್ರತವನ್ನು ಆಚರಿಸುತ್ತಾರೆ. ಇದರಿಂದ ಮಕ್ಕಳಿಗೆ ಸಿಡುಬು, ದಡಾರದಂತಹ ಸಾಂಕ್ರಾಮಿಕ ರೋಗಗಳು ಹರಡುವುದಿಲ್ಲ ಮತ್ತು ಈ ಭಾಗದಲ್ಲಿ ಉತ್ತಮ ಮಳೆ-ಬೆಳೆಯಾಗುತ್ತದೆ ಎಂಬುದು ಜನರ ಅಚಲ ನಂಬಿಕೆ.
ಗಡಿಗ್ರಾಮಗಳಲ್ಲಿ ಹಬ್ಬದ ಸಡಗರ:ಆಂಧ್ರಪ್ರದೇಶದ ಗಡಿಯಂಚಿನಲ್ಲಿರುವ ಗೌರಸಮುದ್ರ ಮಾತ್ರವಲ್ಲದೆ ಸುತ್ತಮುತ್ತಲಿನ ಕೋನಸಾಗರ, ಓಬಣ್ಣನಹಳ್ಳಿ, ಹನುಮಂತನಹಳ್ಳಿ ಸೇರಿದಂತೆ ವಿವಿಧ ಗ್ರಾಮಗಳಲ್ಲೂ ಭಕ್ತರು ಇದೇ ಸಂಪ್ರದಾಯವನ್ನು ಅತ್ಯಂತ ಭಕ್ತಿಭಾವದಿಂದ ಪಾಲಿಸುತ್ತಾರೆ. ಪ್ರತಿವರ್ಷ ಭಾದ್ರಪದ ಮಾಸದ ಮೊದಲ ಮಂಗಳವಾರ ನಡೆಯುವ ಈ ಬೃಹತ್ ಜಾತ್ರೆಗೆ ಕರ್ನಾಟಕ ಮಾತ್ರವಲ್ಲದೆ ನೆರೆಯ ಆಂಧ್ರಪ್ರದೇಶ, ತೆಲಂಗಾಣ ಮುಂತಾದ ರಾಜ್ಯಗಳಿಂದಲೂ ಸಾವಿರಾರು ಜನ ಸಾಗರವೇ ಹರಿದು ಬರುತ್ತದೆ.
ಚಿತ್ರದುರ್ಗ ಜಿಲ್ಲೆಯು ಬುಡಕಟ್ಟು ಸಂಸ್ಕೃತಿ ಮತ್ತು ಅಪರೂಪದ ಆಚರಣೆಗಳ ತವರೂರು ಎಂಬುದಕ್ಕೆ ಗೌರಸಮುದ್ರದ ಮಾರಮ್ಮನ ಹಬ್ಬವೇ ಸಾಕ್ಷಿ. ಸದ್ಯ ಸೆ.15ರ ಜಾತ್ರೆಗೆ ಜಿಲ್ಲಾಡಳಿತ ಹಾಗೂ ದೇವಸ್ಥಾನ ಸಮಿತಿ ಸಕಲ ಸಿದ್ಧತೆಗಳನ್ನು ಮಾಡಿಕೊಳ್ಳುತ್ತಿದ್ದು, ಭಕ್ತರು ಈ ಅಪರೂಪದ ಬುಡಕಟ್ಟು ಸಂಸ್ಕೃತಿಯನ್ನು ಇಂದಿಗೂ ಜೀವಂತವಾಗಿಟ್ಟಿರುವುದು ವಿಶೇಷ.ಮಧ್ಯಾಹ್ನದ ಮಾರಿ:
ಗೌರಸಮುದ್ರ ಮಾರಮ್ಮನ ಜಾತ್ರೆಯನ್ನು ಮಧ್ಯಾಹ್ನದ ಮಾರಿ ಎಂತಲೂ ಕರೆಯುವುದು ಪರಂಪರೆಯಿಂದಲೂ ನಡೆದುಕೊಂಡು ಬಂದಿದೆ. ತುಮುಲು ಪ್ರದೇಶದಲ್ಲಿ ಮಧ್ಯಾಹ್ನದ ಹೊತ್ತಿಗೆ ಯಾರೊಬ್ಬರೂ ಇಲ್ಲಿರುವುದಿಲ್ಲ. ಆದ್ದರಿಂದಲೇ ಇಲ್ಲಿ ಮಧ್ಯಾಹ್ನದ ಹೊತ್ತಿಗೆ ಯಾರೊಬ್ಬರೂ ಇಲ್ಲಿರುವುದಿಲ್ಲ. ಇಲ್ಲಿ ಹರಕೆ ಹೊತ್ತ ಭಕ್ತರು ವಿಶಿಷ್ಟ ಆಚರಣೆಗಳನ್ನು ಇಲ್ಲಿ ನೆರವೇರಿಸುತ್ತಾರೆ. ಬೇವಿನುಡುಗೆ ಸೇರಿದಂತೆ, ಕೋಳಿ, ಬಾಳೆಹಣ್ಣು, ದವಸ ಧಾನ್ಯಗಳನ್ನು ಸೂರುವ ಮೂಲಕ ಹರಕೆ ತೀರಿಸುವ ಪದ್ಧತಿ ಇಲ್ಲಿನ ಜನಪದರಲ್ಲಿ ಪರಂಪರೆಯಿಂದಲೂ ನಡೆದುಕೊಂಡು ಬಂದಿದೆ. ಬಯಲುಸೀಮೆ ಚಳ್ಳಕೆರೆಯ ಗೌರಸಮುದ್ರ ಮಾರಮ್ಮನ ಜಾತ್ರೆ ಆರಂಭವಾದ ದಿನದಿಂದಲೂ ಸುತ್ತಮುತ್ತಲ ಗ್ರಾಮಗಳಲ್ಲಿ ಒಂದು ತಿಂಗಳ ಕಾಲ ಪ್ರತೀ ಮಂಗಳವಾರ ಮಾರಮ್ಮನ ಜಾತ್ರೆ ಮಾಡುತ್ತಾ ಬಂದಿರುವುದು ಇಂದಿಗೂ ವಿಶಿಷ್ಟವಾಗಿ ಕಂಡುಬರುತ್ತಿದೆ.