ಕಲಿಯುಗದ ಕಾಮಧೇನು ರಾಮಲಿಂಗ ಕಾಮಣ್ಣನ ಪ್ರತಿಷ್ಠಾಪನೆಗೆ ಕ್ಷಣಗಣನೆ

| Published : Mar 20 2024, 01:18 AM IST

ಕಲಿಯುಗದ ಕಾಮಧೇನು ರಾಮಲಿಂಗ ಕಾಮಣ್ಣನ ಪ್ರತಿಷ್ಠಾಪನೆಗೆ ಕ್ಷಣಗಣನೆ
Share this Article
  • FB
  • TW
  • Linkdin
  • Email

ಸಾರಾಂಶ

ಬೇಡಿದ ವರ ನೀಡುವ ಕಾಮಣ್ಣ ಎಂದೇ ಪ್ರಸಿದ್ಧಿ ಪಡೆದಿರುವ ನವಲಗುಂದದ ರಾಮಲಿಂಗ ಕಾಮಣ್ಣನ ಪ್ರತಿಷ್ಠಾಪನೆಗೆ ಕ್ಷಣಗಣನೆ ಶುರುವಾಗಿದೆ.

ಈಶ್ವರ ಜಿ ಲಕ್ಕುಂಡಿ

ನವಲಗುಂದ:

ಬೇಡಿದ ವರ ನೀಡುವ ಕಾಮಣ್ಣ ಎಂದೇ ಪ್ರಸಿದ್ಧಿ ಪಡೆದಿರುವ ನವಲಗುಂದದ ರಾಮಲಿಂಗ ಕಾಮಣ್ಣನ ಪ್ರತಿಷ್ಠಾಪನೆಗೆ ಕ್ಷಣಗಣನೆ ಶುರುವಾಗಿದೆ. ಇದಕ್ಕೆ ಪಟ್ಟಣದಲ್ಲಿ ಭರದ ಸಿದ್ಧತೆ ನಡೆಯುತ್ತಿದ್ದು ಹಬ್ಬದ ವಾತಾವರಣ ಸೃಷ್ಟಿಯಾಗಿದೆ. ಒಟ್ಟು ಐದು ದಿನ ಕಾಮಣ್ಣನ ಹಬ್ಬ ನಡೆಯಲಿದೆ.ಹೋಳಿ ಹುಣ್ಣಿಮೆ ನಿಮಿತ್ತ ಪಟ್ಟಣದ ಆರಾಧ್ಯ ದೈವ, ಕಲಿಯುಗದ ಕಾಮಧೇನು ಎಂದೇ ಖ್ಯಾತಿ ಪಡೆದ ರಾಮಲಿಂಗ ಕಾಮಣ್ಣನನ್ನು ಪ್ರತಿವರ್ಷದಂತೆ ಈ ವರ್ಷವು ಏಕಾದಶಿಯಂದು ಪ್ರತಿಷ್ಠಾಪಿಸಲಾಗುತ್ತದೆ. ಪಟ್ಟಣದ ರೈತರ ಓಣಿ, ಸಿದ್ದಾಪುರ ಓಣಿ, ತೆಗ್ಗಿನಕೇರಿ ಓಣಿ, ಗೌಡರ ಓಣಿ, ಭೋವಿ ಓಣಿ, ಅಕ್ಕಿ ಓಣಿ, ಮಂಜುನಾಥ ಓಣಿ, ದೇಸಾಯಿ ಪೇಟೆ, ಲಿಂಗರಾಜ ವಾಡೆ, ಹಳ್ಳದವರ ಓಣಿ, ಮಾದರ ಓಣಿ, ಅಂಬೇಡ್ಕರ್‌ ಓಣಿ ಸೇರಿದಂತೆ ೧೪ ಕಡೆ ವೈಶಿಷ್ಟ್ಯವಾಗಿ ಕಾಮಣ್ಣನನ್ನು ಪ್ರತಿಷ್ಠಾಪಿಸಲಾಗುತ್ತದೆ.ಮಾ. ೨೦ರ ಏಕಾದಶಿಯಂದು ರಾತ್ರಿ ಪೂಜೆಯೊಂದಿಗೆ ಕಾಮದೇವರ ಪ್ರತಿಷ್ಠಾಪಿಸಲಾಗುತ್ತದೆ. ದ್ವಾದಶಿ ದಿನವಾದ ಮಾ. ೨೧ರಂದು ಬೆಳಗ್ಗೆ ಕಾಮದೇವರ ದರ್ಶನ ಪಡೆಯಲು ಭಕ್ತರಿಗೆ ಅವಕಾಶ ನೀಡಲಾಗಿದೆ. ಮಾ. ೨೫ರಂದು ಹೋಳಿ ಹುಣ್ಣಿಮೆ ಇದ್ದು, ಮಾ. ೨೬ರಂದು ಓಕುಳಿ(ಬಣ್ಣದಾಟ) ನಡೆಯಲಿದೆ. ಅದೇ ದಿನ ಸಂಜೆ ಪಟ್ಟಣದ ಪ್ರಮುಖ ಬೀದಿಗಳಲ್ಲಿ ಸಕಲ ಓಣಿಗಳ ಕಾಮಣ್ಣ ದೇವರುಗಳ ಮೆರವಣಿಗೆ ನಡೆಯುತ್ತದೆ. ನಂತರ ಮೆರವಣಿಗೆ ಮುಗಿಸಿಕೊಂಡು ತಮ್ಮ ತಮ್ಮ ಪ್ರತಿಷ್ಠಾಪನೆಗೊಂಡಿದ್ದ ಸ್ಥಳಗಳಿಗೆ ಹೋಗಿ ೧೪ ಕಾಮಣ್ಣಗಳನ್ನು ದಹಿಸಲಾಗುತ್ತದೆ. ಈ ಮೂಲಕ ಹೋಳಿ ಹುಣ್ಣಿಮೆ ಹಬ್ಬದ ಆಚರಣೆ ಮುಕ್ತಾಯಗೊಳ್ಳುತ್ತದೆ. ಇನ್ನು ರಾಮಲಿಂಗ ಕಾಮಣ್ಣನು ತಡರಾತ್ರಿವರೆಗೆ ಮೆರವಣಿಗೆ ನಡೆಯುವುದರಿಂದ ಬೆಳಗಿನ ಜಾವ ದಹನವಾಗುತ್ತದೆ.ಹರಕೆ ಹೊತ್ತ ಸಾರ್ವಜನಿಕರು ಉಪವಾಸ ಇರುವುದು ಹಾಗೂ ರಾಮಲಿಂಗನ ದರ್ಶನಕ್ಕೆ ಬಂದ ಭಕ್ತರಿಗೆ ತಮ್ಮ ಕೈಲಾದಷ್ಟು ಉಪಹಾರ, ಹಣ್ಣ-ಹಂಪಲು, ನೀರು ಮತ್ತು ತಂಪು ಪಾನೀಯ ನೀಡುವ ಮೂಲಕ ಪಟ್ಟಣದ ಜನರು ಕಾಮದೇವರಿಗೆ ಹರಕೆಯ ರೂಪದಲ್ಲಿ ಸೇವೆ ಸಲ್ಲಿಸುತ್ತಾರೆ. ಹೋಳಿ ಹುಣ್ಣಿಮೆ ಹಿನ್ನೆಲೆ ೫ ದಿನಗಳ ಕಾಲ ಪಟ್ಟಣದಲ್ಲಿ ಹಬ್ಬದ ವಾತಾವರಣ ಇರುತ್ತದೆ. ರಾಮಲಿಂಗ ಕಾಮಣ್ಣನ ದರ್ಶನಕ್ಕೆ ಕೇವಲ ಸ್ಥಳೀಯರು ಮಾತ್ರವಲ್ಲದೇ ಅಕ್ಕಪಕ್ಕದ ತಾಲೂಕು, ವಿವಿಧ ಜಿಲ್ಲೆ ಹಾಗೂ ಹೊರ ರಾಜ್ಯಗಳಿಂದಲೂ ಭಕ್ತರು ಆಗಮಿಸುತ್ತಾರೆ. ಈ ಬಾರಿ ಒಂದು ಲಕ್ಷಕ್ಕೂ ಅಧಿಕ ಭಕ್ತರು ಬರುವ ನಿರೀಕ್ಷೆಯಲ್ಲಿದೆ ಎಂಬುದು ವಿಶೇಷವಾಗಿದೆ.

ಬೇಡಿದ ವರ ನೀಡುವ ಕಾಮಣ್ಣ

ಮಹಿಮಾ ಪುರುಷ ರಾಮಲಿಂಗ ಕಾಮಣ್ಣ ಹುಟ್ಟುವಿಕೆಗೆ ಗಿಡಮೂಲಿಕೆಗಳ ಅಗತ್ಯವಿತ್ತು. ಇನ್ನು ಮೂರ್ತಿ ತಯಾರಕ ವಿಶಿಷ್ಠವಾದ ಮೂರ್ತಿ ರಚಿಸಬೇಕೆಂದು ೧೦೧ ಗಿಡಮೂಲಿಕೆಗಳನ್ನು ಕಲೆ ಹಾಕಲು ಮುಂದಾದ. ಅವುಗಳಲ್ಲಿ ೧೦೦ ಗಿಡಮೂಲಿಕೆಗಳು ಲಭ್ಯವಾದವು. ಆದರೆ ಇನ್ನೊಂದು ಗಿಡಮೂಲಿಕೆ ಸಿಗುವ ಮೊದಲೆ ಮೂರ್ತಿ ತಯಾರಕ ನಿಧನ ಹೊಂದುತ್ತಾನೆ. ಹೀಗಾಗಿ ಆ ಮೂರ್ತಿಗೆ ಇನ್ನೊಂದು ಗಿಡಮೂಲಿಕೆಯನ್ನು ಜೋಡಣೆಗಾಗಿ ಎರಡು ರಂಧ್ರ ಬಿಟ್ಟಿದ್ದನು. ಆ ರಂಧ್ರಗಳು ಈಗಲೂ ಕಾಮಣ್ಣನ ಹಿಂಭಾಗದಲ್ಲಿವೆ. ಗಿಡಮೂಲಿಕೆಗಳು ಸಂಪೂರ್ಣವಾಗಿ ದೊರಕಿದ್ದರೆ ರಾಮಲಿಂಗ ಕಾಮಣ್ಣನು ಹುಟ್ಟಿ ಬರುತ್ತಿದ್ದ ಎಂಬ ಪ್ರತೀತಿ ಈಗಲೂ ಇದೆ. ಈ ಮೂರ್ತಿಯನ್ನು ಸವಣೂರಿನಿಂದ ನವಲಗುಂದಕ್ಕೆ ಅನಾಮಿಕರು ತಂದರು ಎನ್ನಲಾಗುತ್ತಿದೆ. ಆದರೆ, ಆ ಬಗ್ಗೆ ಇದುವರೆಗೂ ನಿಖರವಾದ ಸ್ಪಷ್ಟತೆಯಿಲ್ಲ. ಆದರೆ, ಮೂರ್ತಿಯ ಪವಾಡಗಳಿಂದ ಪಟ್ಟಣದ ಜನತೆ ಹಾಗೂ ಬಂದ ಭಕ್ತರಿಗೆ ಬೇಡಿದ ವರ ನೀಡಿ ಕಾಮಣ್ಣನು ಕಾಯುತ್ತಿದ್ದಾನೆ.

ಹರಕೆಗಳು:ಕಂಕಣಕ್ಕೆ-ಬಾಸಿಂಗ, ಸಂತಾನಕ್ಕೆ-ತೊಟ್ಟಿಲು, ಗಂಡು ಸಂತಾನಕ್ಕೆ-ಮೀಸೆ ಮತ್ತು ಲಿಂಗದಕಾಯಿ(ಗುಂಡಗಡಗಿ), ಆರೋಗ್ಯಕ್ಕೆ-ಕುದುರೆ, ಮನೆ ಮತ್ತು ಏಳಿಗೆಗೆ-ಛತ್ರಿ, ಉದ್ಯೋಗಕ್ಕೆ-ಪಾದ, ವಿದ್ಯಾಭ್ಯಾಸ ಮತ್ತು ಆಶೀರ್ವಾದಕ್ಕೆ-ಹಸ್ತವನ್ನು ಭಕ್ತರು ಪಡೆದುಕೊಳ್ಳುತ್ತಾರೆ. ಭಕ್ತರು ಬೇಡಿಕೊಂಡ ಹರಕೆ ಈಡೇರಿದ ಮೇಲೆ ಅದೇ ತರಹದ ಮತ್ತೊಂದು ವಸ್ತುವನ್ನು ಕಾಮಣ್ಣನಿಗೆ ಮರಳಿಸುವ ಮೂಲಕ ಭಕ್ತರು ತಮ್ಮ ಹರಕೆ ತೀರಿಸುತ್ತಾರೆ. ಈ ಸಂಪ್ರದಾಯ ಹಲವು ದಶಕಗಳಿಂದ ನಡೆದುಕೊಂಡು ಬಂದಿದೆ.