ಕೊಪ್ಪಳ ತಾಲೂಕಿನ ಹ್ಯಾಟಿ-ಮುಂಡರಗಿ ಗ್ರಾಮದಲ್ಲಿ ನಡೆದ ಗಲಾಟೆ ಪ್ರಕರಣ ಇದೀಗ ರಾಜಕೀಯ ಸಂಘರ್ಷದ ಸ್ವರೂಪ ಪಡೆದುಕೊಂಡಿದೆ. ಒಂದು ಗುಂಪಿನ 12 ಜನರ ವಿರುದ್ಧ ಜಾತಿ ನಿಂದನೆ ಪ್ರಕರಣ ದಾಖಲಾಗಿದ್ದರೆ, ಮತ್ತೊಂದು ಗುಂಪಿನ ಎಂಟು ಜನರ ವಿರುದ್ಧ ಶುಕ್ರವಾರ ತಡರಾತ್ರಿ ಪ್ರತಿದೂರು ದಾಖಲಾಗಿದೆ.

ಕೊಪ್ಪಳ: ಕೊಪ್ಪಳ ತಾಲೂಕಿನ ಹ್ಯಾಟಿ-ಮುಂಡರಗಿ ಗ್ರಾಮದಲ್ಲಿ ನಡೆದ ಗಲಾಟೆ ಪ್ರಕರಣ ಇದೀಗ ರಾಜಕೀಯ ಸಂಘರ್ಷದ ಸ್ವರೂಪ ಪಡೆದುಕೊಂಡಿದೆ. ಒಂದು ಗುಂಪಿನ 12 ಜನರ ವಿರುದ್ಧ ಜಾತಿ ನಿಂದನೆ ಪ್ರಕರಣ ದಾಖಲಾಗಿದ್ದರೆ, ಮತ್ತೊಂದು ಗುಂಪಿನ ಎಂಟು ಜನರ ವಿರುದ್ಧ ಶುಕ್ರವಾರ ತಡರಾತ್ರಿ ಪ್ರತಿದೂರು ದಾಖಲಾಗಿದೆ. ಪ್ರತಿ ದೂರು ದಾಖಲಿಸಲು ಪೊಲೀಸರು ವಿಳಂಬ ಮಾಡುತ್ತಿದ್ದಾರೆ ಎಂದು ಆರೋಪಿಸಿ, ಸಂತ್ರಸ್ತ ಕುಟುಂಬದವರು ಹಾಗೂ ಬಿಜೆಪಿ ಮುಖಂಡರು ಗ್ರಾಮೀಣ ಪೊಲೀಸ್ ಠಾಣೆ ಎದುರು ಕುಳಿತು ಆಕ್ರೋಶ ವ್ಯಕ್ತಪಡಿಸಿದರು.

ಶಾಸಕ ಕೆ. ರಾಘವೇಂದ್ರ ಹಿಟ್ನಾಳ ಅವರನ್ನು ಅಭಿವೃದ್ಧಿ ಕಾರ್ಯಗಳ ಕುರಿತು ಪ್ರಶ್ನಿಸಿದ್ದಕ್ಕೆ ಯುವಕರ ವಿರುದ್ಧ ಜಾತಿ ನಿಂದನೆ ಪ್ರಕರಣ ದಾಖಲಿಸಲಾಗಿದೆ ಎಂದು ಆರೋಪಿಸಿ, ಪ್ರಕರಣದಲ್ಲಿ ಬಂಧಿತರಾಗಿದ್ದ ಯುವಕರ ಕುಟುಂಬದವರು ಗುರುವಾರ ಠಾಣೆ ಎದುರು ಅಸಮಾಧಾನ ವ್ಯಕ್ತಪಡಿಸಿದ್ದರು. ಇದೇ ವೇಳೆ ಬಿಜೆಪಿ ಮುಖಂಡರು ಪೊಲೀಸರಿಗೆ ಪ್ರತಿ ದೂರು ಸಲ್ಲಿಸಿ, ತಕ್ಷಣ ಪ್ರಕರಣ ದಾಖಲಿಸುವಂತೆ ಮನವಿ ಮಾಡಿದ್ದರು.

ಆದರೆ, ದೂರು ಸಲ್ಲಿಸಿ ಹಲವು ಗಂಟೆಗಳು ಕಳೆದರೂ ಪ್ರಕರಣ ದಾಖಲಾಗದ ಹಿನ್ನೆಲೆಯಲ್ಲಿ ಬಿಜೆಪಿ ಮುಖಂಡರು ಹಾಗೂ ಕುಟುಂಬಸ್ಥರು ಶುಕ್ರವಾರ ರಾತ್ರಿ ಮತ್ತೆ ಠಾಣೆಗೆ ತೆರಳಿ ಸಿಪಿಐ ಜಯಪ್ರಕಾಶ ಅವರನ್ನು ಪ್ರಶ್ನಿಸಿದರು. ನಮ್ಮವರ ವಿರುದ್ಧ ಪ್ರಕರಣ ದಾಖಲಿಸಲಾಗಿದೆ. ನಾವು ದೂರು ನೀಡಿ ಗಂಟೆಗಳು ಕಳೆದರೂ ಏಕೆ ಪ್ರಕರಣ ದಾಖಲಿಸುತ್ತಿಲ್ಲ? ಎಂದು ಆಕ್ರೋಶ ವ್ಯಕ್ತಪಡಿಸಿದರು.

ಬಿಜೆಪಿ ಮುಖಂಡ ಡಾ. ಬಸವರಾಜ ಕ್ಯಾವಟರ, ಗಣೇಶ ಹೊರತಟ್ನಾಳ ಸೇರಿದಂತೆ ಹಲವು ಮುಖಂಡರು ಠಾಣೆ ಎದುರು ಜಮಾಯಿಸಿ, ತಕ್ಷಣ ಕೌಂಟರ್‌ ಕೇಸ್‌ ದಾಖಲಿಸುವಂತೆ ಒತ್ತಾಯಿಸಿದರು. ದೂರು ದಾಖಲಿಸುವ ವರೆಗೂ ಸ್ಥಳದಿಂದ ಕದಲುವುದಿಲ್ಲ ಎಂದು ಪಟ್ಟು ಹಿಡಿದರು. ಸಿಪಿಐ ಜಯಪ್ರಕಾಶ ಅವರು ಮೊದಲು ದೂರು ನೀಡುವಂತೆ ತಿಳಿಸಿ, ದೂರು ಆಲಿಸಿದ ಬಳಿಕ ಪ್ರಕರಣ ದಾಖಲಿಸುವುದಾಗಿ ಹೇಳಿದರು.

ಬಳಿಕ ಉಮಾ ಎಂಬ ಮಹಿಳೆ ನೀಡಿದ ದೂರಿನ ಆಧಾರದ ಮೇಲೆ ತಡರಾತ್ರಿ ಎಂಟು ಜನರ ವಿರುದ್ಧ ಜಾತಿ ನಿಂದನೆ ಪ್ರಕರಣ ದಾಖಲಾಗಿದೆ. ಮೊದಲ ಪ್ರಕರಣದಲ್ಲಿ ಬಂಧಿತರಾಗಿದ್ದ ಕೆಲವು ಯುವಕರನ್ನು ವಿಚಾರಣೆ ನಡೆಸಿ ಬಿಡುಗಡೆ ಮಾಡಲಾಗಿದೆ ಎಂದು ತಿಳಿದುಬಂದಿದೆ.

ಗ್ರಾಮದಲ್ಲಿ ಅಭಿವೃದ್ಧಿ ಕಾರ್ಯಗಳ ಕುರಿತು ಶಾಸಕರನ್ನು ಪ್ರಶ್ನಿಸಿದರೆ ಪ್ರಕರಣ ದಾಖಲಿಸಲಾಗುತ್ತದೆಯೇ ಎಂದು ಕೆಲವರು ಪ್ರಶ್ನಿಸುತ್ತಿದ್ದಾರೆ. ಮತ್ತೊಂದೆಡೆ, ಯುವಕರು ಶಾಸಕರನ್ನು ಅಡ್ಡಗಟ್ಟಿ, ಅವಾಚ್ಯವಾಗಿ ಮಾತನಾಡಿ, ಧಿಕ್ಕಾರ ಕೂಗಿದ್ದಲ್ಲದೆ ವಾಹನಕ್ಕೆ ಅಡ್ಡಿಪಡಿಸಿದ್ದಾರೆ. ಇಂತಹ ವರ್ತನೆ ಸರಿಯೇ ಎಂದು ಮತ್ತೊಂದು ಗುಂಪಿನವರು ಪ್ರಶ್ನಿಸುತ್ತಿದ್ದಾರೆ.

ಈ ಘಟನೆಯಿಂದ ಗ್ರಾಮದಲ್ಲಿ ಎರಡು ಗುಂಪುಗಳ ನಡುವೆ ಭಿನ್ನಾಭಿಪ್ರಾಯ ಉಂಟಾಗಿದ್ದು, ಬಿಜೆಪಿ ಮತ್ತು ಕಾಂಗ್ರೆಸ್ ಮುಖಂಡರ ನಡುವೆಯೂ ರಾಜಕೀಯ ಆರೋಪ-ಪ್ರತ್ಯಾರೋಪಗಳಿಗೆ ಕಾರಣವಾಗಿದೆ. ಶಾಸಕರನ್ನು ಪ್ರಶ್ನಿಸಿದ್ದಕ್ಕೆ ಜಾತಿ ನಿಂದನೆ ಪ್ರಕರಣ ದಾಖಲಿಸಲಾಗಿದೆ ಎಂದು ಬಿಜೆಪಿ ಹಾಗೂ ಜೆಡಿಎಸ್ ಮುಖಂಡರು ಆರೋಪಿಸಿದ್ದಾರೆ.ಇದೆಲ್ಲಾ ರಾಜಕೀಯ ಪ್ರೇರಿತವಾಗಿದೆ. ಹಿಂದೆ 25 ವರ್ಷಗಳ ಕಾಲ ಹಿಟ್ನಾಳ ಮತ್ತು ಕರಡಿ ಕುಟುಂಬ ಸ್ಪರ್ಧೆ ಮಾಡುತ್ತಿದ್ದರೂ ಇಂಥ ಸಂಘರ್ಷಗಳು ಆಗಿಲ್ಲ. ಇದೆಲ್ಲ ರಾಜಕೀಯಕ್ಕಾಗಿ ಮಾಡುವುದು ಸರಿಯಲ್ಲ ಎಂದು ಕೊಪ್ಪಳ ಶಾಸಕ ರಾಘವೇಂದ್ರ ಹಿಟ್ನಾಳ ಹೇಳಿದರು.ಅಭಿವೃದ್ಧಿ ಮಾಡುವಂತೆ ಪ್ರಶ್ನೆ ಮಾಡಿದರೆ ಜಾತಿ ನಿಂದನೆ ಕೇಸ್ ಹಾಕುವುದು ಯಾವ ನ್ಯಾಯ? ಅದಕ್ಕೆ ಪ್ರತಿಯಾಗಿ ದೂರು ನೀಡಿದರೂ ದಾಖಲಿಸದೇ ಸತಾಯಿಸಿ ಹೋರಾಟ ತೀವ್ರಗೊಂಡ ಮೇಲೆ ಎಫ್‌ಐಆರ್ ದಾಖಲಿಸಿದ್ದಾರೆ ಎಂದು ಬಿಜೆಪಿ ಮುಖಂಡ ಡಾ. ಬಸವರಾಜ ಕ್ಯಾವಟರ ಹೇಳಿದರು.

ಶಾಸಕರನ್ನು ಜನರು ಪ್ರಶ್ನೆ ಮಾಡುವುದು ಸಹಜ. ಆದರೆ, ಈ ರೀತಿ ದೂರು ದಾಖಲು ಮಾಡುವುದು ಸರಿಯಲ್ಲ. ಕೂಡಲೇ ಪ್ರಕರಣ ಹಿಂದೆ ಪಡೆದು ಸರಿಪಡಿಸಬೇಕು ಎಂದು ಕೊಪ್ಪಳ ಜೆಡಿಎಸ್ ಜಿಲ್ಲಾಧ್ಯಕ್ಷ ಸುರೇಶ ಭೂಮರಡ್ಡಿ ಹೇಳಿದರು.

ದೂರಿಗೆ ಪ್ರತಿ ದೂರು ನೀಡಿದ ತಕ್ಷಣ ಪ್ರಕರಣ ದಾಖಲು ಮಾಡುವುದು ಇದುವರೆಗೂ ನಡೆಯುತ್ತಿದ್ದ ಪದ್ಧತಿ. ಆದರೆ, ಪ್ರತಿ ದೂರು ನೀಡಿದರೂ ಪ್ರಕರಣ ದಾಖಲಿಸಲು ಸತಾಯಿಸಿದ್ದಾರೆ ಎಂದು ಕೊಪ್ಪಳ ಬಿಜೆಪಿ ಎಸ್ಸಿ ಮೋರ್ಚಾ ಅಧ್ಯಕ್ಷ ಗಣೇಶ ಹೊರತಟ್ನಾಳ ಹೇಳಿದರು.