ಸಾರಾಂಶ
ಅಂಜನಾದ್ರಿ ಬೆಟ್ಟಕ್ಕೆ ಹನುಮಮಾಲೆ ವಿಸರ್ಜನೆಗೆ ಬರುವ ಭಕ್ತರು ಪ್ರಸಾದ ಪಡೆಯಲು 35 ಸಾವಿರ ಲಾಡು ಸಿದ್ಧತೆಯಾಗಿವೆ. ₹60 ಶುಲ್ಕ ಪಾವತಿಸಿದರೆ 2 ಲಾಡು, ತೀರ್ಥದ ಕಿಟ್ ನೀಡಲಾಗುತ್ತದೆ. ಜತೆಗೆ ಭಕ್ತರಿಗೆ ಅನ್ನ, ಸಾಂಬರ್, ಗೋದಿ ಹುಗ್ಗಿ ಒಳಗೊಂಡ ಅನ್ನಸಂತರ್ಪಣೆ ಇದೆ.
ರಾಮಮೂರ್ತಿ ನವಲಿ
ಗಂಗಾವತಿ: ತಾಲೂಕಿನ ಐತಿಹಾಸಕ ಪ್ರಸಿದ್ಧ ಹನುಮ ಜನಿಸಿದ ಕ್ಷೇತ್ರವಾದ ಅಂಜನಾದ್ರಿ ಬೆಟ್ಟದ ಆಂಜನೇಯಸ್ವಾಮಿ ಸನ್ನಿಧಿಯಲ್ಲಿ ಹನುಮಮಾಲೆ ವಿಸರ್ಜನೆಗೆ ದಿನಗಣನೆ ಆರಂಭವಾಗಿದೆ. ಜಿಲ್ಲಾಡಳಿತ, ತಾಲೂಕು ಆಡಳಿತ, ಗಂಗಾವತಿ ನಗರಸಭೆ ಸಕಲ ಸಿದ್ಧತೆ ಕೈಗೊಂಡಿದೆ.ಡಿ.22, 23, 24ರಂದು ವಿವಿಧ ರಾಜ್ಯಗಳು ಸೇರಿದಂತೆ ರಾಜ್ಯದ ವಿವಿಧ ಜಿಲ್ಲೆಗಳಿಂದ ಒಂದು ಲಕ್ಷಕ್ಕೂ ಹೆಚ್ಚು ಭಕ್ತರು ಆಗಮಿಸುವ ನಿರೀಕ್ಷೆ ಇದೆ. ಒಂದು ವಾರದಿಂದ ಜಿಲ್ಲಾಡಳಿತ, ತಾಲೂಕ ಆಡಳಿತ, ಪೊಲೀಸ್ ಇಲಾಖೆ ಸೇರಿದಂತೆ ವಿವಿಧ ಇಲಾಖೆಯ ಅಧಿಕಾರಿಗಳು ನೀಡಿದ ಜವಾಬ್ದಾರಿಯನ್ನು ನಿರ್ವಹಿಸುತ್ತಿದ್ದಾರೆ. ಜಿಲ್ಲಾ ಉಸ್ತುವಾರಿ ಸಚಿವರು, ಸ್ಥಳೀಯ ಶಾಸಕರ ನೇತೃತ್ವದಲ್ಲಿ ವಿವಿಧ ಸಮಿತಿಗಳನ್ನು ರಚಿಸಿದ್ದು, ಇಲಾಖೆಯ ಮುಖ್ಯಸ್ಥರಿಗೆ ಜವಾಬ್ದಾರಿ ನೀಡಿದ್ದಾರೆ.ಕಳೆದ ಬಾರಿಗಿಂತ ಈ ವರ್ಷ ಅಧಿಕ ಪ್ರಮಾಣದಲ್ಲಿ ಭಕ್ತರು ಆಗಮಿಸುವ ನಿರೀಕ್ಷೆ ಇದೆ. ಪ್ರತಿ ಶನಿವಾರ, ಭಾನುವಾರದಂದು 20ರಿಂದ 25 ಸಾವಿರ ಭಕ್ತರು ಆಗಮಿಸಿದ ನಿದರ್ಶನಗಳಿವೆ. ಹನುಮಮಾಲೆ ವಿಸರ್ಜನೆಗೆ ಲಕ್ಷ ಭಕ್ತರು ಆಗಮಿಸುವ ಸಾಧ್ಯತೆ ಇದೆ ಎಂದು ಜಿಲ್ಲಾಡಳಿತದ ನಿರೀಕ್ಷಿಸಿದೆ.ಅಂಜನಾದ್ರಿ ಬೆಟ್ಟಕ್ಕೆ ಬರುವ ಭಕ್ತರಿಗೆ ಮೂಲಭೂತ ಸೌಕರ್ಯಗಳನ್ನು ಕಲ್ಪಿಸುವ ಕಾರ್ಯ ಭರದಿಂದ ಸಾಗಿದೆ. ಗಂಗಾವತಿಯಿಂದ ಆನೆಗೊಂದಿ ಮಾರ್ಗದಿಂದ ಅಂಜನಾದ್ರಿಗೆ ಮತ್ತು ಮುನಿರಾಬಾದ್ ರಾಷ್ಟ್ರೀಯ ಹೆದ್ದಾರಿಯಿಂದ ಅಂಜನಾದ್ರಿಗೆ ಬರುವ ಭಕ್ತರಿಗೆ ತೊಂದರೆಯಾಗಬಾರದೆಂಬ ಕಾರಣಕ್ಕೆ ರಸ್ತೆಯುದ್ದಕ್ಕೂ ವಿದ್ಯುತ್ ದೀಪಗಳನ್ನು ಅಳವಡಿಸುವ ಕಾರ್ಯ ನಡೆದಿದೆ. ಬೆಟ್ಟದ ಚಿಕ್ಕರಾಂಪುರ ಬಳಿ ಇರುವ ವೇದ ಪಾಠಶಾಲೆಯ ಆವರಣದಲ್ಲಿ ಭಕ್ತರು ಪ್ರಸಾದ ಸ್ವೀಕರಿಸಲು ಶಾಮಿಯಾನ, ಕುಡಿಯುವ ನೀರು, ರಸ್ತೆ ಸಂಪರ್ಕ ಕಲ್ಪಿಸಲಾಗಿದೆ.ಮೂರು ದಿನಗಳ ಕಾಲ ಬರುವ ಭಕ್ತರಿಗೆ ಪ್ರಸಾದದ ವ್ಯವಸ್ಥೆ ಮಾಡಲಾಗಿದೆ. ಪಾರ್ಕಿಂಗ್ ವ್ಯವಸ್ಥೆ, ಶೌಚಾಲಯ, ವಿವಿಧ ಸ್ಥಳಗಳಲ್ಲಿ ಕುಡಿಯುವ ನೀರಿನ ವ್ಯವಸ್ಥೆ ಮಾಡಲಾಗಿದೆ.35 ಸಾವಿರ ಲಾಡು: ಅಂಜನಾದ್ರಿ ಬೆಟ್ಟಕ್ಕೆ ಹನುಮಮಾಲೆ ವಿಸರ್ಜನೆಗೆ ಬರುವ ಭಕ್ತರು ಪ್ರಸಾದ ಪಡೆಯಲು 35 ಸಾವಿರ ಲಾಡು ಸಿದ್ಧತೆಯಾಗಿವೆ. ₹60 ಶುಲ್ಕ ಪಾವತಿಸಿದರೆ 2 ಲಾಡು, ತೀರ್ಥದ ಕಿಟ್ ನೀಡಲಾಗುತ್ತದೆ. ಜತೆಗೆ ಭಕ್ತರಿಗೆ ಅನ್ನ, ಸಾಂಬರ್, ಗೋದಿ ಹುಗ್ಗಿ ಒಳಗೊಂಡ ಅನ್ನಸಂತರ್ಪಣೆ ಇದೆ.ಸ್ವಾಗತ ಕಮಾನುಗಳು: ಗಂಗಾವತಿಯಿಂದ ಅಂಜನಾದ್ರಿವರೆಗೆ ವಿವಿಧ ಸ್ಥಳಗಳಲ್ಲಿ ಸ್ವಾಗತ ಕಮಾನುಗಳನ್ನು ಕಟ್ಟುವ ಕಾರ್ಯ ನಡೆದಿದೆ. ಅಂಜನಾದ್ರಿ ಮುಂಭಾಗದಲ್ಲಿ ಬೃಹತ್ ಸ್ವಾಗತ ಕಮಾನು ನಿರ್ಮಿಸಲಾಗುತ್ತಿದ್ದು, ಅಲ್ಲಲ್ಲಿ ಭಕ್ತರಿಗೆ ಜಾಗೃತಿಗೊಳಿಸುವ ನಾಮಫಲಕ ಅಳವಡಿಸಲಾಗಿದೆ.ಈಗಾಗಲೇ ಅಂಜನಾದ್ರಿ ಬೆಟ್ಟಕ್ಕೆ ಆಗಮಿಸುವ ಭಕ್ತರಿಗೆ ಮೂಲಭೂತ ಸೌಕರ್ಯಗಳನ್ನು ಕಲ್ಪಿಸುವ ಕಾರ್ಯ ಭರದಿಂದ ಸಾಗಿದೆ. ಜಿಲ್ಲಾಧಿಕಾರಿ ಎಲ್ಲ ಸಿದ್ಧತೆಗಳ ಬಗ್ಗೆ ವೀಕ್ಷಿಸುತ್ತಿದ್ದಾರೆ. ಭಕ್ತರಿಗೆ ಯಾವುದೇ ರೀತಿ ತೊಂದರೆಯಾಗದಂತೆ ಜಿಲ್ಲಾಡಳಿತ ಮುಂಜಾಗರೂಕತೆ ವಹಿಸಿದೆ ಎಂದು ಕೊಪ್ಪಳ ಸಹಾಯಕ ಆಯುಕ್ತ ಕ್ಯಾ.ಮಹೇಶ ಮಾಲಗತ್ತಿ ತಿಳಿಸಿದ್ದಾರೆ.