ಜೂ. 3ರ ಮಧ್ಯರಾತ್ರಿಯಿಂದ ಜೂ. 4ರ ಮಧ್ಯರಾತ್ರಿ ವರೆಗೆ ಮದ್ಯ ಮಾರಾಟ ಬಂದ್

| Published : May 31 2024, 02:22 AM IST / Updated: May 31 2024, 12:37 PM IST

ಜೂ. 3ರ ಮಧ್ಯರಾತ್ರಿಯಿಂದ ಜೂ. 4ರ ಮಧ್ಯರಾತ್ರಿ ವರೆಗೆ ಮದ್ಯ ಮಾರಾಟ ಬಂದ್
Share this Article
  • FB
  • TW
  • Linkdin
  • Email

ಸಾರಾಂಶ

ಮತ ಎಣಿಕೆ ಪ್ರಕ್ರಿಯೆಯಲ್ಲಿ ಭಾಗವಹಿಸುವ ಅಭ್ಯರ್ಥಿಗಳು, ಚುನಾವಣಾ ಏಜೆಂಟರು, ಮತ ಎಣಿಕೆ ಏಜೆಂಟರಿಗೆ ವಾಹನ ನಿಲುಗಡೆಗೆ, ಉಪಹಾರಕ್ಕೆ ನಿಗದಿತ ಸ್ಥಳ ಗುರುತಿಸಿ, ಸಿದ್ಧತೆ ಮಾಡಲಾಗಿದೆ.

ಧಾರವಾಡ:  ಧಾರವಾಡ ಲೋಕಸಭಾ ಕ್ಷೇತ್ರದ ಚುನಾವಣೆ ಮತ ಎಣಿಕೆ ಜೂ. 4ರಂದು ನಡೆಯಲಿದ್ದು, ಅಂದು ಅನುಸರಿಸಬೇಕಾದ ನಿಯಮಗಳನ್ನು ಚುನಾವಣಾ ಆಯೋಗ ನೀಡಿದೆ. ರಾಜಕೀಯ ಪಕ್ಷಗಳು, ಪಕ್ಷೇತರ ಅಭ್ಯರ್ಥಿಗಳು ತಮ್ಮ ಚುನಾವಣಾ ಏಜೆಂಟರು ಹಾಗೂ ಮತ ಎಣಿಕೆ ಏಜೆಂಟರಿಗೆ ಕಡ್ಡಾಯವಾಗಿ ಮಾರ್ಗಸೂಚಿ ಪಾಲಿಸಬೇಕು ಎಂದು ತಿಳಿಸಬೇಕು ಎಂದು ಚುನಾವಣಾಧಿಕಾರಿಯೂ ಆಗಿರುವ ಜಿಲ್ಲಾಧಿಕಾರಿ ದಿವ್ಯಪ್ರಭು ತಿಳಿಸಿದರು.

ಇಲ್ಲಿನ ಜಿಲ್ಲಾಧಿಕಾರಿ ಕಚೇರಿಯಲ್ಲಿ ಲೋಕಸಭಾ ಚುನಾವಣೆ ಮತ ಎಣಿಕೆ ಪ್ರಕ್ರಿಯೆ ಕುರಿತು ರಾಜಕೀಯ ಪಕ್ಷಗಳ ಪ್ರತಿನಿಧಿಗಳ ಸಭೆಯಲ್ಲಿ ಮಾತನಾಡಿದರು.

ಮತ ಎಣಿಕೆ ಪ್ರಕ್ರಿಯೆಯಲ್ಲಿ ಭಾಗವಹಿಸುವ ಅಭ್ಯರ್ಥಿಗಳು, ಚುನಾವಣಾ ಏಜೆಂಟರು, ಮತ ಎಣಿಕೆ ಏಜೆಂಟರಿಗೆ ವಾಹನ ನಿಲುಗಡೆಗೆ, ಉಪಹಾರಕ್ಕೆ ನಿಗದಿತ ಸ್ಥಳ ಗುರುತಿಸಿ, ಸಿದ್ಧತೆ ಮಾಡಲಾಗಿದೆ. ಅಂದು ಮತ ಎಣಿಕಾ ಕೇಂದ್ರದ ಸುತ್ತಲೂ 200 ಮೀಟರ್ ವ್ಯಾಪ್ತಿಯಲ್ಲಿ ನಿಷೇಧಾಜ್ಞೆ ಜಾರಿಯಲ್ಲಿ ಇರುತ್ತದೆ. ಅನಗತ್ಯ ಓಡಾಟ, ಗುಂಪು ಸೇರುವುದು ಮಾಡುವಂತಿಲ್ಲ ಎಂದು ತಿಳಿಸಿದರು.

ಮತ ಎಣಿಕಾ ಕೇಂದ್ರದೊಳಗೆ ಮೊಬೈಲ್ ಸೇರಿದಂತೆ ಯಾವುದೇ ರೀತಿಯ ಎಲೆಕ್ಟ್ರಾನಿಕ್ ವಸ್ತು ತರಲು ಅವಕಾಶವಿಲ್ಲ. ಆಯುಧ, ಗುಟಕಾ, ಬೀಡಿ ಸಿಗರೇಟ್, ಎಲೆ ಅಡಕೆ ತರುವುದನ್ನು ಸಹ ನಿರ್ಬಂಧಿಸಲಾಗಿದೆ ಎಂದ ಅವರು, ಅಂದು ಬೆಳಗ್ಗೆ ಸ್ಟ್ರಾಂಗ್ ರೂಮ್ ಓಪನ್ ಮಾಡುವುದರಿಂದ ಹಿಡಿದು ಸಂಜೆ ಇವಿಎಂ ಮಷಿನ್‌ಗಳು ಭದ್ರತಾ ಕೊಠಡಿಗೆ ಹೋಗುವವರೆಗಿನ ಎಲ್ಲ ಹಂತಗಳನ್ನು ಸಭೆಯಲ್ಲಿ ವಿವರಿಸಿದರು.

ಮಹಾನಗರ ಪೊಲೀಸ್ ಆಯುಕ್ತೆ ರೇಣುಕಾ ಸುಕುಮಾರ ಮಾತನಾಡಿ, ವಾಹನ ಪಾರ್ಕಿಂಗ್ ಸ್ಥಳ, ಪೊಲೀಸ್ ಪರಿಶೀಲನಾ ಸ್ಥಳ, ಬಂದೋಬಸ್ತ್‌ ಬಗ್ಗೆ ಸಭೆಯಲ್ಲಿ ವಿವರಿಸಿದರು. ಚುನಾವಣಾ ಕರ್ತವ್ಯಗಳ ನೋಡಲ್ ಅಧಿಕಾರಿಗಳಾದ ಅಪರ ಜಿಲ್ಲಾಧಿಕಾರಿ ಗೀತಾ ಸಿ.ಡಿ., ಜಿಪಂ ಉಪಕಾರ್ಯದರ್ಶಿ ವಿಜಯಕುಮಾರ ಆಜೂರ, ಹುಬ್ಬಳ್ಳಿ- ಧಾರವಾಡ ನಗರಾಭಿವೃದ್ಧಿ ಪ್ರಾಧಿಕಾರದ ಆಯುಕ್ತ ಡಾ. ಸಂತೋಷ ಬಿರಾದಾರ, ಸ್ಮಾರ್ಟ್‌ ಸಿಟಿ ಜಂಟಿ ವ್ಯವಸ್ಥಾಪಕ ಅಜೀಜ್ ದೇಸಾಯಿ, ಜಿಲ್ಲಾ ನಗರಾಭಿವೃದ್ಧಿ ಕೋಶದ ಯೋಜನಾ ನಿರ್ದೇಶಕ ರಮೇಶ ಬಿ, ಹಾಗೂ ಬಿಜೆಪಿ, ಕಾಂಗ್ರೆಸ್ ಸೇರಿದಂತೆ ವಿವಿಧ ರಾಜಕೀಯ ಪಕ್ಷಗಳ ಪ್ರತಿನಿಧಿಗಳು, ವಿವಿಧ ಪಕ್ಷಗಳ ಮತ್ತು ಪಕ್ಷೇತರ ಅಭ್ಯರ್ಥಿಗಳು ಸಭೆಯಲ್ಲಿ ಭಾಗವಹಿಸಿದ್ದರು. 

ಮದ್ಯಮಾರಾಟ ಬಂದ್‌

ಮತ ಎಣಿಕೆ ಹಿನ್ನೆಲೆ ಜೂ. 3ರ ಮಧ್ಯರಾತ್ರಿಯಿಂದ ಜೂ. 4ರ ಮಧ್ಯರಾತ್ರಿ ವರೆಗೆ ಜಿಲ್ಲಾದ್ಯಂತ ಮದ್ಯಪಾನ, ಮದ್ಯಮಾರಾಟ, ಮದ್ಯಸಾಗಾಣಿಕೆ ಮತ್ತು ಮದ್ಯ ಸಂಗ್ರಹಣೆ ನಿಷೇಧಿಸಿ ಜಿಲ್ಲಾ ದಂಡಾಧಿಕಾರಿ ದಿವ್ಯಪ್ರಭು ಆದೇಶಿಸಿದ್ದಾರೆ. ಮದ್ಯದ ಅಂಗಡಿ, ಬಿಯರ್, ಬಾರ್‌, ಕ್ಲಬ್‌, ಮತ್ತು ಮದ್ಯದ ಡಿಪೋಗಳನ್ನು ಮುಚ್ಚತಕ್ಕದ್ದು ಎಂದು ಆದೇಶದಲ್ಲಿ ತಿಳಿಸಿದ್ದಾರೆ. ನಿಷೇಧಾಜ್ಞೆ ಜಾರಿ

ಮತ ಎಣಿಕೆ ನಡೆಯಲಿರುವ ಕೃಷಿ ವಿಶ್ವವಿದ್ಯಾಲಯದ ವ್ಯಾಪ್ತಿಯ 200 ಮೀಟರ್‌ ವ್ಯಾಪ್ತಿಯ ಸುತ್ತಮುತ್ತಲಿನ ಪ್ರದೇಶದಲ್ಲಿ ನಿಷೇಧಾಜ್ಞೆ ಜಾರಿಯಲ್ಲಿ ಇರಲಿದೆ. ಮತ ಎಣಿಕೆ ಕೇಂದ್ರದ ವ್ಯಾಪ್ತಿಯ 200 ಮೀಟರ್ ಸುತ್ತಮುತ್ತಲಿನ ಪ್ರದೇಶದಲ್ಲಿ ಜೂ. 2ರ ಬೆಳಗ್ಗೆ 6ರಿಂದ ಜೂ. 5ರ ಸಂಜೆ 6ರ ವರೆಗೆ ಸಿಆರ್‌ಪಿಸಿ 1973ರ ಕಲಂ 144 ಮತ್ತು ಕರ್ನಾಟಕ ಪೊಲೀಸ್‌ ಕಾಯ್ದೆ 1963ರ ಕಲಂ 35ರಡಿ ನಿಷೇಧಾಜ್ಞೆ ಜಾರಿಗೊಳಿಸಲಾಗಿದೆ. ಆದೇಶ ಉಲ್ಲಂಘಿಸಿದರೆ ಕಠಿಣ ಕ್ರಮಕೈಗೊಳ್ಳಬೇಕು ಎಂದು ಸಂಬಂಧಿಸಿದ ಅಧಿಕಾರಿಗಳಿಗೆ ಜಿಲ್ಲಾಧಿಕಾರಿ ಸೂಚಿಸಿದ್ದಾರೆ.