ಮತ ಎಣಿಕೆ ಕುತೂಹಲ, ಎಲ್ಲರ ಚಿತ್ತ ಫಲಿತಾಂಶದತ್ತ

| Published : Jun 03 2024, 12:31 AM IST

ಮತ ಎಣಿಕೆ ಕುತೂಹಲ, ಎಲ್ಲರ ಚಿತ್ತ ಫಲಿತಾಂಶದತ್ತ
Share this Article
  • FB
  • TW
  • Linkdin
  • Email

ಸಾರಾಂಶ

ಜೂ. 4ರಂದು ಮತ ಎಣಿಕೆ ಕಾರ್ಯ ನಡೆಯಲಿದ್ದು, ಎಲ್ಲರ ಚಿತ್ತ ಫಲಿತಾಂಶದತ್ತ ನೆಟ್ಟಿದೆ. ಕಾಂಗ್ರೆಸ್ ಹಾಗೂ ಬಿಜೆಪಿ ಕಾರ್ಯಕರ್ತರ ಎದೆಯಲ್ಲಿ ಡವಡವ ಶುರುವಾಗಿದ್ದು, ಎರಡೂ ಕಡೆಯ ಕಾರ್ಯಕರ್ತರು ಸೋಲು-ಗೆಲುವಿನ ಚರ್ಚೆಯಲ್ಲಿ ಮುಳುಗಿದ್ದಾರೆ. ಸಾರ್ವಜನಿಕರೂ ಫಲಿತಾಂಶಕ್ಕಾಗಿ ಕುತೂಹಲದಿಂದ ಕಾಯತೊಡಗಿದ್ದಾರೆ.

ನಾರಾಯಣ ಹೆಗಡೆ

ಕನ್ನಡಪ್ರಭ ವಾರ್ತೆ ಹಾವೇರಿಮತದಾನ ನಡೆದು ಸರಿಸುಮಾರು ಒಂದು ತಿಂಗಳ ಬಳಿಕ ಜೂ. 4ರಂದು ಮತ ಎಣಿಕೆ ಕಾರ್ಯ ನಡೆಯಲಿದ್ದು, ಎಲ್ಲರ ಚಿತ್ತ ಫಲಿತಾಂಶದತ್ತ ನೆಟ್ಟಿದೆ. ಕಾಂಗ್ರೆಸ್ ಹಾಗೂ ಬಿಜೆಪಿ ಕಾರ್ಯಕರ್ತರ ಎದೆಯಲ್ಲಿ ಡವಡವ ಶುರುವಾಗಿದ್ದು, ಎರಡೂ ಕಡೆಯ ಕಾರ್ಯಕರ್ತರು ಸೋಲು-ಗೆಲುವಿನ ಚರ್ಚೆಯಲ್ಲಿ ಮುಳುಗಿದ್ದಾರೆ. ಸಾರ್ವಜನಿಕರೂ ಫಲಿತಾಂಶಕ್ಕಾಗಿ ಕುತೂಹಲದಿಂದ ಕಾಯತೊಡಗಿದ್ದಾರೆ.

ಹಾವೇರಿ ಲೋಕಸಭಾ ಕ್ಷೇತ್ರಕ್ಕೆ ಮೇ 7ರಂದು ಚುನಾವಣೆ ನಡೆದಿತ್ತು. ಬಿರು ಬಿಸಿಲನ್ನೂ ಲೆಕ್ಕಿಸದೇ ಶೇ. 77.60ರಷ್ಟು ಮತದಾರರು ಆಗಮಿಸಿ ಹಕ್ಕು ಚಲಾಯಿಸಿದ್ದರು. ೯,೦೨,೧೧೯ ಪುರುಷ, ೮,೯೦,೫೭೨ ಮಹಿಳಾ ಹಾಗೂ ಇತರೆ ೮೩ ಸೇರಿ ೧೭,೯೨,೭೭೪ ಮತದಾರರ ಪೈಕಿ ೭,೧೩,೬೧೩ ಪುರುಷರು, ೬,೭೭,೫೭೭ ಹಾಗೂ ಇತರೆ ೨೪ ಮತದಾರರು ಸೇರಿ ೧೩,೯೧,೨೧೪ ಮತದಾರರು ಮತದಾನ ಮಾಡಿ ಅಭ್ಯರ್ಥಿಗಳ ರಾಜಕೀಯ ಭವಿಷ್ಯವನ್ನು ಬರೆದಿದ್ದರು. ಅದೀಗ ಬಹಿರಂಗಗೊಳ್ಳುವ ಸಮಯ ಬಂದಿದೆ. ಮತ ಎಣಿಕೆಗೆ ಕ್ಷಣಗಣನೆ ಶುರುವಾಗಿದ್ದು, ಕ್ಷೇತ್ರದಲ್ಲಿ ನೇರಾನೇರ ಸ್ಪರ್ಧೆ ನಡೆದ ಬಿಜೆಪಿ ಮತ್ತು ಕಾಂಗ್ರೆಸ್‌ ಅಭ್ಯರ್ಥಿಗಳಲ್ಲಿ ಗೆಲುವು ಯಾರಿಗೆ ಎಂಬ ಅಂತಿಮ ಕ್ಷಣದ ಚರ್ಚೆ ಶುರುವಾಗಿದೆ.

ಮೊದಲ ಬಾರಿ ಸಂಸತ್‌ ಪ್ರವೇಶ: ಕ್ಷೇತ್ರ ಮರುವಿಂಗಡಣೆಯಾದ 2008ರ ಬಳಿಕ ನಡೆದ ಮೂರು ಚುನಾವಣೆಗಳಲ್ಲಿ ಬಿಜೆಪಿಯ ಶಿವಕುಮಾರ ಉದಾಸಿ ಹ್ಯಾಟ್ರಿಕ್‌ ಗೆಲುವು ಸಾಧಿಸಿದ್ದರು. ಈ ಸಲ ಬಿಜೆಪಿಯಿಂದ ಮಾಜಿ ಸಿಎಂ ಬಸವರಾಜ ಬೊಮ್ಮಾಯಿ ಸ್ಪರ್ಧಿಸಿದ್ದರೆ, ಕಾಂಗ್ರೆಸ್‌ನಿಂದ ಆನಂದಸ್ವಾಮಿ ಗಡ್ಡದೇವರಮಠ ಸ್ಪರ್ಧಿಸಿದ್ದರು. ಕಾಂಗ್ರೆಸ್‌ನ ಗಡ್ಡದೇವರಮಠ ಮತ್ತು ಮಾಜಿ ಸಿಎಂ ಬೊಮ್ಮಾಯಿ ನಡುವೆ ಸಮಬಲದ ಹಣಾಹಣಿಯೇ ನಡೆದಿದೆ. ಯಾರೇ ಗೆದ್ದರೂ ಅಲ್ಪಮತಗಳ ಅಂತರದಿಂದ ಎಂಬ ಮಾತು ಎಲ್ಲರಿಂದ ಕೇಳಿಬರುತ್ತಿದೆ. ಯಾರು ಗೆದ್ದರೂ ಮೊದಲ ಸಲ ಸಂಸತ್ತಿಗೆ ಪ್ರವೇಶಿಸಲಿದ್ದಾರೆ.

ಚುನಾವಣೆಯಲ್ಲಿ ಬಿಜೆಪಿ ಹಾಗೂ ಕಾಂಗ್ರೆಸ್ ಎರಡೂ ಪಕ್ಷಗಳ ಅಭ್ಯರ್ಥಿಗಳ ನಡುವೆ ಸಮಬಲದ ಪೈಪೋಟಿ ನಡೆದಿದ್ದರಿಂದ ಜೂ. 4ರ ಮತ ಎಣಿಕೆ ಬಗ್ಗೆ ಕುತೂಹಲ ಹೆಚ್ಚಿದೆ. ಪ್ರಧಾನಿ ಮೋದಿ ಅವರ ಸಾಧನೆ, ತಾವು ಸಿಎಂ ಆಗಿದ್ದಾಗ ಕೈಗೊಂಡ ಅಭಿವೃದ್ಧಿ ಕಾರ್ಯಗಳ ಸಾಧನೆ ಹೇಳಿಕೊಂಡು ಬಸವರಾಜ ಬೊಮ್ಮಾಯಿ ಪ್ರಚಾರ ನಡೆಸಿದ್ದರು. ಕಾಂಗ್ರೆಸಿಗರು ಗ್ಯಾರಂಟಿ ಯೋಜನೆಗಳೊಂದಿಗೆ ಯುವಕ, ಕ್ಷೇತ್ರಕ್ಕೆ ಹೊಸಮುಖ, ಸರಳ ವ್ಯಕ್ತಿತ್ವದ ಅಭ್ಯರ್ಥಿ ಗಡ್ಡದೇವರಮಠ ಅವರನ್ನು ಗೆಲ್ಲಿಸುವಂತೆ ಪ್ರಚಾರ ನಡೆಸಿದ್ದರು. ಮತದಾರರು ಕಳೆದ ಮೇ 7ರಂದು ನಡೆದ ಚುನಾವಣೆಯಲ್ಲಿ ಮತ ಚಲಾಯಿಸುವ ಮೂಲಕ ತಮ್ಮ ಅಭಿಪ್ರಾಯವನ್ನು ಮತಯಂತ್ರದಲ್ಲಿ ನಮೂದಿಸಿದ್ದಾರೆ. ಈಗ ಜನಾಭಿಪ್ರಾಯ ಯಾರ ಪರ ಎಂದು ತಿಳಿಯುವ ಸಮಯ ಬಂದಿದ್ದು, ಎಲ್ಲರಲ್ಲಿ ಕುತೂಹಲ ಹೆಚ್ಚಿಸಿದೆ.

ಸೋಶಿಯಲ್‌ ಮೀಡಿಯಾದಲ್ಲಿ: ಸೋಶಿಯಲ್ ಮೀಡಿಯಾದಲ್ಲಿ ಎರಡೂ ಪಕ್ಷಗಳ ಕಾರ್ಯಕರ್ತರು, ಅಭ್ಯರ್ಥಿಗಳ ಅಭಿಮಾನಿಗಳಲ್ಲಿ ಸೋಲು ಗೆಲುವಿನ ಬಗ್ಗೆ ಚರ್ಚೆ ನಡೆದಿವೆ. ಬಿಜೆಪಿಯವರು ತಮ್ಮದೇ ಗೆಲುವು ಎನ್ನುತ್ತಿದ್ದರೆ, ಕಾಂಗ್ರೆಸಿಗರು ಫಲಿತಾಂಶ ತಮ್ಮ ಪರವಾಗಿ ಬರುತ್ತದೆ, ಕಾದು ನೋಡಿ ಎಂದು ಮಾರುತ್ತರ ನೀಡುತ್ತಿದ್ದಾರೆ. ಕೆಲವರು ಮೋದಿಯನ್ನು ಟೀಕಿಸುತ್ತಿದ್ದರೆ, ಅದಕ್ಕೆ ಪ್ರತಿಯಾಗಿ ಅನೇಕರು ಮೋದಿ ಬಣ್ಣನೆ ಮಾಡಿ ಮತ್ತೊಮ್ಮೆ ಮೋದಿ ಪ್ರಧಾನಿಯಾಗುತ್ತಾರೆ ಎನ್ನುತ್ತಿದ್ದಾರೆ. ಮತದಾನ ನಡೆದ ದಿನದಿಂದಲೂ ಸೋಲು-ಗೆಲುವಿನ ಚರ್ಚೆ ಜೋರಾಗಿಯೇ ನಡೆದಿತ್ತು. ಇಂಥವರೇ ಗೆಲ್ಲುತ್ತಾರೆ ಎಂದು ಹೇಳುವ ನಂಬಿಕೆ ಯಾರಲ್ಲೂ ಇರಲಿಲ್ಲ. ಆದ್ದರಿಂದ ಫಲಿತಾಂಶದ ಬಗ್ಗೆ ಫಿಫ್ಟಿ ಫಿಫ್ಟಿ ಎಂದೇ ಚರ್ಚೆ ನಡೆಯುತ್ತಿತ್ತು. ಆದರೆ, ಚುನಾವಣೋತ್ತರ ಸಮೀಕ್ಷೆ ಬಳಿಕ ಕ್ಷೇತ್ರದಲ್ಲೂ ಬಿಜೆಪಿ ಕಾರ್ಯಕರ್ತರು ಗೆಲುವು ನಮ್ಮದೇ ಎಂದು ಆತ್ಮವಿಶ್ವಾಸದಿಂದ ಹೇಳಿಕೊಳ್ಳುತ್ತಿದ್ದಾರೆ. ಆದರೆ, ಸಮೀಕ್ಷೆ ಏನೇ ಹೇಳಿದರೂ ಕೈ ಅಭ್ಯರ್ಥಿಯೇ ಗೆಲ್ಲುತ್ತಾರೆ ಎಂದು ಬೆಟ್ಟಿಂಗ್ ಕೂಡ ಕಟ್ಟಿಕೊಳ್ಳುತ್ತಿದ್ದಾರೆ. ಮತ ಎಣಿಕೆ ದಿನಕ್ಕೆ ಒಂದೇ ದಿನ ಬಾಕಿಯಿದ್ದು, ಫಲಿತಾಂಶದ ಬಗ್ಗೆ ತಮ್ಮದೇ ಆದ ರೀತಿಯಲ್ಲಿ ಜನರು ವಿಶ್ಲೇಷಣೆಯಲ್ಲಿ ತೊಡಗಿಕೊಂಡಿದ್ದಾರೆ. ಮಂಗಳವಾರ ಯಾರಿಗೆ ಮಂಗಳ ತರಲಿದೆ ಎಂಬುದನ್ನು ಕಾದುನೋಡಬೇಕಿದೆ.