ದೇಶ ವಿಭಜನೆ ಕಾಂಗ್ರೆಸ್‌ನವರ ಬಳುವಳಿ: ವೀರೇಶ್‌

| Published : Feb 06 2024, 01:30 AM IST

ಸಾರಾಂಶ

ಕಾಂಗ್ರೆಸ್ ಪಕ್ಷವು ಹಿಂದಿನಿಂದಲೂ ದೇಶ ವಿಭಜನೆಯ ಮಾತುಗಳನ್ನಾಡುತ್ತಲೇ ಬಂದ ಪಕ್ಷ. ಪಾಕಿಸ್ತಾನ, ಬಾಂಗ್ಲಾದೇಶ ರಚನೆಯಾಗಿದ್ದು ಇದೇ ಕಾಂಗ್ರೆಸ್‌ನವರ ಬಳುವಳಿ. ಈಗ ಅದೇ ಕಾಂಗ್ರೆಸ್ ಪಕ್ಷದ ಸಂತಾನದ ಮುಂದುವರಿದ ಭಾಗದಂತೆ ಸಂಸದ ಡಿ.ಕೆ.ಸುರೇಶ ಹೇಳಿಕೆ ನೀಡಿದ್ದಾರೆ. ಸಂಸದ ಸುರೇಶ ತಕ್ಷಣವೇ ದೇಶದ ಜನರಲ್ಲಿ ಬಹಿರಂಗ ಕ್ಷಮೆಯಾಚಿಸಬೇಕು.

ಕನ್ನಡಪ್ರಭ ವಾರ್ತೆ ದಾವಣಗೆರೆ

ದೇಶ ವಿಭಜನೆಯ ಹೇಳಿಕೆ ನೀಡಿ ದೇಶದ ಐಕ್ಯತೆಗೆ ಧಕ್ಕೆ ತಂದ ಕಾಂಗ್ರೆಸ್‌ ಸಂಸದ ಡಿ.ಕೆ.ಸುರೇಶ್‌ರನ್ನು ಸಂಸದ ಸ್ಥಾನದಿಂದ ತಕ್ಷಣ ವಜಾಗೊಳಿಸಲು ಒತ್ತಾಯಿಸಿ ಬಿಜೆಪಿ ಜಿಲ್ಲಾ ಘಟಕದಿಂದ ನಗರದಲ್ಲಿ ಸೋಮವಾರ ಪ್ರತಿಭಟನೆ ನಡೆಸಲಾಯಿತು.

ನಗರದ ಬಿಜೆಪಿ ಜಿಲ್ಲಾ ಕಚೇರಿಯಿಂದ ಶ್ರೀ ಜಯದೇವ ವೃತ್ತದವರೆಗೆ ಪಕ್ಷದ ಮುಖಂಡರು, ಕಾರ್ಯಕರ್ತರು ಸಂಸದ ಡಿ.ಕೆ.ಸುರೇಶ ವಿರುದ್ಧ ಘೋಷಣೆಗಳ ಕೂಗಿ ಪ್ರತಿಭಟನಾ ಮೆರವಣಿಗೆ ನಡೆಸಿ ಈ ವೇಳೆ ಮಾತನಾಡಿದ ಮಾಜಿ ಮೇಯರ್ ಎಸ್.ಟಿ.ವೀರೇಶ ದಕ್ಷಿಣ ಭಾರತ ಪ್ರತ್ಯೇಕತೆ ಮಾಡುವ ಹೇಳಿಕೆಯನ್ನು ತೀವ್ರವಾಗಿ ಖಂಡಿಸುತ್ತೇವೆ. ಕಾಂಗ್ರೆಸ್ ಪಕ್ಷವು ಹಿಂದಿನಿಂದಲೂ ದೇಶ ವಿಭಜನೆಯ ಮಾತುಗಳನ್ನಾಡುತ್ತಲೇ ಬಂದ ಪಕ್ಷ. ಪಾಕಿಸ್ತಾನ, ಬಾಂಗ್ಲಾದೇಶ ರಚನೆಯಾಗಿದ್ದು ಇದೇ ಕಾಂಗ್ರೆಸ್‌ನವರ ಬಳುವಳಿ. ಈಗ ಅದೇ ಕಾಂಗ್ರೆಸ್ ಪಕ್ಷದ ಸಂತಾನದ ಮುಂದುವರಿದ ಭಾಗದಂತೆ ಸಂಸದ ಡಿ.ಕೆ.ಸುರೇಶ ಹೇಳಿಕೆ ನೀಡಿದ್ದಾರೆ. ಸಂಸದ ಸುರೇಶ ತಕ್ಷಣವೇ ದೇಶದ ಜನರಲ್ಲಿ ಬಹಿರಂಗ ಕ್ಷಮೆಯಾಚಿಸಬೇಕು ಎಂದು ತಾಕೀತು ಮಾಡಿದರು.

ಸಂಸದ ಸುರೇಶ ಹೇಳಿಕೆ ಖಂಡಿಸಿ ಬೆಂಗಳೂರಿನಲ್ಲಿ ಭಾನುವಾರ ಶಾಂತಿಯುತ ಹೋರಾಟ ನಡೆಸಿದ ಬಿಜೆಪಿ ಯುವ ಮೋರ್ಚಾ ಕಾರ್ಯಕರ್ತರ ಮೇಲೆ ಪೊಲೀಸರು ಹಲ್ಲೆ ನಡೆಸಿದ್ದಾರೆ. ಜೀವ ಹೋಗುವ ಹಂತದವರೆಗೂ ಯುವ ಕಾರ್ಯಕರ್ತರ ಮೇಲೆ ಹಲ್ಲೆ ನಡೆಸಿದ ಪೊಲೀಸ್ ಅಧಿಕಾರಿ, ಸಿಬ್ಬಂದಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು. ಯುವಮೋರ್ಚಾ ನಿಮ್ಮ ಇಂತಹ ಬೆದರಿಕೆ, ಹಲ್ಲೆ, ದೌರ್ಜನ್ಯಕ್ಕೆ ಬಗ್ಗುವುದಿಲ್ಲ ಎಂದು ಹೇಳಿದರು.

ಅಧಿಕಾರ ದುರುಪಯೋಗ:

ದೇಶವನ್ನು ಉಳಿಸುವ ಹೋರಾಟವನ್ನು ಯಾವುದೇ ಹಂತಕ್ಕೆ ಕೊಂಡೊಯ್ಯಲು ಯುವ ಮೋರ್ಚಾ ಮುಖಂಡರು, ಕಾರ್ಯಕರ್ತರು, ಪಕ್ಷವು ಸಿದ್ಧವಿದೆ. ದೇಶದ ಐಕ್ಯತೆಗೆ ಧಕ್ಕೆ ತರುವ ಹೇಳಿಕೆ ನೀಡುವುದಲ್ಲದೇ, ಶಾಂತಿಯುತವಾಗಿ ಹೋರಾಟ ನಡೆಸಿದ್ದ ಯುವ ಮೋರ್ಚಾ ಮುಖಂಡರು, ಕಾರ್ಯಕರ್ತರ ಮೇಲೆ ಅಧಿಕಾರ ದುರುಪಯೋಗಪಡಿಸಿ ದೌರ್ಜನ್ಯ ಎಸಗಿದ ನಿಮ್ಮಂತಹವರಿಗೆ ತಕ್ಕ ಪಾಠ ಕಲಿಸುವ ದಿನಗಳೂ ದೂರವಿಲ್ಲ ಎಂದು ಎಚ್ಚರಿಸಿದರು.

ಪಾಲಿಕೆ ವಿಪಕ್ಷ ನಾಯಕ ಕೆ.ಪ್ರಸನ್ನಕುಮಾರ, ಬಿಜೆಪಿ ಜಿಲ್ಲಾ ಉಪಾಧ್ಯಕ್ಷರಾದ ಮಂಜಾನಾಯ್ಕ, ಶಿವರಾಜ ಪಾಟೀಲ್‌, ಯುವ ಮೋರ್ಚಾ ಕಾರ್ಯದರ್ಶಿ ಯಲ್ಲೇಶ, ಉಪಾಧ್ಯಕ್ಷ ಕಿರಣ್‌, ವಿನಯ್‌, ಅತಿಥ್ ಅಂಬರಕರ್, ಧನುಷ್, ಶಿವನಗೌಡ ಪಾಟೀಲ್‌, ಗೌತಮ್ ಜೈನ್, ಶಿವಾಜಿ ಪಾಟೀಲ್, ಪ್ರವೀಣ ಜಾಧವ್‌, ರಾಜೇಶ್ವರಿ ಕಲ್ಲಿಂಗಪ್ಪ, ನವೀನಕುಮಾರ, ಮಂಡಲ ಅಧ್ಯಕ್ಷ ರಾಕೇಶ ಬಜರಂಗಿ, ಚಂದ್ರು, ಸಚಿನ್‌, ಕಿಶೋರ ಮಡಿವಾಳ, ಕೆಟಿಜೆ ನಗರ ಆನಂದ, ನಿಂಗರಾಜ ರೆಡ್ಡಿ, ಕೆಟಿಜೆ ನಗರ ಲೋಕೇಶ, ಟಿಂಕರ್ ಮಂಜಣ್ಣ, ನವೀನ್, ಹರೀಶ ಇತರರಿದ್ದರು.

ಸ್ವಯಂ ಪ್ರೇರಿತ ದೂರು ದಾಖಲಿಸಿ

ಕಾಂಗ್ರೆಸ್‌ ಸಂಸದ ಡಿ.ಕೆ.ಸುರೇಶ್‌ರ ದೇಶ ವಿಭಜನೆಯ ಹೇಳಿಕೆಯನ್ನು ತೀವ್ರವಾಗಿ ಖಂಡಿಸುತ್ತೇವೆ. ಇಂತಹ ದೇಶ ವಿರೋಧಿ ಹೇಳಿಕೆ ನೀಡಿದ ಸಂಸದ ಸುರೇಶ ವಿರುದ್ಧ ರಾಜ್ಯ ಪೊಲೀಸ್ ಇಲಾಖೆ ಸ್ವಯಂ ಪ್ರೇರಿತ ದೂರು ದಾಖಲಿಸಬೇಕು. ಅಲ್ಲದೇ, ಸರ್ಕಾರಗಳು ಸಂಸದ ಸ್ಥಾನದಿಂದ ಸುರೇಶರನ್ನು ವಜಾಗೊಳಿಸಬೇಕು. ಮುಂಬರುವ ಲೋಕಸಭೆ ಚುನಾವಣೆಯಲ್ಲಿ ಸುರೇಶ್ ರಿಗೆ ಆ ಕ್ಷೇತ್ರದ ಮತದಾರರು ತಕ್ಕ ಪಾಠ ಕಲಿಸಲಿ.

ಆರ್.ಎಲ್‌.ಶಿವಪ್ರಕಾಶ, ಯುವ ಮೋರ್ಚಾ ಜಿಲ್ಲಾಧ್ಯಕ್ಷ, ಪಾಲಿಕೆ ಸದಸ್ಯ