ಸಾರಾಂಶ
ರಾಜ್ಯ ಸರ್ಕಾರದ ಗ್ಯಾರಂಟಿ ಯೋಜನೆ ಎಷ್ಟು ಜನಕ್ಕೆ ಬಂದಿದೆ? ಇದರ ಬಗ್ಗೆ ಜನರಿಗೆ ತಿಳಿವಳಿಕೆ ನೀಡಬೇಕು ಎಂದು ಬಿಜೆಪಿ ಅಭ್ಯರ್ಥಿ ವಿಶ್ವೇಶ್ವರ ಹೆಗಡೆ ಕಾಗೇರಿ ತಿಳಿಸಿದರು.
ಶಿರಸಿ: ಮೋದಿಯವರು ಪ್ರಧಾನಿಯಾದ ನಂತರ ದೇಶದ ಭದ್ರತೆ, ಸುರಕ್ಷತೆ ಹೆಚ್ಚಿದೆ. ಭಯೋತ್ಪಾದನೆ ಕಡಿಮೆಯಾಗಿದೆ. ಅವರು ನಮಗೆ ಅನಿವಾರ್ಯ ಎಂದು ಬಿಜೆಪಿ ಅಭ್ಯರ್ಥಿ ವಿಶ್ವೇಶ್ವರ ಹೆಗಡೆ ಕಾಗೇರಿ ತಿಳಿಸಿದರು.
ಅವರು ಸೋಮವಾರ ತಮ್ಮ ಸ್ವ ಕ್ಷೇತ್ರವಾದ ಶಿರಸಿ- ಸಿದ್ದಾಪುರ ಭಾಗದಲ್ಲಿ ಪ್ರಚಾರ ಸಭೆಯಲ್ಲಿ ಮಾತನಾಡಿ, ಬಡವರಿಗೆ ಸಾಕಷ್ಟು ಯೋಜನೆಗಳೂ ಬಂದಿದೆ. ಅಭಿವೃದ್ಧಿಯ ಪಥದಲ್ಲಿ ಮುಂದೆ ಹೋಗುತ್ತಿದ್ದೇವೆ. ಸೈನಿಕರ ಮಾನಸಿಕ ಸ್ಥೈರ್ಯ ಹೆಚ್ಚಿಸಲಾಗಿದೆ. ಆರ್ಥಿಕವಾಗಿ ಜಗತ್ತಿನ ೫ನೇ ಶಕ್ತಿ ಭಾರತವಾಗಿದೆ. ಚಂದ್ರಯಾನ ಯಶಸ್ಸು ಕಂಡಿದೆ ಎಂದರು.ಮತದಾರರ ಭಾವನೆಯನ್ನು ಅರಿಯುವುದು ಕಷ್ಟ. ನಾವು ಗಾಳಿಯಲ್ಲಿ ಇರುತ್ತೇವೆ. ಆಗ ನಿರೀಕ್ಷಿತ ಗೆಲುವು ಆಗುವುದಿಲ್ಲ. ಈ ಹಿಂದೆ ವಾಜಪೇಯಿ ಸಂದರ್ಭದಲ್ಲಿ ಇದೇ ರೀತಿ ಗಾಳಿ ಬೀಸಿತ್ತು. ಆಗ ಮೈಮರೆತ ಕಾರಣ ಸೋಲಾಗಿತ್ತು. ಈಗಲೂ ಎಲ್ಲೆಡೆ ಮೋದಿ ಹವಾ ನಡೆಯುತ್ತಿದೆ. ಆದರೆ ಈಗ ಕಾಂಗ್ರೆಸ್‌ವರು ಹಣ ನೀಡಲು ಬರುತ್ತಾರೆ. 500, 1000 ತರುತ್ತಾರೆ. ಅವರಿಗೆ ಬೇರೆ ದಾರಿಯಿಲ್ಲ. ನೈತಿಕವಾಗಿ ಅವರು ದಿವಾಳಿಯಾಗಿದ್ದಾರೆ. ನಾವು ಎಚ್ಚರಿಕೆಯಿಂದ ಪರಿಣಾಮಕಾರಿಯಾಗಿ ಕೆಲಸ ಮಾಡಬೇಕು ಎಂದರು.
ರಾಜ್ಯ ಸರ್ಕಾರದ ಗ್ಯಾರಂಟಿ ಯೋಜನೆ ಎಷ್ಟು ಜನಕ್ಕೆ ಬಂದಿದೆ? ಇದರ ಬಗ್ಗೆ ಜನರಿಗೆ ತಿಳಿವಳಿಕೆ ನೀಡಬೇಕು. ಇದು ದೇಶದ ಭವಿಷ್ಯದ ಚುನಾವಣೆ. ಜನರಿಗೆ ಉಜ್ವಲ ಗ್ಯಾಸ್, ಕಿಸಾನ್ ಸಮ್ಮಾನ್ ಯೋಜನೆ, ಜನೌಷಧ, ಆಯುಷ್ಮಾನ್ ಹೀಗೆ ಕೇಂದ್ರದ ಹಲವು ಯೋಜನೆಗಳು ಜನಪರವಾಗಿದೆ ಎಂದರು.ಎಲ್ಲವನ್ನೂ ಮರೆತು ದೇಶದ ಅಭಿವೃದ್ಧಿಗೆ ಕಮಲದ ಹೂವಿಗೆ ಮತ ಹಾಕಬೇಕು ಎಂದ ಕಾಗೇರಿ, ಆರ್ಟಿಕಲ್ 370 ರದ್ದು ಮಾಡಲಾಗಿದೆ. ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಾಣವಾಗಿದೆ. ಆದರೆ ಕಾಂಗ್ರೆಸ್ ಮುಸ್ಲೀಂ ಲೀಗ್ ಪ್ರಣಾಳಿಕೆ ನೀಡಿದೆ ಎಂದರು.
ಈ ಸಂದರ್ಭದಲ್ಲಿ ಬಿಜೆಪಿ, ಜೆಡಿಎಸ್ ಪ್ರಮುಖರು, ಕಾರ್ಯಕರ್ತರು ಇದ್ದರು.