ಸಾರಾಂಶ
ಕನ್ನಡಪ್ರಭ ವಾರ್ತೆ ಮಂಗಳೂರು
ದಕ್ಷಿಣ ಕನ್ನಡ ಜಿಲ್ಲೆಯ ಬಹು ವರ್ಷಗಳ ಕನಸಾಗಿರುವ ಎರಡು ಪ್ರಮುಖ ಯೋಜನೆಗಳಾದ ನೂತನ ಜಿಲ್ಲಾಧಿಕಾರಿ ಕಚೇರಿ ಸಂಕೀರ್ಣ ಮತ್ತು ಅಂತಾರಾಷ್ಟ್ರೀಯ ದರ್ಜೆಯ ಒಳಾಂಗಣ ಕ್ರೀಡಾಂಗಣವನ್ನು ಮೇ 16ರಂದು ಸ್ವತಃ ಸಿಎಂ ಸಿದ್ದರಾಮಯ್ಯ ಉದ್ಘಾಟಿಸಲಿದ್ದಾರೆ. ದ.ಕ. ಜಿಲ್ಲಾಧಿಕಾರಿ ಕಚೇರಿ ಸಂಕೀರ್ಣ ದೇಶದಲ್ಲೇ ಅತಿ ದೊಡ್ಡ ಜಿಲ್ಲಾಧಿಕಾರಿ ಕಚೇರಿ ಸಂಕೀರ್ಣ ಎಂಬ ಹೆಗ್ಗಳಿಕೆಗೆ ಪಾತ್ರವಾಗಲಿದೆ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ, ಎಂಎಲ್ಸಿ ಮಂಜುನಾಥ ಭಂಡಾರಿ ಹೇಳಿದ್ದಾರೆ.ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, 2016ರಲ್ಲಿ 75 ಕೋಟಿ ರು. ಅನುದಾನ ನೀಡಿ ಆಗ ಸಿಎಂ ಆಗಿದ್ದ ಸಿದ್ದರಾಮಯ್ಯ ಅವರು ಜಿಲ್ಲಾಧಿಕಾರಿ ಕಚೇರಿ ಸಂಕೀರ್ಣಕ್ಕೆ ಶಿಲಾನ್ಯಾಸ ನೆರವೇರಿಸಿದ್ದರು. ನಂತರದ 2 ವರ್ಷಗಳ ಕಾಲ ಕಾಮಗಾರಿ ಭರದಿಂದ ನಡೆದರೂ ಬಳಿಕ ಬಿಜೆಪಿ ಸರ್ಕಾರದ ಅವಧಿಯಲ್ಲಿ ಅನುದಾನವನ್ನೇ ನೀಡದೆ ಕಾಮಗಾರಿ ಸ್ಥಗಿತಗೊಂಡಿತ್ತು. ಇದೀಗ ಮತ್ತೆ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದ ಮೇಲೆ ಸ್ಪೀಕರ್ ಯು.ಟಿ. ಖಾದರ್ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ದಿನೇಶ್ ಗುಂಡೂರಾವ್ ಮುತುವರ್ಜಿಯಿಂದ ಹೆಚ್ಚುವರಿ 20 ಕೋಟಿ ರು. ಅನುದಾನ ನೀಡಿ ಕಾಮಗಾರಿಯನ್ನು ಸಂಪೂರ್ಣಗೊಳಿಸಲಾಗಿದೆ ಎಂದರು.
ಜಿಲ್ಲಾಧಿಕಾರಿ ಕಚೇರಿ ಸಂಕೀರ್ಣ ಮಾಜಿ ಸಚಿವ ರಮಾನಾಥ ರೈ ಅವರ ಕೊಡುಗೆ. ಬಹುತೇಕ ಕಚೇರಿಗಳು ಒಂದೇ ಕಡೆ ಕಾರ್ಯ ನಿರ್ವಹಿಸುವುದರಿಂದ ಜನರಿಗೆ ಅನುಕೂಲವಾಗಲಿದೆ ಎಂದು ಭಂಡಾರಿ ತಿಳಿಸಿದರು.8 ಸಾವಿರ ಆರ್‌ಟಿಸಿ ವಿತರಣೆ:
ದ.ಕ. ಜಿಲ್ಲೆಯ ಸುಮಾರು 30 ಸಾವಿರ ಜನರಿಗೆ ತಮ್ಮ ಭೂಮಿಯ ಆರ್‌ಟಿಸಿ ಇರಲಿಲ್ಲ. ಕಾಂಗ್ರೆಸ್ ಸರ್ಕಾರ ಬಂದ ಬಳಿಕ ಪೋಡಿ ಅಭಿಯಾನ ನಡೆಸಿ ಇದುವರೆಗೆ 8 ಸಾವಿರ ಆರ್‌ಟಿಸಿಗಳನ್ನು ಸಿದ್ಧಪಡಿಸಲಾಗಿದೆ. ಈ ಫಲಾನುಭವಿಗಳೆಲ್ಲರಿಗೂ ಡಿಸಿ ಕಚೇರಿ ಉದ್ಘಾಟನಾ ಕಾರ್ಯಕ್ರಮದಲ್ಲೇ ಸಿಎಂ ಆರ್‌ಟಿಸಿಗಳನ್ನು ವಿತರಿಸಲಿದ್ದಾರೆ. ಬೆಳ್ತಂಗಡಿ, ಬಂಟ್ವಾಳದಲ್ಲಿ ತಲಾ 2 ಸಾವಿರ ಮಂದಿ, ಮೂಡುಬಿದಿರೆಯಲ್ಲಿ 1.5 ಸಾವಿರ, ಮಂಗಳೂರಲ್ಲಿ 1 ಸಾವಿರ ಸೇರಿದಂತೆ ಜಿಲ್ಲಾದ್ಯಂತ ಫಲಾನುಭವಿಗಳನ್ನು ಗುರುತಿಸಿ ಕರೆತರಲು ವ್ಯವಸ್ಥೆ ಮಾಡಲಾಗಿದೆ ಎಂದು ಹೇಳಿದರು.ಕಾಂಗ್ರೆಸ್ ಮುಖಂಡರಾದ ಮಿಥುನ್ ರೈ, ಎಂ.ಎಸ್. ಮೊಹಮ್ಮದ್, ಶಾಹುಲ್ ಹಮೀದ್, ಇಬ್ರಾಹಿಂ ನವಾಝ್, ಬಶೀರ್, ಸುಹಾನ್ ಆಳ್ವ, ಶುಭೋದಯ ಆಳ್ವ, ನಝೀರ್ ಬಜಾಲ್ ಇದ್ದರು.
--------ಪೊಲೀಸ್ ವೆರಿಫಿಕೇಶನ್ ಬಳಿಕ ಆಯ್ಕೆ: ಸ್ಪಷ್ಟನೆಕುಕ್ಕೆ ಸುಬ್ರಹ್ಮಣ್ಯ ದೇವಾಲಯದ ಆಡಳಿತ ಮಂಡಳಿ ಅಧ್ಯಕ್ಷರಾಗಿ ಮಾಜಿ ರೌಡಿ ಶೀಟರ್ ಆಯ್ಕೆ ಮಾಡಿರುವ ಕುರಿತು ಬಿಜೆಪಿ ಆರೋಪಗಳಿಗೆ ಪ್ರತಿಕ್ರಿಯಿಸಿದ ಮಂಜುನಾಥ ಭಂಡಾರಿ, ಪೊಲೀಸ್ ವೆರಿಫಿಕೇಶನ್ ನಡೆದ ಬಳಿಕವೇ ಈ ಆಯ್ಕೆ ಕಾನೂನು ಪ್ರಕಾರವಾಗಿ ನಡೆದಿದೆ. 2008ರ ಬಳಿಕ ಅವರ ಮೇಲೆ ಯಾವುದೇ ರೀತಿಯ ಪ್ರಕರಣ ದಾಖಲಾಗಿಲ್ಲ. ಅಲ್ಲದೆ ರೌಡಿ ಹಾಳೆಯಿಂದ ಅವರ ಹೆಸರು ತೆಗೆಯಲಾಗಿದೆ ಎಂದರು.