ದೇಶದ ಹೆಮ್ಮೆ ಪುತ್ರಿ ರಾಜಮಾತೆ ಅಹಿಲ್ಯಾಬಾಯಿ: ಮಹಾಂತೇಶ ಹಿಟ್ಟಿನಮಠ

| Published : Jun 20 2024, 01:01 AM IST

ದೇಶದ ಹೆಮ್ಮೆ ಪುತ್ರಿ ರಾಜಮಾತೆ ಅಹಿಲ್ಯಾಬಾಯಿ: ಮಹಾಂತೇಶ ಹಿಟ್ಟಿನಮಠ
Share this Article
  • FB
  • TW
  • Linkdin
  • Email

ಸಾರಾಂಶ

31 ವರ್ಷಗಳ ಕಾಲ ರಾಜ್ಯಭಾರ ಮಾಡಿ ಮೊಘಲರು ಮತ್ತು ನಿಜಾಮರ ದಾಳಿಗೆ ನಶಿಸಿ ಹೋಗಿದ್ದ ದೇಗುಲಗಳನ್ನು ಪುನಃ ಸ್ಥಾಪನೆ ಮಾಡಿ ಭಾರತೀಯ ಸಂಸ್ಕೃತಿ ಉಳಿಸಿದ ಕೀರ್ತಿ ಅಹಲ್ಯಬಾಯಿ ಹೊಳ್ಕರ್‌ ಅವರಿಗೆ ಸಲ್ಲುತ್ತದೆ ಎಂದು ಜಿಪಂ ಮಾಜಿ ಅಧ್ಯಕ್ಷ ಮಹಾಂತೇಶ ಹಿಟ್ಟಿನಮಠ ಹೇಳಿದರು.

ಕನ್ನಡಪ್ರಭ ವಾರ್ತೆ ಮಹಾಲಿಂಗಪುರ

ಇತಿಹಾಸದಲ್ಲೇ ಸಾಮ್ರಾಜ್ಯಗಳನ್ನಾಳಿದ ರಾಣಿಯರಲ್ಲಿ ಮೊದಲ ಪಂಕ್ತಿಗೆ ಸೇರುವ ರಾಣಿ ಅಹಲ್ಯಾಬಾಯಿ ಹೋಳ್ಕರ ಕೂಡ ಒಬ್ಬರಾಗಿದ್ದಾರೆ. ಅವರ ಸಾಮಾಜಿಕ, ಧಾರ್ಮಿಕ ಅಭಿವೃದ್ಧಿ, ಧರ್ಮ ಪುನರುತ್ಥಾನ ವಿಚಾರವಾಗಿ ಮೊದಲ ಸಾಲಿನಲ್ಲಿ ನಿಲ್ಲುತ್ತಾರೆ. ಮೂರು ಶತಮಾನಗಳ ಹಿಂದೆ ಹುಟ್ಟಿ 31 ವರ್ಷಗಳ ಕಾಲ ರಾಜ್ಯಭಾರ ಮಾಡಿ ಮೊಘಲರು ಮತ್ತು ನಿಜಾಮರ ದಾಳಿಗೆ ನಶಿಸಿ ಹೋಗಿದ್ದ ದೇಗುಲಗಳನ್ನು ಪುನಃ ಸ್ಥಾಪನೆ ಮಾಡಿ ಭಾರತೀಯ ಸಂಸ್ಕೃತಿಯನ್ನು ಉಳಿಸಿದ ಕೀರ್ತಿ ಅಹಲ್ಯಬಾಯಿ ಹೊಳ್ಕರ ಅವರಿಗೆ ಸಲ್ಲುತ್ತದೆ ಎಂದು ಜಿಲ್ಲಾ ಪಂಚಾಯತಿ ಮಾಜಿ ಅಧ್ಯಕ್ಷರಾದ ಮಹಾಂತೇಶ ಹಿಟ್ಟಿನಮಠ ಹೇಳಿದರು.

ಸ್ಥಳೀಯ ಕರಿಸಿದ್ದೇಶ್ವರ ದೇವಸ್ಥಾನದ ಸಭಾಂಗಣದಲ್ಲಿ ನಡೆದ ರಾಜಮಾತೆ ಅಹಲ್ಯಾಬಾಯಿ ಹೊಳ್ಕರ ಅವರ 299 ನೇ ಜಯಂತಿ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ರಾಜಮಾತೆಯ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಿದರು. ಇಂಧೋರ್‌ನ ರಾಜಮಾತೆ ಪರಕೀಯರ ಹಾಗೂ ಮುಸ್ಲಿಂ ದೊರೆಗಳು ದಾಳಿಗೆ ನಾಶವಾಗಿದ್ದ ದೇಶದ ಮೂರು ಸಾವಿರಕ್ಕೂ ಅಧಿಕ ದೇವಸ್ಥಾನಗಳನ್ನು ಪುನಃ ನಿರ್ಮಾಣ ಮಾಡಿ ಹಿಂದೂ ಧರ್ಮ ಮತ್ತು ಸಂಸ್ಕೃತಿಯನ್ನು ಉಳಿಸಿದ ಕೀರ್ತಿ ರಾಜಮಾತೆಗೆ ಸಲ್ಲುತ್ತದೆ ಎಂದು ಬಣ್ಣಿಸಿದರು.

ರಾಷ್ಟ್ರೀಯ ಅತ್ತುತ್ತಮ ಶಿಕ್ಷಕಿ ಪ್ರಶಸ್ತಿ ಪಡೆದ ಸಪನಾ ಅನಿಗೋಳ ಮಾತನಾಡಿ, ರಾಜಮಾತೆಯ ಕಲಿಸಿದ ಸಂಸ್ಕಾರ ರಾಷ್ಟ್ರಕ್ಕೆ ಮಾದರಿಯಾಗುವಂತದ್ದು. ಗಂಡ ಸತ್ತರೆ ಅವನ ಅಸ್ತಿ ಹೆಂಡತಿಗೆ ಸಿಗುವುದನ್ನು ನಿರಾಕರಿಸಲ್ಪಟ್ಟ ಕಾಲದಲ್ಲಿ ಇಂತಹ ಪದ್ಧತಿ ರಿವಾಜುಗಳಿಗೆ ಕಡಿವಾಣ ಹಾಕಿ ಗಂಡನ ಆಸ್ತಿಗೆ ಹೆಂಡತಿ ವಾರಸುದಾರಳೆಂಬ ಕಾನೂನನ್ನು ಜಾರಿಮಾಡಿ ಹೊಸ ಭಾಷ್ಯ ಬರೆದಿದ್ದಳು. ದತ್ತು ಮಕ್ಕಳಿಗೆ ಆಸ್ತಿಯಲ್ಲಿ ಹಕ್ಕು ನೀಡುವ ಕಾಯ್ದೆಗಳನ್ನು ಜಾರಿಗೆ ತಂದಳು. ಇಂಧೋರ್‌ನ್ನು ಆರ್ಥಿಕ ಚಟುವಟಿಕೆಗಳ ಕೇಂದ್ರವಾಗಿ ಬೆಳೆಸಿದಳು. ಅಹಲ್ಯಾ ಬಾಯಿ ಹೋಳ್ಕರ್ ಜೀವನ ನಿಜಕ್ಕೂ ಆದರ್ಶಪ್ರಾಯವಾಗಿದೆ ಎಂದು ಸ್ಮರಿಸಿದರು.

ಪ್ರಾಸ್ತಾವಿಕವಾಗಿ ಮಹೇಶ ಇಟಕನ್ನವರ ಮಾತನಾಡಿ, ಅಹಲ್ಯಾಬಾಯಿ 8 ವರ್ಷದವಳಾಗಿದ್ದಾಗಲೇ ಮದುವೆ ಮಾಡಲಾಯಿತು. ಕೇವಲ 29 ವರ್ಷಕ್ಕೆ ವಿಧವೆಯಾಗುತ್ತಾಳೆ. ಆಗಿನ ರೂಢಿಯಂತೆ ಸತಿ ಜೊತೆ ಹೋಗಲು ನಿರ್ಧರಿಸುತ್ತಾಳೆ. ಮಾವ ಅತ್ತೆ ಮಗಳಾಗಿ ಸಾಮ್ರಾಜ್ಯ ಕಟ್ಟುವಂತೆ ಅಂಗಲಾಚುತ್ತಾರೆ. ಆಗಲೇ ತಾನೇ ರಾಜಾಡಳಿತ ಸೂತ್ರವನ್ನು ಹಿಡಿಯುತ್ತಾಳೆ. ಶತ್ರುಗಳಿಗೆ ತಲೆ ನೋವಾಗುತ್ತಾಳೆ, ಪ್ರಜೆಗಳಿಗೆ ಮಾತೃ ಹೃದಯಿಯಾಗಿ ಆಡಳಿತ ಮಾಡುತ್ತಾಳೆ ಎಂದು ತಿಳಿಸಿದರು.

ಸಾನ್ನಿಧ್ಯವನ್ನು ನಾಗರಾಳದ ಅಮೋಘ ಸಿದ್ದೇಶ್ವರ ಮಠದ ಪೀಠಾಧಿಪತಿ ಪ ಪು ಶ್ರೀ ಜ್ಯೋತಿ ಲಕ್ಕಪ್ಪ ಮಹಾರಾಜರು ವಹಿಸಿದ್ದರು. ಬಸವರಾಜ ಮೇಟಿ, ಮಹಾಲಿಂಗಪ್ಪ ಸನದಿ, ಜಯರಾಮ ಶೆಟ್ಟಿ, ಮಾತನಾಡಿದರು. ಎಸ್.ವೈ.ಹುದ್ದಾರ ಅಧ್ಯಕ್ಷತೆ ವಹಿಸಿದ್ದರು. ವಿದ್ಯಾ ಮಹಾಂತೇಶ ಶೇಗುಣಶಿ, ಸುಶೀಲಾ ಸೈದಾಪುರ, ಸುಮಾ ಮೇಟಿ ವೇದಿಕೆಯಲ್ಲಿದ್ದರು.

ಈ ವೇಳೆ ಸಮಾಜದ ವಿವಿಧ ಕ್ಷೇತ್ರದಲ್ಲಿ ಸೇವೆ ಸಲ್ಲಿಸಿದ ಮತ್ತು ನೂತನವಾಗಿ ವಿವಿಧ ಕ್ಷೇತ್ರಗಳಿಗೆ ಆಯ್ಕೆಯಾದ ಗಣ್ಯರನ್ನು ಸನ್ಮಾನಿಸಿ ಗೌರವಿಸಲಾಯಿತು. ಮುಖಂಡರಾದ ಮಹಾಲಿಂಗಪ್ಪ ಜಕ್ಕಣ್ಣವರ, ಚಂದ್ರಪ್ಪ ದೋಣಿ, ಗೊಲೇಶ ಅಮ್ಮಣಗಿ, ಶ್ರೀಶೈಲ ಕಾರಜೋಳ, ಕಲ್ಲಪ್ಪ ಚಿಂಚಲಿ, ಪ್ರಭು ಹುಬ್ಬಳ್ಳಿ, ಶ್ರೀಶೈಲ ಅವಟಿ, ಮಹಾಲಿಂಗಪ್ಪ ಹೊಸೂರು, ಪರಸಪ್ಪ ಬಂಡಿ, ರಾಜು ದೋಣಿ, ಹಣಮಂತ ಸಂಶಿ, ಹಣಮಂತ ಅವಟಿಗಿ, ಭರಮಪ್ಪ ಅವಟಿ, ಶ್ರೀಶೈಲ ಕಳ್ಯಾಗೋಳ, ಮುತ್ತು ಸಾಲಿಮನಿ, ಕರೆಪ್ಪ ಪೂಜಾರಿ, ಈರಪ್ಪ ಜಕ್ಕಣ್ಣವರ, ಚಂದ್ರು ಸಂಶಿ, ಮಲ್ಲಿಕಾರ್ಜುನ್‌ ಬನಹಟ್ಟಿ, ರಾಮಣ್ಣ ಹುಣಸಿಕಟ್ಟಿ, ರಾಮನಗೌಡ ಪಾಟೀಲ, ಸದಾಶಿವ ದೋಣಿ ಹಲವರು ಇದ್ದರು. ಲಕ್ಷ್ಮಣ ಕಿಶೋರ ನಿರೂಪಿಸಿ ವಂದಿಸಿದರು.