ಮಕ್ಕಳಲ್ಲಿ ಸನಾತನ ಸಂಸ್ಕೃತಿ, ಸಂಸ್ಕಾರ ಬೆಳೆಸದಿದ್ದರೆ ದೇಶ ವಿನಾಶಕ್ಕೆ ಹೋಗುತ್ತದೆ: ಸಾಲೂರು ಮಠದ ಸ್ವಾಮೀಜಿ

| Published : Sep 19 2024, 01:50 AM IST

ಮಕ್ಕಳಲ್ಲಿ ಸನಾತನ ಸಂಸ್ಕೃತಿ, ಸಂಸ್ಕಾರ ಬೆಳೆಸದಿದ್ದರೆ ದೇಶ ವಿನಾಶಕ್ಕೆ ಹೋಗುತ್ತದೆ: ಸಾಲೂರು ಮಠದ ಸ್ವಾಮೀಜಿ
Share this Article
  • FB
  • TW
  • Linkdin
  • Email

ಸಾರಾಂಶ

ಪ್ರಸ್ತುತ ಈಗ ಎಲ್ಲರದೂ ಧಾವಂತದ ಬದುಕು. ಅವಿಭಕ್ತ ಕುಟುಂಬಗಳೇ ಇಲ್ಲ. ಎಲ್ಲಾ ವಿಘಟನೆಗಳೇ. ಹೆಣ್ಣು ಮಕ್ಕಳಿಗೂ ಆಸ್ತಿಯಲ್ಲಿ ಹಕ್ಕು ಬಂದ ನಂತರ ದೇಶದಲ್ಲಿ 3 ಲಕ್ಷ ಪ್ರಕರಣಗಳು ನ್ಯಾಯಾಲಯದ ಮುಂದಿವೆ. ಜೀವನ ನಶ್ವರ, ಮಾಡಿದ ಕೆಲಸ ಮಾತ್ರ ಉಳಿಯುತ್ತದೆ. ಆದ್ದರಿಂದ ಎಲ್ಲರನ್ನು ಇದನ್ನು ಆರ್ಥ ಮಾಡಿಕೊಂಡು ಜೀವನಸಾಗಿಸಬೇಕು.

ಕನ್ನಡಪ್ರಭ ವಾರ್ತೆ ಮೈಸೂರು

ಮಕ್ಕಳಲ್ಲಿ ಸನಾತನ ಸಂಸ್ಕೃತಿ, ಸಂಸ್ಕಾರ ಬೆಳೆಸದಿದ್ದರೆ ದೇಶ ವಿನಾಶಕ್ಕೆ ಹೋಗುತ್ತದೆ ಎಂದು ಮಹದೇಶ್ವರ ಬೆಟ್ಟದ ಸಾಲೂರು ಬೃಹನ್ಮಠದ ಶ್ರೀ ಶಾಂತ ಮಲ್ಲಿಕಾರ್ಜುನ ಸ್ವಾಮೀಜಿ ಹೇಳಿದರು.

ಮೈಸೂರು ಜಿಲ್ಲಾ, ಸರಗೂರು ಹಾಗೂ ಎಚ್.ಡಿ. ಕೋಟೆ ತಾ. ಶರಣ ಸಾಹಿತ್ಯ ಪರಿಷತ್ತು ವತಿಯಿಂದ ಪಡುವಲು ಶ್ರೀವಿರಕ್ತ ಮಠದಲ್ಲಿ ಬುಧವಾರ ಏರ್ಪಡಿಸಿದ್ದ ಶ್ರೀ ಶಿವರಾತ್ರಿ ರಾಜೇಂದ್ರ ಸ್ವಾಮಿಗಳ 109 ನೇ ಜಯಂತಿಯಲ್ಲಿ ಸಮ್ಮುಖ ವಹಿಸಿ ಅವರು ಮಾತನಾಡಿದರು.

ಶಿಕ್ಷಣದ ಜೊತೆಗೆ ಸಂಸ್ಕಾರವನ್ನು ಒಂದು ಭಾಗ ಮಾಡಬೇಕು. ಇದರಲ್ಲಿ ನಾವು ಸೋತಿದ್ದೇವೆ ಎನಿಸುತ್ತದೆ. ಇದರಿಂದಾಗಿಯೇ ಓದಿದವರಿಂದಲೇ ಶ್ರೀಲಂಕಾದಲ್ಲಿ ಚರ್ಚಿನ ಮೇಲೆ ದಾಳಿ ನಡೆದಿದೆ. ಮೊಬೈಲ್‌ಗಳು ಬಂದು ಅಜ್ಜಿ ಕತೆಗಳನ್ನು ಮರೆತಿದ್ದೇವೆ. ಸಂಸ್ಕೃತಿ, ಸಂಸ್ಕಾರ ಉಳಿಯಬೇಕು. ನೀತಿಪಾಠಗಳನ್ನು ಕಲಿಸಬೇಕು. ಇಲ್ಲದಿದ್ದಲ್ಲಿ ಶ್ರೀಲಂಕಾ, ಬಾಂಗ್ಲಾ, ಪಾಕಿಸ್ತಾನದಂಥ ಘಟನೆಗಳು ನಡೆಯುತ್ತವೆ ಎಂದರು.

ಭಾರತ ಒಂದು ಸಮೃದ್ಧ ದೇಶ. ಇಡೀ ವಿಶ್ವಕ್ಕೆ ಆಹಾರವನ್ನು ಪೂರೈಸುತ್ತಿದೆ. ಭಾರತೀಯರ ಮನಸ್ಸು ಕೂಡ ಶ್ರೀಮಂತಿಕೆಯಿಂದ ಕೂಡಿದೆ. ದೇಶದ ಸಂವಿಧಾನದ ಮೂಲತತ್ವ ಕೂಡ ವಚನ ಸಾಹಿತ್ಯವನ್ನು ಆಧರಿಸಿದೆ. ಕಳಬೇಡ, ಕೊಲಬೇಡ, ಹುಸಿಯ ನುಡಿಯಲು ಬೇಡ. ಸೇರಿದಂತೆ ಬಸವಾದಿ ಶರಣರ ಏಳು ತತ್ವಗಳು ಇದಲ್ಲಿ ಅಡಕವಾಗಿವೆ ಎಂದರು.

ಸರ್ಕಾರದ ಜೊತೆಗೆ ವೀರಶೈವ ಮಠಮಾನ್ಯಗಳು ಕೂಡ ಕೈಜೋಡಿಸಿದವು. ಇದರಿಂದ ಸಾಕ್ಷರತಾ ಪ್ರಮಾಣ ಹೆಚ್ಚಳವಾಯಿತು. ಶ್ರೀ ಶಿವರಾತ್ರಿ ರಾಜೇಂದ್ರ ಸ್ವಾಮಿಗಳ ದೂರದೃಷ್ಟಿಯ ಫಲವಾಗಿ ಶಾಲೆಗಳು ಆರಂಭವಾದವು ಎಂದರು.

ಅಧ್ಯಕ್ಷತೆ ವಹಿಸಿದ್ದ ಜಿಲ್ಲಾ ಶರಣ ಸಾಹಿತ್ಯ ಪರಿಷತ್ ಅಧ್ಯಕ್ಷ ಹೆಳವರಹುಂಡಿ ಸಿದ್ದಪ್ಪ ಮಾತನಾಡಿ, ರಾಜೇಂದ್ರ ಶ್ರೀಗಳ ದೂರದೃಷ್ಟಿಯ ಫಲವಾಗಿ ಸರಗೂರು, ಹುಲ್ಲಹಳ್ಳಿ, ಎಚ್.ಡಿ. ಕೋಟೆ, ಹಳ್ಳಿಕೆರೆಹುಂಡಿಯಂಥ ಗ್ರಾಮೀಣ ಪ್ರದೇಶಗಳಲ್ಲೂ ಐವತ್ತು ವರ್ಷಗಳ ಹಿಂದೆಯೇ ಶಾಲೆಗಳು ಪ್ರಾರಂಭವಾದವು. ಇಲ್ಲದಿದ್ದಲ್ಲಿ ಗ್ರಾಮೀಣ ಮಕ್ಕಳಿಗೆ ವಿದ್ಯೆ ಕಲಿಯುವ ಅವಕಾಶವೇ ಸಿಗುತ್ತಿರಲಿಲ್ಲ ಎಂದರು.

ಪ್ರಸ್ತುತ ಈಗ ಎಲ್ಲರದೂ ಧಾವಂತದ ಬದುಕು. ಅವಿಭಕ್ತ ಕುಟುಂಬಗಳೇ ಇಲ್ಲ. ಎಲ್ಲಾ ವಿಘಟನೆಗಳೇ. ಹೆಣ್ಣು ಮಕ್ಕಳಿಗೂ ಆಸ್ತಿಯಲ್ಲಿ ಹಕ್ಕು ಬಂದ ನಂತರ ದೇಶದಲ್ಲಿ 3 ಲಕ್ಷ ಪ್ರಕರಣಗಳು ನ್ಯಾಯಾಲಯದ ಮುಂದಿವೆ. ಜೀವನ ನಶ್ವರ, ಮಾಡಿದ ಕೆಲಸ ಮಾತ್ರ ಉಳಿಯುತ್ತದೆ. ಆದ್ದರಿಂದ ಎಲ್ಲರನ್ನು ಇದನ್ನು ಆರ್ಥ ಮಾಡಿಕೊಂಡು ಜೀವನ ಸಾಗಿಸಬೇಕು ಎಂದರು.

ರಾಜೇಂದ್ರ ಶ್ರೀಗಳದ್ದು ಆದರ್ಶಪ್ರಾಯ ಬದುಕು. ತಾಳ್ಮೆಯಿಂದ ಇದ್ದರೆ ಮಾತ್ರ ಸಾಧನೆ ಸಾಧ್ಯ. ಆದ್ದರಿಂದ ರಾಜೇಂದ್ರ ಶ್ರೀಗಳು, ಗುರುಮಲ್ಲೇಶ್ವರರು, ಮಹದೇಶ್ವರರು - ಈ ರೀತಿಯ ತ್ಯಾಗಿಗಳನ್ನು ಸ್ಮರಿಸುವ ಕೆಲಸ ಮಾಡೋಣ ಎಂದು ಕರೆ ನೀಡಿದರು.

ಜಿಲ್ಲಾ ಶಸಾಪ ಮಾಜಿ ಅಧ್ಯಕ್ಷ ಎಂ. ಚಂದ್ರಶೇಖರ್ ಪ್ರಾಸ್ತಾವಿಕ ಭಾಷಣ ಮಾಡಿ, ನಮ್ಮಲ್ಲಿ ಕನಿಷ್ಠ 25 ಸಾವಿರ ದತ್ತಿ ಇಟ್ಟರೆ ಪ್ರತಿವರ್ಷ ಕಾರ್ಯಕ್ರಮಗಳನ್ನು ನಡೆಸಿಕೊಂಡು ಶರಣ ಸಾಹಿತ್ಯವನ್ನು ಪ್ರಸಾರ ಮಾಡಲಾಗುವುದು ಎಂದರು.

ಡಾ.ಶಿವರಾತ್ರಿ ರಾಜೇಂದ್ರ ಶ್ರೀಗಳ ಜೀವನ- ಸಾಧನೆ ಕುರಿತು ಹಿರಿಯ ಪತ್ರಕರ್ತ ಅಂಶಿ ಪ್ರಸನ್ನಕುಮಾರ್ ಉಪನ್ಯಾಸ ನೀಡಿದರು.

ಪಡುವಲು ಶ್ರೀವಿರಕ್ತ ಮಠದ ಶ್ರೀ ಮಹದೇವ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು. ಶಸಾಪ ತಾ. ಅಧ್ಯಕ್ಷರಾದ ಸರಗೂರಿನ ಕೆ.ಗುರುಸ್ವಾಮಿ, ಎಚ್.ಡಿ.ಕೋಟೆಯ ಪಿ.ಕೆ. ಶಿವರಾಜ್, ದತ್ತಿ ದಾಸೋಹಿ ವೈ.ಟಿ. ಮಹೇಶ್, ಬಿಜೆಪಿ ಮುಖಂಡ ಗೆಜ್ಜಗಳ್ಳಿ ಮಹೇಶ್. ಸಿದ್ದೇಶ್ ಬಾಬು ಮೊದಲಾದವರು ಇದ್ದರು. ಶೋಭಾರಾಣಿ ಪ್ರಾರ್ಥಿಸಿದರು. ಶಿಕ್ಷಕ ಕೆಂಪಣ್ಣ ನಿರೂಪಿಸಿದರು. ಸರಗೂರಿನ ವ್ಯಾಪಾರಿ ಬೃಂಗೀಶ್, ಎಚ್.ಡಿ. ಕೋಟೆಯ ವೈ.ಟಿ. ಮಹೇಶ್ ದತ್ತಿ ದಾನಿಗಳಾಗಿದ್ದರು.ಕೆಡಕುಗಳಿಗೆ ಅಜ್ಞಾನ ಕಾರಣ ಎಂದು ಜ್ಞಾನಜ್ಯೋತಿ ಬೆಳಗಿದ ರಾಜೇಂದ್ರ ಶ್ರೀ- ಅಂಶಿ

ಕನ್ನಡಪ್ರಭ ವಾರ್ತೆ ಮೈಸೂರು

ಕೆಡಕುಗಳಿಗೆ ಅಜ್ಞಾನ ಕಾರಣ. ಸುಶಿಕ್ಷಿತ ಯುವಕರಿದ್ದರೆ ದೇಶ ಸುಭಿಕ್ಷವಾಗುತ್ತದೆ ಎಂದು ತಿಳಿದು ಶ್ರೀ ಶಿವರಾತ್ರಿ ರಾಜೇಂದ್ರ ಸ್ವಾಮಿಗಳು ಜ್ಞಾನದ ಜ್ಯೋತಿ ಬೆಳಗಿದರು ಎಂದು ಹಿರಿಯ ಪತ್ರಕರ್ತ ಅಂಶಿ ಪ್ರಸನ್ನಕುಮಾರ್ ಹೇಳಿದರು.

ಸರಗೂರು ಬಿಡಗಲು- ಪಡುವಲು ಶ್ರೀವಿರಕ್ತ ಮಠದಲ್ಲಿ ಬುಧವಾರ ಜಿಲ್ಲಾ ಶರಣ ಸಾಹಿತ್ಯ ಪರಿಷತ್ ಏರ್ಪಡಿಸಿದ್ದ ರಾಜೇಂದ್ರ ಶ್ರೀಗಳ ಜಯಂತಿಯಲ್ಲಿ ದತ್ತಿ ಉಪನ್ಯಾಸ ನೀಡಿದ ಅವರು,

ರಾಜೇಂದ್ರ ಶ್ರೀಗಳು ತ್ಯಾಗ ಮತ್ತು ಸೇವೆ ಎಂಬ ಎರಡು ಆದರ್ಶಗಳನ್ನು ತಮ್ಮ ಧ್ಯೇಯವಾಗಿಸಿಕೊಂಡು ತಾವು ಕಂಡ ಜ್ಞಾನಾನ್ನ ದಾಸೋಹವನ್ನು ನನಸು ಮಾಡಲು ಜೋಳಿಗೆ ಹಿಡಿದು ಭಿಕ್ಷೆ ಎತ್ತಿದರು. ಗ್ರಾಮೀಣ ಪ್ರದೇಶದಿಂದ ವಿದ್ಯೆ ಕಲಿಯಲು ಬಂದ ಮಕ್ಕಳು ಊಟ- ವಸತಿಗೆ ಪರದಾಡುವುದನ್ನು ಕಂಡು ಚಿನ್ನದ ರುದ್ರಾಕ್ಷಿ ಸರ, ಕರಡಿಗೆ, ಉಂಗುರು ಮಾರಿ ವಿದ್ಯಾರ್ಥಿ ನಿಲಯ ಆರಂಭಿಸಿದರು. ಅದೇ ಮುಂದೆ ಜೆಎಸ್ಎಸ್ ಮಹಾವಿದ್ಯಾಪೀಠವಾಗಿ ಇವತ್ತು 350ಕ್ಕೂ ಹೆಚ್ಚು ಸಂಸ್ತೆಗಳ ಹೆಮ್ಮರವಾಗಿ ಬೆಳೆದು ನಿಂತಿದೆ. ಲಕ್ಷಾಂತರ ಮಂದಿಗೆ ವಿದ್ಯೆ ನೀಡಿದೆ. ಸಹಸ್ರಾರು ಮಂದಿಗೆ ಉದ್ಯೋಗ ನೀಡಿ, ಬದುಕು ಕಟ್ಟಿಕೊಳ್ಳಲು ದಾರಿ ಮಾಡಿಕೊಟ್ಟಿದ್ದಾರೆ ಎಂದರು.

ಅನ್ನ, ಅರಿವು, ಆರೋಗ್ಯ, ಕಲೆ, ಸಾಹಿತ್ಯ, ಸಂಗೀತ, ಸಮಾಜ ಸುಧಾರಣೆ, ಧರ್ಮಜಾಗೃತಿ- ಹೀಗೆ ಹತ್ತು ಹಲವು ಕೈಂಕರ್ಯಗಳಲ್ಲಿ ರಾಜೇಂದ್ರ ಶ್ರೀಗಳು ತೊಡಗಿಸಿಕೊಂಡಿದ್ದರು. ಆ ಮೂಲಕ ಸುತ್ತೂರನ್ನು ಹತ್ತೂರು ತಿರುಗಿ ನೋಡುವಂತೆ ಮಾಡಿದರು. ಈಗಿನ ಶ್ರೀ ದೇಶಿಕೇಂದ್ರ ಸ್ವಾಮಿಗಳು ಅದನ್ನು ಮುಂದುವರಿಸಿ, ಕನ್ಯಾಕುಮಾರಿಯಿಂದ ಕಾಶ್ಮೀರದವರೆಗೆ, ಭಾರತ ಮಾತ್ರವಲ್ಲದೇ ವಿದೇಶಗಳಲ್ಲೂ ಕೂಡ ಸಂಸ್ಥೆಗಳನ್ನು ತೆರೆದಿದ್ದಾರೆ. ಆ ಮೂಲಕ ಸುತ್ತೂರು ಕ್ಷೇತ್ರದ ಖ್ಯಾತಿಯನ್ನು ಜಗದಗಲಕ್ಕೆ ವಿಸ್ತರಿಸಿದ್ದಾರೆ ಎಂದರು.