ಗ್ರಾಮೀಣ ಭಾಗ ಪ್ರಗತಿಯಾಗದರೆ ದೇಶದ ಅಭಿವೃದ್ಧಿ: ಶಾಸಕ ಯು.ಬಿ. ಬಣಕಾರ

| Published : Dec 16 2024, 12:45 AM IST

ಸಾರಾಂಶ

ಶಿರಗಂಬಿ ಗ್ರಾಮದ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ವಿವೇಕ ಯೋಜನೆಯಡಿ ಎರಡು ಶಾಲಾ ಕಟ್ಟಡ ಹಾಗೂ ಶುದ್ಧ ನೀರಿನ ಘಟಕ ಉದ್ಘಾಟಿಸಲಾಯಿತು.

ರಟ್ಟೀಹಳ್ಳಿ: ಗ್ರಾಮೀಣ ಭಾಗದ ವಿದ್ಯಾರ್ಥಿಗಳು ಹೆಚ್ಚು ಪ್ರತಿಭಾನ್ವಿತರಿದ್ದು ಅವರಿಗೆ ಸರಕಾರದ ಎಲ್ಲ ಸವಲತ್ತುಗಳು ದೊರೆಯುವಂತೆ ಮಾಡಿ ಅವರನ್ನು ಸಮಾಜದ ಮುಖ್ಯ ವಾಹಿನಿಗೆ ತರುವುದೇ ನನ್ನ ಮುಖ್ಯ ಉದ್ದೇಶ ಎಂದು ಶಾಸಕ ಯು.ಬಿ. ಬಣಕಾರ ಹೇಳಿದರು.ತಾಲೂಕಿನ ಶಿರಗಂಬಿ ಗ್ರಾಮದ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಗೆ ವಿವೇಕ ಯೋಜನೆಯಡಿ ಎರಡು ಶಾಲಾ ಕಟ್ಟಡ ಹಾಗೂ ಶುದ್ಧ ನೀರಿನ ಘಟಕ ಉದ್ಘಾಟಿಸಿ ಮಾತನಾಡಿದರು.ಗ್ರಾಮೀಣ ಭಾಗದಲ್ಲಿ ಶಿಕ್ಷಣ ಅಭಿವೃದ್ಧಿಯಾದರೆ ದೇಶದ ಅಭಿವೃದ್ಧಿಯಾಗುತ್ತದೆ. ಆ ನಿಟ್ಟಿನಲ್ಲಿ ಸಕಾರದಿಂದ ಬಂದ ಅನುದಾನವನ್ನು ಪೂರ್ಣ ಪ್ರಮಾಣದಲ್ಲಿ ಶಿಕ್ಷಣಕ್ಕೆ ನೀಡಲಾಗುತ್ತಿದೆ ಎಂದರು.

ಗ್ಯಾರಂಟಿ ಯೋಜನೆ ಮತ್ತು ಮುಖ್ಯಮಂತ್ರಿಗಳ ಜನಪರ ಯೋಜನೆಗಳಿಂದ ಬಡವರ ಜೀವನ ಮಟ್ಟ ಸುಧಾರಿಸುತ್ತಿದೆ ಎಂದು ಅಭಿಪ್ರಾಯ ವ್ಯಕ್ತ ಪಡಿಸಿದರು.

ಕ್ಷೇತ್ರ ಶಿಕ್ಷಣಾಧಿಕಾರಿ ಎನ್. ಶ್ರೀಧರ ಮಾತನಾಡಿ, ರಟ್ಟೀಹಳ್ಳಿ-ಹಿರೇಕೆರೂರು ವಿಧಾನಸಭಾ ಕ್ಷೇತ್ರದ ಶಾಸಕ ಶಾಸಕ ಯು.ಬಿ. ಬಣಕಾರ ಅವರು ಶಿಕ್ಷಣದ ಬಗ್ಗೆ ಹೆಚ್ಚಿನ ಕಾಳಜಿ ಉಳ್ಳವರಾಗಿದ್ದು, ಅವರ ಕಾಳಜಿಗೆ ಶಿಕ್ಷಣ ಇಲಾಖೆ ಪರವಾಗಿ ಅವರಿಗೆ ಅಭಿನಂದನೆ ಸಲ್ಲಿಸಲಾಗುವುದು ಎಂದರು.

ಮಲೆನಾಡ ಅಭಿವೃದ್ಧಿ ಯೋಜನೆಯಿಂದ ಮಂಜೂರಾದ ಎರಡು ಕಟ್ಟಡ ಹಾಗೂ ಶುದ್ಧ ನೀರಿನ ಘಟಕ ಇಂದು ಉದ್ಘಾಟಿಸಿದ್ದು, ವಿದ್ಯಾರ್ಥಿಗಳು ಅದರ ಸದಪಯೋಗ ಪಡೆದು ತಮ್ಮ ಭವಿಷ್ಯದ ಉಜ್ವಲ ಜೀವನ ರೂಪಿಸಿಕೊಳ್ಳಿ ಎಂದು ಮನವಿ ಮಾಡಿದರು.

ತಾಲೂಕು ಪಂಚಾಯಿತಿ ಮಾಜಿ ಅಧ್ಯಕ್ಷ ಮಹೇಶ ಗುಬ್ಬಿ, ಸುಧಾಮ ಮುದ್ದಣ್ಣನವರ, ಜಗದೀಶ ಕಡೆಮನಿ, ಮಲ್ಲೇಶಪ್ಪ ಬಣಕಾರ, ಹನಮಂತಗೌಡ ಭರಮಣ್ಣನವರ, ಶಾಲಾ ಮುಖ್ಯೋಪಾಧ್ಯಾಯ ಎಸ್.ಬಿ. ಕಡೂರ, ರಾಜು ಹರವಿಶೆಟ್ಟರ್, ನಾಗರಾಜ ಕುಸಗೂರ, ಎಸ್.ಡಿಎಂ.ಸಿ. ಅಧ್ಯಕ್ಷ ಲೋಕೇಶ ಬಂಡಿಮನಿ, ಗ್ರಾಮ ಪಂಚಾಯಿತಿ ಅಧ್ಯಕ್ಷೆ ಗೀತಾ ಗೌಡರ, ಸಿ.ಆರ್.ಪಿ. ಜಗದೀಶ ಕಠಾರೆ ಮುಂತಾದವರು ಇದ್ದರು.