ಉದ್ಯೋಗ ಅರಸಿ ಬೆಂಗಳೂರಿಗೆ ಬಂದು ವೇಶ್ಯಾವಾಟಿಕೆ ಜಾಲದಲ್ಲಿ ಸಿಲುಕಿದ ಥೈಲ್ಯಾಂಡ್ ಮೂಲದ ಮಹಿಳೆಯನ್ನು ಸ್ವದೇಶಕ್ಕೆ ಕಳುಹಿಸುವಂತೆ ವಿದೇಶಿಯರ ಪ್ರಾದೇಶಿಕ ನೋಂದಣಿ ಕಚೇರಿಗೆ (ಎಫ್ಆಆರ್‌ಓ) ಹೈಕೋರ್ಟ್ ನಿರ್ದೇಶಿಸಿದೆ.
ಕನ್ನಡಪ್ರಭ ವಾರ್ತೆ ಬೆಂಗಳೂರು
ಉದ್ಯೋಗ ಅರಸಿ ಬೆಂಗಳೂರಿಗೆ ಬಂದು ವೇಶ್ಯಾವಾಟಿಕೆ ಜಾಲದಲ್ಲಿ ಸಿಲುಕಿದ ಥೈಲ್ಯಾಂಡ್ ಮೂಲದ ಮಹಿಳೆಯನ್ನು ಸ್ವದೇಶಕ್ಕೆ ಕಳುಹಿಸುವಂತೆ ವಿದೇಶಿಯರ ಪ್ರಾದೇಶಿಕ ನೋಂದಣಿ ಕಚೇರಿಗೆ (ಎಫ್ಆಆರ್‌ಓ) ಹೈಕೋರ್ಟ್ ನಿರ್ದೇಶಿಸಿದೆ.ಸ್ವದೇಶಕ್ಕೆ ಕಳುಹಿಸಿ ಕೊಡಲು ಎಫ್‌ಆರ್‌ಆರ್‌ಓಗೆ ನಿರ್ದೇಶಿಸುವಂತೆ ಕೋರಿ ಥೈಲ್ಯಾಂಡ್ ಮೂಲದ ಜಿರಾಟ್ಜಾಯಾ ಎಂಬುವರು ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಎಂ.ನಾಗಪ್ರಸನ್ನ ಅವರ ಪೀಠ ಈ ಆದೇಶ ನೀಡಿದೆ.
ಅರ್ಜಿದಾರರು ವೇಶ್ಯಾವಾಟಿಕೆ ದಂಧೆಯ ಸಂತ್ರಸ್ತೆಯಾಗಿದ್ದಾರೆ. ಆಕೆ ಮತ್ಯಾವುದೇ ಕ್ರಿಮಿನಲ್ ಪ್ರಕರಣಗಳಲ್ಲಿ ವಿಚಾರಣೆಗೆ ಬೇಡವಾಗಿದ್ದರೆ, ಥೈಲ್ಯಾಂಡ್‌ಗೆ ಮರಳಿ ಕಳುಹಿಸಲು ಎಫ್‌ಆರ್‌ಆರ್‌ಓ ಕಚೇರಿ ತಕ್ಷಣವೇ ಕ್ರಮ ಕೈಗೊಳ್ಳಬೇಕು ಎಂದು ಪೀಠ ಆದೇಶದಲ್ಲಿ ತಿಳಿಸಿದೆ.ಪ್ರಕರಣದ ಹಿನ್ನೆಲೆ: ಬೆಂಗಳೂರಿನ ಟ್ರಿನಿಟಿ ಥಾಯ್ ಸ್ಪಾ ವೆಲ್‌ನೆಸ್ ಸೆಂಟರ್ ಮೇಲೆ ರಾಮಮೂರ್ತಿ ನಗರ ಪೊಲೀಸರು 2026ರ ಫೆ.3 ರಂದು ದಾಳಿ ನಡೆಸಿದ್ದರು. ಈ ವೇಳೆ ಅಕ್ರಮವಾಗಿ ವೇಶ್ಯಾವಾಟಿಕೆ ನಡೆಸುತ್ತಿರುವ ಆರೋಪದಡಿ ಕೆಲ ಆರೋಪಿಗಳನ್ನು ಬಂಧಿಸಲಾಗಿತ್ತು. ಇದೇ ಸಂದರ್ಭದಲ್ಲಿ ಸಂತ್ರಸ್ತ ಮಹಿಳೆಯನ್ನು ರಕ್ಷಿಸಿದ್ದ ಪೊಲೀಸರು, ಫೆ.5ರಂದು ಎಫ್‌ಆರ್‌ಆಓ ಕಚೇರಿಯ ವಶಕ್ಕೆ ನೀಡಿದ್ದರು. ವೀಸಾ ಅವಧಿ ಮುಗಿದ ಕಾರಣ ಆಕೆಯನ್ನು ತುಮಕೂರಿನ ದಿಬ್ಬೂರು ಕಾಲೋನಿಯ ಮಹಿಳಾ ವಿದೇಶಿಯರ ಪುನರ್ವಸತಿ ಕೇಂದ್ರದಲ್ಲಿ ಇರಿಸಲಾಗಿದೆ.
ಈ ಮಧ್ಯೆ ಹೈಕೋರ್ಟ್ ಮೊರೆ ಹೋಗಿರುವ ಅರ್ಜಿದಾರೆ, ತನ್ನನ್ನು ಸ್ವದೇಶಕ್ಕೆ ಕಳುಹಿಸಿಕೊಡಲು ಎಫ್ಆಆರ್‌ಓಗೆ ನಿರ್ದೇಶಿಸುವಂತೆ ಕೋರಿದ್ದರು.ವಿಚಾರಣೆ ವೇಳೆ ಅರ್ಜಿದಾರರ ಪರ ವಕೀಲರು, ಅರ್ಜಿದಾರೆಯು ಉದ್ಯೋಗಕ್ಕಾಗಿ ಭಾರತಕ್ಕೆ ಬಂದಿದ್ದರು. ಕೆಲವರು ಆಕೆಯನ್ನು ವೇಶ್ಯಾವಾಟಿಕೆ ಜಾಲದಲ್ಲಿ ಸಿಲುಕಿಸಿದ್ದಾರೆ. ಇದರಿಂದ ಅರ್ಜಿದಾರೆಯು ಮಾನಸಿಕ ಒತ್ತಡಕ್ಕೆ ಒಳಗಾಗಿದ್ದಾರೆ. ಪ್ರಸ್ತುತ ವೀಸಾ ಅವಧಿ ಮುಗಿದಿದೆ. ಹೀಗಾಗಿ, ಅಕ್ರಮವಾಗಿ ಭಾರತದಲ್ಲಿ ಉಳಿದ ಆರೋಪದ ಮೇಲೆ ಪುನರ್ವಸತಿ ಕೇಂದ್ರದಲ್ಲಿ ಇಡಲಾಗಿದೆ. ಸ್ವದೇಶಕ್ಕೆ ಹಿಂದಿರುಗಲು ಆಕೆಗೆ ಅವಕಾಶ ನೀಡಬೇಕು. ಸ್ವದೇಶಕ್ಕೆ ಕಳುಹಿಸಿಕೊಡಲು ಎಫ್‌ಆರ್‌ಆರ್‌ಓಗೆ ನಿರ್ದೇಶಿಸುವಂತೆ ಕೋರಿದರು.
