ಸಾರಾಂಶ
ರೈಲಿನಡಿ ಸಿಲುಕಿ ಎರಡೂ ಕಾಲು ಕಳೆದುಕೊಂಡ ಪ್ರಯಾಣಿಕನಿಗೆ ಟಿಕೆಟ್ ಖರೀದಿಸಿದ ನಿಖರ ಸಮಯದ ಕುರಿತು ಅನುಮಾನ ವ್ಯಕ್ತಪಡಿಸಿ ಪರಿಹಾರ ನಿರಾಕರಿಸಿದ್ದ ರೈಲ್ವೆ ಕ್ಲೇಮು ನ್ಯಾಯಾಧಿಕರಣದ ಆದೇಶ ರದ್ದುಪಡಿಸಿದ ಹೈಕೋರ್ಟ್, 8 ಲಕ್ಷ ರು. ಪರಿಹಾರ ಘೋಷಿಸಿದೆ
ಬೆಂಗಳೂರು : ರೈಲಿನಡಿ ಸಿಲುಕಿ ಎರಡೂ ಕಾಲು ಕಳೆದುಕೊಂಡ ಪ್ರಯಾಣಿಕನಿಗೆ ಟಿಕೆಟ್ ಖರೀದಿಸಿದ ನಿಖರ ಸಮಯದ ಕುರಿತು ಅನುಮಾನ ವ್ಯಕ್ತಪಡಿಸಿ ಪರಿಹಾರ ನಿರಾಕರಿಸಿದ್ದ ರೈಲ್ವೆ ಕ್ಲೇಮು ನ್ಯಾಯಾಧಿಕರಣದ ಆದೇಶ ರದ್ದುಪಡಿಸಿದ ಹೈಕೋರ್ಟ್, 8 ಲಕ್ಷ ರು. ಪರಿಹಾರ ಘೋಷಿಸಿದೆ. ಈ ಮೂಲಕ ಶಾಶ್ವತ ಅಂಗವಿಕಲನಾದ ಸಂತ್ರಸ್ತನಿಗೆ ನ್ಯಾಯಾಲಯ ಜೀವನಾಧಾರ ಕಲ್ಪಿಸಿದೆ.
ನ್ಯಾಯಾಧಿಕರಣದ ಆದೇಶ ರದ್ದು ಕೋರಿ ಬಿಹಾರದ ನಿವಾಸಿ ಪರಶುರಾಂ ಕುಮಾರ್ ಸಲ್ಲಿಸಿದ್ದ ಮೇಲ್ಮನವಿ ಪುರಸ್ಕರಿಸಿರುವ ನ್ಯಾಯಮೂರ್ತಿ ಹಂಚೇಟಿ ಸಂಜೀವ್ ಕುಮಾರ್ ಅವರ ಪೀಠ, ಮೇಲ್ಮನವಿದಾರನಿಗೆ ಅಪಘಾತ ನಡೆದ 2015ರ ಫೆ.11ರಿಂದ ಈವರೆಗೂ ವಾರ್ಷಿಕ ಶೇ.6ರಷ್ಟು ಬಡ್ಡಿದರಲ್ಲಿ 8 ಲಕ್ಷ ರು. ಪರಿಹಾರ ನೀಡಬೇಕು ಎಂದು ಈಶಾನ್ಯ ನೈರುತ್ಯ ರೈಲ್ವೆ ಇಲಾಖೆಗೆ ನಿರ್ದೇಶಿಸಿದೆ. ರೈಲ್ವೆ ಅಪಘಾತದಲ್ಲಿ ಎರಡು ಕಾಲು ಕಳೆದುಕೊಂಡು ಶಾಶ್ವತವಾಗಿ ಅಂಗವಿಕಲನಾಗಿರುವ ಪರಶುರಾಂ, ಹೈಕೋರ್ಟ್ ಆದೇಶದಿಂದ 13 ಲಕ್ಷಕ್ಕಿಂತ ಅಧಿಕ ಹಣ ಪಡೆಯಲಿದ್ದಾನೆ.
ನ್ಯಾಯಾಧಿಕರಣದ ಮುಂದೆ ಮೇಲ್ಮನವಿದಾರ ನುಡಿದ ಸಾಕ್ಷ್ಯ
ನ್ಯಾಯಾಧಿಕರಣದ ಮುಂದೆ ಮೇಲ್ಮನವಿದಾರ ನುಡಿದ ಸಾಕ್ಷ್ಯದ ಪ್ರಕಾರ ಆತ ಯಶವಂತಪುರದ ರೈಲ್ವೆ ನಿಲ್ದಾಣಕ್ಕೆ 2015ರ ಫೆ.11ರ ರಾತ್ರಿ 10 ಗಂಟೆಗೆ ಹೋಗಿ, 10.15ಕ್ಕೆ ಟಿಕೆಟ್ ಖರೀದಿಸಿದ್ದಾನೆ. ಟಿಕೆಟ್‌ನಲ್ಲಿ ಅದು ವಿತರಣೆಯಾದ ಸಮಯ 11 ಗಂಟೆ 24 ನಿಮಿಷ ಎಂದು ನಮೂದಾಗಿದೆ. ಅಂದರೆ ಪರಶರಾಂ ಹೇಳಿರುವ ಸಮಯ, ಟಿಕೆಟ್‌ನಲ್ಲಿ ನಮುದಾಗಿರುವ ಸಮಯದ ನಡುವೆ 1 ಗಂಟೆ 9 ನಿಮಿಷ ಅಂತರವಿದೆ. ಆದರೆ, ಯಾವಾಗ ರೈಲು ನಿಲ್ದಾಣಕ್ಕೆ ಹೋದೆ, ಯಾವಾಗ ಸರತಿ ಸಾಲಲ್ಲಿ ನಿಂತೆ, ಯಾವಾಗ ಟಿಕೆಟ್ ಕೌಂಟರ್ ಉಸ್ತುವಾರಿ ಟಿಕೆಟ್ ನೀಡಿದ ಎಂಬುದನ್ನು ಯಾರೂ ಸಹ ಗಡಿಯಾರ ನೋಡಿಕೊಂಡು ಹೇಳಲು ಸಾಧ್ಯವಿಲ್ಲ ಎಂದು ಪೀಠ ಅಭಿಪ್ರಾಯಪಟ್ಟಿದೆ.
ಅಲ್ಲದೆ, 10.15ಕ್ಕೆ ಟಿಕೆಟ್ ಖರೀದಿಸಿದೆ ಎಂದು ವಿಚಾರಣೆಯಲ್ಲಿ ಮೇಲ್ಮನವಿದಾರ ಹೇಳಿರುವ ಮಾತ್ರಕ್ಕೆ ಘಟನೆಯಲ್ಲಿ ಆತನದ್ದೇ ತಪ್ಪು. ಟಿಕೆಟ್ ಖರೀದಿಸಿರುವುದೇ ಒಂದು ಸುಳ್ಳು ಎಂಬ ತಪ್ಪು ತೀರ್ಮಾನಕ್ಕೆ ಬರುವ ಮೂಲಕ ನ್ಯಾಯಾಧಿಕರಣ ಅಸಂಬದ್ದ ಅಭಿಪ್ರಾಯ ವ್ಯಕ್ತಪಡಿಸಿದೆ. ಪರಿಹಾರ ನಿರಾಕರಿಸಲು ತೀರಾ ತಾಂತ್ರಿಕ ಕಾರಣ ನೀಡಿದೆ. ಪೂರ್ವನಿರ್ಧರಿತ ಉದ್ದೇಶದಿಂದ ಕ್ಲೇಮು ಅರ್ಜಿ ವಜಾಗೊಳಿಸಿದೆ. ಈ ಆದೇಶ ಸಂಪೂರ್ಣವಾಗಿ ದೋಷಪೂರಿತವಾಗಿದೆ ಎಂದು ಹೈಕೋರ್ಟ್ ನುಡಿದಿದೆ.
ಟಿಕೆಟ್ ಖರೀದಿಸಿರುವುದಾಗಿ ಪ್ರಯಾಣಿಕ ಸಾಬೀತುಪಡಿಸಿದರೆ, ಆಗ ಪ್ರಯಾಣಿಕ ಪ್ರಾಮಾಣಿಕ ಎನ್ನುವುದು ದೃಢಪಟ್ಟಂತೆ. ಮೇಲ್ಮನವಿದಾರ ರೈಲಿನಡಿಗೆ ಬಿದ್ದು ಎರಡು ಕಾಲು ಕಳೆದುಕೊಂಡಿರುವುದನ್ನು ರೈಲ್ವೆ ಇಲಾಖೆ ನಿರಾಕರಿಸಿಲ್ಲ. ವೈದ್ಯಕೀಯ ದಾಖಲೆಗಳು ಮತ್ತು ಗಾಯ ಪ್ರಮಾಣ ಪತ್ರ ಸಹ ಆತ ಕಾಲು ಕಳೆದುಕೊಂಡಿರುವುದನ್ನು ದೃಢಪಡಿಸುತ್ತದೆ. ಹಾಗಾಗಿ, ಪರಿಹಾರ ಪಡೆಯಲು ಮೇಲ್ಮನವಿದಾರ ಅರ್ಹನಾಗಿದ್ದಾನೆ. ರೈಲ್ವೆ ಸಚಿವಾಲಯ ಪ್ರಕಟಿಸಿರುವ ಮಾರ್ಗಸೂಚಿ, ರೈಲ್ವೆ ಅಪಘಾತ ಸಂತ್ರಸ್ತರಿಗೆ ಪಾವತಿಸಬೇಕಾದ ಪರಿಹಾರ ಪ್ರಮಾಣವನ್ನು ದ್ವಿಗುಣಗೊಳಿಸಿದೆ. ಅದರಂತೆ ಅಪಘಾತ ನಡೆದ ದಿನದಿಂದ ವಾರ್ಷಿಕ ಶೇ.6ರಷ್ಟು ಬಡ್ಡಿದರದಲ್ಲಿ 8 ಲಕ್ಷ ರು. ಪರಿಹಾರವನ್ನು ಪರಶುರಾಂಗೆ ಪಾವತಿಸಬೇಕು ಎಂದು ನೈರುತ್ವ ರೈಲ್ವೇ ಇಲಾಖೆಗೆ ಹೈಕೋರ್ಟ್ ಎಂದು ಆದೇಶಿಸಿದೆ.
ಪ್ರಕರಣವೇನು?:
ಪರಶುರಾಂ ತನ್ನ ಹುಟ್ಟೂರಾದ ಬಿಹಾರ ರಾಜ್ಯದ ಸಹ್ನಿ ಟೋಲ ಗ್ರಾಮಕ್ಕೆ ತೆರಳಲು ಯಶವಂತಪುರ ರೈಲು ನಿಲ್ದಾಣಕ್ಕೆ 2015ರ ಫೆ.11ರ ರಾತ್ರಿ 11 ಗಂಟೆಗೆ ಹೋಗಿದ್ದ. ಚಲಿಸುತ್ತಿದ್ದ ರೈಲು ಹತ್ತಲೆತ್ನಿಸಿದಾಗ ಆಕಸ್ಮಿಕವಾಗಿ ಜಾರಿ ಬಿದ್ದ. ಆಗ ಆತನ ಎರಡೂ ಕಾಲುಗಳು ಕತ್ತರಿಸಿಕೊಂಡು ಹೋಗಿದ್ದವು. ಕೂಡಲೇ ಆತನನ್ನು ರೈಲ್ವೆ ಪೊಲೀಸರು ವಿಕ್ಟೋರಿಯಾ ಆಸ್ಪತ್ರೆಗೆ ದಾಖಲಿಸಿದ್ದರು. ಇದರಿಂದ ಪರಿಹಾರ ಕೋರಿ ಆತ ನ್ಯಾಯಾಧಿಕರಣಕ್ಕೆ ಅರ್ಜಿ ಸಲ್ಲಿಸಿದ್ದ.
ಆದರೆ, ಪರಶುರಾಂ ಖರೀದಿಸಿದ್ದ ಗಣಕೀಕೃತ (ಕಂಪ್ಯೂಟರೈಸ್ಡ್) ಟಿಕೆಟ್‌ನಲ್ಲಿ, 2015ರ ಫೆ.11ರ ರಾತ್ರಿ 11 ಗಂಟೆ 24 ನಿಮಿಷಕ್ಕೆ ಟಿಕೆಟ್ ವಿತರಣೆಯಾಗಿದೆ ಎಂದು ನಮೂದಾಗಿದೆ. ಇದರಿಂದ ಟಿಕೆಟ್ ಖರೀದಿಯೇ ಸುಳ್ಳು ಎಂದು ತೀರ್ಮಾನಿಸಿದ್ದ ನ್ಯಾಯಾಧಿಕರಣ, ಪರಿಹಾರ ನಿಗದಿಪಡಿಸಲು ನಿರಾಕರಿಸಿತ್ತು. ಇದರಿಂದ ಆತ ಹೈಕೋರ್ಟ್ ಮೊರೆ ಹೋಗಿದ್ದ.
;Resize=(128,128))
;Resize=(128,128))
;Resize=(128,128))
;Resize=(128,128))