ಸಾರಾಂಶ
ಸರ್ಕಾರ ಭೂಸ್ವಾಧೀನ ಪಡಿಸಿಕೊಂಡಿದ್ದ ಭೂಮಿಗೆ ಸೂಕ್ತ ಪರಿಹಾರ ಪಾವತಿಸುವಂತೆ ಪುತ್ತೂರಿನ ಹೆಚ್ಚುವರಿ ಸೀನಿಯರ್ ಸಿವಿಲ್ ಜಡ್ಜ್ ಮತ್ತು ಜೆ.ಎಂ.ಎಫ್.ಸಿ.ನ್ಯಾಯಾಲಯವು ಮಾಡಿದ್ದ ಆದೇಶ ಪಾಲಿಸದ ಕಾರಣಕ್ಕಾಗಿ ಭೂಸ್ವಾಧೀನ ಅಧಿಕಾರಿಯಾಗಿರುವ ಸಹಾಯಕ ಕಮಿಷನರ್ ಕಚೇರಿಯ ಚರ ಸ್ವತ್ತುಗಳು ಮತ್ತು ವಾಹನ ಜಪ್ತಿಗೆ ಆದೇಶ ನೀಡಲಾಗಿದೆ.
ಹೆದ್ದಾರಿ ಕಾಮಗಾರಿಗೆ ವಶಪಡಿಸಿದ ಭೂಮಿಗೆ ಪರಿಹಾರ ಪಾವತಿ ವೈಫಲ್ಯ ಹಿನ್ನೆಲೆ
ಪುತ್ತೂರು: 2012ನೇ ಸಾಲಿನಲ್ಲಿ ಮಾಣಿ ಮೈಸೂರು ರಾಜ್ಯ ಹೆದ್ದಾರಿ ೮೮ರ ರಸ್ತೆ ಅಗಲೀಕರಣಕ್ಕಾಗಿ ಕಬಕ ಪೇಟೆಯಲ್ಲಿ ಕರ್ನಾಟಕ ಸರ್ಕಾರ ಭೂಸ್ವಾಧೀನ ಪಡಿಸಿಕೊಂಡಿದ್ದ ಭೂಮಿಗೆ ಸೂಕ್ತ ಪರಿಹಾರ ಪಾವತಿಸುವಂತೆ ಪುತ್ತೂರಿನ ಹೆಚ್ಚುವರಿ ಸೀನಿಯರ್ ಸಿವಿಲ್ ಜಡ್ಜ್ ಮತ್ತು ಜೆ.ಎಂ.ಎಫ್.ಸಿ.ನ್ಯಾಯಾಲಯವು ಮಾಡಿದ್ದ ಆದೇಶ ಪಾಲಿಸದ ಕಾರಣಕ್ಕಾಗಿ ಭೂಸ್ವಾಧೀನ ಅಧಿಕಾರಿಯಾಗಿರುವ ಸಹಾಯಕ ಕಮಿಷನರ್ ಕಚೇರಿಯ ಚರ ಸ್ವತ್ತುಗಳು ಮತ್ತು ವಾಹನ ಜಪ್ತಿಗೆ ಆದೇಶ ನೀಡಿದೆ.ರಸ್ತೆಗಾಗಿ ಸ್ವಾಧೀನಪಡಿಸಿಕೊಂಡ ಭೂಮಿಗೆ ಸಂಬಂಧಿಸಿ ಜಾಗದ ಮಾಲಕ ಪರ್ಲಡ್ಕ ನಿವಾಸಿ ಶಿವಶಂಕರ ಭಟ್ ಅವರಿಗೆ ಭೂಸ್ವಾಧೀನಾಧಿಕಾರಿಯವರು ನ್ಯಾಯಾಲಯದ ಆದೇಶದಂತೆ ರು.೧೪,೯೩,೪೩೮.೦೦ ಪಾವತಿಸಬೇಕಾಗಿತ್ತು. ಆದರೆ ಅದನ್ನು ಪಾವತಿಸದ ಕಾರಣ ಭೂಮಾಲಕರು ಪುತ್ತೂರಿನ ಹೆಚ್ಚುವರಿ ಸೀನಿಯರ್ ಸಿವಿಲ್ ಜಡ್ಜ್ ಮತ್ತು ಜೆ.ಎಂ.ಎಫ್.ಸಿ. ನ್ಯಾಯಾಲಯದಲ್ಲಿ ಅರ್ಜಿ ಸಲ್ಲಿಸಿದ್ದರು.
ಭೂಸ್ವಾಧೀನ ಪ್ರಾಧಿಕಾರವಾದ ಸಹಾಯಕ ಆಯುಕ್ತರು ಪುತ್ತೂರು ಅವರಿಗೆ ಸಾಕಷ್ಟು ಸಮಯಾವಕಾಶ ನೀಡಿದರೂ ಪರಿಹಾರ ಮೊತ್ತ ಪಾವತಿಸದ ಕಾರಣ ಪುತ್ತೂರಿನ ಹೆಚ್ಚುವರಿ ಸೀನಿಯರ್ ಸಿವಿಲ್ ಜಡ್ಜ್ ಮತ್ತು ಜೆ.ಎಂ.ಎಫ್.ಸಿ.ನ್ಯಾಯಾಲಯವು ಸಹಾಯಕ ಆಯುಕ್ತರ ಕಚೇರಿಯ ಚರ ಸೊತ್ತುಗಳಾದ ಕಂಪ್ಯೂಟರ್ ಗಳು, ಟೇಬಲ್, ಕುರ್ಚಿಗಳು ಹಾಗೂ ಸಹಾಯಕ ಆಯುಕ್ತರ ವಾಹನವನ್ನು ಜಪ್ತಿ ಮಾಡಲು ಆದೇಶ ಹೊರಡಿಸಿದೆ. ನ್ಯಾಯಾಲಯದ ಅಮೀನ ಗಣೇಶ್ ಹಾಗೂ ಸಂಜೀದ ಸೊತ್ತುಗಳ ಜಪ್ತಿಗೆ ಕ್ರಮವಹಿಸಿ, ಗುರುವಾರ ಸಹಾಯಕ ಕಮಿಷನರ್ ಅವರ ಕಚೇರಿಗೆ ಆಗಮಿಸಿದ್ದರು. ಆದರೆ ಸಹಾಯಕ ಕಮಿಷನರ್ ಎಸ್‌ಐಟಿ ಕಾರ್ಯಾಚರಣೆ ಹಿನ್ನಲೆಯಲ್ಲಿ ಧರ್ಮಸ್ಥಳಕ್ಕೆ ಕರ್ತವ್ಯಕ್ಕೆ ತೆರಳಿದ್ದ ಕಾರಣದಿಂದ ಜಪ್ತಿ ಆದೇಶ ಜಾರಿ ಮಾಡದೆ ಹಿಂದಿರುಗಿದ್ದಾರೆ ಎಂದು ತಿಳಿದು ಬಂದಿದೆ. ಈ ಪ್ರಕರಣದಲ್ಲಿ ಭೂಮಾಲಕರ ಪರವಾಗಿ ನ್ಯಾಯವಾದಿಗಳಾದ ಶಿವಪ್ರಸಾದ್ ಇ ಹಾಗೂ ಗೌರೀಶ್ ಕಂಪ ವಾದ ಮಂಡಿಸಿದ್ದಾರೆ.