ಧಾರವಾಡ: ಆವರಿಸಿದ ಹಸಿರು ಬರಗಾಲ- ಅನ್ನದಾತ ವಿಲವಿಲ!

| Published : Dec 30 2023, 01:15 AM IST / Updated: Dec 30 2023, 10:24 AM IST

ಸಾರಾಂಶ

ಮುಂಗಾರಿನ ಬಿತ್ತನೆ ಸಮಯದಲ್ಲಿ ತುಸು ಮಳೆಯಾಗಿ ನಂತರ ಕೈಕೊಟ್ಟ ಪರಿಣಾಮ ಕೃಷಿ ಹಾಗೂ ತೋಟಗಾರಿಕಾ ಬೆಳೆಗಳು ಹಾನಿಯಾಗಿದ್ದು, ಹಿಂಗಾರಿನಲ್ಲೂ ಬರದ ಛಾಯೆ ಆವರಿಸಿದೆ.

ಮುಂಗಾರು-ಹಿಂಗಾರು ಬಿತ್ತನೆ ವೇಳೆ ಸುರಿದು ಆಮೇಲೆ ಕೈಕೊಟ್ಟ ವರುಣ

ಬಸವರಾಜ ಹಿರೇಮಠ

ಕನ್ನಡಪ್ರಭ ವಾರ್ತೆ ಧಾರವಾಡ

ಕಳೆದ ಎರಡು ವರ್ಷಗಳ ಕಾಲ ಸಮೃದ್ಧಿಯ ಮಳೆ, ಬೆಳೆಯಿಂದ ನೆಮ್ಮದಿ ಕಂಡಿದ್ದ ಜಿಲ್ಲೆಯ ಜನತೆಗೆ 2023ನೇ ವರ್ಷ ಹಸಿರು ಬರಗಾಲದ ಅನುಭವ ನೀಡಿದೆ. ಬರೀ ಮುಂಗಾರು ಮಾತ್ರವಲ್ಲದೇ ರೈತರಿಗೆ ಹಿಂಗಾರಿನಲ್ಲೂ ಬರದ ಛಾಯೆ ತಂದ ವರ್ಷವಿದು.

ಮುಂಗಾರಿನ ಬಿತ್ತನೆ ಸಮಯದಲ್ಲಿ ತುಸು ಮಳೆಯಾಗಿ ನಂತರ ಕೈಕೊಟ್ಟ ಪರಿಣಾಮ ಕೃಷಿ ಹಾಗೂ ತೋಟಗಾರಿಕಾ ಬೆಳೆಗಳು ಹಾನಿಯಾಗಿದ್ದವು. ಮುಂಗಾರಿನ ನಾಲ್ಕು ತಿಂಗಳ ಪೈಕಿ ಜಿಲ್ಲೆಯಲ್ಲಿ 514 ಮಿ.ಮೀ. ಮಳೆಯಾಗಬೇಕಿತ್ತು. ಆದರೆ, 399 ಮಿ.ಮೀ. ನಷ್ಟು ಮಳೆಯಾಗಿತ್ತು. ಮಳೆ ಕೊರತೆಯಿಂದ ಕೃಷಿ ಹಾಗೂ ತೋಟಗಾರಿಕೆ ಬೆಳೆಗಳು ಒಣಗಿ ರೈತರಿಗೆ ತೀವ್ರ ಪ್ರಮಾಣದಲ್ಲಿ ಹಾನಿಯಾಗಿತ್ತು. ಒಂದು ರೀತಿಯಲ್ಲಿ ಮುಂಗಾರು ಬರಗಾಲವನ್ನು ಹಸಿರು ಬರಗಾಲ ಎಂದೇ ವಿಶ್ಲೇಷಿಸಲಾಗಿತ್ತು. ಸಮೀಕ್ಷೆ ಮಾಡಿದಾಗ 1.89 ಲಕ್ಷ ಕೃಷಿ ಹಾಗೂ 22 ಸಾವಿರ ತೋಟಗಾರಿಕೆ ಬೆಳೆ ಹಾನಿಯಾಗಿತ್ತು. ₹161 ಕೋಟಿ ಕೃಷಿ ಬೆಳೆಗಳು ಹಾಗೂ ₹51 ಕೋಟಿ ತೋಟಗಾರಿಕಾ ಬೆಳೆಗಳು ಸೇರಿದಂತೆ ಒಟ್ಟು ₹ 212 ಕೋಟಿ ಹಾನಿಯಾಗಿದೆ ಎಂದು ಜಿಲ್ಲಾಧಿಕಾರಿಗಳು ಸರ್ಕಾರಕ್ಕೆ ವರದಿ ನೀಡಿದ್ದು ಹಾಗೂ ಕೇಂದ್ರ ತಂಡ ಜಿಲ್ಲೆಗೆ ಆಗಮಿಸಿ ಸರ್ಕಾರಕ್ಕೆ ವರದಿ ನೀಡಿದ್ದನ್ನು ಇಲ್ಲಿ ಸ್ಮರಿಸಬಹುದು.

ಬರಗಾಲ ಪೀಡಿತ ಜಿಲ್ಲೆ ಘೋಷಣೆ

ಜಿಲ್ಲೆಯ ಎಂಟು ತಾಲೂಕುಗಳ ಪೈಕಿ ಆರಂಭದಲ್ಲಿ ಐದು ತಾಲೂಕು ಹಾಗೂ ತೀವ್ರ ಒತ್ತಡದ ಹಿನ್ನೆಲೆಯಲ್ಲಿ ಉಳಿದ ಮೂರು ತಾಲೂಕು ಸೇರಿದಂತೆ ಮುಂಗಾರು ಹಂಗಾಮಿನಲ್ಲಿ ಇಡೀ ಜಿಲ್ಲೆಯನ್ನು ಬರಗಾಲ ಪೀಡಿತ ಜಿಲ್ಲೆ ಎಂದು ರಾಜ್ಯ ಸರ್ಕಾರ ಘೋಷಣೆ ಮಾಡಿದೆ. ಇನ್ನು, ಮುಂಗಾರಂತೂ ಹೋಯ್ತು, ಹಿಂಗಾರಾದರೂ ಕೈ ಹಿಡಿಯುವುದೇ ಎಂದು ಅಂದುಕೊಂಡಿದ್ದ ರೈತರಿಗೆ ಹಿಂಗಾರೂ ಪೆಟ್ಟು ನೀಡಿದೆ. ಇಲ್ಲೂ ಬಿತ್ತನೆ ಸಮಯದಲ್ಲಿ ಮಳೆಯಾದ ಹಿನ್ನೆಲೆಯಲ್ಲಿ ಶೇ. 80ರಷ್ಟು ಬಿತ್ತನೆ ಮಾಡಲಾಯಿತು. ನಂತರದಲ್ಲಿ ಮಳೆಯಾಗದ ಹಿನ್ನೆಲೆಯಲ್ಲಿ ಕೆಲ ರೈತರು ಬೋರ್‌ವೆಲ್‌, ಹಳ್ಳ-ಕೊಳ್ಳಗಳ ಮೂಲಕ ನೀರು ಹಾಯಿಸಿ ಬೆಳೆಯ ಜೀವ ಉಳಿಸಿಕೊಂಡರೆ, ಸಂಪೂರ್ಣ ಒಣ ಕೃಷಿ ಮಾಡುವ ರೈತರ ಬೆಳೆಗಳು ಒಣಗಿ ಹೋಗಿವೆ. ಕೃಷಿ ಮತ್ತು ತೋಟಗಾರಿಕೆ ಇಲಾಖೆ ಹಿಂಗಾರಿನ ಸಮೀಕ್ಷೆ ಸಹ ನಡೆಸುತ್ತಿದ್ದು, ಹಾನಿಯ ವರದಿ ನೀಡುವುದು ಬಾಕಿ ಉಳಿದಿದೆ.

24ಕ್ಕೆ ಬರ ಪರಿಣಾಮ

ಬರಗಾಲ ನೀಗಿಸಲು ರಾಜ್ಯ ಸರ್ಕಾರ ಬರ ಪರಿಹಾರ ನೀಡುವ ಭರವಸೆ ನೀಡಿದೆ. ಆದರೆ, ರೈತರ ಕೈಗೆ ಇನ್ನೂ ತಲುಪಿಲ್ಲ. ಸದ್ಯ ಜಾನುವಾರುಗಳಿಗೆ ಮೇವು ಸಂಗ್ರಹಣೆ, ಉದ್ಯೋಗ ಖಾತ್ರಿ ಯೋಜನೆಯಲ್ಲಿ ಹೆಚ್ಚುವರಿ ಮಾನವ ದಿನಗಳನ್ನು ನೀಡಲಾಗುತ್ತಿದೆ. ಕುಡಿಯುವ ನೀರಿನ ತೊಂದರೆ ಅನುಭವಿಸುತ್ತಿರುವ ಹಳ್ಳಿಗಳಿಗೆ ನೀರು ನೀಡಲಾಗುತ್ತಿದೆ. ಸದ್ಯದ ಪರಿಸ್ಥಿತಿ ಅವಲೋಕಿಸಿದರೆ, 2023ನೇ ವರ್ಷದಲ್ಲಿ ಬರ ಬಂದರೂ ಬೇಸಿಗೆಯಲ್ಲಿ ಅಂದರೆ 2024ನೇ ವರ್ಷದಲ್ಲಿ ಅದರ ಪರಿಣಾಮ ಎದುರಿಸುವ ಎಲ್ಲ ಸಾಧ್ಯತೆಗಳಿವೆ.

ಹತ್ತು ಹಲವು ಘಟನೆಗಳಿಗೂ 2023 ಸಾಕ್ಷಿ

- 2023ನೇ ವರ್ಷ ಶುರುವಾಗುತ್ತಲೇ ಜ. 12ರಿಂದ 16ರ ವರೆಗೆ ಧಾರವಾಡದಲ್ಲಿ ಹಲವು ವರ್ಷಗಳಿಂದ ನಿರೀಕ್ಷಿಸಲಾಗಿದ್ದ ಯುವ ಜನೋತ್ಸವ ನಡೆಯಿತು. ರಾಷ್ಟ್ರದ ಬೇರೆ ಬೇರೆ ದೇಶಗಳ ಯುವ ಜನಾಂಗ ಧಾರವಾಡಕ್ಕೆ ಆಗಮಿಸಿ ತಮ್ಮ ಪ್ರತಿಭೆ ತೋರಿದ್ದು ಜಿಲ್ಲೆ ಮಾತ್ರವಲ್ಲದೇ ರಾಜ್ಯದ ಜನರಿಗೂ ಉತ್ಸಾಹ ತಂದಿತ್ತು.

- 2023 ಜ. 23ರಂದು ಧಾರವಾಡದ ಕೃಷಿ ವಿವಿ ಪಕ್ಕದಲ್ಲಿ ರಾಷ್ಟ್ರೀಯ ವಿಧಿ ವಿಜ್ಞಾನ ವಿಶ್ವವಿದ್ಯಾಲಯ ಶುರುವಾಯಿತು. ಈಗಾಗಲೇ ಪ್ರವೇಶ ಪಡೆದಿರುವ ವಿದ್ಯಾರ್ಥಿಗಳು ತರಬೇತಿ ಸಹ ಆರಂಭಿಸಿದ್ದಾರೆ.

- ಫೆ. 21ರಂದು ಧಾರವಾಡದ ಕೋರ್ಟ್‌ ವೃತ್ತದ ಬಳಿ ಕೇಂದ್ರ ಲಲಿತ ಕಲಾ ಅಕಾಡೆಮಿ ಪ್ರಾದೇಶಿಕ ಕೇಂದ್ರಕ್ಕೆ ಚಾಲನೆ ದೊರೆಯಿತು. ಕೇಂದ್ರ ಸಂಸದೀಯ ವ್ಯವಹಾರಗಳ ಮತ್ತು ಸಂಸ್ಕೃತಿ ಮಂತ್ರಾಲಯದ ರಾಜ್ಯ ಸಚಿವ ಅರ್ಜುನ್‌ ರಾಮ ಮೇಘವಾಲ ಅವರು ಉದ್ಘಾಟಿಸಿದರು.

- ಕರ್ನಾಟಕದ ಮೊಟ್ಟ ಮೊದಲ ಐಐಟಿ ಧಾರವಾಡದಲ್ಲಿ ಸ್ಥಾಪನೆಯಾಗಿದ್ದು, 2023ನೇ ಮಾರ್ಚ್‌ 12ರಂದು. 2016ರಿಂದ ತಾತ್ಕಾಲಿಕ ಕಟ್ಟಡದಲ್ಲಿ ಶುರುವಾದ ಐಐಟಿ ಸದ್ಯ 470 ಎಕರೆ ಪ್ರದೇಶದಲ್ಲಿ ₹852 ಕೋಟಿ ವೆಚ್ಚದಲ್ಲಿ ನಿರ್ಮಾಣವಾಗಿದ್ದು, ಪ್ರಧಾನ ಮಂತ್ರಿ ಮೋದಿ ಇದನ್ನು ಉದ್ಘಾಟಿಸಿದರು.

- ಹುಬ್ಬಳ್ಳಿ-ಧಾರವಾಡ ಅವಳಿ ನಗರ ಸೇರಿ ಜಿಲ್ಲೆಯ ಜನತೆಗೆ ತೀವ್ರ ಅನುಕೂಲವಾದ ವಂದೇ ಭಾರತ ರೈಲು ಶುರುವಾಗಿದ್ದು ಸಹ 2023ನೇ ವರ್ಷ. ಜೂನ್‌ 19ರಂದು ಬೆಂಗಳೂರಿನಿಂದ ಧಾರವಾಡ ವರೆಗೆ ಪ್ರಾಯೋಗಿಕವಾಗಿ ಓಡಿದ ರೈಲು ಜೂನ್‌ 27ರಿಂದ ನಿರಂತರವಾಗಿ ನಿತ್ಯವೂ ಓಡುತ್ತಿದೆ.

- 2023ನೇ ಬಜೆಟ್‌ನಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಡಾ. ಎಂ.ಎಂ. ಕಲಬುರ್ಗಿ ಅವರ ಹೆಸರಿನ ಟ್ರಸ್ಟ್ ರಚನೆ ಮಾಡುವುದಾಗಿ ಹೇಳಿದ್ದು, ಅಂತೆಯೇ ನವೆಂಬರ್‌ ತಿಂಗಳಲ್ಲಿ ಟ್ರಸ್ಟ್‌ ರಚನೆ ಮಾಡಲಾಯಿತು. ಚಿಂತಕ ಡಾ. ವೀರಣ್ಣ ರಾಜೂರ ಅಧ್ಯಕ್ಷತೆಯಲ್ಲಿ ಟ್ರಸ್ಟ್‌ ರಚನೆಯಾಗಿದ್ದು ಕಾರ್ಯೋನ್ಮುಖವಾಗಿದೆ.

- ಇನ್ನೇನು 2023ನೇ ವರ್ಷ ಮುಗೀತು ಎನ್ನುವಷ್ಟರಲ್ಲಿ ಮಹಾಮಾರಿ ಕೋವಿಡ್‌ ಮತ್ತೇ ಜಿಲ್ಲೆಯ ಜನರನ್ನು ಕಾಡುತ್ತಿದೆ. ಸದ್ಯ ಜಿಲ್ಲೆಯಲ್ಲಿ ರೂಪಾಂತರ ತಳಿ ಪತ್ತೆಯಾಗದೇ ಇದ್ದರೂ ಕೋವಿಡ್‌ ಪಾಸಿಟಿವ್‌ ಪ್ರಕರಣಗಳು ಪತ್ತೆಯಾಗಿವೆ.