ಕೋವಿಡ್‌ ಹೊಸ ಅಲೆ: ಸಿದ್ಧತೆಗೆ ಕಿಮ್ಸ್‌ನಲ್ಲಿಂದು ಸಭೆ

| Published : Dec 18 2023, 02:00 AM IST

ಕೋವಿಡ್‌ ಹೊಸ ಅಲೆ: ಸಿದ್ಧತೆಗೆ ಕಿಮ್ಸ್‌ನಲ್ಲಿಂದು ಸಭೆ
Share this Article
  • FB
  • TW
  • Linkdin
  • Email

ಸಾರಾಂಶ

ಅತ್ತ ಕೇರಳದಲ್ಲಿ ಕೋವಿಡ್‌ ಜೆಎನ್‌1 ರೂಪಾಂತರಿತಳಿ ಪತ್ತೆಯಾಗುತ್ತಿದ್ದಂತೆ, ಇತ್ತ ಉತ್ತರ ಕರ್ನಾಟಕದ ಸಂಜೀವಿನಿಯೆಂದೇ ಹೆಸರು ಪಡೆದಿರುವ ಕಿಮ್ಸ್‌ನಲ್ಲಿ ಮುನ್ನೆಚ್ಚರಿಕೆ ಕ್ರಮವಾಗಿ ಸದ್ದಿಲ್ಲದೇ ಸಿದ್ಧತೆಗಳು ನಡೆದಿವೆ.

ಕನ್ನಡಪ್ರಭ ವಾರ್ತೆ ಹುಬ್ಬಳ್ಳಿ

ಅತ್ತ ಕೇರಳದಲ್ಲಿ ಕೋವಿಡ್‌ ಜೆಎನ್‌1 ರೂಪಾಂತರಿತಳಿ ಪತ್ತೆಯಾಗುತ್ತಿದ್ದಂತೆ, ಇತ್ತ ಉತ್ತರ ಕರ್ನಾಟಕದ ಸಂಜೀವಿನಿಯೆಂದೇ ಹೆಸರು ಪಡೆದಿರುವ ಕಿಮ್ಸ್‌ನಲ್ಲಿ ಮುನ್ನೆಚ್ಚರಿಕೆ ಕ್ರಮವಾಗಿ ಸದ್ದಿಲ್ಲದೇ ಸಿದ್ಧತೆಗಳು ನಡೆದಿವೆ. ಈ ನಡುವೆ ಕಿಮ್ಸ್‌ನಲ್ಲಿ ತಜ್ಞ ವೈದ್ಯರು, ಹಿರಿಯ ವೈದ್ಯರ ಸಭೆಯನ್ನು ಕರೆದಿದ್ದಾರೆ.

2020, 2021ರಲ್ಲಿ ಕೊರೋನಾ ಮೊದಲ ಹಾಗೂ ಎರಡನೆಯ ಅಲೆ ಕಂಡು ಬಂದ ವೇಳೆ ಹುಬ್ಬಳ್ಳಿ ಕಿಮ್ಸ್‌ ನೀಡಿದ ಸೇವೆ ಅಪರಿಮಿತ. ಮೊದಲ ಅಲೆಯ ವೇಳೆಯಲ್ಲಂತೂ ಖಾಸಗಿ ಆಸ್ಪತ್ರೆಗಳೆಲ್ಲ ಬಂದ್‌ ಆಗಿದ್ದವು. ಕಿಮ್ಸ್‌ ವೈದ್ಯರ ತಂಡವೇ ಜನರ ಸೇವೆ ನೀಡಿದ್ದು. ಹಗಲು ರಾತ್ರಿಯೆನ್ನದೇ ನಿರಂತರವಾಗಿ ಶ್ರಮಿಸಿದ್ದಾರೆ ಇಲ್ಲಿನ ವೈದ್ಯರು. ಆಸ್ಪತ್ರೆಯೆಂದರೆ ಹೀಗಿರಬೇಕು ಎಂಬುದನ್ನು ತೋರಿಸಿಕೊಟ್ಟಿದ್ದು ಕಿಮ್ಸ್‌.

ಅಲ್ಲಿವರೆಗೂ 1200 ಬೆಡ್‌ಗಳ ಆಸ್ಪತ್ರೆಯಾಗಿದ್ದ ಕಿಮ್ಸ್‌ ಆ ಬಳಿಕವೇ ಮೇಲ್ದರ್ಜೆಗೇರಿದ್ದು. ಸದ್ಯ 2490 ಬೆಡ್‌ಗಳ ಆಸ್ಪತ್ರೆ ಇದಾಗಿದೆ. ಎಲ್ಲ ಬೆಡ್‌ಗಳಿಗೂ ಆಕ್ಸಿಜನ್‌ ಪೂರೈಕೆಯ ಯಂತ್ರ ಅಳವಡಿಸಲಾಗಿದೆ. ಎಂತಹ ಪರಿಸ್ಥಿತಿ ಬಂದರೂ ಎದುರಿಸಲು ಕಿಮ್ಸ್‌ ಸಿದ್ಧವಿದೆ.

ಇಂದು ಸಭೆ:

ಈ ನಡುವೆ ಕೋವಿಡ್‌ ಭೀತಿಯ ಬಗ್ಗೆ ಈ ವರೆಗೂ ಯಾವುದೇ ಮುನ್ಸೂಚನೆ ಬಂದಿಲ್ಲ. ಆದರೂ ಮುನ್ನಚ್ಚರಿಕೆ ಕ್ರಮ, ಕೈಗೊಳ್ಳಬಹುದಾದ ಸಿದ್ಧತೆಗಳ ಕುರಿತು ತಜ್ಞ ವೈದ್ಯರ ಹಾಗೂ ಹಿರಿಯ ಅಧಿಕಾರಿಗಳು, ವೈದ್ಯರ ಸಭೆಯನ್ನು ಡಿ. 18ರಂದು ಕರೆಯಲಾಗಿದೆ. ಸಭೆಯಲ್ಲಿ ಕೋವಿಡ್‌ ಹೊಸ ಅಲೆಯನ್ನು ಎದುರಿಸುವ ಕುರಿತು ವಿಸ್ತೃತವಾಗಿ ಚರ್ಚೆ ನಡೆಸಲಾಗುವುದು. ಎಂತಹ ಪರಿಸ್ಥಿತಿ ಎದುರಾದರೂ ನಿಭಾಯಿಸುವ ಸಾಮರ್ಥ್ಯ ಕಿಮ್ಸ್‌ಗೆ ಇದೆ. ಅದಕ್ಕೆ ಬೇಕಾದ ಸಿದ್ಧತೆಗಳನ್ನು ಮಾಡಿಕೊಳ್ಳುತ್ತೇವೆ ಎಂದು ಕಿಮ್ಸ್‌ನ ನಿರ್ದೇಶಕ ಡಾ. ಎಸ್‌.ಎಫ್‌. ಕಮ್ಮಾರ ತಿಳಿಸಿದ್ದಾರೆ.

ಕೋವಿಡ್‌ ಕುರಿತು ಆರೋಗ್ಯ ಸಚಿವರೊಂದಿಗೆ ಚರ್ಚೆ-ಸಿದ್ದುಕೇರಳದಲ್ಲಿ ಕೋವಿಡ್ ಪ್ರಕರಣಗಳು ಹೆಚ್ಚುತ್ತಿರುವುದು ಗಮನಕ್ಕೆ ಬಂದಿದ್ದು, ಈ ಬಗ್ಗೆ ಅಗತ್ಯ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳುವಂತೆ ಆರೋಗ್ಯ ಸಚಿವರಿಗೆ ಸೂಚಿಸಲಾಗಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು.ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಈಗಾಗಲೇ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಸಚಿವರೊಂದಿಗೆ ಚರ್ಚೆ ನಡೆಸಿದ್ದೇನೆ. ತಜ್ಞರ ಜತೆಗೆ ಮೀಟಿಂಗ್‌ ಮಾಡಲು ಸೂಚಿಸಿದ್ದೇನೆ ಎಂದು ನುಡಿದರು.