ಕರುವಿಗೆ ಕೃತಕ ಕಾಲು ಜೋಡಣೆ: ರಾಜ್ಯದಲ್ಲೇ ಪ್ರಥಮ!

| Published : Feb 06 2024, 01:34 AM IST / Updated: Feb 06 2024, 05:06 PM IST

Cow

ಸಾರಾಂಶ

ರೈಲು ಅಪಘಾತದಲ್ಲಿ ಕಾಲು ಕಳೆದುಕೊಂಡಿದ್ದ ಹಸುವಿನ ಕರುವೊಂದಕ್ಕೆ ಕೃತಕ ಕಾಲು ಜೋಡಣೆ ಮಾಡುವ ಕಾರ್ಯ ಹುಬ್ಬಳ್ಳಿಯಲ್ಲಿ ಯಶಸ್ವಿಯಾಗಿದೆ. ಆಲ್‌ ಇಂಡಿಯಾ ಜೈನ್‌ ಯುಥ್‌ ಫೆಡರೇಷನ್‌ನ ಮಹಾವೀರ ಲಿಂಬ್‌ ಸೆಂಟರ್‌ ಈ ಕಾರ್ಯ ಮಾಡಿದೆ.

ಕನ್ನಡಪ್ರಭ ವಾರ್ತೆ ಹುಬ್ಬಳ್ಳಿ

ರೈಲು ಅಪಘಾತದಲ್ಲಿ ಕಾಲು ಕಳೆದುಕೊಂಡಿದ್ದ ಹಸುವಿನ ಕರುವೊಂದಕ್ಕೆ ಕೃತಕ ಕಾಲು ಜೋಡಣೆ ಮಾಡುವ ಕಾರ್ಯ ಹುಬ್ಬಳ್ಳಿಯಲ್ಲಿ ಯಶಸ್ವಿಯಾಗಿದೆ. ಆಲ್‌ ಇಂಡಿಯಾ ಜೈನ್‌ ಯುಥ್‌ ಫೆಡರೇಷನ್‌ನ ಮಹಾವೀರ ಲಿಂಬ್‌ ಸೆಂಟರ್‌ ಈ ಕಾರ್ಯ ಮಾಡಿದೆ. 

ರಾಜ್ಯದಲ್ಲೇ ಕರುವೊಂದಕ್ಕೆ ಮೊದಲ ಬಾರಿಗೆ ಕೃತಕ ಕಾಲು ಜೋಡಣೆ ಮಾಡಿದಂತಾಗಿದೆ. ಈ ಕಾರ್ಯಕ್ಕೆ ಗೋಪ್ರೇಮಿಗಳ ಹರ್ಷ ವ್ಯಕ್ತಪಡಿಸಿದ್ದಾರೆ.

ಸೋಮವಾರ ಇಲ್ಲಿನ ಸಿದ್ಧಾರೂಢ ಮಠದ ಹತ್ತಿರದ ಅಭಿನವ ನಗರದಲ್ಲಿರುವ ವಿಶ್ವ ಹಿಂದೂ ಪರಿಷತ್‌ ಸಂಚಲಿತ ಗೋಶಾಲೆಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಹಾವೀರ ಲಿಂಬ್‌ ಸೆಂಟರ್‌ನ ಅಧ್ಯಕ್ಷ ಮಹೇಂದ್ರ ಸಿಂಘಿ ಈ ಮಾಹಿತಿ ನೀಡಿದ್ದಾರೆ.

ಆಗಿದ್ದೇನು?
ಕಳೆದ 8 ತಿಂಗಳ ಹಿಂದೆ ಧಾರವಾಡದಲ್ಲಿ ತಾಯಿ ಹಸುವಿನೊಂದಿಗೆ ಈ ಕರು ರೈಲು ಹಳಿ ದಾಟುತ್ತಿತ್ತು. ಈ ವೇಳೆ ರೈಲು ಬಂದಿದ್ದರಿಂದ ತಾಯಿ ಹಸು ಹಾಗೂ ಕರು ಎರಡು ರೈಲಿನಡಿ ಸಿಲುಕಿದ್ದವು. 

ಹಸು ಮೃತಪಟ್ಟರೆ, ಕರುವಿನ ಹಿಂಭಾಗದಲ್ಲಿನ ಎಡ ಕಾಲು ಕತ್ತರಿಸಿತ್ತು. ಈ ಕರುವಿಗೆ ವಿಹಿಂಪ ಕಾರ್ಯಕರ್ತರು ಚಿಕಿತ್ಸೆ ನೀಡಿ ಆರೈಕೆ ಮಾಡಿ, ಹುಬ್ಬಳ್ಳಿಯಲ್ಲಿನ ಗೋಶಾಲೆಯಲ್ಲಿ ಆಶ್ರಯ ನೀಡಿದ್ದಾರೆ.

ಕೃತಕ ಕಾಲು ಜೋಡಣೆಯಲ್ಲಿ ಹೆಸರು ವಾಸಿಯಾಗಿರುವ ಮಹಾವೀರ ಲಿಂಬ್‌ ಸೆಂಟರ್‌ನ್ನು ಗೋಶಾಲೆಯ ಪ್ರಮುಖರು ಸಂಪರ್ಕಿಸಿ, ಕರುವಿನ ಕಾಲನ್ನು ಜೋಡಿಸಬಹುದೇ ಎಂದು ಪ್ರಶ್ನಿಸಿದ್ದಾರೆ. 

ಮಹಾವೀರ ಲಿಂಬ್‌ ಸೆಂಟರ್‌ನ ತಜ್ಞ ವೈದ್ಯರು ಗೋಶಾಲೆಗೆ ತೆರಳಿ ಕರುವನ್ನು ಪರೀಕ್ಷಿಸಿದ್ದು, ಅದಕ್ಕೆ ತಕ್ಕಂತೆ ಕಾಲು ಸಿದ್ಧಪಡಿಸಿ, ಕರುವಿಗೆ ಜೋಡಣೆ ಮಾಡುವಲ್ಲಿ ಯಶಸ್ವಿಯಾಗಿದ್ದೇವೆ. ಈ ಕರುವಿಗೆ ಕೃತಕ ಕಾಲು ಜೋಡಣೆ ಕಾರ್ಯ ರಾಜ್ಯದಲ್ಲೇ ಪ್ರಥಮವಾಗಿದೆ ಎಂದು ಸಿಂಘಿ ತಿಳಿಸಿದರು.