ಗೋಡೆಗಳಿಗೆ ಬಣ್ಣ ಬಳಿಯಲು ಹೆಚ್ಚಿನ ಸಂಖ್ಯೆಯಲ್ಲಿ ಬ್ರಾಂಡೆಡ್ ಪೇಂಟ್‌ಗಳು ಮಾರುಕಟ್ಟೆಯಲ್ಲಿ ಲಭ್ಯವಿದೆ. ಆದರೆ ತೋಕೂರಿನ ಮಹಿಳೆಯೋರ್ವರು ಸುಮಾರು 4 ವರ್ಷಗಳಿಂದ ಗೋವಿನ ಸೆಗಣಿಯಿಂದಲೇ ಪೇಂಟ್ ತಯಾರಿಸಿ ಮಾರಾಟ ಮಾಡುತ್ತಿದ್ದಾರೆ.

ಮೂಲ್ಕಿ: ಗೋಡೆಗಳಿಗೆ ಬಣ್ಣ ಬಳಿಯಲು ಹೆಚ್ಚಿನ ಸಂಖ್ಯೆಯಲ್ಲಿ ಬ್ರಾಂಡೆಡ್ ಪೇಂಟ್‌ಗಳು ಮಾರುಕಟ್ಟೆಯಲ್ಲಿ ಲಭ್ಯವಿದೆ. ಆದರೆ ತೋಕೂರಿನ ಮಹಿಳೆಯೋರ್ವರು ಸುಮಾರು 4 ವರ್ಷಗಳಿಂದ ಗೋವಿನ ಸೆಗಣಿಯಿಂದಲೇ ಪೇಂಟ್ ತಯಾರಿಸಿ ಮಾರಾಟ ಮಾಡುತ್ತಿದ್ದಾರೆ.

ಸುರತ್ಕಲ್‌ನ ಅಕ್ಷತಾ ಹಳೆಯಂಗಡಿಯ ಸಮೀಪದ ತೋಕೂರಿನಲ್ಲಿ ಗೋವಿನ ಸಗಣಿಯಿಂದ ತಯಾರಾಗುವ ಪರಿಸರಸ್ನೇಹಿ ಸನ್ನಿಧಿ ಪ್ರಾಕೃತಿಕ ಪೇಂಟ್ ಘಟಕ ನಡೆಸುತ್ತಿದ್ದಾರೆ.

ಹೇಗೆ ಸಾಧ್ಯವಾಯ್ತು: 2021ರಲ್ಲಿ ಕೇಂದ್ರ ಸಚಿವ ನಿತಿನ್ ಗಡ್ಕರಿ ಖಾದಿ ಮತ್ತು ಗ್ರಾಮೋದ್ಯೋಗ ಆಯೋಗದ ಕುಮಾರಪ್ಪ ನ್ಯಾಷನಲ್ ಹ್ಯಾಂಡ್‌ಮೇಡ್ ಪೇಪ‌ರ್ ಇನ್‌ಸ್ಟಿಟ್ಯೂಟ್ ರೂಪಿಸಿದ ಸಗಣಿ ಪೇಂಟ್ ತಂತ್ರಜ್ಞಾನ ಪರಿಚಯಿಸಿದ್ದರು. ಸ್ವಂತ ಉದ್ಯಮದ ಕನಸಿನಲ್ಲಿದ್ದ ಅಕ್ಷತಾ ಈ ಬಗ್ಗೆ ಮಾಹಿತಿ ಪಡೆದು ರಾಜಸ್ಥಾನದ ಜೈಪುರದಲ್ಲಿರುವ ಸಂಸ್ಥೆಯಲ್ಲಿ ತರಬೇತಿ ಪಡೆದು 2022ರಲ್ಲಿ ತೋಕೂರಿನಲ್ಲಿ ಘಟಕಕ್ಕೆ ಚಾಲನೆ ನೀಡಿದರು. ಸ್ಥಳೀಯ ಹೈನುಗಾರರಿಂದ ಕೆ.ಜಿ.ಗೆ 5 ರು. ದರದಲ್ಲಿ ಸಗಣಿ ಸಂಗ್ರಹಿಸಿ, ಮೊದಲಿಗೆ ಸಗಣಿಯ ಕಸಕಡಿಗಳನ್ನು ಬೇರ್ಪಡಿಸಲಾಗುತ್ತದೆ. ಬಳಿಕ ರಿಬ್ಬನ್ ಮಿಕ್ಸರ್ ಯಂತ್ರದಲ್ಲಿ 2 ಗಂಟೆಗಳ ಕಾಲ ಮಿಶ್ರಣ ಮಾಡಿ, ಟಿಡಿಆರ್ ಯಂತ್ರದ ಮೂಲಕ ನುಣ್ಣಗೆ ಅರೆಯಲಾಗುತ್ತದೆ. ನಂತರ ಬ್ಲೀಚಿಂಗ್ ಟ್ಯಾಂಕ್‌ನಲ್ಲಿ 90 ಡಿಗ್ರಿ ಉಷ್ಣಾಂಶದಲ್ಲಿ ಕುದಿಸಿ ಸಂಸ್ಕರಿಸಿದಾಗ ವಾಸನೆ ರಹಿತ ಬಿಳಿ ಮೂಲ ದ್ರಾವಣ ಸಿದ್ಧವಾಗುತ್ತದೆ. ಇದಕ್ಕೆ ಬೇಕಾದ ಬಣ್ಣಗಳನ್ನು ಬೆರೆಸಿ ವಿವಿಧ ಶೇಡ್‌ಗಳ ಪೇಂಟ್ ತಯಾರಿಸಲಾಗುತ್ತದೆ. ಸಾಮಾನ್ಯ ರಾಸಾಯನಿಕ ಪೇಂಟ್‌ಗಳಿಗೆ ಹೋಲಿಸಿದರೆ ಇದರ ದರ ಕಡಿಮೆ, ವಾಸನೆರಹಿತ, ಆ್ಯಂಟಿ-ಫಂಗಲ್ ಹಾಗೂ ಆ್ಯಂಟಿ-ಬ್ಯಾಕ್ಟಿರಿಯಲ್ ಗುಣ ಹೊಂದಿದೆ. ಈ ಪೇಂಟ್ ಬೇಸಿಗೆಯಲ್ಲಿ ತಂಪು ಹಾಗೂ ಚಳಿಗಾಲದಲ್ಲಿ ಬೆಚ್ಚನೆಯ ಅನುಭವ ನೀಡುತ್ತದೆ. ಹೊರಗೋಡೆಗಳಿಗೆ 4-5ವರ್ಷ ಹಾಗೂ ಒಳಗೋಡೆಗಳಿಗೆ 8-12ವರ್ಷ ಬಾಳಿಕೆ ಬರುತ್ತದೆ. ಮನೆ, ವಾಣಿಜ್ಯ ಮಳಿಗೆಗಳ ಗೋಡೆಗಳ ಜೊತೆಗೆ ಯಕ್ಷಗಾನ, ಹುಲಿವೇಷ ಕಲಾವಿದರ ಮೈಬಣ್ಣವಾಗಿ, ಗಣಪತಿ ವಿಗ್ರಹಗಳ ಅಲಂಕಾರಕ್ಕೂ ಈ ಪೇಂಟ್‌ ಬಳಕೆಯಾಗುತ್ತಿದೆ. ಪರಿಸರ ಪೂರಕ ತಂತ್ರಜ್ಞಾನ ಅಳವಡಿಸಿಕೊಂಡು ಗ್ರಾಮೀಣ ಭಾಗದಲ್ಲೇ ಯಶಸ್ವಿ ಉದ್ಯಮ ಕಟ್ಟಿರುವ ಅಕ್ಷತಾರ ಪ್ರಯತ್ನವು ಸ್ವಾವಲಂಬಿ ಬದುಕಿಗೆ ಉತ್ತಮ ನಿದರ್ಶನವಾಗಿದೆ.ಗೋವಿನ ಸಗಣೆ ಪೇಂಟ್‌ ಪರಿಸರ ಸ್ನೇಹಿಯಾಗಿದ್ದು ನೈಸರ್ಗಿಕವಾಗಿದ್ದು ಬೇಸಿಗೆಯಲ್ಲಿ ತಂಪಿನ ಹಾಗೂ ಚಳಿಗಾಲದಲ್ಲಿ ಬೆಚ್ಚನೆಯ ವಾತಾವರಣ ನೀಡುತ್ತದೆ. ಸುಮಾರು 25 ಲಕ್ಷ ರು. ವೆಚ್ಚವಾಗಿದ್ದು ಆರಂಭದಲ್ಲಿ ಮಾರುಕಟ್ಟೆ ಪಡೆಯಲು ಕಷ್ಟವಾಗಿದ್ದು, ಕೆಲವು ಬಸ್ಸು ನಿಲ್ದಾಣ, ದೇವಸ್ಥಾನಗಳಿಗೆ ಪೇಂಟ್‌ ಅಳವಡಿಸಿದ್ದು ಬಳಿಕ ಬೇಡಿಕೆ ಆರಂಭವಾಯಿತು. ಒಮ್ಮೆ ಪಡೆದವರು ಪುನಃ ಕೊಂಡೊಯ್ಯತ್ತಿದ್ದಾರೆ.

-ಅಕ್ಷತಾ ಉದ್ಯಮಿ