ಪಾತಾಳಕ್ಕೆ ಕುಸಿದ ಗೋವಿನಜೋಳದ ದರ: ಬೆಂಬಲಬೆಲೆ ಖರೀದಿ ಕೇಂದ್ರ ಆರಂಭಕ್ಕೆ ಆಗ್ರಹ

| Published : Oct 17 2025, 01:02 AM IST

ಪಾತಾಳಕ್ಕೆ ಕುಸಿದ ಗೋವಿನಜೋಳದ ದರ: ಬೆಂಬಲಬೆಲೆ ಖರೀದಿ ಕೇಂದ್ರ ಆರಂಭಕ್ಕೆ ಆಗ್ರಹ
Share this Article
  • FB
  • TW
  • Linkdin
  • Email

ಸಾರಾಂಶ

ಗೋವಿನಜೋಳದ ದರವು ಪಾತಾಳಕ್ಕೆ ಕುಸಿದಿದ್ದು, ಇದರಿಂದ ಆರ್ಥಿಕ ಮುಗ್ಗಟ್ಟಿಗೆ ಒಳಗಾಗುವ ಭಯದಲ್ಲಿರುವ ರೈತರನ್ನು ಸಂರಕ್ಷಿಸಲು ಸರ್ಕಾರ ಮುಂದಾಗಿ ಆದಷ್ಟು ಬೇಗ ಗೋವಿನಜೋಳದ ಬೆಂಬಲ ಬೆಲೆ ಖರೀದಿ ಕೇಂದ್ರವನ್ನು ಆರಂಭಿಸಬೇಕು.

ರಾಜ್ಯ ಕಬ್ಬು ಬೆಳೆಗಾರರ ಸಂಘ ಹಾಗೂ ರಾಜ್ಯ ರೈತ ಸಂಘಟನೆಗಳ ಒಕ್ಕೂಟ ಮನವಿ

ಕನ್ನಡಪ್ರಭ ವಾರ್ತೆ ಹಳಿಯಾಳ

ಗೋವಿನಜೋಳದ ದರವು ಪಾತಾಳಕ್ಕೆ ಕುಸಿದಿದ್ದು, ಇದರಿಂದ ಆರ್ಥಿಕ ಮುಗ್ಗಟ್ಟಿಗೆ ಒಳಗಾಗುವ ಭಯದಲ್ಲಿರುವ ರೈತರನ್ನು ಸಂರಕ್ಷಿಸಲು ಸರ್ಕಾರ ಮುಂದಾಗಿ ಆದಷ್ಟು ಬೇಗ ಗೋವಿನಜೋಳದ ಬೆಂಬಲ ಬೆಲೆ ಖರೀದಿ ಕೇಂದ್ರವನ್ನು ಆರಂಭಿಸಬೇಕೆಂದು ರಾಜ್ಯ ಕಬ್ಬು ಬೆಳೆಗಾರರ ಸಂಘ ಹಾಗೂ ರಾಜ್ಯ ರೈತ ಸಂಘಟನೆಗಳ ಒಕ್ಕೂಟ ರಾಜ್ಯ ಸರ್ಕಾರವನ್ನು ಆಗ್ರಹಿಸಿವೆ.

ಗುರುವಾರ ತಾಲೂಕಾಡಳಿತ ಸೌಧಕ್ಕೆ ತೆರಳಿದ ಕಬ್ಬು ಬೆಳೆಗಾರರ ಹಾಗೂ ರೈತರ ನಿಯೋಗವು ತಹಸೀಲ್ದಾರರನ್ನು ಭೇಟಿಯಾಗಿ ರಾಜ್ಯ ಸರ್ಕಾರಕ್ಕೆ ಬರೆದ ಮನವಿ ಸಲ್ಲಿಸಿತು.ತಾಲೂಕಿನಲ್ಲಿ ಗೋವಿನಜೋಳದ ಬೆಂಬಲಬೆಲೆ ಖರೀದಿ ಕೇಂದ್ರ ಆರಂಭಿಸಬೇಕು, ಇನ್ನೇರೆಡು ದಿನದಲ್ಲಿ ಖರೀದಿ ಕೇಂದ್ರ ಆರಂಭಿಸದಿದ್ದರೇ ಹೋರಾಟ ನಡೆಸಲು ಯೋಜನೆ ರೂಪಿಸಲಾಗುವುದೆಂದು ಎಚ್ಚರಿಸಲಾಗಿದೆ.

ಈ ಸಂದರ್ಭ ಗೋವಿನಜೋಳದ ದರ ಕುಸಿತದ ಬಗ್ಗೆ ಮಾತನಾಡಿದ ಕಬ್ಬು ಬೆಳೆಗಾರರ ಸಂಘದ ಜಿಲ್ಲಾಧ್ಯಕ್ಷ ಕುಮಾರ ಬೊಬಾಟೆಯವರು, ತಾಲೂಕಿನಲ್ಲಿ ಗೋವಿನಜೋಳದ ಬೆಳೆಗೆ ಉತ್ತಮ ದರ ದೊರೆಯಬಹುದೆಂಬ ಬಹಳ ನಿರೀಕ್ಷೆಯಲ್ಲಿದ್ದ ರೈತರು ಸದ್ಯ ತಾಲೂಕಿನಲ್ಲಿ ಆಕರಿಸಲ್ಪಡುತ್ತಿರುವ ಕನಿಷ್ಟ ದರದಿಂದ ನಿರಾಶಗೊಳಗಾಗಿದ್ದಾರೆ. ದಲ್ಲಾಳಿಗಳ ಮೇಲೆ ಹತೋಟಿ ಇಲ್ಲದಂತಾಗಿದ್ದು, ಸರ್ಕಾರದ ಬೆಂಬಲ ಬೆಲೆ ದರಕ್ಕಿಂತಲೂ ಕಡಿಮೆ ಕ್ವಿಂಟಲ್‌ಗೆ ₹1900 ದರವನ್ನು ದಲ್ಲಾಳಿಗಳು ಆಕರಿಸುತ್ತಿದ್ದಾರೆ. ಆದಕಾರಣ ತಾಲೂಕಾಡಳಿತ ಸ್ಥಳೀಯ ಸಮಸ್ಯೆಯನ್ನು ಸರ್ಕಾರದ ಗಮನಕ್ಕೆ ತಂದು ಬೆಂಬಲಬೆಲೆ ಖರೀದಿ ಕೇಂದ್ರ ಆರಂಭಿಸಲು ಮುಂದಾಗಬೇಕು ಎಂದು ಆಗ್ರಹಿಸಿದರು.

ರೈತರ ಅಹವಾಲು ಆಲಿಸಿದ ತಹಸೀಲ್ದಾರರು ಸಮಸ್ಯೆ ಬಗೆಹರಿಸಲು ಕ್ರಮ ಕೈಗೊಳ್ಳುವ ಭರವಸೆ ನೀಡಿದರು.

ಕಬ್ಬು ಬೆಳೆಗಾರರ ಸಂಘದ ತಾಲೂಕು ಅಧ್ಯಕ್ಷ ಶಂಕರ ಕಾಜಗಾರ, ಅಶೋಕ ಮೇಟಿ, ಎಂ.ವಿ. ಘಾಡಿ, ಸಾತೋರಿ ಗೋಡೆಮನಿ ಸೇರಿದಂತೆ ರೈತ ಪ್ರಮುಖರು ಇದ್ದರು.