ಕಾರಟಗಿ: ಗೋ ಸಂರಕ್ಷಣೆ ಕಾರ್ಯ ಕೇವಲ ಸರ್ಕಾರದ್ದಲ್ಲ, ಪ್ರತಿಯೊಬ್ಬ ನಾಗರಿಕನ ಕರ್ತವ್ಯವಾಗಬೇಕು ಎಂದು ಉಪನ್ಯಾಸಕಿ ಆಶಾ ಶಹಾಪುರ ಹೇಳಿದರು.
ಪಟ್ಟಣದ ನವಲಿ ರಸ್ತೆಯ ಕರಿಯಪ್ಪ ತಾತನ ದೇವಸ್ಥಾನದ ಆವರಣದಲ್ಲಿ ಗೋಮಾತೆಯ ಗೌರವದ ಅಭಿಯಾನದಲ್ಲಿ ಅವರು ಮಾತನಾಡಿದರು. ಗೋವನ್ನು ಪವಿತ್ರತೆ ಮತ್ತು ದೇವತ್ವದ ಸ್ವರೂಪವಾಗಿ ಭಾವಿಸಿ ಪ್ರೀತಿಯಿಂದ ಸಾಕಬೇಕು. ಗೋವುಗಳನ್ನು ಸಾಕುವುದರಿಂದ ದೇಶದ ಕಲ್ಯಾಣವಾಗುತ್ತದೆ. ಗೋವನ್ನು ಸಾಕಿದರೆ ಗೋವಿನ ಹಾಲು ಮಾತ್ರವಲ್ಲದೆ ಸಗಣಿ ಮತ್ತು ಗೋಮುತ್ರದಿಂದ ಜೈವಿಕ ಗೊಬ್ಬರ, ಗೋಬರ್ ಗ್ಯಾಸ್ ಮತ್ತು ಔಷಧಿಗಳನ್ನು ತಯಾರಿಸಿ ಅವುಗಳ ಬಳಕೆಯನ್ನು ಪ್ರೋತ್ಸಾಹಿಸಬೇಕು. ಗೋಮಾತೆಯ ಸಂತತಿ ಬೆಳೆಸುವುದರೊಂದಿಗೆ ಗೋಮಾತೆ ಭಾರತಮಾತೆ ಹಾಗೂ ಜನ್ಮಕೊಟ್ಟ ತಾಯಿಯನ್ನು ಪೂಜಿಸಬೇಕು. ಅದರೊಂದಿಗೆ ಗೋವಿಗೆ ರಾಷ್ಟ್ರೀಯ ಸ್ಥಾನಮಾನ ದೊರಕಿಸಿಕೊಡುವಲ್ಲಿಯೂ ನಾವೆಲ್ಲಾ ಭಾಗಿಯಾಗಬೇಕು ಎಂದರು.ಮರಳಸಿದ್ದಯ್ಯಸ್ವಾಮಿ ಹಿರೇಮಠ ಕರಿಯಪ್ಪ ತಾತನವರ ದೇವಸ್ಥಾನದಲ್ಲಿ ಈಶ್ವರ ಮೂರ್ತಿಗೆ ಹಾಗೂ ಗೋವಿಗೆ ಪೂಜೆ ಸಲ್ಲಿಸುವ ಮೂಲಕ ಗೋಮಾತೆಯ ಗೌರವದ ಅಭಿಯಾನಕ್ಕೆ ಚಾಲನೆ ನೀಡಿದರು.
ಬಿಜೆಪಿ ಮಂಡಲ ಅಧ್ಯಕ್ಷ ಮಂಜುನಾಥ ಮಸ್ಕಿ ಮಾತನಾಡಿ, ದೇಶದಲ್ಲಿ ಪೂಜ್ಯ ಸ್ಥಾನ ಹೊಂದಿರುವ ಗೋಮಾತೆಯ ರಕ್ಷಿಸುವುದರೊಂದಿಗೆ ಅವುಗಳ ಪಾಲನೆ ಕೂಡ ಬಹಳ ಮುಖ್ಯವಾಗಿದೆ. ಆ ನಿಟ್ಟಿನಲ್ಲಿ ಗೋಮಾತೆಯನ್ನು ರಾಷ್ಟ್ರೀಯ ಪ್ರಾಣಿಯನ್ನಾಗಿ ಘೋಷಿಸಲು ಮತ್ತು ಗೋಮಾತೆಗೆ ಸಂಬಂಧಿಸಿದ ವಿವಿಧ ಬೇಡಿಕೆಗಳನ್ನು ರಾಷ್ಟ್ರ ಮಟ್ಟದಲ್ಲಿ ಬೃಹತ್ ಹೋರಾಟದ ಮೂಲಕ ಮಂಡಿಸುವುದು ಈ ಅಭಿಯಾನದ ಮುಖ್ಯ ಉದ್ದೇಶ ಎಂದರು.ಆನಂತರ ಪಟ್ಟಣದ ಕನಕದಾಸ ವೃತ್ತದಿಂದ ತಹಸೀಲ್ದಾರ್ ಕಚೇರಿ ವರೆಗೂ ತೆರಳಿ ರಾಷ್ಟ್ರಪತಿ, ಪ್ರಧಾನಮಂತ್ರಿ, ರಾಜ್ಯಪಾಲರು, ಮುಖ್ಯಮಂತ್ರಿ ಅವರಿಗೆ ಬರೆದ ಮನವಿ ಪತ್ರದೊಂದಿಗೆ ಸಹಿ ಸಂಗ್ರಹ ಪ್ರತಿಯನ್ನು ಗ್ರೇಡ್-೨ ತಹಸೀಲ್ದಾರ್ ಷಣ್ಮುಖಪ್ಪ ಅವರ ಮೂಲಕ ಸಲ್ಲಿಸಿದರು.
ಗೋಮಾತೆಯ ಗೌರವದ ಅಭಿಯಾನದ ಸಂಚಾಲಕ ಶಂಕರ್, ಹಿಂದೂ ಜಾಗರಣಾ ವೇದಿಕೆಯ ಹನುಮಂತರೆಡ್ಡಿ, ಪುರಸಭೆ ಸದಸ್ಯ ಮೋನಿಕಾ ಧನಂಜಯ, ಲಕ್ಷ್ಮೀದೇವಿ, ಬಸವರಾಜ ಕೊಪ್ಪದ ಮತ್ತು ಮೌನೇಶ ದಢೇಸೂಗುರ, ಸುರೇಶ ದಢೇಸೂಗುರ, ರವಿ ತಿಮ್ಮಾಪುರ, ಅಭಿಷೇಕಸ್ವಾಮಿ ಹಿರೇಮಠ, ದುರ್ಗೇಶ, ಶಂಕರಗೌಡ, ಮಂಜುನಾಥ ಶಹಾಪುರ, ಭೋಜರಾಜ ರಾಮನಗರ, ರಾಘವೇಂದ್ರ, ಶರಣಪ್ಪ ಬಿಜಕಲ್, ರತ್ನಕುಮಾರಿ, ಬಸವರಾಜ ಎತ್ತಿನಮನಿ, ಸಿದ್ದು ಯರಡೊಣಾ, ವಿಕ್ರಮ್ ಮೇಟಿ ಇದ್ದರು.