ಹಸುಗಳೇ ಈತನನ್ನು ಸಾಕಿದ್ದವು ಎನ್ನುವಂತೆ ಇವರ ಸಂಬಂಧ ಇತ್ತು. ಗೋಧೂಳಿ ಸಮಯದಲ್ಲಿ ಹೊರಟನೆಂದರೆ ಇವರ ನಡುಗೆ ನೋಡುವುದೇ ಒಂದು ಸೊಬಗು
ಸುರೇಶ ಯಳಕಪ್ಪನವರ
ತಂಬ್ರಹಳ್ಳಿ: ಗೊಲ್ಲ ಕರೆದ ಧ್ವನಿಯ ಕೇಳಿ ಹಿಂಬಾಲಿಸುತ್ತಿದ್ದ ಹಸುಗಳು ಇದೀಗ ಗೊಲ್ಲನ ಸಮಾಧಿ ಮುಂದೆ ನಿತ್ಯವೂ ಗೋಳಾಡುವ ಕರುಳು ಹಿಂಡುವ ಕಥೆ ಇಲ್ಲಿದೆ.ಹಸುಗಳೇ ಈತನನ್ನು ಸಾಕಿದ್ದವು ಎನ್ನುವಂತೆ ಇವರ ಸಂಬಂಧ ಇತ್ತು. ಗೋಧೂಳಿ ಸಮಯದಲ್ಲಿ ಹೊರಟನೆಂದರೆ ಇವರ ನಡುಗೆ ನೋಡುವುದೇ ಒಂದು ಸೊಬಗು. ಇವರ ಸಂಬಂಧ ತಾಯಿ- ಮಗುವಿನಂತೆ ಇತ್ತು. ಗೋವುಗಳ ನೋವಿನ ಆರ್ಭಟ ಕರುಳು ಕಿತ್ತು ಬರುವಂತಹ ಘಟನೆ ಇತ್ತೀಚೆಗೆ ತಾಲೂಕಿನ ತಂಬ್ರಹಳ್ಳಿ ಗ್ರಾಮದ ದನ ಕಾಯುವ ಸಣ್ಣಕೊಟ್ರೇಶ ಗಡಿಹಳ್ಳಿ ಎಂಬವರ ಸಾವಿನಲ್ಲಿ ಕಂಡುಬಂತು.
ತಾಲೂಕಿನ ತಂಬ್ರಹಳ್ಳಿ ಗ್ರಾಮದ ಕೊಟ್ರೇಶ ತನ್ನ ೫೦ಕ್ಕೂ ಹೆಚ್ಚು ಹಸುಗಳನ್ನು ಮೇಯಿಸುವುದರಲ್ಲಿ ನಿರಂತರವಾಗಿ ನಿರತನಾಗಿದ್ದ. ಈತ ಡಿ.6ರಂದು ಅನಾರೋಗ್ಯದಿಂದ ದಿಢೀರ್ ನಿಧನರಾದಾಗ ಮೂಕ ಗೋವುಗಳು ಆತನ ಸಮಾಧಿಯ ಬಳಿ ಹೋಗಿ ಸುತ್ತುವರಿದು ಅಂಬಾ ಅನ್ನುತ್ತಿದ್ದ ರೋದನೆ ಎಲ್ಲರ ಕಣ್ಣಲ್ಲಿ ನೀರು ತರಿಸುವಂತಿತ್ತು.ಕೊಟ್ರೇಶ ಕೊಪ್ಪಳದ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾಗ ಹಸುಗಳು ನಿರಂತರವಾಗಿ ಅಂಬಾ ಅಂಬಾ ಎಂದು ಒದರುವ ರೀತಿ ಕರುಳು ಕಿತ್ತು ಬರುವಂತಿತ್ತು. ಕೊಟ್ರೇಶ ಹಸುಗಳನ್ನು ಮೇಯಿಸಲು ಹೋದಾಗ ಆತ ಮುಂದೆ ಮುಂದೆ ಹೋದರೆ ಹಸುಗಳು ಆತನ ಹಿಂದೆ ಹಿಂದೆ ಹಿಂಬಾಲಿಸುತ್ತಿರುವ ರೀತಿ ನೋಡಿದರೆ ಆತನಿಗೆ ಹಸುಗಳ ಮೇಲಿನ ಪ್ರೀತಿ ಎಂತಹದ್ದು, ಹಸುಗಳು ಆತನನ್ನು ಎಷ್ಟು ಹಚ್ಚಿಕೊಂಡಿದ್ದವು ಎಂಬುದಕ್ಕೆ ಸಾಕ್ಷಿಯಾಗಿತ್ತು.
ಹಸುಗಳಿಗೆ ವೈರಾಗ್ಯ: ದನ ಕಾಯುವ ಸಣ್ಣಕೊಟ್ರೇಶ ಹಸುಗಳ ಹಾಲು ಮಾರಿ, ಗೊಬ್ಬರ ಮಾರಾಟದೊಂದಿಗೆ ಅನಾರೋಗ್ಯ ಹೆಂಡತಿ, ಮೂರು ಮಕ್ಕಳೊಂದಿಗೆ ಜೀವನ ಸಾಗಿಸುತ್ತಿದ್ದ. ದಿಢೀರ್ ಆಗಿ ತನ್ನ ಆರೋಗ್ಯದಲ್ಲಿ ಏರುಪೇರು ಆಗಿ ಆಸ್ಪತ್ರೆಗೆ ಹೋಗಿ ಎರಡು ದಿನದಲ್ಲಿ ತೀವ್ರ ಜ್ವರದಿಂದಾಗಿ ಅಸುನೀಗಿದ್ದ. ಕಿಡ್ನಿ ವೈಫಲ್ಯದಿಂದಾಗಿ ಆತನ ಹೆಂಡತಿಯೂ ಜ.೨ರಂದು ನಿಧನಳಾಗಿದ್ದು, ಆತನ ಮೂರು ಮಕ್ಕಳು ಕೇವಲ ಒಂದು ತಿಂಗಳೊಳಗಾಗಿ ತಂದೆ-ತಾಯಿಯನ್ನು ಕಳೆದುಕೊಂಡು ಅನಾಥರಾದರು. ದಿನನಿತ್ಯ ಕೊಟ್ರೇಶ ಯಾರೊಬ್ಬರಿಗೂ ತೊಂದರೆ ಕೊಡದೇ ಹಸುಗಳಿಗೆ ಮೇವು ನೀರು ಹಾಲು ಕರೆಯುವ ಕೆಲಸದಲ್ಲಿ ನಿರತನಾಗಿದ್ದ. ಎಲ್ಲರಿಗೂ ಪ್ರೀತಿ ಪಾತ್ರನಾಗಿದ್ದ ಕೊಟ್ರೇಶ ದಂಪತಿ ಸಾವು ಗ್ರಾಮಸ್ಥರ ಕಣ್ಣಾಲೆಯನ್ನು ಒದ್ದೆಮಾಡಿದೆ.ಕೊಟ್ರೇಶನ ಸಾವಿನ ನಂತರ ಆತನೆಲ್ಲ ಹಸುಗಳ ಗೋಳಾಟ ನೋಡಲಾರದೇ ಮಾರಾಟ ಮಾಡಲಾಗಿದೆ. ಹಸುಗಳು ಒಂದೊಂದಾಗಿ ಬೇರ್ಪಟ್ಟು ಬೇರೆ ಬೇರೆ ಮಾಲೀಕರ ಕೈವಶವಾಗಿ ಅಲ್ಲಿಯೂ ತಮ್ಮ ಕೊಟ್ಟಿಗೆಯಲ್ಲಿ ಕೊಟ್ರೇಶನ ಸ್ಮರಣೆಯಲ್ಲಿ ಕಾಲ ಕಳೆಯುತ್ತಿವೆ. ಕೊಟ್ರೇಶಿಯ ಹಸುಗಳಿದ್ದ ಕೊಠಡಿ ಈಗ ಬರಿದಾಗಿದೆ. ಕೊಟ್ರೇಶನ ತಾಯಿ ತನ್ನ ಮಗನನ್ನು ನೆನೆದು ಈಗಲೂ ಕಣ್ಣೀರಿಡುತ್ತಿದ್ದಾಳೆ. ಹಸುಗಳನ್ನು ಸಾಕಿದರೆ ಕೊಟ್ರೇಶಿಯಂತೆ ಸಾಕಬೇಕು ಎಂದು ಗ್ರಾಮಸ್ಥರು ಕೊಟ್ರೇಶಿಯ ಬಗ್ಗೆ ಈಗಲೂ ಮೆಚ್ಚುಗೆಯ ಮಾತುಗಳನ್ನಾಡುತ್ತಿದ್ದಾರೆ.