ಭೂಗಳ್ಳರಿಂದ ಗೋಮಾಳ, ಕೆರೆ- ಕುಂಟೆಗಳನ್ನು ಉಳಿಸಬೇಕಿದೆ: ರೈತಸಂಘದ ಉಪಾಧ್ಯಕ್ಷ ನಾರಾಯಣಗೌಡ

| Published : Jan 09 2025, 12:47 AM IST

ಭೂಗಳ್ಳರಿಂದ ಗೋಮಾಳ, ಕೆರೆ- ಕುಂಟೆಗಳನ್ನು ಉಳಿಸಬೇಕಿದೆ: ರೈತಸಂಘದ ಉಪಾಧ್ಯಕ್ಷ ನಾರಾಯಣಗೌಡ
Share this Article
  • FB
  • TW
  • Linkdin
  • Email

ಸಾರಾಂಶ

ಲಕ್ಷ ಲಕ್ಷ ಸಂಬಳ ಪಡೆದು ಜನಸೇವೆ ಮಾಡುವ ಜೊತೆಗೆ ಸರ್ಕಾರಿ ಆಸ್ತಿಗಳನ್ನು ಉಳಿಸಬೇಕಾದ ಕಂದಾಯ, ಸರ್ವೇ ಇಲಾಖೆ ಅಧಿಕಾರಿಗಳೇ ಭೂಗಳ್ಳರ ಜೊತೆ ಶಾಮೀಲಾಗಿ ಲಂಚ ಪಡೆದು ಜಲ ಮೂಲಗಳಿಗೆ ಅಕ್ರಮ ದಾಖಲೆಗಳನ್ನು ಸೃಷ್ಟಿಸಿರುವುದರಿಂದ ರಾತ್ರೋರಾತ್ರಿ ಕೆರೆಗಳು ಸ್ವರೂಪವನ್ನೇ ಕಳೆದುಕೊಂಡಿವೆ. ಭೂಗಳ್ಳರಿಗೆ ಸ್ಥಳೀಯ ರೈತರ ಹೆಸರಿನಲ್ಲಿ ಮಂಜೂರು ಮಾಡಿದ ದೊಡ್ಡ ಜಾಲವೇ ಕಂದಾಯ ಸರ್ವೇ ಇಲಾಖೆಯಲ್ಲಿ ಕೆಲಸ ನಿರ್ವಹಿಸುತ್ತಿದೆ ಎಂದು ಆರೋಪಿಸಿದರು.

ಕನ್ನಡಪ್ರಭ ವಾರ್ತೆ ಮುಳಬಾಗಿಲು

ಯುವಪೀಳಿಗೆಯ ಭವಿಷ್ಯಕ್ಕಾಗಿ ಕೆರೆ, ಜಾನುವಾರುಗಳ ರಕ್ಷಣೆಗಾಗಿ ಗೋಮಾಳ ಜಮೀನನ್ನು ಉಳಿಸಿಕೊಳ್ಳಲು ದೇಶ ಕಾಯುವ ಯೋಧರಂತೆ ಭೂಗಳ್ಳರಿಂದ ರಕ್ಷಣೆ ಮಾಡಿಕೊಳ್ಳಲು ರೈತರು ಮುಂದಾಗಬೇಕೆಂದು ರೈತಸಂಘದ ರಾಜ್ಯ ಉಪಾಧ್ಯಕ್ಷ ಕೆ.ನಾರಾಯಣಗೌಡ ರೈತರಲ್ಲಿ ಮನವಿ ಮಾಡಿದರು.

ಕಂದಾಯ ಸಚಿವ ಕೃಷ್ಣಬೈರೇಗೌಡರ ಪ್ರತಿ ವಾರಕ್ಕೊಂದು ಕೆರೆ ಒತ್ತುವರಿ ತೆರವುಗೊಳಿಸಬೇಕೆಂಬ ಆದೇಶ ಎಲ್ಲಿ ಹೋಯಿತು. ಭೂಗಳ್ಳರ ಸೂಟ್ ಕೇಸ್‌ನಲ್ಲಿ ಕಳೆದು ಹೋಯಿತೇ, ಇಲ್ಲವೇ ಕೆರೆ ಉಳಿಸಲು ಅಧಿಕಾರಿಗಳಿಗೆ ಇಚ್ಛಾಶಕ್ತಿ ಕೊರತೆಯೇ ಎಂದು ಆದೇಶವನ್ನು ಪಾಲಿಸದ ಅಧಿಕಾರಿಗಳನ್ನು ಪ್ರಶ್ನೆ ಮಾಡಿದರು.

ಆವಣಿ ಹೋಬಳಿ ದೇವರಾಯಸಮುದ್ರ ಕಂದಾಯ ವ್ಯಾಪ್ತಿಯ ತಮ್ಮೇಗೌಡನ ಕೆರೆಯಲ್ಲಿ ವಿಶ್ವ ರೈತದಿನಾಚರಣೆ ಅಂಗವಾಗಿ ಕೆರೆಗೆ ಪೂಜೆ ಮಾಡಿ ಜನರಿಗೆ ಉಚಿತ ತರಕಾರಿ ಹಂಚುವ ಮೂಲಕ ಕೆರೆ ಉಳಿಸುವ ಪ್ರತಿಜ್ಞೆಯೊಂದಿಗೆ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು. ಹತ್ತಾರು ಹಳ್ಳಿಗಳ ಪೂರ್ವಜರು ವರ್ಷಾನುಗಟ್ಟಲೇ ಒಗ್ಗಟ್ಟಿನಿಂದ ಬೆವರು ಸುರಿಸಿ, ಕಟ್ಟಿದ ಕೆರೆಗಳ ಮೇಲೆ ಬೆಂಗಳೂರು ರಿಯಲ್ ಎಸ್ಟೇಟ್ ಭೂಗಳ್ಳರ ವಕ್ರದೃಷ್ಟಿ ಬಿದ್ದು, ದಿನೇದಿನೇ ಒತ್ತುವರಿಯಾಗಿ ನಶಿಸಿ ಹೋಗುತ್ತಿದ್ದರೂ ಕೆರೆ ಬಗ್ಗೆ ಆ ವ್ಯಾಪ್ತಿಯ ಗ್ರಾಮೀಣ ಪ್ರದೇಶದ ರೈತಾಪಿ ವರ್ಗ ಧ್ವನಿ ಎತ್ತದೇ ಇರುವುದು ದುರಾದೃಷ್ಟಕರ ಎಂದು ಕಾರ್ಯಕ್ರಮದಲ್ಲಿ ಅಸಮಾಧಾನ ವ್ಯಕ್ತಪಡಿಸಿದರು.

ಲಕ್ಷ ಲಕ್ಷ ಸಂಬಳ ಪಡೆದು ಜನಸೇವೆ ಮಾಡುವ ಜೊತೆಗೆ ಸರ್ಕಾರಿ ಆಸ್ತಿಗಳನ್ನು ಉಳಿಸಬೇಕಾದ ಕಂದಾಯ, ಸರ್ವೇ ಇಲಾಖೆ ಅಧಿಕಾರಿಗಳೇ ಭೂಗಳ್ಳರ ಜೊತೆ ಶಾಮೀಲಾಗಿ ಲಂಚ ಪಡೆದು ಜಲ ಮೂಲಗಳಿಗೆ ಅಕ್ರಮ ದಾಖಲೆಗಳನ್ನು ಸೃಷ್ಟಿಸಿರುವುದರಿಂದ ರಾತ್ರೋರಾತ್ರಿ ಕೆರೆಗಳು ಸ್ವರೂಪವನ್ನೇ ಕಳೆದುಕೊಂಡಿವೆ. ಭೂಗಳ್ಳರಿಗೆ ಸ್ಥಳೀಯ ರೈತರ ಹೆಸರಿನಲ್ಲಿ ಮಂಜೂರು ಮಾಡಿದ ದೊಡ್ಡ ಜಾಲವೇ ಕಂದಾಯ ಸರ್ವೇ ಇಲಾಖೆಯಲ್ಲಿ ಕೆಲಸ ನಿರ್ವಹಿಸುತ್ತಿದೆ ಎಂದು ಆರೋಪಿಸಿದರು.

ಮನವಿ ಸ್ವೀಕರಿಸಿದ ಕಂದಾಯ ಅಧಿಕಾರಿ ಸುಬ್ರಮಣಿ, ಸರ್ಕಾರಿ ಆಸ್ತಿಗಳನ್ನು ಉಳಿಸಲು ನಾವು ಬದ್ಧರಾಗಿದ್ದೇವೆ. ಯಾವುದೇ ಒತ್ತಡಕ್ಕೆ ಮಣಿಯದೆ ಕೆರೆ, ಗೋಮಾಳ, ಸರ್ವೇ ಮಾಡಿಸಿ ಒತ್ತುವರಿದಾರರ ವಿರುದ್ಧ ಕ್ರಿಮಿನಲ್ ಮೊಕದ್ದಮೆ ದಾಖಲು ಮಾಡುವ ಭರವಸೆಯನ್ನು ನೀಡಿದರು.

ಜಿಲ್ಲಾ ಪ್ರಧಾನ ಕಾರ್ಯದರ್ಶಿ ಹೆಬ್ಬಣಿ ಆನಂದರೆಡ್ಡಿ, ತಾಲೂಕಾಧ್ಯಕ್ಷ ಪ್ರಭಾಕರ್, ಜಿಲ್ಲಾಧ್ಯಕ್ಷ ಈ ಕಂಬಳ್ಳಿ ಮಂಜುನಾಥ್, ಫಾರೂಖ್ ಪಾಷ, ರಾಜೇಶ್, ಸುನಿಲ್, ಭಾಸ್ಕರ್, ಬಂಗಾರಿ ಮಂಜು, ಶ್ರೀನಿವಾಸ್, ಜುಬೇರ್ ಪಾಷ, ಧರ್ಮ, ಸುಪ್ರೀಂಚಲ, ಮುನಿರಾಜು, ಶಶಿ, ಗಂಗಾಧರ್, ಅಂಬ್ಲಿಕಲ್ ಮಂಜುನಾಥ್, ಮಲ್ಲಪನಹಳ್ಳಿ ಪ್ರಸನ್ನ, ಕಾಮನೂರು ಬಾಬು, ಮಂಗಸಂದ್ರ ತಿಮ್ಮಣ್ಣ, ಗೀತಾ, ಶೈಲಜ, ರತ್ನಮ್ಮ, ಚೌಡಮ್ಮ ಇದ್ದರು.