ಸಾರಾಂಶ
ಮಂಡ್ಯ : ಚನ್ನಪಟ್ಟಣ ಉಪ ಚುನಾವಣೆಯಲ್ಲಿ ನೂರಕ್ಕೆ ನೂರರಷ್ಟು ಕಾಂಗ್ರೆಸ್ ಅಭ್ಯರ್ಥಿ ಸಿ.ಪಿ.ಯೋಗೇಶ್ವರ್ ಗೆಲುವು ಖಚಿತ ಎಂದು ಶ್ರೀರಂಗಪಟ್ಟಣ ಶಾಸಕ ರಮೇಶ್ ಬಂಡಿಸಿದ್ದೇಗೌಡ ವಿಶ್ವಾಸದಿಂದ ಹೇಳಿದರು.
ಚನ್ನಪಟ್ಟಣ ಒಂದೇ ಅಲ್ಲ, ಸಂಡೂರು ಮತ್ತು ಶಿಗ್ಗಾಂವಿ ಉಪ ಚುನಾವಣೆಯಲ್ಲೂ ಕಾಂಗ್ರೆಸ್ ಜಯಭೇರಿ ಬಾರಿಸುವುದು ನೂರಕ್ಕೆ ನೂರರಷ್ಟು ಸತ್ಯ. ಯೋಗೇಶ್ವರ್ ಶಾಸಕರಾಗಿದ್ದಾಗ ಚನ್ನಪಟ್ಟಣವನ್ನು ಸಾಕಷ್ಟು ಅಭಿವೃದ್ಧಿಪಡಿಸಿದ್ದಾರೆ. ಅದಕ್ಕಾಗಿ ಅಲ್ಲಿನ ಜನರೂ ಯೋಗೇಶ್ವರ್ ಅವರನ್ನು ಇಷ್ಟಪಟ್ಟಿದ್ದಾರೆ. ಜನರು ಯೋಗೇಶ್ವರ್ ಪರ ಮತ ಹಾಕಿರುವುದರಿಂದ ಅವರ ಗೆಲುವು ನಿಶ್ಚಿತ ಎಂದು ಸುದ್ದಿಗಾರರೊಂದಿಗೆ ಮಾತನಾಡುತ್ತಾ ಸ್ಪಷ್ಟಪಡಿಸಿದರು.
ಉಪ ಚುನಾವಣೆ ಬಳಿಕ ಸರ್ಕಾರ ಬಿದ್ದೋಗುತ್ತೆ ಎಂದು ಬಿಜೆಪಿ- ಜೆಡಿಎಸ್ ಹೇಳುತ್ತಿರುವ ಬಗ್ಗೆ ಕೇಳಿದಾಗ, ಅಧಿಕಾರದಲ್ಲಿಲ್ಲದ ಸಮಯದಲ್ಲಿ ಬಿಜೆಪಿ ಮತ್ತು ಜೆಡಿಎಸ್‌ಗೆ ಸರ್ಕಾರ ಬೀಳಿಸುವ ಬಗ್ಗೆಯೇ ಚಿಂತೆ. ಒಬ್ಬರಿಗೆ ಸರ್ಕಾರ ಬಿಳಿಸಿ ಅಭ್ಯಾಸ ಇದೆ, ಮತ್ತೊಬ್ಬರಿಗೆ ಬೀಳಿಸಲು ಪ್ರಯತ್ನಿಸಿದ ಅಭ್ಯಾಸ ಇದೆ. ಆದರೆ, ಕಾಂಗ್ರೆಸ್‌ನ ಒಬ್ಬನೇ ಒಬ್ಬ ಶಾಸಕರನ್ನೂ ಬಿಜೆಪಿ- ಜೆಡಿಎಸ್‌ನವರಿಂದ ಖರೀದಿಸಲು ಸಾಧ್ಯವಿಲ್ಲ. ಹಾಗಾಗಿ ಸರ್ಕಾರ ಬೀಳಿಸುವುದರಲ್ಲಿ ಬಿಜೆಪಿ- ಜೆಡಿಎಸ್ ಯಶಸ್ವಿಯಾಗುವುದಿಲ್ಲ ಎಂದರಲ್ಲದೆ, ಬಿಜೆಪಿ- ಜೆಡಿಎಸ್‌ನವರು ಕಾಂಗ್ರೆಸ್ ಶಾಸಕರಿಗೆ ೫೦ ಕೋಟಿ ರು. ಆಫರ್ ಕೊಟ್ಟಿರೋದು ನಿಜ. ಆದರೆ, ನನಗೆ ಯಾರೂ ಆಫರ್ ಕೊಟ್ಟಿಲ್ಲ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.
ಹಿಂದೆಯೂ ಕಾಂಗ್ರೆಸ್ ಶಾಸಕರ ಖರೀದಿಗೆ ಬಿಜೆಪಿಯವರು ಯತ್ನಿಸಿದ್ದ ಬಗ್ಗೆ ಶಾಸಕ ಪಿ.ರವಿಕುಮಾರ್ ಆರೋಪಿಸಿದ್ದರು. ಯಾರೊಬ್ಬರನ್ನಾದರೂ ಕೊಂಡುಕೊಳ್ಳುವುದಕ್ಕೆ ಆಯ್ತಾ ಎಂದು ಪ್ರಶ್ನಿಸಿದ ರಮೇಶ್, ಕಾಂಗ್ರೆಸ್‌ನ ೧೩೬ ಶಾಸಕರು ಭದ್ರವಾಗಿದ್ದೇವೆ, ನಮ್ಮದು ಭದ್ರಕೋಟೆ ಎಂದು ಹೇಳಿದರು.
ಸಚಿವ ಚಲುವರಾಯಸ್ವಾಮಿ ಮತ್ತು ಕೀಲಾರ ಜಯರಾಮ್ ನಡುವಿನ ಗಲಾಟೆ ವಿಚಾರದ ಬಗ್ಗೆ ಕೇಳಿದಾಗ, ಗಲಾಟೆ ಬಗ್ಗೆ ಜಯರಾಮ್ ಅವರು ಹೇಳಿದ್ದಾರಾ? ಚಲುವರಾಯಸ್ವಾಮಿ ಅವರೂ ಕೂಡ ಹೇಳಿಲ್ಲ. ಘಟನೆ ಏನೂ ನಡೆದಿಲ್ಲವೆಂದು ಅವರೇ ಹೇಳಿರುವಾಗ ಈ ಪ್ರಶ್ನೆಯೇ ಅಪ್ರಸ್ತುತ ಎಂದು ತಾರಿಸಿದರು. ಸಚಿವರಿಗೆ ರಕ್ಷಣೆ ಇಲ್ಲವೆಂಬ ಮಾಜಿ ಶಾಸಕ ಸುರೇಶ್‌ಗೌಡ ಹೇಳಿಕೆಗೆ ಸುರೇಶ್‌ಗೌಡರಿಗೆ ತುಂಬಾ ಥ್ಯಾಂಕ್ಸ್ ಎಂದು ಹೇಳಿ ಸುಮ್ಮನಾದರು.
ಜಮೀರ್ ಹೇಳಿಕೆ ಹಿಂದಿದ್ಯಾ ಕುಮಾರಸ್ವಾಮಿ ಕೈವಾಡ!?:
ಮಂಡ್ಯ : ಎಚ್.ಡಿ.ಕುಮಾರಸ್ವಾಮಿ ಮತ್ತು ಜಮೀರ್ ಅಹಮದ್ ಗಳಸ್ಯ ಕಂಠಸ್ತ್ಯರಂತಿದ್ದರು. ಈಗಲೂ ಅವರಿಬ್ಬರೂ ಚೆನ್ನಾಗಿಯೇ ಇದ್ದಾರೆ. ಹಾಗಾಗಿ ಕರಿಯಣ್ಣ ಎಂಬ ಜಮೀರ್ ಹೇಳಿಕೆ ಹಿಂದೆ ಕುಮಾರಸ್ವಾಮಿಯೇ ಇರಬೇಕು ಅನ್ನಿಸುತ್ತಿದೆ ಎಂದು ಶಾಸಕ ರಮೇಶ್ ಬಂಡಿಸಿದ್ದೇಗೌಡ ಅನುಮಾನ ವ್ಯಕ್ತಪಡಿಸಿದರು.
ಚುನಾವಣಾ ಸಮಯದಲ್ಲಿ ಜಮೀರ್ ಆ ಮಾತನ್ನು ಆಡಬಾರದಿತ್ತು. ನಿಖಿಲ್ ಈಗಾಗಲೇ ಎರಡು ಬಾರಿ ಸೋತಿರುವುದರಿಂದ ಮೂರನೇ ಬಾರಿ ಗೆಲ್ಲಿಸಿಕೊಳ್ಳುವ ಸಲುವಾಗಿ ಜಮೀರ್ ಅವರಿಂದ ಆ ಮಾತು ಹೇಳಿಸಿರಬಹುದು ಎಂಬುದು ನನ್ನ ಅಭಿಪ್ರಾಯ ಎಂದು ನುಡಿದರು.