19ರಂದು ಸಿಪಿಐ ಶತಮಾನೋತ್ಸವ, ಜಿಲ್ಲಾ ಸಮಾವೇಶ

| Published : Aug 17 2025, 01:35 AM IST

ಸಾರಾಂಶ

ಭಾರತ ಕಮ್ಯುನಿಷ್ಟ್ ಪಕ್ಷದ ಶತಮಾನೋತ್ಸವ ಸಂಭ್ರಮ ಹಾಗೂ ದಾವಣಗೆರೆ ಜಿಲ್ಲಾ ಸಮಾವೇಶ ಆ.19ರಂದು ನಗರದ ರೋಟರಿ ಬಾಲಭವನ ಆವರಣದ ಸಿ.ಕೇಶವಮೂರ್ತಿ ಸಭಾಂಗಣದಲ್ಲಿ ನಡೆಯಲಿದೆ ಎಂದು ಪಕ್ಷದ ಹಿರಿಯ ಮುಖಂಡ ಆವರಗೆರೆ ಎಚ್.ಜಿ.ಉಮೇಶ ಹೇಳಿದ್ದಾರೆ.

- 15 ವರ್ಷ ದಾವಣಗೆರೆ ನಗರಸಭೆಯಲ್ಲಿ ಪಕ್ಷ ಆಡಳಿತ: ಎಚ್‌.ಜಿ.ಉಮೇಶ ಹೇಳಿಕೆ

- 3 ಬಾರಿ ಸಿಪಿಐ ನಾಯಕ ಪಂಪಾಪತಿ ಶಾಸಕರಾಗಿ ಜನರ ಸೇವೆ ಅವಿಸ್ಮರಣೀಯ

- - -

ಕನ್ನಡಪ್ರಭ ವಾರ್ತೆ ದಾವಣಗೆರೆ

ಭಾರತ ಕಮ್ಯುನಿಷ್ಟ್ ಪಕ್ಷದ ಶತಮಾನೋತ್ಸವ ಸಂಭ್ರಮ ಹಾಗೂ ದಾವಣಗೆರೆ ಜಿಲ್ಲಾ ಸಮಾವೇಶ ಆ.19ರಂದು ನಗರದ ರೋಟರಿ ಬಾಲಭವನ ಆವರಣದ ಸಿ.ಕೇಶವಮೂರ್ತಿ ಸಭಾಂಗಣದಲ್ಲಿ ನಡೆಯಲಿದೆ ಎಂದು ಪಕ್ಷದ ಹಿರಿಯ ಮುಖಂಡ ಆವರಗೆರೆ ಎಚ್.ಜಿ.ಉಮೇಶ ಹೇಳಿದರು.

ನಗರದಲ್ಲಿ ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಬೆಳಗ್ಗೆ 10.30ಕ್ಕೆ ಇಲ್ಲಿನ ಕೆಎಸ್ಸಾರ್ಟಿಸಿ ಬಸ್‌ ನಿಲ್ದಾಣದ ಬಳಿಯಿಂದ ಸಿಪಿಐ ನೇತೃತ್ವದಲ್ಲಿ ವಿವಿಧ ಸಂಘಟನೆಗಳು, ಕಾರ್ಮಿಕ ವರ್ಗದಿಂದ ಬೃಹತ್ ಮೆರವಣಿಗೆ ಆರಂಭವಾಗಿ, ಸಮಾವೇಶ ಸ್ಥಳ ತಲುಪಲಿದೆ. ಮಧ್ಯಾಹ್ನ 12.30ಕ್ಕೆ ಪಕ್ಷದ ಜಿಲ್ಲಾ ಕಾರ್ಯದರ್ಶಿ ಆವರಗೆರೆ ಚಂದ್ರು ಅಧ್ಯಕ್ಷತೆಯಲ್ಲಿ ಹಿರಿಯ ಕಾರ್ಮಿಕ ನಾಯಕ, ಹೊಸತು ಪತ್ರಿಕ ಸಂಪಾದಕ ಡಾ.ಸಿದ್ದನಗೌಡ ಪಾಟೀಲ್ ಸಮಾವೇಶ ಉದ್ಘಾಟಿಸಿ, ಮಾತನಾಡಲಿದ್ದಾರೆ. ಸಿಪಿಐ ರಾಜ್ಯ ಮಂಡಳಿ ಸಹ ಕಾರ್ಯದರ್ಶಿ ಡಿ.ಎ. ವಿಜಯಭಾಸ್ಕರ್, ಹಿರಿಯ ಮುಖಂಡ ಆ‍ವರಗೆರೆ ಎಚ್.ಜಿ.ಉಮೇಶ ಪ್ರಾಸ್ತಾವಿಕವಾಗಿ ಮಾತನಾಡುವರು ಎಂದರು.

ಕಾರ್ಮಿಕ ಮುಖಂಡರಾದ ಜಿ.ಯಲ್ಲಪ್ಪ, ಕೆ.ಜಿ.ಶಿವಮೂರ್ತಿ, ಎಸ್.ಎಸ್. ಮಲ್ಲಮ್ಮ, ಸರೋಜಾ, ಸುರೇಶ ಯರಗುಂಟೆ, ವಿ.ಲಕ್ಷ್ಮಣ, ಐರಣಿ ಚಂದ್ರು, ಪಿ.ಷಣ್ಮುಖ ಸ್ವಾಮಿ, ಕೆ.ಬಾನಪ್ಪ ಇತರರು ಭಾಗವಹಿಸುವರು. ಭಾರತ ಕಮ್ಯುನಿಷ್ಟ್ ಪಕ್ಷದ ಜಿಲ್ಲಾ ಸಂಘಟನಾ ಸಮಾವೇಶ ಯಶಸ್ವಿಗೊಳಿಸಲು ಪಕ್ಷ, ಸಂಘಟನೆಗಳ ದುಡಿಯುವ ವರ್ಗದ ಜನರೆಲ್ಲರೂ ಸ್ವಪ್ರೇರಣೆಯಿಂದ ಭಾಗವಹಿಸಬೇಕು ಎಂದು ಮನವಿ ಮಾಡಿದರು.

ಜವಳಿ ಮಿಲ್ ಸೇರಿದಂತೆ ದಾವಣಗೆರೆ ನಗರದಲ್ಲಿ ಕೈಗಾರಿಕೆಗಳು ನಡೆಯುತ್ತಿದ್ದ ವೇಳೆ ಒಂದೂವರೆ ದಶಕಗಳ ಕಾಲ ಭಾರತ ಕಮ್ಯುನಿಷ್ಟ್ ಪಕ್ಷ ದಾವಣಗೆರೆಯಲ್ಲಿ ಬಲಿಷ್ಠವಾಗಿತ್ತು. ಶಾಸಕರು, ನಗರಸಭೆಯಲ್ಲಿ ಕೆಂಬಾವುಟ ಪಕ್ಷದ ಆಡಳಿತವೇ ಇರುತ್ತಿತ್ತು. ದಿವಂಗತ ಕಾಮ್ರೆಡ್ ಪಂಪಾಪತಿ ಶಾಸಕರಾಗಿ ಬೇರುಮಟ್ಟದಿಂದ ಪಕ್ಷ ಕಟ್ಟುವಲ್ಲಿ ಶ್ರಮಿಸಿದ್ದರು. ಇಂದಿಗೂ ಜಿಲ್ಲಾ ಕೇಂದ್ರದಲ್ಲಿ ರಸ್ತೆಗಳ ಬದಿಯ ಮರಗಳು, ಪಾರ್ಕ್‌ಗಳು ಸಿಪಿಐ ಕೊಡುಗೆ ಎಂಬುದನ್ನು ಸಾರಿ ಹೇಳುತ್ತವೆ ಎಂದು ತಿಳಿಸಿದರು.

ದಾವಣಗೆರೆ ನಗರಸಭೆಯಲ್ಲಿ 15 ವರ್ಷಗಳ ಕಾಲ ಆಳ್ವಿಕೆ ಮಾಡಿದ್ದ ಪಕ್ಷ ನಮ್ಮದು. 3 ಸಲ ಶಾಸಕರಾಗಿ ಪಂಪಾಪತಿ ಆಯ್ಕೆಯಾಗಿ ಜನಸೇವೆ, ಆಡಳಿತ ಮಾಡಿದ್ದರು. ಸಂಘಟಿತ, ಅಸಂಘಟಿತ ವಲಯಗಳಲ್ಲದೇ ವಿದ್ಯಾರ್ಥಿ, ಯುವಜನರು, ಮಹಿಳೆಯರು, ರೈತರ, ಕಾರ್ಮಿಕರ ಹಕ್ಕುಗಳ ಪರ ಹೋರಾಟದಲ್ಲಿ ಸಿಪಿಐ ಸದಾ ಮುಂಚೂಣಿಯಲ್ಲಿದೆ ಎಂದರು.

ಪಕ್ಷದ ಮುಖಂಡರಾದ ಆವರಗೆರೆ ಚಂದ್ರು, ಇಪ್ಟಾದ ಐರಣಿ ಚಂದ್ರು, ಜಿ.ಯಲ್ಲಪ್ಪ, ಕೆ.ಜಿ.ಶಿವಮೂರ್ತಿ, ಸರೋಜಾ, ಶೇಖರ ನಾಯ್ಕ, ಎ.ತಿಪ್ಪೇಸ್ವಾಮಿ, ಕೆರೆನಹಳ್ಳಿ ರಾಜು, ಎಂ.ಡಿ.ನಾಗರಾಜ ನಾಯ್ಕ ಇತರರು ಇದ್ದರು.

- - -

(ಬಾಕ್ಸ್) * ಬಸ್‌ ನಿಲ್ದಾಣಕ್ಕೆ ಪಂಪಾಪತಿ ಹೆಸರಿಡಿ: ಸಿಪಿಐ - ಜಲಸಿರಿ ನೀರು ಕೊಡದೇ ಬಿಲ್ ನೀಡುವುದನ್ನು ಮೊದಲು ನಿಲ್ಲಿಸಿ ದಾವಣಗೆರೆ: ದಾವಣಗೆರೆಯಲ್ಲಿ 24*7 ಹೆಸರಿನಲ್ಲಿ ಜಲಸಿರಿ ಯೋಜನೆಯಡಿ ನೀರು ಪೂರೈಸುವುದಾಗಿ ನೀರನ್ನೇ ಕೊಡದಿದ್ದರೂ ₹3 ಸಾವಿರ ರು.ವರೆಗೂ ಅಧಿಕ ಬಿಲ್ ನೀಡುತ್ತಿದ್ದಾರೆ. ಕಾಮಗಾರಿಯೇ ಪೂರ್ಣಗೊಂಡಿಲ್ಲ. ಆಡಳಿತ ಯಂತ್ರ ಬಿಲ್ ಮಾತ್ರ ಕೊಟ್ಟು ಜನರ ಸುಲಿಗೆಗೆ ಮುಂದಾಗಿದೆ. ಇದನ್ನು ಮೊದಲು ನಿಲ್ಲಿಸಬೇಕು ಎಂದು ಮುಖಂಡ ಎಚ್.ಜಿ.ಉಮೇಶ ಆಗ್ರಹಿಸಿದರು.

ದಾವಣಗೆರೆ ಉತ್ತರ, ದಕ್ಷಿಣ ಕ್ಷೇತ್ರಗಳಲ್ಲಿ ನೂರಾರು ಎಕರೆ ಜಮೀನು ಗುರುತಿಸಿದ್ದರೂ ಬಡವರಿಗೆ ಸೂರು ಕಲ್ಪಿಸುವ ಕೆಲಸವಾಗುತ್ತಿಲ್ಲ. ಸೇಂದಿವನ ಎಂಬುದಾಗಿ ಹೇಳುವ ಜಾಗದಲ್ಲಿ ಈಚಲು ಮರಗಳೇ ಇಲ್ಲ. ಆನಗೋಡು, ಮಾಯಕೊಂಡ ಹೋಬಳಿ ವ್ಯಾಪ್ತಿಯಲ್ಲಿ ಸಾಕಷ್ಟು ಸರ್ಕಾರಿ ಜಮೀನು, ಸೇಂದಿವನ ಇವೆ. ಅಲ್ಲಿ ಬಡವರಿಗೂ ಸೂರು ಕಲ್ಪಿಸುವ ಕೆಲಸ ಮಾಡಬೇಕು ಎಂದು ಆಗ್ರಹಿಸಿದರು.

ದಾವಣಗೆರೆ ಕೆಎಸ್ಸಾರ್ಟಿಸಿ ಬಸ್‌ ನಿಲ್ದಾಣಕ್ಕೆ 3 ಸಲ ಶಾಸಕರಾಗಿದ್ದ, ಬಸ್‌ ನಿಲ್ದಾಣಕ್ಕೆ ಜಾಗ ಮಂಜೂರು ಮಾಡಿದ್ದ ಕಾರ್ಮಿಕ ನಾಯಕ ಪಂಪಾಪತಿ ಹೆಸರನ್ನು ಇಡಬೇಕು. ಈಗಾಗಲೇ ಪಂಪಾಪತಿ ಹೆಸರನ್ನು ಬಸ್‌ ನಿಲ್ದಾಣಕ್ಕೆ ಇಡುವ ಕಡತ ವಿಭಾಗೀಯ ಕಚೇರಿಯಲ್ಲಿ ಧೂಳು ಹಿಡಿಯುತ್ತಿದ್ದೆ. ಸಮಾವೇಶದಲ್ಲಿ ಈ ಎಲ್ಲ ವಿಚಾರಗಳ ಬಗ್ಗೆ ಚರ್ಚಿಸಿ, ಅವುಗಳನ್ನು ಈಡೇರಿಸುವಂತೆ ಸರ್ಕಾರಕ್ಕೆ ಒತ್ತಾಯಿಸಲಾಗುವುದು ಎಂದು ಉಮೇಶ ತಿಳಿಸಿದರು.

- - -

-16ಕೆಡಿವಿಜಿ1:

ದಾವಣಗೆರೆಯಲ್ಲಿ ಶನಿವಾರ ಸಿಪಿಐ ಜಿಲ್ಲಾ ಮುಖಂಡ ಆವರಗೆರೆ ಎಚ್.ಜಿ.ಉಮೇಶ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು.